ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚರ್ಚೆ | ಸಮವಸ್ತ್ರ: ಉದಾರವಾಗಿರಲಿ ಸಂಸ್ಥೆ

ಸಮವಸ್ತ್ರದಿಂದ ಸಮಾನತೆಯ ಭಾವ ಬಂದುಬಿಡುತ್ತದೆ ಎಂಬುದು ಕುರುಡುಗಾಂಪು
Published : 21 ಮಾರ್ಚ್ 2022, 19:31 IST
ಫಾಲೋ ಮಾಡಿ
Comments

ತೀರಾ ಕಡೆಗಣಿಸಬಹುದಾಗಿದ್ದ ಸಂಗತಿಯೊಂದನ್ನು ಎಷ್ಟೆಲ್ಲ ಪೆಡಂಭೂತ ಮಾಡುತ್ತಿದ್ದಾರಲ್ಲ ಎಂದು ಈ ಹಿಜಾಬ್ ವಿವಾದ ಶುರುವಾದ ಮೇಲೆ ನನ್ನ ಮನಸ್ಸಿಗೆ ಅನ್ನಿಸಿದ ಹಾಗೆಯೇ ಬಹುಶಃ ಡಾ. ಸಿ.ಎನ್.ರಾಮಚಂದ್ರನ್ ಅವರಿಗೂ ಅನ್ನಿಸಿದ್ದರಿಂದಲೋ ಏನೋ ಅವರು ಪ್ರಸ್ತಾಪಿಸಿ ಬರೆದಿರುವ ಮಾತುಗಳು (ಸಂಗತ, ಮಾರ್ಚ್‌ 18) ನನಗೆ ತೀರಾ ನಿಜವೆನಿಸುತ್ತವೆ. ಅವರ ಹಾಗೆಯೇ ನನಗೂ ನನ್ನ ಕಾಲೇಜು ಓದಿನ ಹಾಗೂ ಕಾಲೇಜಿನ ಅಧ್ಯಾಪಕ ವೃತ್ತಿಯ ದಿನಗಳಲ್ಲಿ ಈ ಸಮವಸ್ತ್ರ ಸಂಹಿತೆ ಎಂದೂ ಒಂದು ಚರ್ಚಾಸ್ಪದವಾದ ಸಂಗತಿಯೇ ಆಗಿರಲಿಲ್ಲ.

ಸಮವಸ್ತ್ರ ಕುರಿತಂತೆ ಅವರು ಹೇಳಿರುವ ಮಾತು ಗಳೆಲ್ಲವೂ ನೂರಕ್ಕೆ ನೂರು ನಿಜ. ಸಮವಸ್ತ್ರದಿಂದ ಸಮಾನತೆಯ ಭಾವಬಂದುಬಿಡುತ್ತದೆ ಎಂಬುದು ಕುರುಡುಗಾಂಪು. ಇನ್ನು ಬಹಳಷ್ಟು ಸರ್ಕಾರಿ ಕಾಲೇಜುಗಳಲ್ಲಿ (ಜೂನಿಯರ್ ಮತ್ತು ಪದವಿ)
ಯಾವ ಸಮವಸ್ತ್ರ ಸಂಹಿತೆಯೂ ನನಗೆ ತಿಳಿದಂತೆ ಇರಲಿಲ್ಲ. ಕೆಲ ವರ್ಷಗಳ ಹಿಂದೆ ಪದವಿ ಕಾಲೇಜಿನಲ್ಲಿ ಅಧ್ಯಾಪಕರಿಗೆ ಒಂದು ವಸ್ತ್ರಸಂಹಿತೆ ತರಬೇಕೆಂಬ ಕೆಲ ಅಧಿಕಾರಿಗಳ ಧೋರಣೆ ಪ್ರಾರಂಭದಲ್ಲೇ ಬಿದ್ದು ಹೋಯಿತು. ಗೌರವವಾದ ವಸ್ತ್ರ ಧರಿಸಿ ಬಂದರಾಯಿತು ಎಂಬಷ್ಟಕ್ಕೆ ಈಗ ನಿಂತಿದೆ.

ನನ್ನ ಓದಿನ ದಿನಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಶಾಲಾ ಕಾಲೇಜಿಗೆ ಬರುತ್ತಿದ್ದುದೇ ಅಪರೂಪ. ಈಗ ಅದು ಬದಲಾಗಿ ಅವರೂ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವುದು ಅತ್ಯಂತ ಸ್ವಾಗತಾರ್ಹ. ಇನ್ನು ನನ್ನ ಕಾಲೇಜು ಅಧ್ಯಾಪಕ ವೃತ್ತಿಯ ದಿನಗಳಲ್ಲಿ ಅದೂ ಕೋಲಾರ ಮತ್ತು ಚಿಕ್ಕಮಗಳೂರಿನಲ್ಲಿ ಬಹಳಷ್ಟು ಮುಸ್ಲಿಂ ಹೆಣ್ಣುಮಕ್ಕಳು ಕಾಲೇಜಿಗೆ ಬರುತ್ತಿದ್ದರು. ಅವರು ಏನನ್ನು ಧರಿಸಿ ಬರುತ್ತಿದ್ದರು ಎಂಬ ಬಗ್ಗೆ ನಾನಷ್ಟೇ ಅಲ್ಲ ಯಾವ ಅಧ್ಯಾಪಕರೂ ಎಂದೂ ತಲೆಕೆಡಿಸಿಕೊಂಡಿರಲಿಲ್ಲ. ವಿಭೂತಿ, ನಾಮ ಮತ್ತು ಮುದ್ರೆಗಳನ್ನು ಕೆಲ ವಿದ್ಯಾರ್ಥಿಗಳು ಮತ್ತು ಕೆಲ ಅಧ್ಯಾಪಕರು ಢಾಳವಾಗಿ ಧರಿಸಿಕೊಂಡು ಬರುತ್ತಿದ್ದರೆ ಹೇಗೆ ನಾವು ಗಮನಕ್ಕೇ ತೆಗೆದುಕೊಳ್ಳದೆ, ಅದು ಅವರ ಆಚಾರ ಎಂದೋ ಇಚ್ಛೆ ಎಂದೋ ಭಾವಿಸುತ್ತಿದ್ದೆವೋ ಹಾಗೆಯೇ ಭಾವಿಸುತ್ತಿದ್ದೆವು.

ಇನ್ನು ಹಿಜಾಬ್ ಇಷ್ಟೊಂದು ಮುನ್ನೆಲೆಗೆ ಬಂದದ್ದೇ ಈ ವಿವಾದ ಶುರುವಾದ ಮೇಲೆ. ಅದನ್ನು ಎಲ್ಲ ಮುಸ್ಲಿಂ ಹೆಣ್ಣುಮಕ್ಕಳೂ ಖಂಡಿತಾ ಧರಿಸಿಕೊಂಡು ಬರುತ್ತಿರಲಿಲ್ಲ ಎನ್ನುವುದಂತೂ ತೀರಾ ನಿಜ. ಕೆಲವರು ಧರಿಸಿಕೊಂಡು ಬರುತ್ತಿದ್ದರು ಅಷ್ಟೆ. ಆದರೆ ನನ್ನ ಅಧ್ಯಾಪಕ ವೃತ್ತಿಯ ಸಂದರ್ಭದಲ್ಲಿ ಅನೇಕ ಮುಸ್ಲಿಂ ಅಧ್ಯಾಪಕಿಯರು ಸಹೋದ್ಯೋಗಿಗಳಾಗಿದ್ದುದಂತೂ ನಿಜ. ಅವರ‍್ಯಾರೂ ಎಂದೂ ಹಿಜಾಬ್ ಧರಿಸಿ ಕಾಲೇಜಿಗೆ ಬಂದದ್ದನ್ನು ನಾನಂತೂ ಕಾಣೆ. ಅಂದರೆ ಅದು ಖಂಡಿತವಾಗಿಯೂ ಕಡ್ಡಾಯವಾದ ಧಾರ್ಮಿಕ ಆಚರಣೆಯ ಭಾಗವಾಗಿರಲಿಲ್ಲ ಎಂದು ಖಂಡಿತಾ ತಿಳಿಯಬಹುದು. ಈಗ ಅದು ಧರಿಸಿಕೊಂಡೇ ಬರಬೇಕಾದ ಒಂದು ಧಾರ್ಮಿಕ ಆಚರಣೆ ಎಂದು ಅನಗತ್ಯವಾಗಿ ಹುಯಿಲೆಬ್ಬಿಸಲಾಗುತ್ತಿದೆ ಅಷ್ಟೆ. ಹಾಗೆ ಹುಯಿಲೆಬ್ಬಿಸುತ್ತಿರುವವರಲ್ಲಿ ರಾಜಕೀಯ ಶಕ್ತಿಗಳೊಂದಿಗೆ ಮೂಲಭೂತವಾದಿಗಳು ಕೈ ಜೋಡಿಸಿದ್ದಾರೆ.

ಇನ್ನು ಇದು ಕೋರ್ಟ್ ಮೆಟ್ಟಿಲೇರುವ ಅಗತ್ಯ ಖಂಡಿತಾ ಇರಲಿಲ್ಲ. ಹೀಗೆ ಅದು ಏರಲು ಹಿಂದೂ ಮುಸ್ಲಿಂ ಎರಡೂ ಕಡೆಯವರ ರಾಜಕೀಯ ಹಿತಾಸಕ್ತಿಗಳೇ ಕಾರಣ; ಈ ವಿಷಯದಲ್ಲಿ ಮುಸ್ಲಿಂ ಹೆಣ್ಣುಮಕ್ಕಳನ್ನಂತೂ ತೀರಾ ಪ್ರಚೋದನೆಗೆ ಒಳ ಪಡಿಸಲಾಗಿದೆ. ಈಗ ಕೋರ್ಟ್ ಒಂದು ತೀರ್ಪು ನೀಡಿದೆ. ಆದರೆ ಸಮವಸ್ತ್ರ ಸಂಹಿತೆಯನ್ನು ನಿರ್ಧರಿಸ ಬೇಕಾದವರು ಶಿಕ್ಷಣ ಸಂಸ್ಥೆಯವರು. ಹಿಜಾಬ್ ಸಮವಸ್ತ್ರದ ಭಾಗವಲ್ಲ ಎಂದು ನಿರ್ಧರಿಸಲು ಅವರು ಸ್ವತಂತ್ರರು. ಹಾಗೆ ನಿರ್ಧರಿಸಿದರೆ ಕೋರ್ಟ್ ಖಂಡಿತಾ ಅಡ್ಡ ಬರುವುದಿಲ್ಲ. ಬೇಕಾದರೆ ಸಮವಸ್ತ್ರದ ಬಣ್ಣದ ಹಿಜಾಬ್ ಅನ್ನೇ ಧರಿಸಬಹುದೆಂದರೂ ಆಯಿತು.

ಧಾರ್ಮಿಕ ಮೂಲಭೂತವಾದಕ್ಕೆ ಯಾವ ಧರ್ಮವೂ ಅಪವಾದವಲ್ಲ. ಹಿಂದೂ ಧರ್ಮಕಾಲದಿಂದ ಕಾಲಕ್ಕೆ ಬದಲಾವಣೆಗೆ ತನ್ನನ್ನು ತೆರೆದು ಕೊಳ್ಳುತ್ತ ಬರುತ್ತಿರುವುದರಲ್ಲಿ ಸದಾ ಮುಂದಿದೆ. ಅದು ಅದರ ಪ್ರಗತಿಪರ ಮನೋಧರ್ಮ ಮತ್ತು ಉದಾರತೆಯ ದ್ಯೋತಕ. ಆದರೆ ಅದೇ ಮಾತನ್ನು ಇಸ್ಲಾಂ ಧರ್ಮದ ಬಗ್ಗೆ ಹೇಳುವುದು ಕಷ್ಟ. ಆದರೆ ವಿದ್ಯಾಭ್ಯಾಸಕ್ಕೆ ತೆರೆದುಕೊಳ್ಳುತ್ತಾ ಹೋದಂತೆ, ವಿಚಾರಪರತೆ ಹೆಚ್ಚುತ್ತಾ ಬಂದಹಾಗೆ ಅವರಲ್ಲೂ ನಿಧಾನವಾಗಿಯಾದರೂ ಬದಲಾವಣೆಗಳು ಆಗುತ್ತಿರುವುದನ್ನು ನಾವು ಗಮನಿಸಬಹುದು. ಅದು ಹೆಚ್ಚಾದಷ್ಟೂ ಧಾರ್ಮಿಕ ಮೂಲಭೂತವಾದಿಗಳ ಹಿಡಿತದಿಂದ ಅವರೂ ಹೊರಬರುತ್ತಾರೆ ಎನ್ನುವು ದರಲ್ಲಿ ಸಂದೇಹವಿಲ್ಲ. ಆದರೆ ಬಹುಸಂಖ್ಯಾತ ಧರ್ಮದವರು ಹಿಜಾಬ್ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಸ್ಲಿಂ ಹೆಣ್ಣುಮಕ್ಕಳನ್ನು ತರಗತಿಗಳಿಗೆ, ಪರೀಕ್ಷೆಗಳಿಗೆ ಉದಾರ ಮನೋಭಾವ ತೋರಿ ಅವಕಾಶ ಒದಗಿಸಿ ಕೊಡಬೇಕು. ಹಾಗೆ ಕೊಟ್ಟರೆ ಆದು ಕೋರ್ಟ್ ಆದೇಶದ ಉಲ್ಲಂಘನೆಯೇನೂ ಆಗುವುದಿಲ್ಲ.ಆದರೆ ಕೋರ್ಟ್ ತೀರ್ಪು ಒಪ್ಪದೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವಾಗ ಅದನ್ನು ಪ್ರತಿಭಟಿಸಿ ಬಂದ್‍ಗೆ ಕರೆ ಕೊಟ್ಟಿದ್ದು ಮೊಂಡುತನ ಮತ್ತು ಹಾಗೆ ಮಾಡುವವರ ಬಗ್ಗೆ ಯಾರೇ ವಿವೇಕಿಗಳಿಗೂ ಯಾವುದೇ ಸಹಾನುಭೂತಿ ಮತ್ತು ಗೌರವ ಇರುವುದಿಲ್ಲವೆಂಬುದನ್ನು ಅವರು ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT