ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಕಟ್ ಅಂಡ್ ಪೇಸ್ಟ್ ಪಠ್ಯ!

Published 2 ಜೂನ್ 2023, 19:13 IST
Last Updated 2 ಜೂನ್ 2023, 19:13 IST
ಅಕ್ಷರ ಗಾತ್ರ

ಚಿಂಟು ಪುಸ್ತಕದ ಮೂಟೆ ಹೊತ್ಕೊಂಡು ಹುಶ್ಶಪ್ಪಾ ಅಂತ ಸ್ಕೂಲಿಂದ ಸುಸ್ತಾಗಿ ಬಂದ್ಲು. ಪದ್ದಮ್ಮ ‘ತೆಗೆಯೇ ಬ್ಯಾಗು, ಏನೇನು ಹೋಂವರ್ಕ್ ಕೊಟ್ಟಿದಾರೆ ನೋಡೋಣ’ ಎಂದು ಬ್ಯಾಗ್ ಕಿತ್ಕೊಂಡು ಪುಸ್ತಕಗಳನ್ನೆಲ್ಲಾ ಈಚೆ ಸುರುದ್ರು. ಪುಸ್ತಕಗಳ ಅವಸ್ಥೆ ನೋಡಿ ಪದ್ದಮ್ಮ ಹೌಹಾರಿದ್ರು.

‘ಏನೇ ಇದು, ಹೊಸ ಪುಸ್ತಕಗಳೆಲ್ಲ ರದ್ದಿ ಪುಸ್ತಕಗಳಿಗಿಂತ ಕಡೆ ಆಗಿವ್ಯಲ್ಲೇ?’

‘ನಾನೇನಮ್ಮ ಮಾಡ್ಲಿ? ಮೇಡಂ ಎಲ್ಲಾ ಪುಸ್ತಕಕ್ಕೂ ಆಪರೇಷನ್ ಮಾಡ್ಸುದ್ರು’.

‘ಅಯ್ಯೋ ರಾಮ! ಪುಸ್ತಕಕ್ಕೆಂತ ಆಪರೇಷನ್ನೇ!’

‘ಹ್ಞೂಂನಮ್ಮ, ಹಿಂದಿದ್ದೋರು ನ್ಯಾಯ, ನೀತಿನೆಲ್ಲ ಆಪರೇಷನ್ ಮಾಡಿ ತೆಗೆದೆಸೆದು, ನೀತಿ ಮೌಲ್ಯ ಅಂತ ಪುಸ್ತಕದ ಬದನೆಕಾಯಿ ಬರೆದಿದ್ರಂತೆ. ಅದಕ್ಕೇ ಈಗ ಈ ಥರ ಆಪರೇಷನ್ ಮಾಡ್ಸಿದಾರೆ’.

‘ಇದೇನಿದು ಪುಸ್ತಕದ ತುಂಬಾ ಪಿನ್ ಹೊಡ್ಸಿದಾರೆ?’

‘ಹ್ಞೂಂ, ಆ ಪಾಠಗಳನ್ನು ಓದ್ಬಾರದಂತೆ... ಅದಕ್ಕೇ ಪಿನ್ ಹೊಡೆದು ಕ್ಲೋಸ್ ಮಾಡ್ಸಿದಾರೆ’.

‘ಹೌದಾ? ಪುಸ್ತಕ ಎಲ್ಲಾ ಹಲ್ವಾ ತಿಂದು ಕೈ ಒರೆಸ್ಕೊಂಡಂಗೆ ಆಗಿದ್ಯಲ್ಲೇ! ಇದ್ರೊಳಗೆ ಏನು ಸುರಿದ್ಯೇ?’

‘ನಾನೇನಮ್ಮ ಸುರೀಲಿ? ಮೇಡಮ್ಮೇ ಗಮ್ ಬಾಟಲ್ ಕೊಟ್ಟು, ಒಂದಿಷ್ಟು ಪೇಜ್‍ಗಳನ್ನ ಅಂಟಿಸ್ಬಿಡಿ ಅಂದ್ರು’.

‘ಯಾಕೆ? ಪಿನ್ ಹೊಡ್ದಿದ್ದು ಸಾಕಾಗಿರ್ಲಿಲ್ವಾ?’

‘ಚಿಕ್ ಮಕ್ಕಳು ಪಿನ್ ಕಿತ್ತು ಓದುದ್ರೆ ಕೋಮು ಮುಳ್ಳು ಚುಚ್ಕೊಳುತ್ತೆ ಅಂತ ಮತ್ತೆ ಗಮ್ ಹಾಕಿ ಅಂಟ್ಸಿದಾರೆ’.

‘ಸರಿ, ಇದೇನು ಒಂದಿಷ್ಟು ಪೇಜಸ್ ಕಿತ್ತು ಬಂದಿವೆ?’

‘ಹಿಂದುಗಡೆಗೆ ಇದ್ದ ನಾಕು ಪುಟದ ಪಾಠ ಬೇಡ ಅಂತ ಹರಿದಾಕ್ಸುದ್ರು. ಅದಕ್ಕೆ ಅಂಟಿಕೊಂಡಿದ್ದ ಮುಂದಿನ ನಾಕು ಪುಟ ಕೈಗೆ ಬಂತು’.

‘ಸರಿಹೋಯ್ತು ಬಿಡು, ಇದೇನು ಪುಸ್ತಕನೆಲ್ಲಾ ತಿರುಚಿದೀಯ?’

‘ಗಮ್ ಒಣಗ್ಲಿ ಅಂತ ಆರಿ ಹಾಕ್ಸಿದ್ರು. ಹಪ್ಪಳದ ಥರ ದೊನ್ನೆ ಆಗಿದೆ’.

‘ಸರಿ, ನಾಳೆಗೆ ಹೋಂವರ್ಕ್ ಏನ್ ಕೊಟ್ಟಿದಾರೆ ಅದನ್ನಾದ್ರೂ ಹೇಳು ತಾಯಿ?’

‘ಈ ಪುಸ್ತಕದಲ್ಲಿ ಇಲ್ದೇ ಇರೋದನ್ನ ಹೊಸದಾಗಿ ಬರುಸ್ತಾರಂತೆ. ಈ ಪುಸ್ತಕಕ್ಕೆಲ್ಲಾ ಹತ್ತು ಹತ್ತು ಖಾಲಿ ಶೀಟ್ ಅಂಟಿಸಿ, ನೀಟಾಗಿ ಹೊಲೆದು ಬೈಂಡ್ ಹಾಕಿ ತರ್ಬೇಕಂತೆ. ಅದೇ ಹೋಂವರ್ಕು, ಬೇಗ ಮುಗ್ಸು’ ಎಂದು ಎದ್ದು ಹೋದಳು ಚಿಂಟು. ಪದ್ದಮ್ಮ ‘ಎಲ್ಲ ನನ್ನ ಕರ್ಮ’ ಅಂತ ತಲೆ ಚಚ್ಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT