ಬುಧವಾರ, ಜುಲೈ 6, 2022
21 °C
ಸಿನಿಮಾಕ್ಕೆ ಸರ್ಕಾರ ಉತ್ತೇಜನ, ಪ್ರೋತ್ಸಾಹ ನೀಡುವುದು ಸರಿಯೇ?

‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರಕ್ಕೆ ಸರ್ಕಾರ ಉತ್ತೇಜನ; ಯಾಕೀ ಸಿನಿಮಾ ಸನ್ನಿ?!

ಎನ್.ಎಸ್. ಶಂಕರ್ Updated:

ಅಕ್ಷರ ಗಾತ್ರ : | |

ಎಲ್ಲೋ ಒಂದು ಕಡೆ ‘ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶನ ಪೂರೈಸಿದ ಕೂಡಲೇ ಸಭಿಕರೆಲ್ಲ ಎದ್ದು ಆರ್‌ಎಸ್‌ಎಸ್‌ನ ಗೀತೆ ‘ನಮಸ್ತೆ ಸದಾ ವತ್ಸಲೆ’ ಹಾಡುತ್ತ ನಿಂತ ವಿಡಿಯೊವನ್ನು ಸಂಸದ ಪ್ರತಾಪ ಸಿಂಹ ಟ್ವೀಟ್ ಮಾಡಿ ‘ಇದು ಸಂಘ ಪರಿವಾರದ ಶಕ್ತಿ’ ಎಂದು ಬರೆದುಕೊಂಡಿದ್ದಾರೆ! ಅಲ್ಲಿಗೆ ಉದ್ದೇಶ ಸ್ಪಷ್ಟವಾಯಿತಲ್ಲ? ‘ಸಂಘ ಪರಿವಾರದ ಶಕ್ತಿ’ಯನ್ನು ಸಾರುವುದಕ್ಕೆ ಈ ಸಿನಿಮಾ ಒಂದು ಅಸ್ತ್ರ ಮಾತ್ರ; ಮಾನವ ಲೋಕದ ಅನಂತ ದುಃಖದ, ಇತಿಹಾಸದ ಪಾಠಗಳ, ಕಣ್ಣೀರಿನ ಪರಂಪರೆಯ ಅನಾವರಣವಲ್ಲ. ಅದಕ್ಕೇ ಇಡೀ ಬಿಜೆಪಿ ಪರಿವಾರಕ್ಕೆ ಈ ಪರಿ ಸಿನಿಮಾದ ಸನ್ನಿ ಹಿಡಿದಿರುವುದು.

***

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಾನಿನ್ನೂ ನೋಡಿಲ್ಲ. ಯಾವಾಗ ನೋಡುವೆನೋ ಗೊತ್ತಿಲ್ಲ. ಆದರೆ ಅದರ ಬಗ್ಗೆ ಚರ್ಚಿಸಲು ಸಿನಿಮಾ ನೋಡುವುದು ಕಡ್ಡಾಯ ಎಂದು ನನಗೆ ಮನವರಿಕೆಯಾಗಿಲ್ಲ. ಯಾಕೆಂದರೆ ‘ಕಾಶ್ಮೀರ್ ಫೈಲ್ಸ್’ ಬಗ್ಗೆ ಮಾತನಾಡುವಾಗ ಯಾರೂ ಸಿನಿಮಾ ಬಗ್ಗೆಯೋ, ಅದರ ತಾಂತ್ರಿಕ ಉತ್ಕೃಷ್ಟತೆಯ ಬಗ್ಗೆಯೋ, ಭಾವಸಮೃದ್ಧಿಯ ಬಗ್ಗೆಯೋ, ಹೃದಯಂಗಮ ಸನ್ನಿವೇಶಗಳ ಬಗ್ಗೆಯೋ, ಕಲಾವಿದರ ಅಭಿನಯದ ಬಗ್ಗೆಯೋ ಮಾತನಾಡುವುದಿಲ್ಲ. ನಾವು ಕಂಡಂತೆ, ಆ ಸಿನಿಮಾವನ್ನು ಹೆಬ್ಬಾವಿನಂತೆ ಸುತ್ತುವರಿದಿರುವ ರಾಜಕೀಯ ಲೆಕ್ಕಾಚಾರವೇ ಎಲ್ಲರಿಗೂ ಮುಖ್ಯವಾಗಿದೆ.

ಒಂದು ಕಡೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ‘ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡದವರು ದೇಶದ್ರೋಹಿಗಳು’ ಎಂದು ಅಪ್ಪಣೆ ಕೊಡಿಸಿದರೆ, ಸದನದಲ್ಲಿ ಸಭಾಪತಿಗಳೇ ಎಲ್ಲ ಎಂಎಲ್‍ಎಗಳಿಗೆ ಚಿತ್ರವೀಕ್ಷಣೆಗೆ ಆಹ್ವಾನ ನೀಡಿದರು. ಇನ್ನು ಮುಖ್ಯಮಂತ್ರಿಗಳು ಸಿನಿಮಾಗೆ ಏಕಾಏಕಿ ಮನರಂಜನಾ ತೆರಿಗೆ ವಿನಾಯ್ತಿ ಘೋಷಿಸಿದರು. (ಬಿಜೆಪಿ ಆಡಳಿತದ ಇನ್ನೂ ಹಲವು ರಾಜ್ಯಗಳು ತೆರಿಗೆ ವಿನಾಯ್ತಿ ಘೋಷಿಸಿವೆ) ಕೇಂದ್ರ ಮಂತ್ರಿ ಪ್ರಲ್ಹಾದ ಜೋಷಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹುಬ್ಬಳ್ಳಿ ಧಾರವಾಡಗಳಲ್ಲಿ ಸಿನಿಮಾದ ನಿತ್ಯ ಉಚಿತ ಪ್ರದರ್ಶನ ಏರ್ಪಡಿಸಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಚಿತ್ರದ ಪ್ರಶಂಸೆ ಮಾಡಿ ಚಿತ್ರತಂಡದೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ....

ಕೇವಲ ಒಂದು ಸಿನಿಮಾ ಬಗ್ಗೆ ಇಡೀ ಸರ್ಕಾರ- ಸರ್ಕಾರವಿರಲಿ, ದೇಶದ ಒಂದು ವರ್ಗವೇ- ಯಾಕೆ ಈ ಮಟ್ಟಿಗೆ ಉನ್ಮತ್ತವಾಗಿ ಓಲಾಡುತ್ತಿದೆ? ಸಾಮಾಜಿಕ ಮಾಧ್ಯಮಗಳಲ್ಲಿ ‘ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಅಟ್ಟಕ್ಕೇರಿಸುವ ಅಸಂಖ್ಯ ಪೋಸ್ಟ್‌ಗಳು ನಿತ್ಯ ಇಟ್ಟಾಡುತ್ತಿವೆ. ಒಂದು ಮಲ್ಟಿಪ್ಲೆಕ್ಸ್‌ನ ಆವರಣದಲ್ಲಿ ಪ್ರದರ್ಶನದ ಮುಂಚೆಯೋ ನಂತರವೋ ಜನರೆಲ್ಲ ‘ವಂದೇ ಮಾತರಂ’ ಘೋಷಣೆ ಕೂಗುತ್ತಿರುವ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ಇದನ್ನೂ ಓದಿ: 

ಯಾಕೆ? ಯಾಕಾಗಿ ಈ ಹುಯಿಲು?... ಸಿನಿಮಾ ತಂಡವೇನೋ ‘ಕಾಶ್ಮೀರ್ ಫೈಲ್ಸ್’ ಇತಿಹಾಸದಲ್ಲಿ ಈವರೆಗೆ ಯಾರೂ ತೋರಿಸಿರದ ಸುಡು ಸತ್ಯವನ್ನು ತೆರೆ ಮೇಲೆ ತಂದಿರುವುದಾಗಿ ಘೋಷಿಸುತ್ತಿದೆ. ಆದರೆ ಈ ಚಿತ್ರಕ್ಕೂ, ಕಾಶ್ಮೀರಿ ಪಂಡಿತರು ಇತಿಹಾಸದಲ್ಲಿ ಕಂಡುಂಡ ರೌರವ ನರಕಕ್ಕೂ ತಳುಕು ಹಾಕುವ ತಪ್ಪು ಮಾಡುವುದು ಬೇಡ. ಹತ್ಯೆ, ಅತ್ಯಾಚಾರ, ದೌರ್ಜನ್ಯ, ಕಡೆಗೆ ಹುಟ್ಟಿ ಬೆಳೆದ ನೆಲವನ್ನು ತೊರೆದು, ಕಾಣದ ನಾಡಿಗೆ, ದಿಕ್ಕಿರದ ನಾಳೆಗಳಿಗೆ ವಲಸೆ.... ಅವರ್ಣನೀಯ ಹಿಂಸೆಗೆ ಗುರಿಯಾಗಿ ನೆಲೆ ತಪ್ಪಿದ ಈ ಪಂಡಿತರಿಗೆ ನಿಜಕ್ಕೂ ನ್ಯಾಯ, ನಿರಾತಂಕ ಬದುಕು ಸಿಗಲೇಬೇಕು. ಸಂಶಯವಿಲ್ಲ. ಆದರೆ ಕಾಶ್ಮೀರ್ ಫೈಲ್ಸ್ ಎಂಬ ಸಿನಿಮಾ ನಿಜಕ್ಕೂ ಸತ್ಯ- ಸಂಪೂರ್ಣ ಸತ್ಯ- ಹೇಳುತ್ತಿದೆಯೇ?

ಉತ್ತರ ಅರಸುವ ಮುನ್ನ ಇಲ್ಲಿ ಕೆಲವು ಮಹತ್ವದ ಪ್ರಶ್ನೆಗಳಿವೆ:
* ಕಾಶ್ಮೀರದ ದಂಗೆ ದೊಂಬಿಗಳಲ್ಲಿ ದೌರ್ಜನ್ಯಕ್ಕೆ ಈಡಾದವರು ಪಂಡಿತರು ಮಾತ್ರವೇ?

* ಅವರ ದಾರುಣ ಅವಸ್ಥೆಯ ಹೊಣೆ ಹೊರಬೇಕಾದವರು ಯಾರು? ಒಂದು ವರ್ಗ ಪ್ರಚಾರ ಮಾಡುತ್ತಿರುವ ಹಾಗೆ ಕಾಂಗ್ರೆಸ್ ಪಕ್ಷ ಮತ್ತು ‘ಜಾತ್ಯತೀತ’ ಎನಿಸಿಕೊಳ್ಳುವ ಬುದ್ಧಿಜೀವಿಗಳು ಈ ಬಿಕ್ಕಟ್ಟಿಗೆ ಹೊಣೆಯೇ?

* 1990ರಿಂದ ಈವರೆಗೆ ಪಂಡಿತರ ಪಾಡು ಏನಾಗಿದೆ?

ಕಾಶ್ಮೀರಿ ಪಂಡಿತರು ತಮ್ಮ ನೆಲೆ ತೊರೆಯಲು ಕಾರಣವಾದದ್ದು ಯಾವುದೇ ಹಿಂದೂ ಮುಸ್ಲಿಂ ಘರ್ಷಣೆಯಲ್ಲ. ಕಾಶ್ಮೀರದ ಪಂಡಿತರು ಹಾಗೂ ಅಲ್ಲಿನ ಮುಸ್ಲಿಮರ ನಡುವಣ ಬಾಂಧವ್ಯ ಈಗಲೂ ತಂಪಾಗಿಯೇ ಇದೆ. ಅಲ್ಲಿನ ಪಂಡಿತರೂ ಸೇರಿದಂತೆ ಹಿಂದೂಗಳಷ್ಟೇ ಅಲ್ಲ, ಮುಸ್ಲಿಮರನ್ನೂ ಗುರಿಯಾಗಿಸಿ ದಾಳಿ ಮಾಡಿದವರು ಉಗ್ರಗಾಮಿಗಳು. ಉಗ್ರರಿಗೆ ಪಾಕಿಸ್ತಾನದ ಬೆಂಬಲವೂ ಇತ್ತು. ದಾಳಿ ಕಾಶ್ಮೀರಿ ಪಂಡಿತರಿಗೆ ಸೀಮಿತವಾಗಿರಲಿಲ್ಲ. ಪಂಡಿತರ ವಲಸೆಗೆ ಮುನ್ನವೇ ಉಗ್ರರು ಅಲ್ಲಿನ 15 ಸಾವಿರ ಮುಸ್ಲಿಮರನ್ನು ಕೊಂದಿದ್ದರು. 300ಕ್ಕೂ ಹೆಚ್ಚು ಹಿಂದೂಗಳ ಮಾರಣಹೋಮ ಮಾಡಿದ್ದರು. ಗೃಹ ಇಲಾಖೆ ಅಂಕಿ ಅಂಶಗಳ ಪ್ರಕಾರ ಗಲಭೆಯಲ್ಲಿ ಬಲಿಯಾದ ಪಂಡಿತರ ಸಂಖ್ಯೆ 219. (ಆದರೆ ಈ ಸಂಖ್ಯೆ ಕಾಶ್ಮೀರ್ ಫೈಲ್ಸ್ ನಿರ್ದೇಶಕರಿಗೆ ಸಮಾಧಾನ ತಂದಿಲ್ಲ. ಅವರು ತಮ್ಮ ಸಿನಿಮಾದಲ್ಲಿ ಒಟ್ಟು ನಾಲ್ಕು ಸಾವಿರ ಪಂಡಿತರ ಹತ್ಯೆಯಾಯಿತು ಎಂಬ ಸಂಖ್ಯೆ ಕೊಟ್ಟು ಸಂಭ್ರಮಪಟ್ಟಿದ್ದಾರೆ! ಅವರ ಪಾಲಿನ ‘ಸಂಪೂರ್ಣ ಸತ್ಯ’ ಇದು!)

ಆ ಗಲಭೆಯ ಸಮಯದಲ್ಲಿ ಸುಮಾರು 24 ಸಾವಿರ ಪಂಡಿತ ಕುಟುಂಬಗಳು ಆ ಪ್ರಾಂತ್ಯದಿಂದ ಪಲಾಯನಗೈದವೆಂದು ಅಂದಾಜಿದೆ. ಅವರಿಗೆಲ್ಲ ರಕ್ಷಣೆ ನೀಡಿ, ಧೈರ್ಯ ತುಂಬಿ ಕಾಶ್ಮೀರದಲ್ಲೇ ಉಳಿಸಿಕೊಳ್ಳಲಾಗುತ್ತಿರಲಿಲ್ಲವೇ? ಇದಕ್ಕೆ ಉತ್ತರ ಇನ್ನೂ ಕೌತುಕಮಯವಾಗಿದೆ. ಈ ದುರ್ಘಟನಾ ಪರಂಪರೆ ನಡೆದಾಗ ಕೇಂದ್ರದಲ್ಲಿದ್ದಿದ್ದು ವಿ.ಪಿ. ಸಿಂಗ್ ನೇತೃತ್ವದ ನ್ಯಾಷನಲ್ ಫ್ರಂಟ್ ಸರ್ಕಾರ. ನೆನಪಿಡಬೇಕಾದ ಅಂಶ: ಬಿಜೆಪಿ- ಈ ಸರ್ಕಾರದ ಪಾಲುದಾರ. ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿತ್ತು. ಆಗ ರಾಜ್ಯಪಾಲರಾಗಿದ್ದವರು, ವಾಜಪೇಯಿ ಮತ್ತು ಅಡ್ವಾಣಿಯವರಿಂದ ನೇಮಕಗೊಂಡ ಬಿಜೆಪಿ ಮನುಷ್ಯ ಜಗಮೋಹನ್. ಜಗಮೋಹನ್ ಸೃಷ್ಟಿಸಿದ ಅನಗತ್ಯ ಭೀತಿಯ ವಾತಾವರಣವೇ ಪಂಡಿತರ ವಲಸೆಗೆ ಕಾರಣವಾಯಿತೆಂಬ ವರದಿಗಳಿವೆ. ಆಗ ಸಂಸತ್ತಿನಲ್ಲಿ ಕಾಶ್ಮೀರಿ ಪಂಡಿತರ ವಲಸೆ ಬಗ್ಗೆ ಆತಂಕ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದು ರಾಜೀವ್ ಗಾಂಧಿ. ಮಿಕ್ಕಂತೆ ಲೋಕಸಭೆಯ ಎಲ್ಲ 89 ಬಿಜೆಪಿ ಸದಸ್ಯರೂ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದರೆ, ಅವರ ಮುಖಂಡ ಎಲ್.ಕೆ. ಅಡ್ವಾಣಿ, ನಾಡಿನ ಸೌಹಾರ್ದದ ಕನ್ನಡಿಯನ್ನು ಚೂರು ಚೂರು ಮಾಡಿದ ರಥಯಾತ್ರೆಯಲ್ಲಿ ಮಗ್ನರಾಗಿದ್ದರು! ಇದು ಇತಿಹಾಸ.

ವಲಸೆ ಬಂದ ಕಾಶ್ಮೀರಿ ಪಂಡಿತರಿಗೆ ಎಲ್ಲ ರಾಜ್ಯಗಳಲ್ಲಿ ನೌಕರಿ ನೀಡಿ ಎಲ್ಲ ಬಗೆಯ ಸೌಕರ್ಯ ಒದಗಿಸಲಾಯಿತು. ಯಾರೊಬ್ಬರೂ ಬೀದಿಗೆ ಬೀಳುವ ಪ್ರಸಂಗ ಬರಲಿಲ್ಲ. ಯಾಕೆಂದರೆ ಅವರೆಲ್ಲ ಕುಲೀನ ಪಂಡಿತರಾಗಿದ್ದರು! ಆದರೆ ಈಗಲೂ ನಮ್ಮ ದೇಶದಲ್ಲಿ ಅನೇಕ ಬೃಹತ್ ನೀರಾವರಿ ಅಥವಾ ವಿದ್ಯುತ್ ಯೋಜನೆಗಳಿಗಾಗಿ ಮನೆ ಮಾರು ಕಳೆದುಕೊಂಡು ಬೀದಿಗೆ ಬಿದ್ದ ಲಕ್ಷಾಂತರ ದುರ್ಬಲರಿಗೆ ಯಾವ ಪುನರ್ವಸತಿಯೂ ಸಿಕ್ಕಿಲ್ಲ; ಆ ನಿರ್ಗತಿಕರು ಈಗಲೂ ನ್ಯಾಯದ ಬಾಗಿಲು ಬಡಿಯುತ್ತಲೇ ಇದ್ದಾರೆ ಎಂಬುದು ನಮ್ಮ ಗಮನದಲ್ಲಿರಲಿ. ಅದು ಇನ್ನೊಂದೇ ಭಾರತ....

ಆದರೆ ಈ ಯಾವ ಅಂಶವನ್ನೂ ‘ಕಾಶ್ಮೀರ್ ಫೈಲ್ಸ್’ ಸಿನಿಮಾ ಮುಟ್ಟಿದ ಹಾಗಿಲ್ಲ. ಆಯಿತು. ಕಾಶ್ಮೀರಿ ಪಂಡಿತರಿಗೆ ಈಗಲೂ ಪೂರ್ಣ ನ್ಯಾಯ ಸಿಕ್ಕಿಲ್ಲ ಎಂದೇ ಒಪ್ಪಿಕೊಳ್ಳೋಣ. ಮಾತೆತ್ತಿದರೆ ಪಂಡಿತರ ವಲಸೆ ಕಥೆ ಕೆದಕುವ ಬಿಜೆಪಿ ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಏಳು ವರ್ಷಗಳ ಮೇಲೆ ಆದುವಲ್ಲ? ಇದಕ್ಕೂ ಮುಂಚಿನ ವಾಜಪೇಯಿ ಆಡಳಿತದ ಮೊದಲ 13 ತಿಂಗಳು, ನಂತರದ ಐದು ವರ್ಷಗಳು? ಆ ಅವಧಿಯಲ್ಲಾದರೂ ಪಂಡಿತರಿಗೆ ಯಾವ ನ್ಯಾಯ ಸಿಕ್ಕಿದೆ?... ಆ ನತದೃಷ್ಟ ಪಂಡಿತರು ಈ ‘ಕಾಶ್ಮೀರ್ ಫೈಲ್ಸ್’ ಎಂಬ ಅಪಪ್ರಚಾರದ ದ್ವೇಷಪೂರಿತ ಸಿನಿಮಾ ಒಂದರಿಂದಲೇ ತಮ್ಮ ಸಕಲ ಬವಣೆಗಳೂ ಪರಿಹಾರ ಆದವೆಂದು ತೃಪ್ತರಾಗಬೇಕೇ?

ಹೋಗಲಿ, ಆ ಸಿನಿಮಾದ ಅಂತಿಮ ಉದ್ದೇಶವಾದರೂ ಏನು? ಪಂಡಿತರ ದಾರುಣ ಅನುಭವವನ್ನು ಮಂಡಿಸಿ, ಎಂದೂ ಯಾವ ಜನಾಂಗವೂ ಮತ್ತೊಮ್ಮೆ ಇಂಥ ವೇದನೆಗೆ ಗುರಿಯಾಗದಿರಲಿ ಎಂಬ ಪಶ್ಚಾತ್ತಾಪಭರಿತ ಅನುಭೂತಿ ಸೃಷ್ಟಿಸುವುದೇ? ಅಥವಾ ಕಾಶ್ಮೀರದ ಹಿಂದೂಗಳ ದುರವಸ್ಥೆಗೆ ಮುಸ್ಲಿಮರು ಕಾರಣವೆಂದು ಹುಯಿಲೆಬ್ಬಿಸಿ ದೇಶದಾದ್ಯಂತ ಮತ್ತಷ್ಟು ಮತಿಹೀನ ಮುಸ್ಲಿಂ ದ್ವೇಷವನ್ನು ಕೆರಳಿಸುವುದು ಮಾತ್ರವೇ? ಎಲ್ಲೋ ಒಂದು ಕಡೆ ‘ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶನ ಪೂರೈಸಿದ ಕೂಡಲೇ ಸಭಿಕರೆಲ್ಲ ಎದ್ದು ಆರ್‌ಎಸ್‌ಎಸ್‌ನ ಗೀತೆ ‘ನಮಸ್ತೆ ಸದಾ ವತ್ಸಲೆ’ ಹಾಡುತ್ತ ನಿಂತ ವಿಡಿಯೊವನ್ನು ಸಂಸದ ಪ್ರತಾಪ ಸಿಂಹ ಟ್ವೀಟ್ ಮಾಡಿ ‘ಇದು ಸಂಘ ಪರಿವಾರದ ಶಕ್ತಿ’ ಎಂದು ಬರೆದುಕೊಂಡಿದ್ದಾರೆ! ಅಲ್ಲಿಗೆ ಉದ್ದೇಶ ಸ್ಪಷ್ಟವಾಯಿತಲ್ಲ? ‘ಸಂಘ ಪರಿವಾರದ ಶಕ್ತಿ’ಯನ್ನು ಸಾರುವುದಕ್ಕೆ ಈ ಸಿನಿಮಾ ಒಂದು ಅಸ್ತ್ರ ಮಾತ್ರ; ಮಾನವ ಲೋಕದ ಅನಂತ ದುಃಖದ, ಇತಿಹಾಸದ ಪಾಠಗಳ, ಕಣ್ಣೀರಿನ ಪರಂಪರೆಯ ಅನಾವರಣವಲ್ಲ. ಅದಕ್ಕೇ ಇಡೀ ಬಿಜೆಪಿ ಪರಿವಾರಕ್ಕೆ ಈ ಪರಿ ಸಿನಿಮಾದ ಸನ್ನಿ ಹಿಡಿದಿರುವುದು.

ಲೇಖಕ: ಸಿನಿಮಾ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು