ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ -50 |25 ವರ್ಷಗಳ ಮುನ್ನೋಟ: ಬೇಕು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಮಾದರಿ

ಮಾಲಿನಿ ಎಲ್‌. ತ್ಯಾಗಿ / ಸಿ. ನಳಿನ್‌ ಕುಮಾರ್‌
Published 10 ನವೆಂಬರ್ 2023, 23:30 IST
Last Updated 10 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಸಶಕ್ತ ನೀತಿಗಳನ್ನು ಜಾರಿ ಮಾಡಲಾಗಿದ್ದರೂ ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ಮೊದಲ ಮೂರು ಸ್ಥಾನಗಳನ್ನು ದಕ್ಕಿಸಿಕೊಳ್ಳಲು ರಾಜ್ಯಕ್ಕೆ ಸಾಧ್ಯವಾಗಿಲ್ಲ. ರಾಜ್ಯದ ಒಟ್ಟು ಜಿಡಿಪಿಯಲ್ಲಿ ಕೈಗಾರಿಕಾ ಕ್ಷೇತ್ರದ ಕೊಡುಗೆ ಬಹಳ ಕಡಿಮೆ ಅಂದರೆ ಶೇ 21ರಷ್ಟಿದೆ. ಗುಜರಾತ್‌, ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಕ್ಕೆ ಹೋಲಿಸಿದರೆ, ಕರ್ನಾಟಕದ ಪ್ರಮಾಣವು ಕಡಿಮೆ.

****

ಇತರ ರಾಜ್ಯಗಳು ಸಶಕ್ತವಾದಂಥ ಕೈಗಾರಿಕಾ ಅಡಿಪಾಯದ ಕುರಿತು ಆಲೋಚಿಸುವ ಬಹಳ ವರ್ಷಗಳ ಮೊದಲೇ, ಕರ್ನಾಟಕದ ದಾರ್ಶನಿಕ ನೀತಿ ನಿರೂಪಕರು ರಾಜ್ಯದಲ್ಲಿ ಸಶಕ್ತವಾದ ಕೈಗಾರಿಕಾ ಕ್ಷೇತ್ರದ ಅಡಿಪಾಯವನ್ನು ಹಾಕಿದ್ದರು. ಇದಕ್ಕಾಗಿ ಹಲವು ನೀತಿಗಳನ್ನು ಜಾರಿಗೆ ತರಲಾಗಿತ್ತು.

ಕೈಗಾರಿಕಾ ನೀತಿಯೊಂದನ್ನು ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕ. 1983ರಲ್ಲಿಯೇ ಇಂಥದೊಂದು ನೀತಿಯನ್ನು ಜಾರಿ ಮಾಡಲಾಗಿದೆ. ರಾಜ್ಯ ಮಟ್ಟದ ರಫ್ತು ಉತ್ತೇಜನ ನೀತಿ, ರಾಜ್ಯವನ್ನು ವೈಮಾನಿಕ ಉದ್ಯಮಗಳ ಕೇಂದ್ರವನ್ನಾಗಿಸಿದ್ದು, 2013–2023ರ ವರೆಗಿನ 10 ವರ್ಷಗಳ ವೈಮಾನಿಕ ನೀತಿ ಜಾರಿ ಮಾಡಿದ್ದು, 2012ರ ಔಷಧೀಯ ನೀತಿ ಹೀಗೆ ಹಲವು ನೀತಿಗಳನ್ನು ರಾಜ್ಯದಲ್ಲಿ ಜಾರಿ ಮಾಡಲಾಗಿದೆ. 2015–2020ವರೆಗಿನ ನವೋದ್ಯಮ ನೀತಿಯನ್ನು ಜಾರಿ ಮಾಡಿದ್ದು ಕೂಡ ದೇಶದಲ್ಲಿ ಪ್ರಥಮ ಪ್ರಯತ್ನವೇ ಆಗಿದೆ. ನವೋದ್ಯಮ ನೀತಿಯ ಕಾರಣದಿಂದಾಗಿ, ಕರ್ನಾಟಕವು ದೇಶದಲ್ಲಿಯೇ ಅತಿ ಹೆಚ್ಚು ನವೋದ್ಯಮಗಳು ಇರುವ ಎರಡನೇ ರಾಜ್ಯವೆನಿಸಿದೆ. ಸಾಫ್ಟ್‌ವೇರ್‌ ರಫ್ತಿನಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ. 2022ರಲ್ಲಿ ₹41,678 ಕೋಟಿಯಷ್ಟು ವಿದೇಶಿ ನೇರ ಬಂಡವಾಳ ರಾಜ್ಯದಲ್ಲಿ ಹೂಡಿಕೆಯಾಗಿದ್ದು, ಇದು ಬೇರೆ ರಾಜ್ಯಗಳ ಹೋಲಿಕೆಯಲ್ಲಿ ಎರಡನೇ ದೊಡ್ಡ ಮೊತ್ತ.

ಇಷ್ಟೊಂದು ಸಶಕ್ತ ನೀತಿಗಳನ್ನು ಜಾರಿ ಮಾಡಲಾಗಿದ್ದರೂ ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ಮೊದಲ ಮೂರು ಸ್ಥಾನಗಳನ್ನು ದಕ್ಕಿಸಿಕೊಳ್ಳಲು ರಾಜ್ಯಕ್ಕೆ ಸಾಧ್ಯವಾಗಿಲ್ಲ. ರಾಜ್ಯದ ಒಟ್ಟು ಜಿಡಿಪಿಯಲ್ಲಿ ಕೈಗಾರಿಕಾ ಕ್ಷೇತ್ರದ ಕೊಡುಗೆ ಬಹಳ ಕಡಿಮೆ ಅಂದರೆ ಶೇ 21ರಷ್ಟಿದೆ. ಗುಜರಾತ್‌ (ಶೇ 42), ತಮಿಳುನಾಡು (ಶೇ 33), ಮಹಾರಾಷ್ಟ್ರ (ಶೇ 28) ಮತ್ತು ಉತ್ತರ ಪ್ರದೇಶಕ್ಕೆ (ಶೇ 27) ಹೋಲಿಸಿದರೆ, ಕರ್ನಾಟಕದ ಪ್ರಮಾಣವು ಕಡಿಮೆ.

ರಾಜ್ಯದಲ್ಲಿ ಕೈಗಾರಿಕಾ ಪ್ರದೇಶ, ಕೈಗಾರಿಕಾ ಪಾರ್ಕ್‌ಗಳ ಸಂಖ್ಯೆಯು ಏರಿಕೆಯಾಗುತ್ತಲೇ ಇದೆ ನಿಜ. ಆದರೆ, ಇಂಥ ಏರಿಕೆಯು ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದೆ. ಈ ಕಾರಣದಿಂದಾಗಿ ಅಸಮತೋಲಿತ ಬೆಳವಣಿಗೆ ಆಗುತ್ತಿದೆ. ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಏಕರೂಪದ ಬೆಳವಣಿಗೆ ಸಾಧ್ಯವಾಗಿಲ್ಲ. ಬೆಂಗಳೂರು ಕೇಂದ್ರಿತ ಅಭಿವೃದ್ಧಿಯು ಅಸಮತೋಲಿತ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ. 

2022–23ರ ರಾಜ್ಯದ ಆರ್ಥಿಕ ಸಮೀಕ್ಷೆಯ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ 78.24 ಲಕ್ಷ ಉದ್ಯಮಗಳಿವೆ. ನಂತರದ ಸ್ಥಾನದಲ್ಲಿ ಬೆಳಗಾವಿ (2.99 ಲಕ್ಷ), ತುಮಕೂರು (2.28 ಲಕ್ಷ), ದಕ್ಷಿಣ ಕನ್ನಡ (2.08 ಲಕ್ಷ) ಮತ್ತು ಹಾಸನ (2.07 ಲಕ್ಷ) ಜಿಲ್ಲೆಗಳಿವೆ. ಈ ಜಿಲ್ಲೆಗಳಲ್ಲಿ ಲಕ್ಷದ ಸಂಖ್ಯೆಯಲ್ಲಿ ಉದ್ಯಮಗಳು ಇರುವಾಗ, ಯಾದಗಿರಿ ಜಿಲ್ಲೆಯಲ್ಲಿ ಮಾತ್ರ 40,162 ಉದ್ಯಮಗಳಿವೆ. ಒಂದೆಡೆ ಅತಿಯಾದ ಅಭಿವೃದ್ಧಿ, ಮತ್ತೊಂದೆಡೆ ಅಭಿವೃದ್ಧಿಯೇ ಇಲ್ಲದ ಸ್ಥಿತಿ. ಬೆಂಗಳೂರು ನಗರ, ಬೆಳಗಾವಿ, ದಕ್ಷಿಣ ಕನ್ನಡ, ಬಳ್ಳಾರಿ, ತುಮಕೂರು ಮತ್ತು ಉಡುಪಿ ಜಿಲ್ಲೆಗಳ ಜಿಡಿಪಿಯು ರಾಜ್ಯದ ಸರಾಸರಿ ಜಿಡಿಪಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಇನ್ನುಳಿದ ಜಿಲ್ಲೆಗಳ ಜಿಡಿಪಿಯ ರಾಜ್ಯದ ಸರಾಸರಿ ಜಿಡಿಪಿಗಿಂತ ಕಡಿಮೆ ಇದೆ.

ರಫ್ತು ಉತ್ತೇಜನವು ಸ್ಥಳೀಯ ಆರ್ಥಿಕತೆಗೆ ಜೀವ ತುಂಬಬಲ್ಲದು. ಆದರೆ, ನೀತಿ ಆಯೋಗದ ರಫ್ತು ಸಿದ್ಧತಾ ಸೂಚ್ಯಂಕ–2022ರ ಪ್ರಕಾರ ದೇಶದಲ್ಲಿ ಇಂಥ ವಾತಾವರಣ ಇಲ್ಲ. ದೇಶದ ಒಟ್ಟು ರಫ್ತಿಗೆ 680 ಜಿಲ್ಲೆಗಳು ಕೊಡುಗೆ ನೀಡುತ್ತವೆ. ಇವುಗಳಲ್ಲಿ 100 ಜಿಲ್ಲೆಗಳು ದೇಶದ ಒಟ್ಟು ರಫ್ತು ಪ್ರಮಾಣದಲ್ಲಿ ಅತೀ ಹೆಚ್ಚು ಅಂದರೆ, ಶೇ 87ರಷ್ಟು ಕೊಡುಗೆ ನೀಡುತ್ತವೆ. ಈ 100 ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯದ ಕೇವಲ ಆರು ಜಿಲ್ಲೆಗಳಿದ್ದರೆ, ಗುಜರಾತ್‌ನ 14 ಮತ್ತು ಮಹಾರಾಷ್ಟ್ರದ 12 ಜಿಲ್ಲೆಗಳು ಸ್ಥಾನ ಪಡೆದುಕೊಂಡಿವೆ.

ಕೈಗಾರಿಕಾ ನೀತಿ, ಉದ್ಯಮಸ್ನೇಹಿ ವಾತಾವರಣ, ರಫ್ತು ಉತ್ತೇಜನ ಮತ್ತು ರಫ್ತು ಸ್ಥಿತಿಗತಿ ಎಂಬ ನಾಲ್ಕು ವಿಭಾಗಗಳ ಆಧಾರದಲ್ಲಿ ಜಿಲ್ಲೆಗಳಿಗೆ ಸ್ಥಾನಗಳನ್ನು ನೀಡಲಾಗುತ್ತದೆ. ನೀತಿ ನಿರೂಪಣೆ, ಉದ್ಯಮಸ್ನೇಹಿ ವಾತಾವರಣ ವಿಭಾಗಗಳಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ. ಆದರೆ, ರಫ್ತು ಉತ್ತೇಜನದಲ್ಲಿ ಮೂರನೇ ಸ್ಥಾನ ಹಾಗೂ ರಫ್ತು ಸ್ಥಿತಿಗತಿಯಲ್ಲಿ 9ನೇ ಸ್ಥಾನದಲ್ಲಿದೆ.

ಈ ವಿಭಾಗಗಳಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳಬೇಕು ಎಂದಾದರೆ, ಅಸಮತೋಲಿತ ಬೆಳವಣಿಗೆಯ ಸವಾಲನ್ನು ಮೀರಲೇಬೇಕಿದೆ. ನೀತಿ ನಿರೂಪಣೆ ಹಾಗೂ ಅದರ ಜಾರಿಯಿಂದ ಆಗುವ ಪರಿಣಾಮದ ಮಧ್ಯೆ ದೊಡ್ಡ ಅಂತರವಿದೆ. ಇದಕ್ಕೆ ಸೇತುವೆ ಕಟ್ಟಲೇಬೇಕಿದೆ. ಈ ಸವಾಲುಗಳನ್ನು ಎದುರಿಸುವ ಪ್ರಯತ್ನಗಳೇ ನಮ್ಮ ಮುಂದಿನ 25 ವರ್ಷಗಳಿಗೆ ಗುರಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ, ಎರಡು ಪ್ರಮುಖ ಸವಾಲು ಹಾಗೂ ಆದ್ಯತೆಗಳನ್ನು ಪಟ್ಟಿ ಮಾಡಬಹುದಿದೆ. ಒಂದು: ಉದ್ಯಮಸ್ನೇಹಿ ವಾತಾವರಣ ನಿರ್ಮಾಣ ಹಾಗೂ ಉದ್ಯಮದಲ್ಲಿ ಸ್ಪರ್ಧಾತ್ಮಕತೆ. ಎರಡು: ಕೈಗಾರಿಕಾ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆ ಮೀರುವುದು ಹಾಗೂ ಉದ್ಯೋಗ ಸೃಷ್ಟಿ.

ಹಾಗಾದರೆ, ಮುಂದಿನ 25 ವರ್ಷಗಳಲ್ಲಿ ಏನು ಮಾಡಬಹುದು? ಉತ್ತರ ಸ್ಪಷ್ಟ. ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಕಡೆಗೆ ಕರ್ನಾಟಕವು ಹೆಚ್ಚು ಗಮನ ಹರಿಸಬೇಕಿದೆ. ಕೈಗಾರಿಕೆ ಹಾಗೂ ರಫ್ತು ಉದ್ಯಮಗಳ ಅಭಿವೃದ್ಧಿಯು ಪರಿಸರದ ಸುಸ್ಥಿರ ಕಾಳಜಿಯೊಂದಿಗೆ ಆಗಬೇಕಿದೆ. ಹೀಗಾದಾಗ ಮಾತ್ರವೇ ಸಮತೋಲಿತ ಅಭಿವೃದ್ಧಿ ಸಾಧ್ಯವಾಗಲಿದೆ.

ಲೇಖಕರು: ಪ್ರಾಧ್ಯಾಪಕರು, ಪಿಇಎಸ್‌ ವಿಶ್ವವಿದ್ಯಾಲಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT