ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಸೂರ್ಯಂಗೇ ಟಾರ್ಚು!

Published 3 ಸೆಪ್ಟೆಂಬರ್ 2023, 21:15 IST
Last Updated 3 ಸೆಪ್ಟೆಂಬರ್ 2023, 21:15 IST
ಅಕ್ಷರ ಗಾತ್ರ

ಆದಿತ್ಯ-1 ಆಕಾಶದತ್ತ ಜಿಗಿದಿದ್ದನ್ನು ಕಣ್ಣುತುಂಬಿಕೊಂಡ ಬೆಕ್ಕಣ್ಣ ಬಲು ಖುಷಿಯಲ್ಲಿತ್ತು.

‘ಚಂದ್ರಯಾನ ಸಕ್ಸಸ್‌ ಆತು… ಈಗ ಆದಿತ್ಯ ಮ್ಯಾಲೆ ಜಿಗಿದೈತಿ, ಅದು ಕಕ್ಷೆಗೆ ಸೇರಿತಂದರ ಸೂರ್ಯಯಾನನೂ ಸಕ್ಸಸ್‌ ಆದಂಗೇ ಲೆಕ್ಕ. ಮೋದಿಮಾಮ ಪ್ರಧಾನಿಯಾಗಿ ಒಂದು ದಶಕದಾಗೆ ಎಷ್ಟ್‌ ಎತ್ತರ ಜಿಗಿದೀವಿ ನೋಡು. ಒಂದೂವರೆ ದಶಲಕ್ಷ ಕಿ.ಮೀ. ಮ್ಯಾಗೆ ಹೋಗೂದು ಅಂದ್ರ ಸುಮ್ಮನೇ ಏನು. ನಾವು ಸೂರ್ಯಂಗೇ ಟಾರ್ಚು ಬಿಡತೀವಿ!’ ಎಂದು ಬೀಗಿತು.

‘ಅದೇ ನಾನು ಹೇಳದು… ಅಷ್ಟ್‌ ಮ್ಯಾಗೆ ಹಾರಿ, ಬಾಹ್ಯಾಕಾಶದಾಗೆ ಅಧ್ಯಯನ ಮಾಡೋ ತಂತ್ರಜ್ಞಾನ ನಮ್ಮ ಬೆರಳ ತುದಿಯಾಗೆ ಐತಿ ಈಗ. ಆದ್ರ ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛ ಮಾಡಾಕೆ ಮಾತ್ರ ಈಗ್ಲೂ ಮನುಷ್ಯರನ್ನೇ ಕೆಳಗೆ ಇಳಸ್ತೀವಿ. ಒಂದೂವರೆ ದಶಲಕ್ಷ ಕಿ.ಮೀ. ಮೇಲೇರಿ ಸೂರ್ಯಂಗೇ ಟಾರ್ಚು ಬಿಡೋ ನಮಗೆ ಮಲದ ಗುಂಡಿವಳಗ ಟಾರ್ಚು ಬಿಡಾಕೆ ಎದಕ್ಕ ಆಗಂಗಿಲ್ಲ ಅಂತ’ ಎಂದು ನಾನು ಲೊಚಗುಟ್ಟಿದೆ.

‘ಹಿಂತಾ ಗುಂಡಿ ವಳಗ ಇಳಿಯೂ ಮಂದಿನೇ ಬ್ಯಾರೆ ಇರತಾರ. ಅದಕ್ಯಾಕೆ ತಂತ್ರಜ್ಞಾನ ಅಭಿವೃದ್ಧಿ ಮಾಡಬಕು? ನಿನಗರ ತೆಲಿನೇ ಇಲ್ಲ’ ಎಂದು ನನ್ನ ಮೂತಿಗೆ ತಿವಿದ ಬೆಕ್ಕಣ್ಣ ‘ಅದ್ಸರಿ, ಪ್ರಗ್ಯಾನ್‌ ಮತ್ತ ವಿಕ್ರಮ್‌ ಈಗ ನಿದ್ದಿ ಮಾಡಾಕೆ ಹತ್ಯಾವಲ್ಲ. ಅವು ಹದಿನಾಕು ದಿನ ಆದಮ್ಯಾಲೆ ಏಳಬೌದೇನು?’ ಎಂದು ಕೇಳಿತು.

‘ಚಂದ್ರನ ಮ್ಯಾಗೆ ಸೂರ್ಯೋದಯ ಆಗತಿದ್ದಂತೆ ಅವುಗಳ ಮ್ಯಾಗೆ ಬೆಳಕು ಬೀಳೂ ಹಂಗ ನಿಲ್ಲಿಸ್ಯಾರೆ, ಹಂಗಾಗಿ ಅವೆರಡೂ ಏಳಬೌದು. ಆದರೆ ಇಲ್ಲಿ ಭೂಮಿ ಮ್ಯಾಗೆ ಇಷ್ಟೆಲ್ಲ ಸಮಸ್ಯೆಗಳ ಬಗ್ಗೆ ಎಚ್ಚರನೇ ಇಲ್ಲದೆ, ನಮ್ಮ ರಾಜಕಾರಣಿಗಳು ನಿದ್ದಿ ಮಾಡಾಕೆ ಹತ್ಯಾರಲ್ಲ, ಅವ್ರನ್ನ ಹೆಂಗ ಎಬ್ಬಿಸೂದು?’

‘ಅದೊಂಥರಾ ಜಾಣನಿದ್ದೆ! ಆಪರೇಷನ್‌ ಕಮಲ, ಆಪರೇಷನ್‌ ಹಸ್ತ, ಪರ್ಸೆಂಟೇಜು, ಬಿಟ್‌ಕಾಯಿನ್ನು, ವರ್ಗಾವಣೆ ದಂಧೆ, ಹಿಂತಾ ಪದಗುಚ್ಛಗಳಿಗಷ್ಟೇ ಅವರನ್ನು ಎಬ್ಬಿಸೋ ತಾಕತ್ತು ಐತಿ’ ಎಂದು ಬೆಕ್ಕಣ್ಣ ಪದಗಳ ಪಟ್ಟಿ ಮುಂದಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT