ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ– ಏಕಕಾಲದಲ್ಲಿ ಎರಡು ಡಿಗ್ರಿ: ಸ್ವಾವಲಂಬನೆಗೆ ಬಹುಶಿಸ್ತೀಯ ಶಿಕ್ಷಣ ಅಗತ್ಯ

ಏಕಕಾಲದಲ್ಲಿ ಎರಡು ಪದವಿ ಓದುವ ಅವಕಾಶ ವಿದ್ಯಾರ್ಥಿಗಳಿಗೆ ಉಪಯುಕ್ತವೇ?
Last Updated 22 ಏಪ್ರಿಲ್ 2022, 18:42 IST
ಅಕ್ಷರ ಗಾತ್ರ

ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈವರೆಗೂ, ಒಂದು ಸರ್ಟಿಫಿಕೇಟ್‌ ಡಿಪ್ಲೊಮಾ ಅಥವಾ ಪದವಿಯನ್ನು ಅಧ್ಯಯನ ಮಾಡುತ್ತಿದ್ದವರು ಇನ್ನೊಂದು ಸರ್ಟಿಫಿಕೇಟ್‌ ಡಿಪ್ಲೊಮಾ ಅಥವಾ ಪದವಿ ಮಾಡುವ ಅವಕಾಶ ಇರಲಿಲ್ಲ. ಉನ್ನತ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಅಗತ್ಯಗಳು ಬದಲಾಗುತ್ತಿರುವ ಈ ಕಾಲದಲ್ಲಿ, ಸುಮಾರು 2012ರಿಂದ ವಿಶ್ವವಿದ್ಯಾಲಯ ಅನುದಾನ ಆಯೋಗದಲ್ಲಿ ಒಂದು ಚರ್ಚೆ ನಡೆಯುತ್ತಿತ್ತು.ಒಬ್ಬ ವಿದ್ಯಾರ್ಥಿ ಏಕಕಾಲದಲ್ಲಿ ಎರಡು ಪದವಿಗಳನ್ನು ಮಾಡುಬಹುದೇ ಎಂಬುದೇ ಈ ಚರ್ಚೆ. ಇದಕ್ಕಾಗಿ ಬೇರೆ ಬೇರೆ ಸಮಿತಿಗಳು ರಚನೆಯಾಗಿ, ಮಾನವ ಸಂಪನ್ಮೂಲ ಸಚಿವಾಲಯ ಸೇರಿ ಹಲವು ಹಂತಗಳಲ್ಲಿ ಚರ್ಚೆಯಾಗುತ್ತಾ ಹತ್ತು ವರ್ಷಗಳಲ್ಲಿ ಇದು ನನೆಗುದಿಗೆ ಬಿದ್ದಿತ್ತು.

ಆದರೆ, ಈಗ ಯುಜಿಸಿ ಈ ಬಗ್ಗೆ ಒಂದು ದೃಢವಾದ ನಿರ್ಧಾರವನ್ನು ತೆಗೆದುಕೊಂಡಿದೆ. ಉನ್ನತ ಶಿಕ್ಷಣದಲ್ಲಿ ಸರ್ಟಿಫಿಕೇಟ್‌ ಡಿಪ್ಲೊಮಾ ಅಥವಾ ಪದವಿ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿ ರುವ ವಿದ್ಯಾರ್ಥಿಯು, ಆ ಶೈಕ್ಷಣಿಕ ಕಾರ್ಯಕ್ರಮದ ಜತೆಯಲ್ಲಿಯೇ ಏಕಕಾಲದಲ್ಲಿ ಮತ್ತೊಂದು ಶೈಕ್ಷಣಿಕ ಕಾರ್ಯಕ್ರಮ ಮಾಡುವ ಬಾಗಿಲನ್ನು ಯುಜಿಸಿ ತರೆದಿಟ್ಟಿದೆ. ಇದು ಹಲವು ರೀತಿಯಲ್ಲಿ ಸಾಧ್ಯವಾಗುತ್ತದೆ. ಉದಾಹರಣೆಗೆ, ಒಂದು ಶೈಕ್ಷಣಿಕ ಕಾರ್ಯಕ್ರಮ ಭೌತಿಕವಾಗಿದ್ದರೆ ಮತ್ತೊಂದು ಆನ್‌ಲೈನ್‌ ಕಾರ್ಯಕ್ರಮವಾಗಿರಬಹುದು. ಅಥವಾ ಎರಡೂ ಶೈಕ್ಷಣಿಕ ಕಾರ್ಯಕ್ರಮಗಳು ಆನ್‌ಲೈನ್‌ನಲ್ಲಿ ಇರಬಹುದು. ಅಥವಾ ಎರಡೂ ಶೈಕ್ಷಣಿಕ ಕಾರ್ಯಕ್ರಮಗಳು ಭೌತಿಕವಾಗಿಯೇ ನಡೆಯಬಹುದು.ಇದು ಹೇಗೆ ಸಾಧ್ಯ? ಉದಾಹರಣೆಗೆ ಪೂರ್ಣಾವಧಿಯಲ್ಲಿ ಬೆಳಿಗ್ಗೆ ಒಂದು ಪದವಿ ಕಾರ್ಯಕ್ರಮ, ಸಂಜೆ ಒಂದು ಪದವಿ ಕಾರ್ಯಕ್ರಮ... ಈ ರೀತಿ ಕೂಡ ಮಾಡಲು ಅವಕಾಶವಿದೆ.

ಇದರಿಂದಾಗುವ ಉಪಯೋಗಗಳೇನು ಎಂಬ ಪ್ರಶ್ನೆ ಇದೆ. ಒಬ್ಬ ವಿದ್ಯಾರ್ಥಿಯು ಒಂದು ಪದವಿ ಕೋರ್ಸ್‌ ಅನ್ನು ಅಧ್ಯಯನ ಮಾಡುತ್ತಿರುತ್ತಾನೆ. ಆತ ಇನ್ನೊಂದು ಕ್ಷೇತ್ರದಲ್ಲಿ ಅಥವಾ ಇನ್ನೊಂದು ವಿಷಯದಲ್ಲಿ ಅಧ್ಯಯನವನ್ನು ಮಾಡಬೇಕು ಅಂದರೆ, ಈಗ ಮಾಡುತ್ತಿರುವ ಪದವಿ ಕೋರ್ಸ್‌ ಮುಗಿಸಿದ ಮೇಲೆ ಬೇರೆ ಕೋರ್ಸ್‌ಗೆ ಸೇರಬೇಕಿತ್ತು. ಆತನ ಅಗತ್ಯಗಳು ಬದಲಾಗಬಹುದು, ಆತನ ಆಸಕ್ತಿ ಬದಲಾಗಬಹುದು. ಅಷ್ಟೇ ಅಲ್ಲ, ಬೇರೊಂದರಲ್ಲೂ ಆತನಿಗೆ ಪ್ರಾವೀಣ್ಯತೆ ಬೇಕು ಅಂತ ಆದರೆ, ಅದನ್ನು ಗಳಿಸಿಕೊಳ್ಳಲು ಅವಕಾಶವಿರಲಿಲ್ಲ. ಈ ನಿರ್ಧಾರದಿಂದ ಅದು ಸಾಧ್ಯವಾಗುತ್ತದೆ.

ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಬಹುಶಿಸ್ತೀಯ ಅಧ್ಯಯನಗಳ ಮೂಲಕ ನೀಡಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿಯು ಒಂದು ಶಿಫಾರಸನ್ನು ಮಾಡಿದೆ. ಒಬ್ಬ ವಿದ್ಯಾರ್ಥಿ ಬಿಎಸ್‌.ಸಿ ಪದವಿ ಮಾಡುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಆತನಿಗೆ ಸಂಗೀತದಲ್ಲಿ ಆಸಕ್ತಿ ಇದೆ. ಈ ಮೊದಲು ಬಿಎಸ್‌.ಸಿ ಕೋರ್ಸ್‌ ಮುಗಿದ ನಂತರ ಸಂಗೀತದ ಕೋರ್ಸ್‌ ಮಾಡಬೇಕಿತ್ತು. ಈಗ, ಎರಡನ್ನೂ ಏಕಕಾಲದಲ್ಲಿ ಮಾಡಬಹುದು. ಈ ರೀತಿ ಮಾಡುವುದರಿಂದ ಆತನಿಗೆ ಅವಕಾಶಗಳು ಹೆಚ್ಚಾಗುತ್ತವೆ. ಆತ ಈ ಎರಡರಲ್ಲಿ ಯಾವ ಕ್ಷೇತ್ರದಲ್ಲಾದರೂ ಮುಂದುವರಿಯಬಹುದು. ಯಾವುದರಲ್ಲಿ ಹೆಚ್ಚು ಅವಕಾಶಗಳು ಇರುತ್ತವೆಯೋ, ಯಾವುದರಲ್ಲಿ ಅಭಿರುಚಿ ಇರುತ್ತದೆಯೋ, ಯಾವುದರಲ್ಲಿ ಆತನಿಗೆ ಸಾಮರ್ಥ್ಯ ಮತ್ತು ಕೌಶಲ ಇರುತ್ತದೆಯೋ ಅದರಲ್ಲಿ ಆತ ಮುಂದುವರಿಯುತ್ತಾನೆ. ಇದು ಈ ನಿರ್ಧಾರದಿಂದಾಗುವ ಮಹತ್ವದ ಉಪಯೋಗ.

ಇದರಿಂದಾಗುವ ಮತ್ತೊಂದು ಉಪಯೋಗವೂ ಇದೆ. ಏಕಕಾಲದಲ್ಲಿ ಎರಡುಶೈಕ್ಷಣಿಕ ಕಾರ್ಯಕ್ರಮಗಳನ್ನು ಮಾಡುವ ಅವಕಾಶ ಕೊಡುವುದರಿಂದ ವಿದ್ಯಾರ್ಥಿಗಳು ತಮ್ಮ ಅಗತ್ಯಗಳ ಬಗ್ಗೆ ಹೆಚ್ಚು ಯೋಚನೆ ಮಾಡಲು ಸಾಧ್ಯವಾಗುತ್ತದೆ. ಶಿಕ್ಷಣ ಮತ್ತು ಕಲಿಕೆಯ ಬಗ್ಗೆ ಅಭಿರುಚಿ ಹಾಗೂ ಆಸಕ್ತಿ ಹೆಚ್ಚಾಗುತ್ತದೆ.

ಈ ನೀತಿಯಿಂದ, ಎಲ್ಲರಿಗೆ ಲಭ್ಯವಿರುವ ಶೈಕ್ಷಣಿಕ ಅವಕಾಶಗಳು ಕಡಿಮೆಯಾಗುತ್ತವೆಯೇ ಎಂಬ ಶಂಕೆ ವ್ಯಕ್ತವಾಗಿದೆ.ಆದರೆ, ಆ ರೀತಿಯ ಸಾಧ್ಯತೆ ಇಲ್ಲ. ಅಲ್ಲದೆ, ಈ ರೀತಿ ಆಗದಂತೆ ಮಾಡುವುದು ಹೇಗೆ ಎಂಬುದನ್ನು ಮುಂದಿನ ದಿನಗಳಲ್ಲಿ ಪರಿಹಾರ ಮಾಡಿಕೊಳ್ಳಬೇಕು. ಈ ನೀತಿಯಿಂದ ಗುಣಮಟ್ಟ ಕಡಿಮೆಯಾಗುತ್ತದೆಯೇ ಎಂಬ ಶಂಕೆಯೂ ಇದೆ. ಗುಣಮಟ್ಟ ಕಡಿಮೆ ಯಾಗುವ ಸಾಧ್ಯತೆ ಇಲ್ಲ. ಏಕೆಂದರೆ ಒಂದು ಪದವಿ ಯನ್ನು ಮಾಡೋದಕ್ಕೆ ಏನೇನು ಅರ್ಹತೆಗಳು ಇರಬೇಕು ಅಥವಾ ಎಷ್ಟು ಗಂಟೆಗಳ ಕಾಲ ಓದಬೇಕು ಅಥವಾ ಎಷ್ಟು ಕ್ರೆಡಿಟ್ ಬೇಕಾಗಿದೆ ಎಂಬುದರಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಹೀಗಾಗಿ ಗುಣಮಟ್ಟದಲ್ಲಿ ವ್ಯತ್ಯಾಸವಾಗುವುದಿಲ್ಲ. ಬದಲಿಗೆ ಆಯ್ಕೆ ಹೆಚ್ಚಾಗುತ್ತದೆ. ಕೌಶಲ, ಬಹುಶಿಸ್ತೀಯ ಶಿಕ್ಷಣವನ್ನು ಮುಂದುವರಿಸಲಿಕ್ಕೆ ಅವಕಾಶ ಇದೆ. ಹೀಗಾಗಿ ಈ ಒಂದು ಅವಕಾಶವನ್ನು ಉನ್ನತ ಶಿಕ್ಷಣದ ಸುಧಾರಣೆಗೆ ಹಾಕುವಂತಹ ಒಂದು ಒಳ್ಳೆಯ ದಾಪುಗಾಲು ಎಂದು ನಾನು ಹೇಳುತ್ತೇನೆ.

ಈ ರೀತಿಯ ಬದಲಾವಣೆ ಏಕೆ ಬೇಕು ಎಂಬ ಪ್ರಶ್ನೆಯೂ ಇದೆ. ವಿದ್ಯಾರ್ಥಿಗಳ ಅಗತ್ಯಗಳು ಮತ್ತು ಅವರ ಅಭಿರುಚಿಗಳು ಹೇಗೆ ಬದಲಾಗಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಈ ಸುಧಾರಣೆಯನ್ನು ಏಕೆ ಮಾಡಲಾಗಿದೆ ಎಂಬುದು ಅರ್ಥವಾಗುತ್ತದೆ. ಶಿಕ್ಷಣ ಜೀವನಕ್ಕೆ ಬಹಳ ಅಗತ್ಯವಾದ ವಿಚಾರ ಎಂಬ ಭಾವನೆ ಸಮಾಜದಲ್ಲಿ, ಕುಟುಂಬದಲ್ಲಿ ಮತ್ತು ವ್ಯಕ್ತಿಗಳಲ್ಲಿ ಹೆಚ್ಚಾಗುತ್ತಿದೆ. ಕಲಿಕೆ ಎಂಬುದು ಜೀವನದಲ್ಲಿ ಯಾವುದೋ ಒಂದಷ್ಟು ವರ್ಷಗಳ ಕಾಲ ಮಾತ್ರ ಮಾಡಬೇಕು, ನಂತರ ಕಲಿಕೆ ಬೇಕಿಲ್ಲ ಎಂಬಂತಹ ಸ್ಥಿತಿ ಈಗ ಇಲ್ಲ. ಈಗ ಕಲಿಕೆ ನಿರಂತರವಾಗಿ ಬೇಕು.

ಒಬ್ಬ ವಿದ್ಯಾರ್ಥಿ ಒಂದು ವಿಷಯದಲ್ಲಿ ಮಾತ್ರ ಕೌಶಲವನ್ನು ಪಡೆದುಕೊಂಡಿದ್ದರೆ ಸಾಕಾಗುವುದಿಲ್ಲ. ಈಗಿನ ಪರಿಸ್ಥಿತಿ ಹೇಗಿದೆಯಂದರೆ, ಎಲ್ಲಾ ರೀತಿಯ ವಿಷಯಗಳ ದೃಷ್ಟಿಕೋನ ವಿದ್ಯಾರ್ಥಿಗಳಿಗೆ ಬೇಕಾಗಿದೆ. ವಿಶಾಲವಾದ ದೃಷ್ಟಿಕೋನ ಮತ್ತು ಹೆಚ್ಚಿನ ಕೌಶಲಗಳು ಇಲ್ಲದೇ ಹೋದರೆ ಒಬ್ಬ ವಿದ್ಯಾರ್ಥಿ ಇವತ್ತಿನ ಸನ್ನಿವೇಶದಲ್ಲಿ ತನ್ನ ಜೀವನವನ್ನು ಮುಂದುವರಿಸಲಿಕ್ಕೆ ಕಷ್ಟ. ಹೀಗಾಗಿ ಈ ಬದಲಾಗುತ್ತಿರುವ ಸನ್ನಿವೇಶದಲ್ಲಿ ವೈವಿಧ್ಯಮಯವಾದ ಶಿಕ್ಷಣ ಕಾರ್ಯಕ್ರಮಗಳ ಅಗತ್ಯ ಇದೆ.

ಈಗ ವೈವಿಧ್ಯಮಯವಾದ ಮತ್ತು ಸೃಜನಾತ್ಮಕ ವಾದ ಕಾರ್ಯಕ್ರಮಗಳನ್ನು ಹಲವು ಸಂಸ್ಥೆಗಳು ನೀಡುತ್ತಿವೆ. ವಿಧವಿಧವಾದ ವಿಷಯಗಳಲ್ಲಿ ಹಲವು ಕೋರ್ಸ್‌ಗಳು ದೊರೆಯುತ್ತಿವೆ. ಹೀಗೆ ಕೋರ್ಸ್‌ಗಳು ಲಭ್ಯವಿದ್ದಾಗ ಮತ್ತು ಏಕಕಾಲದಲ್ಲಿ ಎರಡು ಶೈಕ್ಷಣಿಕ ಕಾರ್ಯಕ್ರಮ ಮಾಡುವ ಅವಕಾಶ ದೊರೆತಾಗ ಅದನ್ನು ಬಳಸಿಕೊಂಡರೆ ವಿದ್ಯಾರ್ಥಿ ತನ್ನಅಭಿರುಚಿಯನ್ನು ಮುಂದುವರಿಸಬಹುದು. ತನ್ನ ಕೌಶಲವನ್ನು ಸುಧಾರಿಸಿಕೊಳ್ಳಬಹುದು.

ಹೀಗಾಗಿ, ಯುಜಿಸಿ ಮಾಡಿರುವಂತಹ ನಿರ್ಧಾರ ಹೆಚ್ಚು ಸಂಸ್ಥೆಗಳಿಗೆ ಪ್ರಚಾರವಾಗಿ ಮತ್ತು ಹೆಚ್ಚು ವಿದ್ಯಾರ್ಥಿಗಳಿಗೆ ಇದು ತಲುಪಿ, ಅವರು ಇದರ ಉಪಯೋಗವನ್ನು ಪಡೆಯುವಂತಹ ಜಾಗೃತಿ ಆಗಬೇಕಿದೆ. ಇದನ್ನು ಮುಂದಿನ ದಿನಗಳಲ್ಲಿ ಒಂದು ವಿಶೇಷವಾದಂತಹ ರೀತಿಯಲ್ಲಿ ನಾವೆಲ್ಲಾ ಉಪಯೋಗಿಸಿಕೊಂಡರೆ, ಶಿಕ್ಷಣಕ್ಕೆ ಅವಕಾಶಗಳು ಹೆಚ್ಚಾಗುತ್ತವೆ. ಶಿಕ್ಷಣದ ಮೂಲಕವಾಗಿ ನಾವು ನಮ್ಮ ಕಾಲಮೇಲೆ ಸ್ವಾವಲಂಬಿಯಾಗಿ ನಿಲ್ಲುವುದಕ್ಕೆ ಅವಕಾಶವಾಗುತ್ತದೆ. ಈ ಎಲ್ಲಾ ಕಾರಣಗಳಿಂದ, ಯುಜಿಸಿಯ ಈ ನಿರ್ಧಾರವನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ.

ಲೇಖಕ: ಶಿಕ್ಷಣ ತಜ್ಞ, ರಾಷ್ಟ್ರೀಯ ಶಿಕ್ಷಣ ನೀತಿ ಕರಡು ರಚನಾ ಸಮಿತಿ ಸದಸ್ಯ

ನಿರೂಪಣೆ: ಜಯಸಿಂಹ ಆರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT