ಸೋಮವಾರ, ಆಗಸ್ಟ್ 15, 2022
23 °C

ಚುರುಮುರಿ| ಹರ್ಬಲ್ ಹಾಲು!

ಬಿ.ಎನ್. ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ನೋಡ್ರಲೆ, ನಾನು ಹರ್ಬಲ್ ಹಾಲು ವ್ಯಾಪಾರ ಶುರು ಹಚ್ಕಳಣ ಅಂತಿದೀನಿ, ಹೆಂಗೆ?’ ಹರಟೆ
ಕಟ್ಟೆಯಲ್ಲಿ ತೆಪರೇಸಿ ಎಲ್ಲರ ಸಲಹೆ ಕೇಳಿದ.

‘ಹರ್ಬಲ್ ಹಾಲಾ? ನಿಮ್ಮ ಟೂತ್‍ಪೇಸ್ಟಿನಲ್ಲಿ ಲವಂಗ ಇದೆಯೇ ಅನ್ನೋ ಥರ ನಿನ್ನ ಹರ್ಬಲ್ ಹಾಲಿನಲ್ಲಿ ತುಳಸಿ ಇರುತ್ತದೆಯೇ?’ ಗುಡ್ಡೆ ನಾಟಕೀಯವಾಗಿ ಕೇಳಿದ.

‘ನನ್ನ ಹಾಲಿನಲ್ಲಿ ತುಳಸಿ, ಪುದೀನಾ ಎಲ್ಲಾ ಇರುತ್ತೆ ಕಣ್ರಲೆ, ಕುಡಿದ್ರೆ ರೋಗನಿರೋಧಕ ಶಕ್ತಿ ಜಾಸ್ತಿ ಆಗುತ್ತೆ...’

‘ಹೌದಾ? ಆದ್ರೆ ಹಾಲಿಗೆ ತುಳಸಿ, ಪುದೀನಾ ಹಾಕಿದ್ರೆ ಹಾಲು ಕೆಡೋಲ್ವ?’ ದುಬ್ಬೀರನಿಗೆ ಗೊಂದಲ.

‘ನಿನ್ತೆಲಿ, ಅದನ್ನೆಲ್ಲ ಯಾರಾದ್ರು ಹಾಲಿಗೆ ಹಾಕ್ತಾರೇನಲೆ, ನಾನು ಹಸು ಸಾಕ್ತೀನಿ, ಅದಕ್ಕೆ ದಿನಾ ತುಳಸಿ, ಪುದೀನಾ, ಕೊತ್ತಂಬರಿ ತಿನ್ನಿಸ್ತೀನಿ, ಆ ಸೊಪ್ಪಿನ ಔಷಧದ ಅಂಶವೆಲ್ಲ ಹಾಲಿಗೆ ಸೇರಲ್ವ?’ ತೆಪರೇಸಿ ಬಿಡಿಸಿ ಹೇಳಿದ.

‘ಏನು? ಹಸು ಸಾಕ್ತೀಯ? ವೆರಿಗುಡ್... ತುಳಸಿ, ಪುದೀನಾ ಜತಿಗೆ ಹಂಗೇ ಅದಕ್ಕೆ ಶುಂಠಿ, ಲವಂಗ, ಮೆಣಸು ಎಲ್ಲ ತಿನ್ನಿಸಿಬಿಡು, ಹಾಲಿನ ಬದಲು ಡೈರೆಕ್ಟ್ ಕಷಾಯನೇ ಕರ್ಕಾಬಹುದು..’ ಗುಡ್ಡೆ ನಕ್ಕ.

‘ಲೇ ಹಂಗೇನರ ಮಾಡಿಗೀಡೀಯ, ಹಸುಗೆ ಭೇದಿ ಕಿತ್ಕಂಬಿಡುತ್ತೆ ಅಷ್ಟೆ..’ ಪರ್ಮೇಶಿ ಎಚ್ಚರಿಸಿದ.

‘ಈಗ ಒಂದು ಪ್ರಶ್ನೆ, ಹರ್ಬಲ್ ಹಾಲಿನಿಂದ ನಿಂಗೆ ಎಷ್ಟು ಲಾಭ ಸಿಗಬಹುದು’ ಗುಡ್ಡೆ ಪ್ರಶ್ನೆ.

‘ಲೀಟರ್‌ಗೆ ಹತ್ತಿಪ್ಪತ್ತು ರೂಪಾಯಿ ಜಾಸ್ತಿ ಕೇಳಿದ್ರೂ ಜನ ಕೊಡ್ತಾರೆ’.

‘ಅಷ್ಟೇನಾ? ನಿಂಗೆ ಲೀಟರ್‌ಗೆ ಐನೂರು ರೂಪಾಯಿ ಸಿಗಂಗೆ ಮಾಡ್ತೀನಿ, ನಾ ಹೇಳಿದಂಗೆ ಕೇಳ್ತೀಯ?’

ಗುಡ್ಡೆ ಮಾತಿನಲ್ಲಿ ಏನೋ ಮರ್ಮ ಇದೆ ಅನ್ನಿಸಿದರೂ ‘ಆಯ್ತು ಅದೇನು ಹೇಳು’ ಅಂದ ತೆಪರೇಸಿ.

‘ಏನಿಲ್ಲ, ತುಳಸಿ, ಪುದೀನಾ ಬದ್ಲು ನಿನ್ನ ಹಸುಗೆ ಗಾಂಜಾ ಸೊಪ್ಪು ತಿನ್ನಿಸಿಬಿಡು. ಜನ ಕ್ಯೂ ಹಚ್ಚಿ ಹಾಲು ಖರೀದಿ ಮಾಡದಿದ್ರೆ ಕೇಳು..!

‘ಥೂ ನಿನ್ನ, ಬದುಕೋ ದಾರಿ ತೋರ್ಸು ಅಂದ್ರೆ ಜೈಲಿನ ದಾರಿ ತೋರಿಸ್ತೀಯಲ್ಲೋ...’ ಗುಡ್ಡೆಗೆ ತೆಪರೇಸಿ ಕ್ಯಾಕರಿಸಿ ಉಗಿದಾಗ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.