ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮದುವೆ ಮಾತು

Last Updated 20 ಸೆಪ್ಟೆಂಬರ್ 2021, 18:55 IST
ಅಕ್ಷರ ಗಾತ್ರ

‘ದುಸರಾ ಮಾತಾಡದೇ ಟ್ಯಾಕ್ಸು ಕಟ್ಟಿದರೆ ಮಾತ್ರ ಅನುಕೂಲ ಕೊಟ್ಟಾರಂತೆ! ‘ಮದುವೆಗೆ ಗದ್ದೆ-ಹೊಲ ಆಗಕುಲ್ಲ ಏರ್‍ಕಂಡೀಶನ್ ಚೌಲ್ಟ್ರಿನೇ ಬೇಕು ಅಂತೀರಾ, ಟ್ಯಾಕ್ಸು ಕಟ್ಟಕೇನು ಮಲ್ಲಾಗರ ನಿಮಗೆ’ ಅಂತ ಘನವಾದ ಮಾತಾಡವ್ರೆ ದೊಡ್ಡೋರು’ ಅಂದೆ ನ್ಯೂಸ್ ನೋಡಿಕ್ಯಂಡು.

‘ಮಂತೆ ಎಲ್ಲಾ ಪುಗಸಟ್ಟೆ ಬಂದದಾ? ಬಿಗ್ ಫ್ಯಾಟ್ ಇಂಡಿಯನ್ ವೆಡ್ಡಿಂಗ್ ಐಭೋಗ ಅಂದ್ರೆ ಸುಮ್ಮನೇನಾ? ಇದು ವರ್ಸಕ್ಕೆ 20-25 ಸಾವಿರ ಕೋಟಿ ಯವಾರ ಕಯ್ಯಾ! ಮದುವೇಗೆ ದೊಡ್ಡ ಏರ್‍ಕಂಡೀಶನ್ ಚೌಲ್ಟ್ರಿ, ಕಾರ್ಡಿಗೆ ಕೋಟಿ, ಬರೋರಿಗೆ ಚಾರ್ಟರ್ಡ್ ಫ್ಲೈಟಿಗೆ ಒಸಿ ಆಯ್ತದಾ. ಟೋಲು, ಟ್ಯಾಕ್ಸು ಮಾತ್ರ ಕೊಡೀಕಿಲ್ಲ ಅಂತೀರಿ!’ ಅಂತ ಮಕ್ಕುಗಿದರು.

‘ದೊಡ್ಡೋರಂಗೆ ನಾವು ನೂರಾರು ಕೋಟಿ ಖರ್ಚಿನ ಮದುವೆ ಮಾಡಕಾದದೇ? ಹರಿದೋಗಿರ ಚಡ್ಡಿ ಬುಟ್ರೆ ಇನ್ನೇನದೋ ನಮ್ಮತಾವು. ಎಲ್ಲಾನೂ ಮಿಳ್ಳೆ-ಚಟಾಕಲ್ಲಿ ತಂದು ಹೊಲದಗೋ, ಸಣ್ಣ ಚೌಲ್ಟ್ರಿಯಾಗೋ ಮದುವೆ ಮಾಡಿ, ಮುದ್ರಿಕೆ ಮಾತು ಹೇಳಿಕ್ಯಂದು ಗಂಡು-ಹೆಣ್ಣಿಗೆ ಅಕ್ಸತೆ ಹಾಕ್ಸಿ ಉಸೂರಂತೀವಿ!’ ಯಂಟಪ್ಪಣ್ಣ ನೋವು ಆಚಿಗೆ ಕೆಡಗ್ತು.

‘ದೊಡ್ಡೋರ ಮದುವೆಗೆ ಬರೋರ ಫ್ಲೈಟು, ಬೈಕು, ಕಾರು, ಬಸ್ಸಿಗೆ ಡಿಜೇಲು, ಪೆಟ್ರೋಲು, ಕ್ವಾಟ್ರು ಎಲ್ಲಾತ್ಕೂ ಟ್ಯಾಕ್ಸು ನಾವೇ ಕಟ್ಟಬೇಕ್ರಾ. ಒಡವೆ-ಸೀರೆ ಅಂಗಡಿಯೋರು, ಅಡುಗೆ ಭಟ್ಟರು, ತೊಳೆಯೋರು, ಒರಸೋರು, ದೋಸರು, ನೆರವಿ ಊಟಕೆ ಮರಿ ಕೊಟ್ಟೋರು, ಮರಿ ಹೊಡದೋರು, ಕತ್ತರಿಸಿದೋರು, ಅಡುಗೆ ಮಾಡೋರು ಎಲ್ಲಾ ಉದ್ಧಾರಾತರೆ ಬುಡಿ ಸಾ’ ಅಂದೆ.

‘ಹ್ಞೂಂ ಕಯ್ಯಾ, ಸರಳ ವಿವಾಹ, ಆನ್‍ಲೈನ್ ಮದುವೆ, ಜೂಂ ಮದುವೆ ಮಾಡಿಕ್ಯಂಡ್ರೆ ನೀವು ಉದ್ಧಾರಾಯ್ತಿರಿ, ದೇಸಕ್ಕೇನು ಉಪಕಾರ ಆದದು. ಸಾಲ ಮಾಡಿ, ತಾರಾಮಾರ ಖರ್ಚು ಮಾಡಿ ಮದುವ್ಯಾಗಿ, ದೇಸ ಉದ್ಧಾರ ಮಾಡಿ ಅಂತ ಅವುರಂದಿರದು!’ ತುರೇಮಣೆ ಲೆಕ್ಕಾಚಾರ ಕೇಳಿದ ಮ್ಯಾಲೆ ದೊಡ್ಡೋರೆಲ್ಲಾ ಜಾಣರಲ್ಲ ಅಂದುದ್ದು ಸರಿಯಾಗದೆ ಅನ್ನಿಸ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT