ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಹೊಸ ತಿದ್ದುಪಡಿ

Last Updated 27 ನವೆಂಬರ್ 2022, 19:31 IST
ಅಕ್ಷರ ಗಾತ್ರ

‘ಉಪ್ಪಾ ತಿಂದ ಮ್ಯಾಲೆ ನೀರಾ ಕುಡಿಯಲೇಬೇಕುಲಂಚ ತಿಂದ ಮ್ಯಾಗೆ ಜೈಲಿಗೆ ಹೋಗಲೇಬೇಕು’.

ಬೆಕ್ಕಣ್ಣ ಹಳೆಯ ‘ಕಾಲೇಜು ರಂಗ’ ಸಿನಿಮಾದ ಹಾಡನ್ನು ರಾಗವಾಗಿ ಹಾಡುತ್ತಲೇ ಪೇಪರು ತೋರಿಸಿತು. ತಹಶೀಲ್ದಾರರೊಬ್ಬರುಲಂಚ ತಿನ್ನುವಾಗ ಸಿಕ್ಕಿಬಿದ್ದು, ಮುಖ ಮುಚ್ಚಿಕೊಂಡು ಜೈಲಿಗೆ ಹೋದ ಸುದ್ದಿ ಇತ್ತು.

‘ಜೈಲಿಗೆ ಹೋದ ಮ್ಯಾಲೆ ಮಸಾಜು ಮಾಡಿಸಿಕೋಬೇಕು, ಖುಷಿಯಾಗಿ ತಿಂದುಂಡು ಕಾಲ ಕಳಿಬೇಕು’ ಎನ್ನುತ್ತ ನಾನು ದೆಹಲಿಯ ಎಎಪಿ ಮಂತ್ರಿಯೊಬ್ಬರು ತಿಹಾರ್ ಜೈಲಿನಲ್ಲಿಯೇ ಸಕಲೆಂಟು ಸವಲತ್ತು ಪಡೆಯುತ್ತ ಸುಖವಾಗಿರುವ ಸುದ್ದಿ ತೋರಿಸಿದೆ.

ಬೆಕ್ಕಣ್ಣ ‘ಬರೋಬ್ಬರಿ ಅದ... ಅಂವಾ ಜೈಲೊಳಗ ಹೆಂಗ ಖುಷಿಯಾಗಿರಬಕು ಅಂತ ಹ್ಯಾಪಿ ಪಠ್ಯಕ್ರಮ ಬರೀಲಾಕಹತ್ಯಾನ’ ಎಂದಿತು.

‘ಎಲ್ಲಾರೂ ಹೊಸ ಪಠ್ಯಕ್ರಮ ಬರೀಯೋದ್ರಾಗೆ ಬಿಜಿಯಾಗ್ಯಾರಲೇ. ನೋಡಿಲ್ಲಿ ನಿಮ್ಮ ಶಾಣೇ ಅಂಕಲ್ಲು ಇತಿಹಾಸ ಪಾಠ ತಿದ್ದಿ ಬರೀತೀವಿ ಅಂದಾನ’ ಎಂದೆ.

‘ಹಿಂದಿನವರು ಇತಿಹಾಸ ತಿರುಚಿ ಬರೆದಿದ್ದನ್ನು ನಾವು ಪೂರಾ ಬಲಕ್ಕೆ ತಿರುಚಿ ತಿದ್ದುಪಡಿ ಮಾಡತೀವಿ ಅಂದಾನ ಅಂವ. ಕರೆಕ್ಟ್ ಅದ ಮತ್ತ... ಸೀದಾ ನೋಡೂದು ಯಾರಿಗೆ ಬೇಕಾಗೈತಿ?’ ಬೆಕ್ಕಣ್ಣ ವಾದಿಸಿತು.

‘ಅತ್ತ ಕಡೆ ಮಹಾಮರಾಠಿಗರು ಬರೀ ಇತಿಹಾಸ ಪಾಠ ಅಷ್ಟೇ ಅಲ್ಲ, ಭೂಗೋಳ ಪಾಠನೂ ತಿದ್ದುತೀವಿ, ಬೆಳಗಾವಿ, ನಿಪ್ಪಾಣಿ ಎಲ್ಲಾ ಸೇರಿಕೆಂಡು ಹೊಸ ಗಡಿರೇಖೆ ಎಳಿತೀವಿ ಅಂತ ಸಡ್ಡು ಹೊಡೆದಾರ. ಅಲ್ಲಿ ಶಿಂದೆ ಕಮಲ, ಇಲ್ಲಿ ಬೊಮ್ಮಾಯಿ ಕಮಲ, ದಿಲ್ಲಿವಳಗ ಮೋಶಾ ಕಮಲ, ಹಿಂಗ ತ್ರಿಬಲ್ ಎಂಜಿನ್ ಇದ್ದು ಏನುಪಯೋಗ, ಗಡಿ ಬೆಂಕಿ ಉರಿಯೂದು ತಪ್ಪಲಿಲ್ಲ’.

‘ರಾಜ್ಯ- ಕೇಂದ್ರದ ವಿಚಾರದಾಗೆ ಮಾತ್ರ ಡಬಲ್ ಎಂಜಿನ್ ಕೆಲಸ ಮಾಡತೈತಿ. ಗಡಿ ವಿಚಾರದಾಗೆ ತ್ರಿಬಲ್ ಎಂಜಿನ್ ಲೆಕ್ಕಕ್ಕೇ ಬರಂಗಿಲ್ಲ. ಅವಗಾವಾಗ ಕೆಂಡ ಕೆದರಿ, ಗಡಿ ಬೆಂಕಿ ಉರಿಸಿ, ತಮ್ಮ ತಮ್ಮ ಬೇಳೆ ಬೇಯಿಸಿಕೊಂಡ್ರೇನೆ ಎಲ್ಲಾ ಪಕ್ಷಗಳಿಗೂ ಸಮಾಧಾನ’ ಎನ್ನುತ್ತ ಬೆಕ್ಕಣ್ಣ ಪಕಪಕನೆ ನಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT