ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಕರೆ ಕಾಯಿಲೆ

Last Updated 9 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಹೆಂಡತಿ, ಮಗುವನ್ನು ಕೂರಿಸಿಕೊಂಡು ಗಿರಿ ಬೈಕಿನಲ್ಲಿ ಹೊರಟಿದ್ದ. ಗ್ರಹಚಾರ ಎದುರಾಯ್ತು. ಪೊಲೀಸರು ಕೈ ಅಡ್ಡ ಹಾಕಿದರು.

‘ಡಿ.ಎಲ್, ಇನ್ಶೂರೆನ್ಸ್ ಇದೆ. ಹೆಲ್ಮೆಟ್, ಮಾಸ್ಕ್ ಹಾಕಿದ್ದೇವೆ ಸಾರ್’ ಅಂದ ಗಿರಿ.

‘ಮಗುವಿಗೆ ಮಾಸ್ಕ್ ಹಾಕಿಲ್ಲ’.

‘ಎರಡು ವರ್ಷದ ಕೂಸಿಗೂ ಮಾಸ್ಕ್ ಹಾಕಬೇಕಾ ಸಾರ್?’ ಕೇಳಿದಳು ಅನು.

‘ಹೌದು, ಮಗುವಿಗೆ ಚೆಡ್ಡಿ ಹಾಕದಿದ್ದರೂ ಅಡ್ಡಿ ಇಲ್ಲ, ಮಾಸ್ಕ್ ಹಾಕ್ಬೇಕು’.

‘ಹಸುಗೂಸುಗಳಿಗೆ ಮಾಸ್ಕ್ ವಿನಾಯಿತಿ ಇಲ್ವಾ ಸಾರ್?’

‘ಕೊರೊನಾ ಕಾನೂನಿನಲ್ಲಿ ಚೌಕಾಶಿ ಇಲ್ಲ...’ ಸಾಹೇಬ್ರು ಖಡಕ್ಕಾದ್ರು.

‘ಸಾರ್, ಮಗುವಿಗೆ ತುಂಬಾ ನೆಗಡಿ, ಮಾಸ್ಕ್ ಹಾಕಿದರೆ ಹತ್ತು ನಿಮಿಷಕ್ಕೇ ಗಲೀಜು ಮಾಡಿಕೊಳ್ತದೆ’ ಅನು ಪರಿಸ್ಥಿತಿ ಹೇಳಿಕೊಂಡಳು.

‘ಮಗುವಿನ ಮೂತಿಗೆ ಡೈಪರ್ ಹಾಕಲಾಗುತ್ತಾ ಸಾರ್?’ ಗಿರಿ ಜೋಕ್ ಮಾಡಿದ.

‘ಸಾಹೇಬ್ರಿಗೆ ಜೋಕ್ ಅಲರ್ಜಿ, ಇವರಿಗೆ ಸಕ್ಕರೆ ಕಾಯಿಲೆ ಜೊತೆ ನಕ್ಕರೆ ಕಾಯಿಲೆಯೂ ಇದೆ, ಸುಮ್ನೆ ಫೈನ್ ಕಟ್ಟಿ ಹೋಗಿ ಸಾರ್...’ ಮೆಲ್ಲಗೆ ಉಸುರಿದ ಕಾನ್‍ಸ್ಟೆಬಲ್.

ಗಿರಿ ದಂಡ ಕಟ್ಟಿ, ಬೈಕ್ ಸ್ಟಾರ್ಟ್ ಮಾಡಿ ಹೊರಟ.

ಮುಂದೆ ಮತ್ತೊಬ್ಬ ಅಡ್ಡ ಹಾಕಿ ನಿಲ್ಲಿಸಿ, ಮಗುವಿನ ಮುಖ, ಮೂತಿ ಕ್ಲೀನ್ ಮಾಡಿ ಮಾಸ್ಕ್ ಕಟ್ಟಿದ.

‘ಹರಿಯೋ ನೀರಿಗೆ ಅಣೆಕಟ್ಟು ಇದ್ದಂತೆ ಈ ಮಾಸ್ಕ್. ಮೂಗಿನಿಂದ ಏನೇ ಸೋರಿದರೂ ಹೀರಿಕೊಂಡು ದೀರ್ಘ ಬಾಳಿಕೆ ಬರುತ್ತದೆ ಸಾರ್. ಕ್ಲೀನಿಂಗ್ ಚಾರ್ಜ್ ಫ್ರೀ, ಮಾಸ್ಕ್ ಚಾರ್ಜ್ ಕೊಡಿ ಸಾಕು’ ಎಂದ.

‘ಮುಂದೆ ಇನ್ನೂ ಏನೇನು ಕಡ್ಡಾಯ ಆಗುತ್ತದೋ...’ ಎಂದು ಗೊಣಗಿದ ಗಿರಿ.

‘ಕೊರೊನಾ ಸೋಂಕು ಹೀಗೇ ಹೆಚ್ಚುತ್ತಾ ಹೋದರೆ, ಮೈತುಂಬಾ ಪಿಪಿಇ ಕಿಟ್ ಕಡ್ಡಾಯ ಆಗಬಹುದು ಸಾರ್...’ ಎಂದು ದುಡ್ಡು ಈಸ್ಕೊಂಡು ಹೋಗಿ ಇನ್ನೊಂದು ಬೈಕ್‍ಗೆ ಅಡ್ಡ ಹಾಕಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT