ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ದೊಡ್ಡವ್ರ ವಿಷಯ

Last Updated 6 ಮೇ 2020, 20:19 IST
ಅಕ್ಷರ ಗಾತ್ರ

ಕೊರೊನಾ ಕೃಪೆಯಿಂದ ನಿವೃತ್ತ ಅಧಿಕಾರಿ ಗುಂಡಣ್ಣನವರಿಗೆ ಶ್ರೀಮತಿಯ ಷಾಪಿಂಗ್, ಸಿನಿಮಾ, ಮಾರ್ಕೆಟಿಂಗ್ ಕಿರಿಕಿರಿಯೇನೋ ತಪ್ಪಿತ್ತು. ಆದರೆ ರಜೆಯ ಮಜಾ ಅನುಭವಿಸುತ್ತಾ ಫುಲ್ ಖುಷಿಯಲ್ಲಿದ್ದ (ಬಾಲವಿಲ್ಲದ) ಮೊಮ್ಮಕ್ಕಳ ಬಾಲಲೀಲೆಗಳು!

ಭೋಜನಾನಂತರ ಹಾಲ್‌ನಲ್ಲಿ ಅಡ್ಡಾಗಿದ್ದ ಗುಂಡಣ್ಣನವರ ಮುಖದ ಮೇಲೆ ಏನೋ ಅಪ್ಪಳಿಸಿದಂತಾಗಿ ಎದ್ದಾಗ ಮುದ್ದಿನ ಮೊಮ್ಮಗ ‘ಸಾರಿ ತಾತಾ! ನನ್ನ ಏರೋಪ್ಲೇನ್ ಗುರಿತಪ್ಪಿ ಎಮರ್ಜೆನ್ಸಿ ಲ್ಯಾಂಡಿಂಗ್ ಆಯ್ತು!’ ಎಂದ.

‘ಇದು, ಕೊರೊನಾದಂತೆ ಮೇಡ್ ಇನ್ ಚೀನಾ ಅಲ್ವೆ? ಅದಕ್ಕೆ ಭಾರತೀಯರ ಮೇಲೆ ಪ್ರೀತಿ ಜಾಸ್ತಿ... ಬಿಸಿಲು ಜಾಸ್ತಿ, ಮಲಕ್ಕೋ ಹೋಗು’. ‘ಆಗ್ಲಿ ತಾತಾ’ ಎಂದ ಮೊಮ್ಮಗ ಅವರ ಮೊಬೈಲ್ ಎಗರಿಸಿಕೊಂಡು ಅದೃಶ್ಯನಾದ!

ಅಷ್ಟರಲ್ಲಿ ಮೊಬೈಲ್ ಕರಭೂಷಿತೆ ಮೊಮ್ಮಗಳ ಪ್ರವೇಶ. ವಾಟ್ಸ್‌ಆ್ಯಪ್‌ ನೋಡುತ್ತಾ ಮೊಮ್ಮಗಳು ಉದ್ಗರಿಸಿದಳು– ‘ತಾತಾ, ಗಾಂಧಿ ಆಶ್ರಮದಲ್ಲಿದ್ದವು ಮೂರು ಗೊಂಬೆಕೋತಿಗಳಲ್ವೆ? ಇದಾವುದು ನಾಲ್ಕನೆಯದು?’

‘ಅದು ಆಧುನಿಕ ಕೋತಿಯಮ್ಮಾ. ನೋಡಲ್ಲಿ, ಕೈಲಿರೋ ಮೊಬೈಲಲ್ಲಿ ಹೇಗೆ ತಲ್ಲೀನವಾಗಿದೆ! ಮೂರು ಕೋತಿಗಳು ಮಾಡ್ತಿದ್ದ ಕೆಲಸಗಳನ್ನು ಇದೊಂದೇ ಮಾಡ್ತಿದೆ. ಅದು ಯಾರನ್ನೂ ನೋಡೋದಿಲ್ಲ, ಯಾರ ಮಾತನ್ನೂ ಕೇಳಿಸಿಕೊಳ್ಳೋದಿಲ್ಲ, ಯಾರೊಡನೆಯೂ ಮಾತಾಡೋದಿಲ್ಲ... ನಮ್ಮ ಮನೇಲೂ ಅಂಥ ಎರಡು ಮುದ್ದಿನ ಕೋತಿಗಳಿವೆ, ಗೊತ್ತಾ’. ಕೆನ್ನೆ ಊದಿಸಿಕೊಂಡ ಮೊಮ್ಮಗಳು ಧುಮುಗುಟ್ಟಿದಳು- ‘ನೀವೇನು ಟೀವಿ, ಮೊಬೈಲ್ ನೋಡೋಲ್ವೆ?’

‘ಹೌದಮ್ಮಾ, ಆದ್ರೆ ನೀವು, ದೊಡ್ಡೋರು ಹೇಳಿದಂತೆ ಮಾಡಬೇಕೇ ಹೊರತು, ಮಾಡಿದಂತೆ ಮಾಡಬಾರದು’.

‘ಹೌದ್ಹೌದು, ಅದಕ್ಕೇ ನಮ್ಮ ರಾಜಕಾರಣಿಗಳು ಕೊರೊನಾ ಸೋಂಕು ತಡೆಯೋಕೆ ಮಾಸ್ಕ್ ಹಾಕ್ಕೋಬೇಕು, ಜಾಸ್ತಿ ಜನ ಒಟ್ಟಿಗೆ ಸೇರಬಾರ ದೂಂತ ಹೇಳ್ತಾನೇ, ಮಾಸ್ಕ್ ಹಾಕ್ಕೊಳ್ಳದೆ, ಅಂತರ ಕಾಯ್ದುಕೊಳ್ಳದೆ ದೊಡ್ಡ ದೊಡ್ಡವರ ಮದ್ವೆಗೆ ಹೋಗ್ತಾರೆ. ಯಾಕೇಂದ್ರೆ ಅವ್ರು ದೊಡ್ಡೋರು ನೋಡಿ!’ ಗುಂಡಣ್ಣ ಸುಸ್ತಾದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT