ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಎಂಟ್ರೆನ್ಸ್ ಟೆಸ್ಟುಗಳು

Published 11 ಜೂನ್ 2024, 0:05 IST
Last Updated 11 ಜೂನ್ 2024, 0:05 IST
ಅಕ್ಷರ ಗಾತ್ರ

‘ನಾನೇ ದೇವರು ಅಂದೋರು, ಕಿಚಡಿ ಸರ್ಕಾರ ಅಂದೋರು, ಗ್ಯಾರೆಂಟಿ ಜನ ವೋಟಾಕ್ತರೆ ಅಂತ ತಿಳಕಂದೋರಿಗೆ ಮತದಾರ ಕೊನೆಗೂ ಅವನ ಆಟ ತೋರಿಸಿದ’ ಅಂತ ತುರೇಮಣೆ ತೀರ್ಪು ಕೊಟ್ಟರು.

‘ಸೋತೋರೆಲ್ಲಾ ಹಿನ್ನಡೆಯಾದುದ್ಕೆ ಏನಾದ್ರೂ ಬೂತುಚೇಷ್ಟೆ ನಡೆದಿತ್ತಾ ಅಂತ ಪರಿಶೀಲನೆ, ವಿಶ್ಲೇಷಣೆ ಮಾಡಿಕ್ಯತ್ತವರಂತೆ’ ಚಂದ್ರು ಹೇಳಿದ.

‘ಆಯ್ತು ಕಾ ಬುಡಿ. ನೀಟ್ ಪರೀಕ್ಷೇಲಿ ಹುಡ್ಲು ಭಾರೀ ಸಂಖ್ಯೇಲಿ ಪಾಸಾಗ್ಯವಂತೆ. ಎಲ್ಲಾ ಕೋಚಿಂಗ್ ಸೆಂಟರುಗಳು ನಾವೇ ಮಾಡಿದ್ದು ಅಂತ ಕೊಚ್ಚಿಗ್ಯತಾವೆ, ಏನಂತೀರಾ?’ ಅಂತ ಕ್ವೆಸ್ಚನಿಸಿದೆ.

‘ಅನ್ನದೇನ್ಲಾ! ರಾಜಕಾರಣಿಗಳಿಗೂ ಇದೇ ಥರಾ ಪೀಟ್ ಪರೀಕ್ಷೆ ಮಡಗಬೇಕು’ ಅಂದ ತುರೇಮಣೆ ಮಾತು ಅರ್ಥಾಗಲಿಲ್ಲ.

‘ಪೀಟ್ ಅಂದ್ರೇನ್ಸಾ?’ ಪ್ರಶ್ನೆ ಮಾಡಿದೆ.

‘ಪೊಲಿಟಿಕಲ್ ಎಲಿಜಿಬಿಲಿಟಿ ಎಂಟ್ರೆನ್ಸ್ ಟೆಸ್ಟ್ ಕಲಾ. ಇದು ಜನರಲ್ ಪೇಪರ್. ತಾವು ಯಂಗೆ ನವರಂಗಿ ಆಟ ಆಡಿ ಕಾಮನ್ ಪೀಪಲ್‌ನಿಂದ ತಪ್ಪಿಸ್ಕಬಕು ಅಂತ ತಿಳಿಸಕ್ಕೆ ಕಾಮನ್ ಎಸ್ಕೇಪಿಂಗ್ ಟೆಸ್ಟು- ಸಿಇಟಿ, ಹಗರಣಗಳಲ್ಲಿ ಸಿಗೇಬೀಳದೇ ಬ್ಯಾರೇರನ್ನ ಕೆಡವದೆಂಗೆ ಅಂತ ಹೇಳಿಕೊಡಕ್ಕೆ ಜಾಯ್‌ಫುಲ್ ಎಸ್ಕೇಪಿಂಗ್ ಟೆಸ್ಟು- ಜೆಇಇ ಪಾಸಾಗಬಕು’ ಅಂತಂದ್ರು.

‘ಪಾಸಾದ ರಾಜಕಾರಣಿಗಳ ಮುಸುಡಿಗಳನ್ನೆಲ್ಲಾ ಪೇಪರಿನ ಮೊದಲನೇ ಪುಟದೇಲಿ ಅನೌನ್ಸ್ ಮಾಡಿದರೆ, ಪಕ್ಷಗಳು ಅವರ ಯೇಗ್ತೆ, ರೇಟು ನೋಡಿ ಖರೀದಿ ಮಾಡಿಕ್ಯತ್ತವೆ. ಜಾಸ್ತಿ ಮಾರ್ಕ್ಸ್‌ ತೆಗೆದೋರು ನಾಯಕರಾದರೆ, ಉಳಿದೋರನ್ನ ಅವರ ರ್‍ಯಾಂಕಿಂಗ್ ಪ್ರಕಾರ ಮ್ಯಾಗಲಮನೆ, ಕೆಳಗಲಮನೆ ನೆಂಬ್ರು ಮಾಡಬೈದು!’ ಯಂಟಪ್ಪಣ್ಣ ಹೇಳಿತು.

‘ಪರೀಕ್ಷೆ ಚೆನ್ನಾಗಿ ಬರೆದಿಲ್ಲ ಅಂತ ಬೇಜಾರಲ್ಲಿ ಪಾಪದ ಹುಡ್ಲು ನ್ಯಾಣಾಕ್ಯತಾವೆ. ಪೀಟ್, ಸಿಇಟಿ, ಜೆಇಇ ಪರೀಕ್ಷೆ ಪಾಸಾಗದ ರಾಜಕಾರಣಿಗಳೂ ಆತ್ಮಹತ್ಯೆ ಮಾಡಿಕ್ಯಂದಾರೇನೋ?’ ಕೇಳಿದೆ.

‘ಅವರು ರಾಜಕಾರಣಿಗಳು ಕಲಾ! ಪ್ರಾಣ ತಗೀತರೇ ಹೊರತು ಕೊಟ್ಟು ವಾಡಿಕೆ ಇಲ್ಲ. ಆತ್ಮವೇ ಇಲ್ಲದೆ ಆತ್ಮಾವಲೋಕನ ಮಾಡಿಕ್ಯತರೆ. ಅಧಿಕಾರಕ್ಕೋಸ್ಕರ ಎಂತಾ ಲೋಪವಾದ್ರೂ ಮಾಡ್ತರೆ’ ಅಂತ ನೀಟಾಗಿ ಹೇಳಿದರು
ತುರೇಮಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT