ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಪದ್ದಮ್ಮಳ ಪ್ರಶ್ನೆ

Last Updated 18 ನವೆಂಬರ್ 2022, 20:42 IST
ಅಕ್ಷರ ಗಾತ್ರ

‘ರೀ, ಈ ಶೃಂಗಸಭೇಲಿ ಏನೇನ್ ಚರ್ಚೆ ಮಾಡ್ತಾರೆ?’ ಪದ್ದಮ್ಮ ಪೇಪರ್ ಹಿಡಿದು ಕೇಳಿದರು.

‘ಒಪ್ಪತ್ತು ಊಟ ಇಲ್ದಿರೋ ದೇಶಗಳ ಬಗ್ಗೆ ತಿಂದು ಕರಗದಷ್ಟಿರೋ ಇಪ್ಪತ್ತು ದೇಶಗಳು ಚರ್ಚೆ ಮಾಡ್ತಾವೆ’ ಎಂದ ಪರ್ಮೇಶಿ.

‘ಆಮೇಲೆ?’

‘ಅರ್ಧ ಪ್ರಪಂಚವೇ ಚೀನಾ ಸಾಲಕ್ಕೆ ದಿವಾಳಿ ಆಗಿದ್ರೂ ಆರ್ಥಿಕ ಪರಿಸ್ಥಿತಿ ರೂಪಿಸ್ಕೊಳ್ಳೋ ಬಗ್ಗೆ ಚರ್ಚಿಸೋದು. ಆಮೇಲೆ ಜಾಗತಿಕ ತಾಪಮಾನ, ಭೂಮಿ ಬಿಸಿ ತಗ್ಗಿಸೋದ್ರ ಬಗ್ಗೆ ಚರ್ಚಿಸೋದು’.

‘ಅಲ್ರೀ, ಇವನ್ನೆಲ್ಲಾ ಬರೀ ಗಂಡಸರು ಕೂತ್ಕೊಂಡು ಪರಿಣಾಮಕಾರಿಯಾಗಿ ಜಾರಿಗೆ ತರಕ್ಕಾಗುತ್ತಾ? ಹೆಣ್ಣು ಮಕ್ಕಳಿಗೆ ಇರೋ ಅನುಭವ ಇವರಿಗೆಲ್ಲ ಎಲ್ಲಿಂದ ಬರ್ಬೇಕು?’

‘ಇದೇನೇ ಜಾಗತಿಕ ನಾಯಕರನ್ನೆಲ್ಲಾ ಹೀಗೆ ಕಂಡೆಮ್ ಮಾಡ್ತಿದೀಯ?’

‘ಕಂಡೆಮ್ ಅಲ್ಲರೀ, ಇವೆಲ್ಲಾ ಮ್ಯಾನೇಜ್ ಮಾಡೋದೇ ಹೆಣ್ಣು ಮಕ್ಕಳು. ಮನೇಲಿ ಊಟ ಹಾಕೋ ನಾವೇ ಅನ್ನಪೂರ್ಣೇಶ್ವರಿಯರು. ಎಲ್ಲ ಸಂಬಂಧಗಳೂ ನೆಟ್ಟಗಿರಬೇಕು ಅಂದ್ರೆ ಮೊದ್ಲು ನಾವು ನೆಟ್ಟಗಿರಬೇಕು. ನಾವು ಚಿನ್ನ, ಪ್ಲಾಟಿನಂ ಹಾಕ್ಕೊಂಡಿದ್ರೆ ತಾನೇ ಮನೆ ಆರ್ಥಿಕವಾಗಿ ಗಟ್ಟಿಯಾಗಿರೋದು? ಮನೇಲಿ ಬಿಸಿ ಗಾಳಿ ಇಲ್ಲ ಅಂದ್ರೆ ಊರು, ದೇಶ, ಪ್ರಪಂಚದಲ್ಲೂ ಬಿಸಿ ಗಾಳಿ ಕಮ್ಮಿಯಾಗುತ್ತೆ. ಹೀಗೆ ಒಂದೊಂದು ಮನೇಲೂ ಗಂಡಸರು ಹೆಂಡ್ತೀರ ಜೊತೆ ಒಡಂಬಡಿಕೆ ಮಾಡ್ಕೊಂಡ್ರೆ ಯಾವ ಸಮಸ್ಯೆನೂ ಇರೋದಿಲ್ಲ’.

‘ಹಾಗಾದ್ರೆ ಈ ಶೃಂಗಸಭೆ ಪ್ರಯೋಜನಕ್ಕಿಲ್ಲ ಅಂತೀಯಾ?’

‘20 ಜನಕ್ಕೆ ಇಟಲಿಯೋರು, ಯೂರೋಪಿಯನ್ ಯೂನಿಯನ್ನೋರು ಇಬ್ರೇ ಮಹಿಳೆಯರು ಇರೋದು, ಇದು ನ್ಯಾಯನಾ? ಮಹಿಳೆಯರಿಗೆ ಅರ್ಧದಷ್ಟು ಪ್ರಾತಿನಿಧ್ಯ ಇರಬೇಕಲ್ವಾ?’

‘ಈಗ ಇಲ್ವಲ್ಲ, ಅದಕ್ಕೇನು ಮಾಡೋದು?’

‘ಕನಿಷ್ಠ ಅವರ ಹೆಂಡ್ತೀರನ್ನಾದರೂ ಕೂರಿಸಿ ಒಂದು ಸಮಾನಾಂತರ ಸಭೆ ಮಾಡ್ಬೇಕಲ್ವಾ?’

‘ಅಯ್ಯೋ ಅದು ಆವಾಗ ಶೃಂಗಸಭೆ ಆಗಲ್ವೇ, ಮನೆವಾರ್ತೆ ಸಭೆ ಆಗುತ್ತೆ’ ಎಂದು ತಲೆಚಚ್ಚಿಕೊಂಡ ಪರ್ಮೇಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT