ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಸಹಿ ಪುರಾಣ!

Published 12 ಜೂನ್ 2024, 23:58 IST
Last Updated 12 ಜೂನ್ 2024, 23:58 IST
ಅಕ್ಷರ ಗಾತ್ರ

ರಾತ್ರಿ ಹತ್ತು ಗಂಟೆ ಸಮಯ. ಆಂಧ್ರದಲ್ಲಿ ಮೊಬೈಲ್ ರಿಂಗಾಯಿತು. ದೆಹಲಿ ಧ್ವನಿ... ‘ಬಾಬೂಜೀ... ಕೈಸೇ ಹೋ..’

‘ನಮೋ’ಸ್ತೆ, ನಮೋಸ್ತೆ ಮಹಾನ್‌ಜೀ... ತಾವು ಹೇಗಿದ್ದೀರಿ?’

‘ತಮ್ಮ ಸಹಕಾರದಿಂದ ಚೆನ್ನಾಗಿದ್ದೇನೆ ಬಾಬೂಜೀ... ಕಳೆದ ಹತ್ತು ವರ್ಷ ಏನೂ ಅನ್ನಿಸ್ಲಿಲ್ಲ, ಮುಂದಿನ ಐದು ವರ್ಷದ್ದೇ ಸವಾಲು...’

‘ಆರಾಮಾಗಿರಿ, ನಾವೆಲ್ಲ ನಿಮ್ಮ ಜೊತೆ ಇದ್ದೇವಲ್ಲ?’

‘ಅದೇ ಸವಾಲು, ಬೆಳಿಗ್ಗೆ ಎಲ್ಲರಿಗೂ ಗುಡ್ ಮಾರ್ನಿಂಗ್ ಹೇಳಬೇಕು, ರಾತ್ರಿ ಮಲಗಲೇ ಅಂತ ಕೇಳ್ಬೇಕು...’

‘ಛೆಛೆ, ಅದೆಲ್ಲ ಏನೂ ಬೇಡ... ಈಗ ಏನು ಫೋನ್ ಮಾಡಿದ್ದು?’

‘ಏನಿಲ್ಲ, ಆ ಹೊಸ ಕಡತಕ್ಕೆ ನೀಲಿ ಪೆನ್ನಿಂದ ಸಹಿ ಮಾಡಲೋ, ಹಸಿರು ಪೆನ್ನಿಂದ ಸಹಿ ಮಾಡಲೋ?’

‘ನೀಲಿ ಪೆನ್ನಿಂದಲೇ ಮಾಡಿ ಪರವಾಗಿಲ್ಲ...’

‘ಅಚ್ಚಾ... ಗುಡ್ ನೈಟ್, ನಾನಿನ್ನು ಮಲಗಲೇ?’

ಫೋನ್ ಕಟ್ಟಾಗಿ ಬಿಹಾರದಲ್ಲಿ ರಿಂಗಾಯಿತು. ‘ತೀಶ್ ಕುಮಾರ್‌ಜೀ... ಹೇಗಿದ್ದೀರಿ? ಆ ಹೊಸ ಕಡತಕ್ಕೆ ಬಾಬೂಜಿ ನೀಲಿ ಪೆನ್ನಿಂದ ಸಹಿ ಮಾಡಲು ಹೇಳಿದಾರೆ, ನಿಮ್ಮ ಅಭಿಪ್ರಾಯ ಏನು?’

‘ನೀಲಿ ಚೆನ್ನಾಗಿರಲ್ಲ ಮಹಾನ್, ಹಸಿರು ಪೆನ್ನಿಂದ ಮಾಡಿ...’

‘ಆಯ್ತು, ಆಯ್ತು... ನಾನಿನ್ನು ಮಲಗಲೇ?’

ಆ ಫೋನೂ ಕಟ್ಟಾಗಿ ಮಂಡ್ಯದಲ್ಲಿ ರಿಂಗಾಯಿತು ‘ಬ್ರದರ್’ಜೀ... ಹೇಗಿದ್ದೀರಿ? ಉಜ್ವಲ್ ಕತೆ ಎಲ್ಲಿಗೆ ಬಂತು?’

‘ಅದಾ... ಟೀವಿ ತುಂಬ ಎರಡು ಡೈವೋರ್ಸು, ಒಂದು ಸಿನಿಮಾ ಮರ್ಡರ್ ನಡುವೆ ಎಲ್ರೂ ಉಜ್ವಲ್‌ನ ಮರೆತೇಬಿಟ್ಟಿದಾರೆ ಮಹಾನ್‌ಜೀ...’

‘ಅಚ್ಚಾ? ಈಗ ಹೊಸ ಕಡತಕ್ಕೆ ಬಾಬೂಜಿ ನೀಲಿ ಪೆನ್ನಲ್ಲಿ, ತೀಶ್ ಕುಮಾರ್ ಹಸಿರು ಪೆನ್ನಲ್ಲಿ ಸಹಿ ಹಾಕಿ ಅಂತಿದಾರೆ, ಪ್ರಾಬ್ಲಂ ಆಗಿಬಿಟ್ಟಿದೆ, ಏನ್ ಮಾಡ್ಲಿ?’

‘ಅದಕ್ಯಾಕೆ ತಲೆ ಕೆಡಿಸ್ಕಂತೀರಿ ಮಹಾನ್, ಎರಡೂ ಪೆನ್ನಲ್ಲಿ ಸಹಿ ಹಾಕಿ ನೆಮ್ಮದಿಯಾಗಿ ಮಲಗಿ, ಯಾರೂ ಪಿಟಿಕ್ಕನ್ನಲ್ಲ...’

ಫೋನ್ ಕಟ್ಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT