ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಮೀನುಹುಳಿ

Published 28 ಮೇ 2024, 1:26 IST
Last Updated 28 ಮೇ 2024, 1:26 IST
ಅಕ್ಷರ ಗಾತ್ರ

‘ಇವೆಲ್ಲ ನೋಡಿರೆ ಬಲು ಸಂಕಟಾಯ್ತದೆ ಕನವ್ವ’ ಅಂದಳು ಅಕ್ಕಯ್ಯ.

‘ಅದ್ಯಾಕೆ ನನ ತಾಯಿ, ನೀನ್ಯಾಕವ್ವ ಅಲ್ಲಿಗೋಗಿದ್ದೆ? ಬುಟ್ರಾ ನಿನ್ನ?’ ಕೇಳಿದಳು ಚಿಗವ್ವ.

‘ಚಿಗವ್ವ ನೀನು ತಪ್ಪು ತಿಳಕಬ್ಯಾಡ. ನಾನೇನಾದ್ರೂ ಅತ್ತಗೋಗಿದ್ರೆ ನನ್ನ ತಿಂದು ಮುಗಿಸಿಬಿಡೋರು’ ಅಕ್ಕಯ್ಯ ವಿವರಣೆ ಕೊಟ್ಟಳು.

‘ನಾನೂ ಅದ್ನೇ ಕನೆ ಅಂದುದ್ದು. ಈಗ ಅದೇ ಸುದ್ದಿಯಾಗ್ಯದೆ. ಸನ್ನುಗಳು ಹೆಣ್ಮಕ್ಕಳ ಕೊಲ್ಲತಾವ್ರಂತೆ. ಉಸಾರು’ ಚಿಗವ್ವ ಬುದ್ಧಿಮಾತು ಹೇಳಿದಳು.

‘ಚಿಗವ್ವ ನಾನು ಹೇಳ್ತಿರದು ಬಿಸಿಲಿನ ಸನ್ ಸ್ಟ್ರೋಕ್ ಬಗ್ಗೆ ಕನೆ. ನಮ್ಮ ಕತೆ ನೋಡು, ಕೊಳಕು ನೀರು ಕುಡಿದು ಕಣ್ಣು ಮೆಡ್ಡರಿಸಿಕ್ಯಂದು ವಯಕ್ ಅಂತಿದ್ದೀವಿ. ಈಗ ವೈನಾಗಿ ಮಳೆ ಹೂದು ತಂಪಾಗ್ಯದೆ ಅನ್ಕಂದರೆ ಕೊಳೆ-ಪಳೆ ಕೊಚ್ಚಿಕ್ಯಂದು ಕೆರೆ ನೀರಿಗೆ ಸೇರಿ ಉಸಿರು ಹಿಡಿತಾದೆ ಕನ ನನ ತಾಯಿ’ ಅಕ್ಕಯ್ಯ ಬೇಸರಿಸಿಕೊಂಡಳು.

‍‘ನಮಗೆ ವಿಷದ ನೀರು, ಅಲ್ಲಿ ನಶೆ, ಬೀರು. ರಾಜಕೀಯದವು ಮೇಲ್ಮನೆ ಟಿಕೆಟ್ ತಕ್ಕೋಕೆ ಬಕ್ಕಬಾರಲು ಬೀಳ್ತಾವಂತೆ’ ಚಿಕ್ಕಮೀನಮ್ಮ ಬೆರಗಾದಳು.

‘ಇದೇ ಕನೆ ರಾಜಕೀಯ ಅಂದ್ರೆ. ರೋಡು ರಿಪೇರಿಯಾಗದೇ ಗುಂಡಿ ಬಿದ್ದವಂತೆ, ನಲ್ಲೀಲಿ ನೀರು ಬತ್ತಿಲ್ಲವಂತೆ. ಜನ ಯವಸಾಯನೇ ಮರೆತುಬುಟ್ಟವ್ರೆ’ ಚಿಗವ್ವನಿಗೂ ಬೇಸರಾಯ್ತು.

‘ಹೂ ಕಾ ಚಿಗವ್ವ, ಇಸದ ನೀರು ಕುಡಿದು ಸಾವಿರಗಟ್ಲೆ ಮೀನಮ್ಮದೀರು ನಮ್ಮ ಕೆರೇಲೇ ಸಾಯ್ತಾವ್ರೆ. ನಾವು ಸತ್ರೂ ಮಾರನೇಗೆ ಪೇಪರಲ್ಲಿ ಸುದ್ದಿಯಾತದೆ ‘ಕೊಳಕು ನೀರಿನಿಂದ ಸಾವಿರಾರು ಮೀನುಗಳ ಮಾರಣಹೋಮ’ ಅಂತ, ಆಟೇಯ. ನಮ್ಮದೂ ಒಂದು ಬಾಳೇವು ನೋಡವ್ವ. ಕೆರೆ ಉಳಿಸಿಗ್ಯಳೋ ಬುದ್ಧಿ ಈ ನರಮನುಸರಿಗೆ ಬರ್ನೇ ಇಲ್ಲವಲ್ಲ ತಾಯಿ’ ಅಂದಳು ಮೀನಕ್ಕಯ್ಯ.

‘ಅಕ್ಕಯ್ಯ ಮೀನು ದೊಡವ್ವ, ಮೀನು ಚಿಗಪ್ಪ, ಮೀನು ಅಪಪ್ಪ ಉಸಿರು ಮ್ಯಾಕ್ಕೆ ಕೆಳಿಕ್ಕೆ ಮಾಡ್ತಾವ್ರೆ! ಬಲ್ರಿ!’ ಅಂದು ಓಡಿದಳು ಮೀನು ತಂಗ್ಯವ್ವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT