ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಾಲವೇ ಉತ್ತರಿಸುವುದು!

Last Updated 25 ಏಪ್ರಿಲ್ 2021, 17:50 IST
ಅಕ್ಷರ ಗಾತ್ರ

ಹೋದ ವರ್ಷ ಇದೇ ಸಮಯದಲ್ಲಿ ಬೆಕ್ಕಣ್ಣ ‘ನಂಗೂ ಶಂಖ, ಜಾಗಟೆ ತರಿಸಿಕೊಡು, ಶಂಖ ಊದಿ, ಜಾಗಟೆ ಬಡಿದು ಗೋ ಕೊರೊನಾ ಗೋ ಅಂತ ಹಾಡಿ, ಕೊರೊನಾ ಓಡಿಸ್ತೀನಿ’ ಎಂದು ವರಾತ ಹಚ್ಚಿತ್ತು. ಆಮೇಲೆ ಗೋಮೂತ್ರ ಡೆಲಿವರಿ ಸರ್ವಿಸ್ ಶುರುಮಾಡತೀನಿ, ಕಷಾಯದ ಪುಡಿ ಫ್ಯಾಕ್ಟರಿ ಹಾಕತೀನಿ ಎಂದೆಲ್ಲ ಏನೇನೋ ನವೋದ್ಯಮದ ಕನಸು ಹೊಸೆಯುತ್ತಿತ್ತು.

ತುಳಸಿ ಗಿಡ ಬೆಳೆಸಿದ್ರೆ ಆಮ್ಲಜನಕ ರಗಡ ಸಿಗತೈತಂತ. ನೀನೂ ಒಂದು ನೂರು ತುಳಸಿ ಗಿಡ ಬೆಳೆಸು ಅಂತ ಕಳೆದ ತಿಂಗಳು ಗಂಟುಬಿದ್ದಿತ್ತು. ಈಗ ಕೊರೊನಾ ಎರಡನೇ ಅಲೆ ಸುನಾಮಿಯಂತೆ ಬಡಿದಾಗ ಯಾವ ಹೊಸ ಐಡಿಯಾಗಳಿಲ್ಲದೆ ತೆಪ್ಪಗಿತ್ತು.

ಸದ್ಯ ಏನೂ ಉತಾವಳಿಯಿಲ್ಲ ಎಂದು ನಾನೂ ನೆಮ್ಮದಿಯಿಂದಿದ್ದೆ. ಆದರೆ ಕುಣುಕಲಾಡಿಕುಪ್ಪ ಹಂಗೆಲ್ಲ ಸುಮ್ಮನಿರುವುದುಂಟೇ... ಇವತ್ತು ಬೆಳಗ್ಗೆ ‘ನಿನ್ನ ಜನರಲ್ ನಾಲೆಜ್ ಎಷ್ಟೈತಿ ನೋಡತೀನಿ’ ಎಂದು ರಸಪ್ರಶ್ನೆ ಶುರು ಮಾಡಿತು.

‘ದೆಹಲಿ ಇನ್ನಿತರ ಕಡೆ ಐಸಿಯು ವಳಗ ಐವತ್ತಕ್ಕೂ ಹೆಚ್ಚು ರೋಗಿಗಳು ಒಮ್ಮೆಲೇ ಸತ್ತರಲ್ಲ, ಆಮ್ಲಜನಕದ ಕೊರತೆಯಿಂದ ಸತ್ತರೋ ಅಥವಾ ಕೊರೊನಾ ಭೂತದಿಂದ ಸತ್ತರೋ? ಇನ್ನು ಕೆಲವರು ನಕಲಿ ರೆಮ್ಡೆಸಿವಿರ್ ತಗಂಡಿದ್ದಕ್ಕೆ ಸತ್ತರೋ ಅಥವಾ ಅಸಲಿ ರೆಮ್ಡೆಸಿವಿರ್ ಸಿಗಲಾರದ್ದಕ್ಕೆ ಸತ್ತರೋ?’

‘ಇದಕ್ಕುತ್ತರ ಎಲ್ಲಾರಿಗೂ ಗೊತ್ತೈತಿ ಬಿಡಲೇ. ನನ್ನ ಪ್ರಶ್ನೆಗೆ ಉತ್ತರ ಹೇಳು. ಮೋದಿಮಾಮಾ ಚಾಲಾಕುತನದ ಮಾತಾಡಿ ಜವಾಬ್ದಾರಿಯಿಂದ ನುಣಚಿಕೊಳ್ತಾರ, ಎಲ್ಲ ರಾಜಕೀಯ, ಧಾರ್ಮಿಕ ಮುಖಂಡರಿಗೆ ಅವರ ಬ್ಯಾಳೆ ಬೇಯಿಸ್ಕಳದೇ ಮುಖ್ಯ ಆಗ್ಯದೆ, ಕೊರೊನಾ ಎರಡನೇ ಸುನಾಮಿಗೆ ಇವರೆಲ್ಲ ತೆಲಿನೆ ಕೆಡಿಸ್ಕಂಡಿಲ್ಲ ಅಂತ ನಿಮ್ಮ ನಿರ್ಮಲಕ್ಕನ ಗಂಡ ಪರಕಾಲ ಪ್ರಭಾಕರ ಎಲ್ಲಾರನ್ನ ಛಲೋತ್ನಾಗಿ ಝಾಡಿಸಿ, ಭಾಷಣ ಮಾಡ್ಯಾರೆ. ಈಗ ಮೋದಿಮಾಮಾರು ನಿರ್ಮಲಕ್ಕನ ಮ್ಯಾಗ ಮತ್ತು ನಿರ್ಮಲಕ್ಕಾರು ಗಂಡನ ಮ್ಯಾಗ ಏನು ಶಿಸ್ತು ಕ್ರಮ ತಗೊಳ್ತಾರ?’

ಬೆಕ್ಕಣ್ಣ ಮುಗುಮ್ಮಾಗಿ ‘ಪರಕಾಲರ ಭಿನ್ನಾಭಿಪ್ರಾಯಕ್ಕೆ ಕಾಲವೇ ಉತ್ತರಿಸುವುದು’ ಎಂದಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT