ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅಕ್ಕಿ ಋಣ

Last Updated 5 ಅಕ್ಟೋಬರ್ 2021, 17:58 IST
ಅಕ್ಷರ ಗಾತ್ರ

‘ನಮಗಿಂತ ಪ್ರಾಣಿಪಕ್ಷಿಗಳೇ ನೆಮ್ಮದಿಯಾಗಿವೆ ಕಣ್ರೀ...’ ಸುಮಿ ನಿಟ್ಟುಸಿರುಬಿಟ್ಟಳು.

‘ಹೌದು, ಅವು ಹಾಲು, ತರಕಾರಿ, ರೇಷನ್‍ಗೆ ಬ್ಯಾಗ್ ಹಿಡಿದು ಅಂಗಡಿಗೆ ಅಲೆಯುವುದಿಲ್ಲ. ದಿನಬಳಕೆ ಪದಾರ್ಥಗಳು, ಗ್ಯಾಸ್, ಪೆಟ್ರೋಲ್ ಬೆಲೆ ಹೆಚ್ಚಳದ ಬಿಸಿ ತಟ್ಟಿಲ್ಲ. ಅದಕ್ಕೇ ಅವು ನಮಗಿಂತ ಸುಖವಾಗಿವೆ’ ಅಂದ ಶಂಕ್ರಿ.

‘ಹಬ್ಬಹರಿದಿನದ ಖರ್ಚಿಲ್ಲ, ಒಡವೆ-ವಸ್ತ್ರ ಕೊಳ್ಳುವಂತಿಲ್ಲ, ಮಕ್ಕಳನ್ನು ಸ್ಕೂಲು– ಕಾಲೇಜಿಗೆ ಸೇರಿಸಲು ದುಡ್ಡು ಹೊಂಚುವಂತಿಲ್ಲ, ಮಕ್ಕಳಿಗೆ ಮದುವೆ ಮಾಡಬೇಕು ಅನ್ನುವ ಚಿಂತೆ ಇಲ್ಲ. ಪ್ರಾಣಿಪಕ್ಷಿಗಳು ಪುಣ್ಯ ಮಾಡಿವೆ’.

‘ಆದ್ರೂ ನಮಗಿರುವಂತೆ ಪ್ರಾಣಿಪಕ್ಷಿಗಳಿಗೆ ರೇಷನ್ ಕಾರ್ಡು, ಆಧಾರ್ ಕಾರ್ಡು, ಎಲೆಕ್ಷನ್ ಐಡಿ ಕಾರ್ಡು ಇಲ್ಲ. ಮನೆ ಕಟ್ಟಲು ಲೋನ್ ಕೊಡೋರಿಲ್ಲ, ಮರಿ ಮಾಡಲು ಹೆರಿಗೆ ಆಸ್ಪತ್ರೆಗಳಿಲ್ಲ, ಪಾಪ!’ ಶಂಕ್ರಿ ನೊಂದುಕೊಂಡ.

‘ಸೌಕರ್ಯಕ್ಕೆ ಕಾರ್ಡು, ಆರೋಗ್ಯಕ್ಕೆ ವಾರ್ಡು ಇದ್ದರೂ ನಮ್ಮ ಜೀವನ ನಿರ್ವಹಣೆ ದುಬಾರಿ. ಎಲ್ಲದರ ಬೆಲೆ ಏರುತ್ತಲೇ ಇದೆ’.

‘ಬೆಲೆ ಇಳಿಸಿ ಅಂತ ಬೀದಿಗಿಳಿದು ಹೋರಾಟ, ಅಸೆಂಬ್ಲಿಯೊಳಗೆ ಕೂಗಾಟ ನಡೆದರೂ ಯಾವುದೂ ಇಳಿಯಲಿಲ್ಲ. ಇಂಥಾ ಪರಿಸ್ಥಿತಿಯಲ್ಲೂ ಸರ್ಕಾರ ಅಕ್ಕಿಮುಕ್ತ ರಾಜ್ಯ ಮಾಡದೆ ಉಚಿತವಾಗಿ ಅಕ್ಕಿ ಕೊಟ್ಟು ಅನ್ನದ ವ್ಯವಸ್ಥೆ ಮಾಡಿದೆಯಲ್ಲ’.

‘ತಿನ್ನೋ ಅನ್ನಕ್ಕಾಗಿ ಸರ್ಕಾರದ ಅಕ್ಕಿಗೆ ಕೈ ಚಾಚಬೇಕಾಯ್ತಲ್ಲ, ತಮ್ಮ ಆಹಾರವನ್ನು ತಾವೇ ಹೊಂಚಿಕೊಳ್ಳುವ ಪ್ರಾಣಿಪಕ್ಷಿಗಳಿಗಿಂಥ ನಾವು ಕಡೆಯಾಗಿದ್ದೀವಿ ಅನ್ನಿಸ್ತಿದೇರೀ...’

‘ಸರ್ಕಾರದ ಅಕ್ಕಿ ನಮ್ಮ ಹಕ್ಕು’.

‘ನಾವು ಅಷ್ಟು ಅಕ್ಕಿ ಕೊಟ್ವಿ, ಇವರು ಇಷ್ಟು ಕೊಟ್ರು ಅಂತ ನಮ್ಮ ನಾಯಕರು ವೇದಿಕೆ ಸಿಕ್ಕ ಕಡೆಯೆಲ್ಲಾ ನಮ್ಮ ಮಾನವನ್ನು ಅಕ್ಕಿಯಲ್ಲಿ ಅಳೆಯುತ್ತಿದ್ದಾರೆ. ಅಕ್ಕಿ ಒಂದರಿಂದಲೇ ಸಂಸಾರ ನಡೆಯುತ್ತೇನ್ರೀ? ಕೊಡೋದಾದ್ರೆ ಗ್ಯಾಸ್, ಪೆಟ್ರೋಲನ್ನೂ ಫ್ರೀಯಾಗಿ ಕೊಟ್ಟು ಎಷ್ಟು ಬೇಕಾದ್ರೂ ಮಾತನಾಡಲಿ. ಅಕ್ಕಿಯಲ್ಲಿ ಹೋದ ಮಾನ ಆನೆ ಕೊಟ್ರೂ ಬರೋಲ್ಲ ಕಣ್ರೀ...’ ಸುಮಿ ಸಿಡುಕಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT