ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನಕುರಳಿ| ಬೆಕ್ಕಣ್ಣನ ಕೋಡಿಂಗ್

Last Updated 6 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ರಾತ್ರಿ ರೌಂಡ್ ಮುಗಿಸಿ ಬಂದ ಬೆಕ್ಕಣ್ಣ ಏನೋ ಪತ್ತೇದಾರಿಕೆ ಮಾಡಿದ ಹುಮ್ಮಸ್ಸಿನಲ್ಲಿತ್ತು.

‘ಆ ಸರ್ಕಲ್ನಾಗೆ ಡ್ರಗ್ಗಿಸ್ಟ್ ಅಂಡ್ ಕೆಮಿಸ್ಟ್ ಅಂಗಡಿ ಐತಿ, ವಳಗೆ ಏನೇನು ಡ್ರಗ್ ಮಾರತಾರೋ ಗೊತ್ತಿಲ್ಲ’ ಎಂದು ಪಿಸುಗುಟ್ಟಿತು.

‘ಮಂಗ್ಯಾನಂಥವ್ನೆ... ಅದು ಮೆಡಿಕಲ್ ಶಾಪ್. ಕೊರೊನಾ ಶುರುವಾದಾಗಿಂದ ಅಂವಾ ಕ್ರೋಸಿನ್ ಗುಳಿಗಿ ಮಾರಾಕೆ ಅಂಜತಾನ, ಇನ್ನು ಆ ಡ್ರಗ್ ದಂಧೆ ಮಾಡ್ತಾನೇನು’ ಎಂದು ಬೈದೆ. ಮತ್ತೆ ಕೆಳಗೋಡಿ ಅಪಾರ್ಟ್‌ಮೆಂಟಿನ ಒಳಗೆ, ಹೊರಗೆ ಇದ್ದ ಗಿಡಗಳನ್ನೆಲ್ಲ ಜಾಲಾಡಿ ಬಂದಿತು.

‘ಬೆಳಗಾಂವಿಯೊಳಗ ಬೆಳೆ ಮಧ್ಯೆ ಗಾಂಜಾ ಬೆಳೆದಿದ್ದ ರೈತನ್ನ ಪೊಲೀಸರು ಹಿಡದಾರಂತ. ಮತ್ತ ನೀವೂ ಶೋ ಗಿಡಗಳ ನಡುವೆ ಗಾಂಜಾ ಬೆಳೆದಿದ್ದರೆ ಅಂತ ನೋಡಾಕ ಹೋಗಿದ್ದೆ’ ಎಂದು ಬಡಿವಾರ ಮಾಡಿತು.

‘ಬೆಟ್ಟ ಅಗದು ಇಲಿ ಹಿಡಿದಂಗಾತು ಇದು. ಪ್ರಭಾವಿ ಗಟ್ಟಿಕುಳಗಳು ಕೋಟಿಗಟ್ಟಲೆ ಡ್ರಗ್ ವ್ಯವಹಾರದಾಗ ಮುಳುಗ್ಯಾರ. ದಮ್ ಇದ್ದರೆ ಅವ್ರನ್ನ ಅಲುಗಾಡಿಸಬೇಕಲೇ. ಕಮಲಕ್ಕನ ಪರ ಚುನಾವಣೇಲಿ ಪ್ರಚಾರ ಮಾಡಿದ ಒಬ್ಬಾಕಿ ಆ ಡ್ರಗ್ ಮಾಫಿಯಾದಾಗೆ ಅದಾಳಂತ... ಗೊತ್ತೈತಿಲ್ಲೋ’ ಎಂದೆ.

ಕಮಲಕ್ಕನ ಸುದ್ದಿ ಎತ್ತುತ್ತಲೇ ಬೆಕ್ಕಣ್ಣ ಬಾಲ ಮುದುರಿಕೊಂಡು, ‘ಮಾಡಿದೋರ ಪಾಪ ಆಡಿದೋರ ಬಾಯಲ್ಲಿ ಅಂತೆ, ನನ್ ಕೆಲಸನೇ ನನಗ ರಗಡ್ ಐತಿ... ಮಂದಿ ಚಿಂತಿ ನನಗೆದಕ್ಕ’ ಎಂದು ಗಾದೆ ಹೇಳುತ್ತ ಲ್ಯಾಪ್‌ಟಾಪ್ ತೆರೆದು ಘನಗಂಭೀರವಾಗಿ ಕುಳಿತಿತು. ಒಂದು ಗಂಟೆಯಾದರೂ ಅತ್ತಿತ್ತ ಅಲುಗಾಡದೇ ಕೂತಿದ್ದನ್ನು ನೋಡಿ ಕುತೂಹಲದಿಂದ ಇಣುಕಿದೆ.

‘ಕೋಡಿಂಗ್ ಮಾಡೂದು ಕಲಿಯಾಕ ಹತ್ತೀನಿ. ನನ್ನ ಮಾರ್ಜಾಲ ಮಾತು ಚಾನೆಲ್ಲಿಗಿ ಭಾಳ ಡಿಸ್‌ಲೈಕ್ ಬರಾಕಹತ್ಯಾವು. ಒಂದು ಡಿಸ್‌ಲೈಕ್ ವತ್ತಿದರ ಹತ್ತು ಲೈಕ್ ತಾನೇ ಸೇರೂ ಹಂಗ ಪ್ರೋಗ್ರಾಮ್ ಕೋಡಿಂಗ್ ಮಾಡಾಕ ಹತ್ತೀನಿ. ಅಡ್ನಾಡಿ ಬೆಕ್ಕುಗಳು ನನ್ನ ಪುಕಟ್ ಬುದ್ಧಿವಾದ ಕೇಳ್ಕಂಡು, ಸುಮ್ನೆ ಲೈಕ್ ವತ್ತೂದು ಬಿಟ್ಟು ಭಾರೀ ಬುದ್ಧಿವಂತರಂಗೆ ಡಿಸ್‌ಲೈಕ್‌ ವತ್ತತಾರ’ ಎಂದು ಬೈಯುತ್ತ ಕೋಡಿಂಗ್ ಕಾರ್ಯದಲ್ಲಿ ಮಗ್ನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT