ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಉಳ್ಳವರ ಶಿವಾಲಯ, ದಿವಾಳಿ ರಾಜಕೀಯ

ಅಕ್ರಮ ಧಾರ್ಮಿಕ ಕಟ್ಟಡಗಳ ರಕ್ಷಣೆಗೆ ಕಾಯ್ದೆ ರೂಪಿಸಿರುವ ಕರ್ನಾಟಕ ಸರ್ಕಾರದ ಕ್ರಮ ಸರಿಯೇ?
Last Updated 24 ಸೆಪ್ಟೆಂಬರ್ 2021, 23:22 IST
ಅಕ್ಷರ ಗಾತ್ರ

ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ
ಕೂಡಲಸಂಗಮದೇವ ಕೇಳಯ್ಯ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
’ ಎಂಬ ಬಸವಣ್ಣನವರ ವಚನದ ಅಂತರಂಗ-ಬಹಿರಂಗ ಶುದ್ಧತೆಗಳ ಅರಿವಿನ ಧರ್ಮ ಭಾವವು ಕರ್ನಾಟಕದ ರಾಜಕಾರಣಕ್ಕೆ ನೆಟ್ಟಗೆ ಇದ್ದಿದ್ದರೆ, ಕರ್ನಾಟಕ ಧಾರ್ಮಿಕ ಕಟ್ಟಡಗಳ (ರಕ್ಷಣೆ) ಮಸೂದೆಯ ಪ್ರಹಸನವು ನಡೆಯುತ್ತಿರಲಿಲ್ಲ.

ಪ್ರಜೆಗಳ ದೇಹ ದೇಗುಲಗಳ ರಕ್ಷಣೆ, ಪೋಷಣೆಗೆ ಹತ್ತಾರು ವರ್ಷಗಳ ಕಾಲದಿಂದ ಹರಿದು ಬರುತ್ತಿರುವ ಅಹವಾಲುಗಳ ಬಗ್ಗೆ ಯಾವ ತರಾತುರಿಯನ್ನೂ ತೋರದೇ ಇರುವ ಸರ್ಕಾರಗಳು (ಅದು ಯಾವುದೇ ಪಕ್ಷದ್ದೇ ಇದ್ದರೂ ಇಂಥದ್ದರಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲ) ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು, ಅನಧಿಕೃತವಾಗಿ ‘ಧರ್ಮದ ನೆಪದಲ್ಲಿ’ ಕಟ್ಟಲಾಗಿರುವ ಕಟ್ಟಡಗಳ ಸಕ್ರಮಕ್ಕೆ ತೋರಿರುವ ಆತುರವು ಪ್ರಜೆಗಳಲ್ಲಿ ಖಂಡಿತಕ್ಕೂ ಆತಂಕ ಹುಟ್ಟಿಸಬೇಕು; ಅದಾಗದೇ ಇದ್ದರೆ, ಪ್ರಜೆಗಳಾದ ನಾವುಗಳೇ, ದಿವಾಳಿ ಬುದ್ಧಿಯ ರಾಜಕೀಯಕ್ಕೆ ನಮ್ಮ ಸಹಮತ ತೋರಿ, ನಮ್ಮ ಹಕ್ಕುಗಳ ಬಗ್ಗೆ ನಯಾ ಪೈಸೆ ಕಾಳಜಿ ಇರದ ಭ್ರಷ್ಟ ರಾಜಕಾರಣವನ್ನು ಪೋಷಿಸಿದಂತಾಗುತ್ತದೆ. ಈ ಮಸೂದೆಯನ್ನು, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಉಚ್ಚಗಣಿಯ ಮಹದೇವಮ್ಮ ದೇವಸ್ಥಾನವನ್ನು ಜಿಲ್ಲಾಡಳಿತವು ತೆರವುಗೊಳಿಸಿದ ವಿದ್ಯಮಾನಕ್ಕೆ ಸೀಮಿತವಾಗಿಸಿಕೊಂಡು, ಜನರಲ್ಲಿ ಭಾವೋದ್ರೇಕ ಪ್ರಚೋದಿಸುವ ಕೆಲಸವನ್ನು ಆಳುವ ಪಕ್ಷದ ಶಾಸಕ ಸಂಸದರೂ, ಲಾಗಾಯ್ತಿನಿಂದ ಇದೇ ಕೆಲಸ ಮಾಡಿಕೊಂಡು ಬರುತ್ತಿರುವ ಹಿಂದುತ್ವವಾದಿ ರಾಜಕೀಯ ಸಂಘಟನೆಗಳೂ ಮಾಡುತ್ತಿರುವುದು ಅಚ್ಚರಿಯಲ್ಲ; ಆದರೆ ಹಿಂದೆ ಸರ್ಕಾರ ನಡೆಸಿದ್ದ, ವಿದ್ಯಮಾನದ ಹಿನ್ನೆಲೆಯ ಅರಿವಿರುವ ವಿರೋಧ ಪಕ್ಷಗಳೂ ಇದನ್ನು ರಾಜಕೀಯ ಮೇಲುಗೈ ಆಟದ ದಾಳ ಮಾಡಿಕೊಂಡು, ಮಸೂದೆಗೆ ವಿರೋಧ ತೋರದಂಥ ಸ್ಥಿತಿಗೆ ಬಂದಿರುವುದು ಪ್ರಜಾಪ್ರಭುತ್ವದ ದೃಷ್ಟಿಯಲ್ಲೂ, ಪ್ರಜಾಹಿತದ ಕಣ್ಣೋಟದಿಂದಲೂ ಒಳ್ಳೆಯ ಬೆಳವಣಿಗೆ ಏನೂ ಅಲ್ಲ.

ಕರ್ನಾಟಕದಲ್ಲಿ, ಪ್ರಜೆಗಳು ತಮ್ಮ ಪ್ರತಿನಿಧಿಯಾಗಿ ಸರ್ಕಾರಕ್ಕೆ ‘ಸಾರ್ವಜನಿಕ ಆಸ್ತಿ’ ಎಂದು ಒಪ್ಪಿಸಿರುವ ಭೂ ಸಂಪನ್ಮೂಲದ ವ್ಯಾಪ್ತಿ, ಅದು ಇರುವ ಜಾಗೆ, ಅದು ಬಳಕೆ/ ದುರ್ಬಳಕೆ ಆಗುತ್ತಿರುವ ಬಗೆ, ಅದನ್ನು ಪ್ರಜೆಗಳ ಸ್ಥಿತಿ ಗತಿಗೆ ಅನುಗುಣವಾಗಿ ವಿತರಿಸುವ ಉತ್ತರದಾಯಿತ್ವ ಸರ್ಕಾರದ್ದು. ಅದರ ಲೆಕ್ಕಾಚಾರ ಸರ್ಕಾರದ ಬಳಿ ಸದಾ ಇರುತ್ತದೆ. ಸರ್ಕಾರವು ಅದನ್ನು ಸದ್ಬಳಕೆ ಮಾಡುವಂತೆ ಮಸೂದೆ-ಕಾಯ್ದೆ ತರಬೇಕು. ಆದರೆ, ಉಳ್ಳವರು ಅನಧಿಕೃತವಾಗಿ ಕಬಳಿಸುವ ‘ಸಾರ್ವಜನಿಕ ಭೂಮಿ’ಯ ಬಗ್ಗೆ ತನಗೇ ಅರಿವೇ ಇಲ್ಲ ಎಂಬಂತೆ ವರ್ತಿಸುತ್ತ, ಅದರ ಲೆಕ್ಕ ತನಿಖೆಗೆ ಸದನ ಸಮಿತಿ ನೇಮಿಸುತ್ತದೆ; ಅದು ತನಿಖೆ ಮಾಡಿ ಕೊಟ್ಟ ಅಕ್ರಮ ಕಬಳಿಕೆಯ ವರದಿಗಳ ಬಗ್ಗೆ ಪರಿಶೀಲಿಸಿ, ಭೂಮಿ ವಶ ಪಡಿಸಿಕೊಳ್ಳಲು ಯಾವ ತುರ್ತು ಕಾಯ್ದೆಯನ್ನೂ ತರುವುದಿಲ್ಲ. ಗ್ರಾಮೀಣ ಭಾಗದ ಭೂಹೀನ ಕೃಷಿಕರು ಸಾರ್ವಜನಿಕ ಭೂಮಿಯನ್ನು ಉಳುಮೆಗೆ ಕೊಡಿ ಎಂದು ಬೇಡಿ ಬೇಡಿ ಬಗರ್ ಹುಕುಂ ಉಳುಮೆ ಮಾಡಿದರೆ, ಅದು ಅಕ್ರಮವೆಂದು ಒಕ್ಕಲೆಬ್ಬಿಸಲು ಎಲ್ಲ ವಿಧದಲ್ಲೂ ಯತ್ನಿಸುತ್ತದೆ; ಹೊಟ್ಟೆಗೆ ಹಿಟ್ಟಿಲ್ಲದ ಅವರು ಜಗ್ಗದೆ ನಿಂತರೆ ಅರಣ್ಯ ಇಲಾಖೆಯ ಮೂಲಕ ನ್ಯಾಯಾಲಯಗಳ ತೀರ್ಪು ತೋರಿಸಿ, ‘ಅಕ್ರಮ ಸಕ್ರಮ’ದ ತೊಡಕುಗಳನ್ನು ಸದನದಲ್ಲಿ ಮುಂದಿಡುತ್ತ ಯಾವುದೇ ಕಾಯ್ದೆ ತರದೆ ಕಾಲ ತಳ್ಳುತ್ತದೆ. ಗ್ರಾಮೀಣ ಕೃಷಿ ಆದಾಯ ಕುಸಿದು ನಗರಗಳಿಗೆ ದಿನಗೂಲಿಗೆ ಬಂದ ಜನರು ‘ಸಾರ್ವಜನಿಕ ಭೂಮಿ’ಯಲ್ಲಿ ತಮ್ಮ ತಾತ್ಕಾಲಿಕ ಸೂರು ಕಟ್ಟಿಕೊಂಡರೆ, ಮಹಾನಗರ ಪಾಲಿಕೆಗಳು ಕಾರ್ಯಪ್ರವೃತ್ತರಾಗಿ ಅವರ ಗುಡಿಸಲುಗಳನ್ನು ಧ್ವಂಸಗೊಳಿಸುತ್ತವೆ; ಅಂಥ ನಿರ್ಗತಿಕರ ಪರವಾಗಿ ನಿಂತ ನಾಗರಿಕ ಸಂಘಟನೆಗಳು ಹೈ ಕೋರ್ಟು ಕಟ್ಟೆ ಹತ್ತಿ ನ್ಯಾಯಿಕ ತೀರ್ಪು ತಂದರೂ, ‘ಸಕ್ರಮ ಸೂರು’ ಒದಗಿಸುವ ಮಸೂದೆ-ಕಾಯ್ದೆಗಳ ಬಗ್ಗೆ ಸರ್ಕಾರವು ತುರ್ತಾಗಿ ಯೋಚಿಸುವುದಿಲ್ಲ. ‘ಭೂಮಿ-ವಸತಿ ಹಕ್ಕು ವಂಚಿತರ’ ದೇಹ ದೇಗುಲಗಳನ್ನು ರಕ್ಷಿಸಿ ಪೋಷಿಸುವ ಕಾಯ್ದೆಗಳನ್ನು ತಂದು ಅಂಥ ಪ್ರಜೆಗಳ ಜೀವನದ ಹಕ್ಕು ಕಾಪಾಡುವುದು ಸಾಂವಿಧಾನಿಕ ಧರ್ಮವೆಂದು ಉನ್ನತ ನ್ಯಾಯಾಲಯಗಳು ಸಾರಿದರೂ ತಕ್ಕ ಕಾಯ್ದೆಗಳನ್ನು ತರಲು ಸರ್ಕಾರ ಮೀನಮೇಷ ಎಣಿಸುತ್ತದೆ. ಇಂಥಾ ಸನ್ನಿವೇಶದ ಹಿನ್ನೆಲೆಯಲ್ಲಿ, ದೇಶದಾದ್ಯಂತ ‘ಸಾರ್ವಜನಿಕ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಲಾಗಿರುವ’ ಅಕ್ರಮ ಧಾರ್ಮಿಕ ಕಟ್ಟಡಗಳ ಕುರಿತು ದೇಶದ ಸರ್ವೋಚ್ಚ ನ್ಯಾಯಾಲಯವು ಹೊರಡಿಸಿದ ಆಜ್ಞೆಗೆ ವಿರೋಧವಾಗಿರುವ ‘ಕರ್ನಾಟಕ ಧಾರ್ಮಿಕ ಕಟ್ಟಡಗಳ (ರಕ್ಷಣೆ) ಮಸೂದೆ-2021’ ಮತ್ತು ಅದನ್ನು ಅವಸರದಲ್ಲಿ ತಂದಿರುವ ದಿವಾಳಿಕೋರ ರಾಜಕೀಯವನ್ನು ಪ್ರಜೆಗಳು ತಮ್ಮ ಹಿತ ದೃಷ್ಟಿಯಿಂದ ಗಮನಿಸ ಬೇಕು.

ಕೆ.ಫಣಿರಾಜ್
ಕೆ.ಫಣಿರಾಜ್

ಗುಜರಾತಿನ ಅಹಮದಾಬಾದ್‌ ನಗರದಲ್ಲಿ 1200 ದೇವಸ್ಥಾನಗಳು ಹಾಗು 26 ಮುಸ್ಲಿಮ್ ಧಾರ್ಮಿಕ ಕೇಂದ್ರಗಳು ಸಾರ್ವಜನಿಕ ಸ್ಥಳವನ್ನು ಆಕ್ರಮಿಸಿಕೊಂಡಿವೆ ಎಂಬ 2006ರ ಮೇ 6ರ ಪತ್ರಿಕಾ ವರದಿಯನ್ನು ಆಧರಿಸಿ ಗುಜರಾತ್ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು, ತೆರವಿಗೆತೀರ್ಪು ನೀಡಿತು; ಅದರ ತಡೆಗೆ ಗುಜರಾತ್ ಸರ್ಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋದಾಗ, ನ್ಯಾಯಾಲಯವು ಈ ವಿಷಯದ ಕುರಿತು ಭಾರತದ ಎಲ್ಲ ರಾಜ್ಯ ಹಾಗು ನಗರಾಡಳಿತ ಪ್ರದೇಶಗಳಲ್ಲಿರುವ ಸ್ಥಿತಿಯನ್ನು ಅರಿಯಲು ಆಯಾ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳನ್ನು ಸಮಾಲೋಚಿಸಲು ಒಕ್ಕೂಟ ಸರ್ಕಾರದ ವಿಶೇಷ ವಕೀಲರಿಗೆ ಸೂಚಿಸಿತು. ಆ ಪ್ರಕಾರವಾಗಿ ಒಕ್ಕೂಟ ಸರ್ಕಾರದ ವಿಶೇಷ ವಕೀಲರು ಸಮಾಲೋಚನೆ ನಡೆಸಿ, 2009ರ ಸೆಪ್ಟೆಂಬರ್‌ 19ರಂದು ‘ಎಲ್ಲ ಸರ್ಕಾರಗಳೂ ಇಂದಿನ ನಂತರದಲ್ಲಿ ಸಾರ್ವಜನಿಕ ಆಸ್ತಿಯಲ್ಲಿ ಧಾರ್ಮಿಕ ಕಟ್ಟಡ ನಿರ್ಮಾಣವನ್ನು ಅಕ್ರಮಗೊಳಿಸುವುದಾಗಿಯೂ, ಹಿಂದೆ ಕಟ್ಟಲಾಗಿರುವ ಕಟ್ಟಡಗಳ ಬಗ್ಗೆ ತನಿಖೆ ನಡೆಸಿ, ಯಾವುದು ಅಕ್ರಮ ಯಾವುದು ಸಕ್ರಮ ಯೋಗ್ಯವೆಂದು ವರದಿ ತಯಾರಿಸಿ ಕ್ರಮ ಕೈಗೊಳ್ಳುವ ವರದಿ ಸಲ್ಲಿಸಲು ಸಹಮತ ಸೂಚಿಸಿವೆ’ ಎಂದು ತಿಳಿಸಿದರು. ಆ ಪ್ರಕಾರ 2009ರ ಸೆಪ್ಟೆಂಬರ್‌ 29ರಂದು ಸರ್ವೋಚ್ಚ ನ್ಯಾಯಾಲಯವು ‘ಈ ದಿನಾಂಕದ ನಂತರ ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಕಟ್ಟಡ ನಿರ್ಮಾಣವು ಅಕ್ರಮ; ಈ ದಿನಾಂಕಕ್ಕಿಂತ ಮೊದಲಿನ ಕಟ್ಟಡಗಳ ಕುರಿತು ಕ್ರಮ ಕೈಗೊಂಡ ವರದಿಯನ್ನು ಮೂರು ವಾರಗಳಲ್ಲಿ ಸರ್ಕಾರಗಳು ಸಲ್ಲಿಸ ಬೇಕು’ ಆಜ್ಞೆ ನೀಡಿತು.

ಈ ದಿನಾಂಕ ನಂತರದ ಹನ್ನೆರಡು ವರ್ಷಗಳಲ್ಲಿ ಕರ್ನಾಟಕದಲ್ಲಿ 1,242 ಹೊಸ ಕಟ್ಟಡಗಳು ಅನಧಿಕೃತವಾಗಿ ನಿರ್ಮಾಣವಾಗಿವೆ! 2009ರ ಸೆಪ್ಟೆಂಬರ್‌ 29ರಂದು ಅನಧಿಕೃತವಾದ 5,688 ಕಟ್ಟಡಗಳಿದ್ದವು; ಅವುಗಳಲ್ಲಿ 2,887 ಕಟ್ಟಡಗಳನ್ನು ‘ತೆರವು/ಅಧಿಕೃತ’ಗೊಳಿಸಲಾಗಿದೆ. ಉಳಿದರ್ಧ ಅನಧಿಕೃತ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್‌, ಸರ್ಕಾರಕ್ಕೆ ನಿರಂತರ ಎಚ್ಚರ ನೀಡುತ್ತಿದೆ! 12 ವರ್ಷಗಳ ಕಾಲ 4000 ಕಟ್ಟಡಗಳು ಅನಧಿಕೃತ ಹಾಗು ತೆರವಿಗೆ ಯೋಗ್ಯ ಎಂದು ಸರ್ಕಾರಕ್ಕೆ ಗೊತ್ತಿತ್ತು; ಎಲ್ಲ ಜನಪ್ರತಿನಿಧಿಗಳಿಗೂ ಗೊತ್ತಿತ್ತು! ಅವೆಲ್ಲಾ ಈಗ ಸಕ್ರಮ! ಪ್ರಜೆಗಳೇ, ನಿಮ್ಮ ದೇಹದೇಗುಲಗಳ ಹಿತವನ್ನು ಸಕ್ರಮಗೊಳಿಸುವುದಕ್ಕಿಂತ, ಉಳ್ಳವರ ಶಿವಾಲಯವನ್ನು ರಕ್ಷಿಸುವ ಮಸೂದೆಯ ಬಗ್ಗೆ ನೀವೇ ಆಯ್ದ ಸರ್ಕಾರಗಳಿಗೆ ಆಸ್ಥೆ-ಜಾಗೃತರಾಗುವಿರಾ ಕನ್ನಡಿಗರೇ?

ಲೇಖಕ: ಸಾಮಾಜಿಕ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT