ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ‘ಅಂತರ’ದ ಆಂತರ್ಯವೇ ಪ್ಯಾಕೇಜ್‌ನ ಆಂತರ್ಯ!

Last Updated 10 ಮೇ 2020, 20:00 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರವು ವೃತ್ತಿನಿರತ ಕ್ಷೌರಿಕರು, ಮಡಿವಾಳರು, ಆಟೊ ಹಾಗೂ ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿಯ ಪರಿಹಾರ ರೂಪದಲ್ಲಿ ₹ 5 ಸಾವಿರ ಘೋಷಿಸಿರುವುದು, ‘ನಾವೂ ಕಷ್ಟದಲ್ಲಿದ್ದೇವೆ, ನಮ್ಮನ್ನೂ ಆ ಪಟ್ಟಿಗೆ ಸೇರಿಸಿ’ ಎಂಬ ಅಹವಾಲು ಹಲವೆಡೆಯಿಂದ ಬರಲು ಕಾರಣವಾಗಿದೆ. ಚರ್ಮಕಾರರಿಂದ ಹಿಡಿದು ಅರ್ಚಕರು, ಛಾಯಾಗ್ರಾಹಕರವರೆಗೆ ಅನೇಕ ಕಾಯಕ ಸಮುದಾಯಗಳು ಇಂತಹ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿವೆ.

ನಿಜ, ಲಾಕ್‌ಡೌನ್‌ನಿಂದಾಗಿ ಎಲ್ಲ ತರಹದ ವೃತ್ತಿ, ವ್ಯಾಪಾರಗಳು ತತ್ತರಿಸಿಹೋಗಿವೆ. ಸರ್ಕಾರದ ಆರ್ಥಿಕ ಸ್ಥಿತಿಯೂ ಗಂಭೀರವಾಗಿಯೇ ಇದೆ. ಎಲ್ಲರ ಅಹವಾಲಿಗೆ ಓಗೊಡುವುದು ಅಸಾಧ್ಯದ ಮಾತು. ಈಗ ಕೊಟ್ಟಿರುವ ಪ್ಯಾಕೇಜ್‌ನಲ್ಲಿ ‘ಅಂತರದ ನಿಯಮ’ ಪಾಲನೆಯಾಗಿರುವುದನ್ನು ಗಮನಿಸಬೇಕು. ಕ್ಷೌರಿಕ, ಮಡಿವಾಳ ಸಮಾಜದ ಎಲ್ಲರಿಗೂ ಈ ಪ್ಯಾಕೇಜ್ ಅನ್ವಯವಾಗುವುದಿಲ್ಲ, ಅವರು ವೃತ್ತಿಯಲ್ಲಿದ್ದರಷ್ಟೇ ಅನ್ವಯವಾಗುತ್ತದೆ. ಕ್ಷೌರಿಕನೊಬ್ಬ ಅಂತರ ಕಾಯ್ದುಕೊಂಡು ವೃತ್ತಿ ಆರಂಭಿಸುವುದು ಆಸಾಧ್ಯ. ಹಾಗೆಯೇ ಬಳಸಿದ ಬಟ್ಟೆ ಶುಚಿ ಮಾಡಬೇಕಾದ ಮಡಿವಾಳರು. ಆಟೊ, ಟ್ಯಾಕ್ಸಿ ಚಾಲಕರು ಅಂತರ ಕಾಪಾಡುವುದಾದರೂ ಹೇಗೆ? ರೋಗ ಹರಡದಂತೆ ಎಚ್ಚರ ವಹಿಸಬೇಕಾಗಿರುವುದರಿಂದ ಎಲ್ಲ ವ್ಯಾಪಾರಗಳು, ಪೂರಕ ಉದ್ಯೋಗಗಳು ಕುದುರಲು ಒಂದಿಷ್ಟು ದಿನಗಳು ಬೇಕು. ಈ ಉದ್ಯೋಗಗಳು ಪೂರ್ಣಪ್ರಮಾಣದಲ್ಲಿ ಚಾಲನೆ ಪಡೆಯಲು ತಿಂಗಳುಗಳೇ ಹಿಡಿಯುತ್ತವೆ. ಹಾಗಾಗಿ ಸರ್ಕಾರ ಇವರಿಗೆ ಈ ಪ್ಯಾಕೇಜ್ ಘೋಷಿಸಿದೆ ಎಂಬುದನ್ನು ಎಲ್ಲರೂ ಸಮಾಧಾನ ಚಿತ್ತದಿಂದ ಅರ್ಥಮಾಡಿಕೊಳ್ಳಬೇಕು.

‘ನಮಗೂ ಪ್ಯಾಕೇಜ್ ಕೊಡಿ’ ಎಂದು ಎಲ್ಲ ಕಾಯಕ ಸಮುದಾಯಗಳು ಆಹವಾಲು ಸಲ್ಲಿಸುವ ಬದಲು, ಪ್ರಾಣದ ಹಂಗು ತೊರೆದು ಕನಿಷ್ಠ ಸಂಬಳಕ್ಕೆ, ವಾರದ ರಜೆಯೂ ಇಲ್ಲದೆ ದುಡಿಯುತ್ತಿರುವ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರಿಗೆ ಒಂದೆರಡು ಸಾವಿರ ರೂಪಾಯಿ ಹೆಚ್ಚಿನ ಗೌರವಧನ ಕೊಡಿ ಎಂದು ಸರ್ಕಾರವನ್ನು ಆಗ್ರಹಿಸುವುದು ಎಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ.

- ವಾದಿರಾಜ್‌,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT