ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮಂತ್ರಿಗಿರಿ ಕಿರಿಕಿರಿ

Last Updated 18 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಮಂತ್ರಿ ಆಗಬೇಕು ಅಂತ ಎಮ್ಮೆಲ್ಲೆ ಎಲ್ಲಣ್ಣೋರು ಹೋಟೆಲ್‍ನಲ್ಲಿ ಬೆಂಬಲಿಗರ ಸಭೆ ನಡೆಸಿದರು. ಅದ್ಧೂರಿ ಪೂಜೆ ಮಾಡಿಸಿ ಪ್ರಭಾವಿ ದೇವರುಗಳ ಮೊರೆ ಹೋದರು. ಮುಖ್ಯವಾಗಿ ಮುಖ್ಯಮಂತ್ರಿಗಳ ಮೇಲೆ ಭಾರ ಹಾಕಿದ್ದರು.

ಸಿ.ಎಂ ಯಾವ ಖಾತೆ ಕೊಡ್ತಾರೋ, ಆ ಖಾತೆ ಬಗ್ಗೆ ಏನೇನು ಕೇಳ್ತಾರೋ ಅಂತ ಎಲ್ಲಣ್ಣೋರು ಚಿಂತೆಗೀಡಾಗಿದ್ದರು.

‘ಯಾವ ಖಾತೆ ಕೇಳಬೇಕು ಅಂದುಕೊಂಡಿದ್ದೀರೋ ಆ ಖಾತೆ ಬಗ್ಗೆ ಹಾರ್ಡ್ ಸ್ಟಡಿ ಮಾಡಿಕೊಂಡು ನಾಲೆಡ್ಜ್ ಬೆಳೆಸಿಕೊಂಡು ಸಿ.ಎಂ ಟೆಸ್ಟಿನಲ್ಲಿ ಪಾಸಾಗಿ’ ಎಂದರು ಎಮ್ಮೆಲ್ಲೆ ಪತ್ನಿ.

‘ಸಿ.ಎಂ ಯಾವ ಖಾತೆ ವಹಿಸ್ತಾರೋ ಯಾರಿಗೆ ಗೊತ್ತು, ಯಾವುದನ್ನು ಕೇಳಲಿ?’

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಕೇಳಬೇಡಿ. ಹೆಂಡ್ತಿ, ಮಕ್ಕಳ ಬಗ್ಗೆ ನೀವು ಗಮನ ಕೊಟ್ಟಿರೋದು ಅಷ್ಟರಲ್ಲೇ ಇದೆ, ಅದರಲ್ಲಿ ಅನುಭವವಿಲ್ಲ... ಅನುಭವ ಇದೆ ಅಂತ ಅಬಕಾರಿ ಖಾತೆ ಕೇಳಬೇಡಿ...’

‘ಶಿಕ್ಷಣ ಖಾತೆ ಕೇಳಲೆ?’

‘ಬೇಡರೀ, ನೀವು ಒಂದು ದಿನವೂ ಮಕ್ಕಳಿಗೆ ಪಾಠ ಹೇಳಿಕೊಟ್ಟಿಲ್ಲ. ನಿಮ್ಮ ಮಾರ್ಕ್ಸ್ ಕಾರ್ಡ್‌ಗಳಲ್ಲೂ ಮಹತ್ವದ ಸಾಧನೆ ದಾಖಲಾಗಿಲ್ಲ, ಶಿಕ್ಷಣ ನಿಮಗೆ ಸರಿಹೋಗಲ್ಲ’.

‘ಕನ್ನಡ ಮತ್ತು ಸಂಸ್ಕೃತಿ ಖಾತೆ ಕೇಳ್ತೀನಿ’.

‘ಅದನ್ನು ಕೇಳಲೇಬೇಡಿ, ವೇದಿಕೆಗಳಲ್ಲಿ ನಿಮ್ಮ ಕನ್ನಡ ಭಾಷಣ, ಭಾಷೆಯ ಸಂಸ್ಕೃತಿ ಬಗ್ಗೆ ವಿರೋಧ ಪಕ್ಷದವರು ಅಪಹಾಸ್ಯ ಮಾಡ್ತಲೇ ಇರ್ತಾರೆ. ಆ ಖಾತೆ ವಹಿಸಿಕೊಂಡು ನಗೆ
ಪಾಟಲಿಗೀಡಾಗಬೇಡಿ’ ಎಂದು ಪತ್ನಿ ಹೇಳುವಾಗ ಎಮ್ಮೆಲ್ಲೆಯವರ ಮೊಬೈಲ್ ರಿಂಗ್ ಆಯಿತು.

ರಿಸೀವ್ ಮಾಡಿ ಮಾತನಾಡಿ ಅಪ್ಸೆಟ್ ಆದರು.

‘ಸಿ.ಎಂ ಆಫೀಸ್‍ನಿಂದ ಫೋನ್, ನನ್ನ ಸಂಘಟನಾ ಸಾಮರ್ಥ್ಯವನ್ನು ಹೈಕಮಾಂಡ್ ಮೆಚ್ಚಿದೆಯಂತೆ. ನನ್ನನ್ನು ಮಂತ್ರಿ ಬದಲು ಪಕ್ಷದ ಸಂಘಟನೆ ಮಾಡಲು ರಾಜ್ಯ ಸಮಿತಿ ಪದಾಧಿಕಾರಿಯಾಗಿ ನೇಮಿಸಲು ಸಲಹೆ ಮಾಡಿದೆಯಂತೆ...’ ಎಂದು ಸಣ್ಣಗಿನ ದನಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT