ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಪರ್ಸೆಂಟೇಜ್ ಪ್ರವರ!

Last Updated 22 ಜನವರಿ 2023, 19:30 IST
ಅಕ್ಷರ ಗಾತ್ರ

‘ಈ ಪರ್ಸೆಂಟೇಜ್ ಗದ್ದಲಕ್ಕೆ ಯಾವಾಗಯ್ಯ ಕೊನೆ?’ ಚೆಡ್ಡಿ ದೋಸ್ತನನ್ನು ಕೇಳಿದೆ.

‘ಸದ್ಯಕ್ಕಂತೂ ಇಲ್ಲ. ಇನ್ನೂ ಮೂರು– ನಾಲ್ಕು ತಿಂಗಳು ಅದು ಎಲ್ಲರ ನಾಲಿಗೆ ಮೇಲೆ ನಲಿದಾಡ್ತಿರುತ್ತೆ. ಈಗ ಅದು ಬೇರೆ ಬೇರೆ ರಂಗಕ್ಕೂ ವ್ಯಾಪಿಸ್ತಿದೆಯಲ್ಲ’ ಎಂದ.

‘ಅದ್ಯಾವ ರಂಗವೋ?’

‘ಪ್ರಾಮಾಣಿಕತೆಯೂ ಈ ಪರ್ಸೆಂಟೇಜ್ ಲೆಕ್ಕಕ್ಕೇ ಬಂದ್ಬಿಟ್ಟಿದೆ. ನಮ್ಮ ಮಾನ್ಯ ಸಚಿವರೊಬ್ಬರು, ನಾನು ಒಂದು ಪರ್ಸೆಂಟ್ ಪ್ರಾಮಾಣಿಕ ಅಂತ ಹೇಳಿರೋದನ್ನ ನೋಡಿದೆಯ?’

‘ಭೇಷ್! ಸತ್ಯ ಹೇಳಿದ ಅವರ ಪ್ರಾಮಾಣಿಕತೆ
ಯನ್ನು ನಾವು ಮೆಚ್ಚಲೇಬೇಕು’.

‘ಅಷ್ಟೇ ಅಲ್ಲ, ‘ಕೆಲವೊಮ್ಮೆ ತಪ್ಪುಗಳೂ ಆಗುತ್ತವೆ. ಆಗ ದೇವರಲ್ಲಿ ಕ್ಷಮೆ ಕೇಳುತ್ತೇನೆ. ಪುನಃ ಒಂದು ಪರ್ಸೆಂಟ್ ಕೆಲಸ ಮಾಡುತ್ತೇನೆ’ ಎಂದಿದಾರೆ!’

‘ಅಂದ್ರೆ, ಪ್ರಾಮಾಣಿಕತೇನೂ ಒಂದು ಪರ್ಸೆಂಟ್, ಮಾಡೋ ಕೆಲ್ಸಾನೂ ಒಂದು ಪರ್ಸೆಂಟ್! ಎಷ್ಟು ಸರಿಯಾಗಿ ಹೇಳಿದಾರಲ್ಲೋ’

‘ಅಲ್ವೆ ಮತ್ತೆ?! ಕೆಟ್ಟು ನಿಂತ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರಿಸುತ್ತಲ್ಲಾ ಹಾಗೆ’.

‘ಅದ್ಸರಿ, ಎರಡು– ಮೂರು ದಿನ ಕಾಣಲಿಲ್ಲ, ಎಲ್ಲಿಗಯ್ಯಾ ಮಾಯವಾಗಿದ್ದೆ?’

‘ಎಲೆಕ್ಷನ್ ಬ್ಯುಸೀನಪ್ಪ. ನಮ್ಮ ಬಾಸು ಪುನಃ ಚುನಾವಣೆಗೆ ನಿಲ್ತಾರೆ’.

‘ಎಲೆಕ್ಷನ್ ಇನ್ನೂ ಮೂರು ತಿಂಗಳು ದೂರ ಇದೆ!’

‘ಆದ್ರೆ, ಅದಕ್ಕೆ ಪೂರ್ವತಯಾರಿ ಮಾಡ್ಕೊಬೇಕಲ್ಲ’.

‘ಏನಯ್ಯಾ ಅಂಥಾ ತಯಾರಿ?’

‘ಎರಡು ಲೋಡ್ ಕುಕ್ಕರ್, ಡಿನ್ನರ್ ಸೆಟ್ ಬಂದಿದ್ವಪ್ಪಾ, ಅವುಗಳನ್ನ ಸರಿಯಾದವ್ರಿಗೆ ತಲುಪಿಸೋ ಹೊತ್ತಿಗೆ ಸಾಕಾಗಿಹೋಯ್ತು’.

‘ಅದ್ರಲ್ಲಿ ಎಷ್ಟು ಪರ್ಸೆಂಟ್ ವಿತರಣೆ ಮಾಡಿದೆಯೋ?... ನಮ್ಮ ಮಂತ್ರಿಗಳು ಹೇಳಿದಂತೆ ಪ್ರಾಮಾಣಿಕವಾಗಿ ಹೇಳಯ್ಯಾ’.

‘ಅಂಥಾ ಪ್ರಶ್ನೆ ಕೇಳಬಾರದು...
ಗಣರಾಜ್ಯೋತ್ಸವ ನೋಡಲು ದಿಲ್ಲಿಗೆ ಹೋಗೋಣ ಬರ್ತೀಯಾ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT