ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ಪ್ರಜಾವಾಣಿ ಚರ್ಚೆ: ವರ್ಜ್ಯವಾದ ಸನಾತನ ಧರ್ಮ
ಪ್ರಜಾವಾಣಿ ಚರ್ಚೆ: ವರ್ಜ್ಯವಾದ ಸನಾತನ ಧರ್ಮ
ಸನಾತನ ಧರ್ಮವನ್ನು ಸಂರಕ್ಷಿಸಬೇಕಾಗಿದೆಯೇ?
Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಮನು, ಆಪಸ್ತಂಬ, ಮುಂತಾದವರು ಶೂದ್ರರು ಏನು ಮಾಡಬೇಕು, ಏನು ಹೊಂದಿರಬಾರದು, ಎಂಬ ದೊಡ್ಡ ಪಟ್ಟಿ ಕೊಟ್ಟಿದ್ದಾರೆ. ‘ಶೂದ್ರಂ ತು ಕಾರಯೇತ್ ದಾಸ್ಯಂ ಕ್ರೀತಂ ಅಕ್ರೀತಮೇವ ವಾ’ ಎಂದ ಮನು. ಅವನ ಕಾಲದಲ್ಲಿದ್ದ ಕ್ಷುದ್ರ ಆಚರಣೆ ಅಂಥದು. ಈಗಲೂ ಇದೆ. ಮೊನ್ನೆ ತಾನೆ ಕೂಲಿ ಕೇಳಿದ್ದಕ್ಕೆ ಒಬ್ಬನನ್ನು ಕೊಲ್ಲಲಾಯಿತಂತೆ! ‘ಕೂಲಿ ಕೊಡು ಅಥವಾ ಬಿಡು; ಶೂದ್ರನಿಂದ ಶ್ರಮವನ್ನಂತೂ ಕಿತ್ತುಕೊ’ ಎಂಬ ಪದ್ಧತಿಯು ಏಕೆ ತಾನೆ ಶಾಶ್ವತವಾಗಿ ಉಳಿಯಬೇಕು? ‘ಶುಶ್ರೂಷಾ ಶೂದ್ರಸ್ಯ ಇತರೇಷಾಂ ವರ್ಣಾನಾಂ’ ಎಂದ ಆಪಸ್ತಂಬ. ಶುಶ್ರೂಷೆ ಮಾಡಲು ಉಚ್ಚವರ್ಣದವರನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಶ್ರೇಯಸ್ಸು ಗಳಿಸಬಹುದು ಎಂದೂ ಹೇಳಿದ.

***

ಆವೇಶದಿಂದ ಕೆಟ್ಟ ಭಾಷೆ ಬಳಸಿ, ಕೆಲವೊಮ್ಮೆ ಪೊಲೀಸರಿಗೆ ದೂರು ಕೊಟ್ಟು, ಸನಾತನ ಧರ್ಮದ ರಕ್ಷಣೆಗೆ ಕೆಲವರು ಧಾವಿಸಿದ್ದಾರೆ. ಯಾರ ತಲೆಯನ್ನು ಕೆಡಿಸುವ ಉದ್ದೇಶವನ್ನು ಅಂಥವರು ಹೊಂದಿದ್ದಾರೋ ತಿಳಿಯುವುದಿಲ್ಲ. ಅದೇನು ತರ್ಕ ಮುಂದುಮಾಡಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಬಯಸುತ್ತಾರೋ ಅದನ್ನು ಮಾಡಿದ್ದರೆ ಒಳಿತಿತ್ತು. ಈಗಿನ ಅವರ ಚರ್ಚಾ ವಿಧಾನವು ಯಾರಿಗೂ ಶ್ರೇಯಸ್ಸು ತರುವಂಥದಲ್ಲ. ಪೊಲೀಸರ ರಕ್ಷಣೆ ಪಡೆದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಸನಾತನ ಧರ್ಮಕ್ಕೆ ಇನ್ನೂ ಬಂದಿಲ್ಲವೇನೋ; ಮತ್ತು ಬರಬಾರದು. ಬದಲಾಗಿ, ಅದರ ದೃಢಪಡಿಸುವಿಕೆಯನ್ನು ತಮ್ಮ ಬಯಕೆಯನ್ನಾಗಿಸಿಕೊಂಡು ಉಪಟಳ ಉಂಟುಮಾಡುವವರಿಂದ ಸಮಾಜಕ್ಕೆ ರಕ್ಷಣೆ ಬೇಕಾಗಿದೆ. ದೊಣ್ಣೆಯ ಪ್ರಯೋಗವಾಗಲಿ, ನಾಲಿಗೆ ಕತ್ತರಿಸುವ ಬೆದರಿಕೆಯಾಗಲಿ, ವಿಚಾರ ವಿನಿಮಯದ ರೀತಿ ಆಗಲಾರದು. ಅಂತಹ ವ್ಯಗ್ರತೆಯ ಪರಂಪರೆಯೂ ನಮ್ಮಲ್ಲಿದೆ. ಅದರ ನಿರಾಕರಣೆಯು ಆರೋಗ್ಯಕರ.

ಕೆಲವು ಜನರು ಆಸುರೀ ಭಾವಕ್ಕೆ ತಮ್ಮನ್ನು ತೆತ್ತುಕೊಂಡಿರುತ್ತಾರೆಂದು ಆಪಾದಿಸುವ ಶ್ರೀಭಗವಾನನು ಗೀತೆಯಲ್ಲಿ ಅಂಥವರ ವಿರುದ್ಧ ಬಿರುಸಿನ ಮಾತುಗಳನ್ನಾಡಿದ್ದಾನೆ: ‘ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ’, ಇತ್ಯಾದಿ (16.19). ಅವರನ್ನು ಸದಾಕಾಲ ಆಸುರೀ ಪ್ರವೃತ್ತಿ ಉಳ್ಳವರನ್ನಾಗಿಯೇ ಮಾಡುತ್ತಾನಂತೆ ಪರಮಾತ್ಮ. ಅವರನ್ನು ಬದಲಿಸಲು ಏಕೆ ಮುಂದಾಗುವುದಿಲ್ಲವೋ ತಿಳಿಯದು. ಸನಾತನ ಧರ್ಮದ ಕವಚಧಾರಿಗಳು ಅನ್ಯಮಾರ್ಗವನ್ನು ಈಗಲಾದರೂ ಆಯ್ಕೆ ಮಾಡಿಕೊಳ್ಳುವುದು ಅಪೇಕ್ಷಣೀಯ.

ಸನಾತನವೆಂದರೆ ಏನೋ ನಿಗೂಢತೆ ಇರಬೇಕೆಂಬ ತವಕ ಅನಗತ್ಯ. ಬಹಳ ಪ್ರಸಿದ್ಧವಾದ ಅಮರಕೋಶವು ಅದರ ಅರ್ಥವನ್ನು ಸರಳವಾಗಿ ನಿರೂಪಿಸಿದೆ: ‘ಶಾಶ್ವತಸ್ತು ಧ್ರುವೋ ನಿತ್ಯ ಸದಾತನ ಸನಾತನಾ’ (3.76). ವಿದ್ವಾಂಸರಾದ ಜಿ.ಎನ್.ಚಕ್ರವರ್ತಿ ಮತ್ತು ವಿ.ಎಸ್.ಆಪ್ಟೆ ಇದೇ ಅರ್ಥವನ್ನು ಮಾನ್ಯ ಮಾಡಿದ್ದಾರೆ. ಅದಕ್ಕೆ ಶ್ರೇಷ್ಠವಾದ್ದು, ಪರಮಾತ್ಮ ಕೊಟ್ಟಿದ್ದು, ಶುಭವಾದ್ದು, ಎಂಬ ಅರ್ಥವನ್ನು ಆರೋಪಿಸಬಾರದು. ಪ್ರಶ್ನೆ ಇರುವುದಿಷ್ಟೆ: ಯಾವುದು ಶಾಶ್ವತ ಮತ್ತು ಶಾಶ್ವತವಾಗಿ ಉಳಿಯಬೇಕಾದ್ದೇನು? ಜಗತ್ತಿನ ಅನುಭವದಲ್ಲಿ ಡೈನೋಸೆರಸ್ಸಿನಿಂದ ಹಿಡಿದು ಎಲ್ಲಾ ಬದಲಾವಣೆಗೆ ಒಳಗಾಗಿವೆ. ಒಂದು ಕಾಲದಲ್ಲಿತ್ತು ಎಂದಷ್ಟೇ. ಆದರೆ ಬದಲಾವಣೆಯಾಗಿದೆ ಎಂಬುದು ನಿತ್ಯಸತ್ಯ. ನಾನು ಚಿಕ್ಕವನಿದ್ದಾಗ ನಮ್ಮ ಹಳ್ಳಿಯಲ್ಲಿ ಜೋಡಿದಾರರು ಬಂದು ಅವರ ಕುಳಗಳಿಗೆ, ವಿಶೇಷವಾಗಿ ದಲಿತರಿಗೆ, ಒಳ್ಳೆಯ ಅವರೆಕಾಯಿ ತರಲಿಲ್ಲವೆಂದು ಮಂಕರಿಯಿಂದ ಹೊಡೆದುಬಿಡುತ್ತಿದ್ದರು; ಈಗ ಜೋಡೀದಾರರಿಲ್ಲ ಮತ್ತು ಯಾರನ್ನಾದರೂ ಹೊಡೆಯಹೋದರೆ ಮಂಕರಿಯನ್ನು ಅವರ ತಲೆಯ ಮೇಲೆ ಬೋರಲು ಹಾಕಿಬಿಡುತ್ತಾರೆ. ಮೌಲ್ಯಗಳು ಶಾಶ್ವತ ಹೌದು; ಆದರೆ ಎಂತಹ ಮೌಲ್ಯಗಳೆಂಬುದು ಮೂಲಭೂತ ಪ್ರಶ್ನೆ. ಸನಾತನ ಧರ್ಮವೂ ಇದಕ್ಕೆ ಹೊರತಾಗಲಾರದು.

ಭಗವದ್ಗೀತೆಯಲ್ಲಿನ ‘ಗ್ಲಾನಿ’ಯ ಪ್ರಸ್ತಾಪವು ಪ್ರಸಿದ್ಧ. ಗ್ಲಾನಿಯುಂಟಾದಾಗೆಲ್ಲಾ ಭಗವಂತನು ಅವತರಿಸಿ ಬರುತ್ತಾನಂತೆ. ಅದು ನಿಜವಾದರೆ, ನಮ್ಮ ಇಂದಿನ ಕ್ರಿಯೆ ಏನಾಗಬೇಕು? (ಅ) ಸುಮ್ಮನೆ ಅವನಿಗಾಗಿ ಕಾದು ಕುಳಿತಿರುವುದು, ಇಲ್ಲವೇ (ಆ) ಅವನೆಂದೂ ಬರಲಾರನಾದ್ದರಿಂದ ನಾವೇ ನಮ್ಮ ಇರುವನ್ನು ಸುಧಾರಿಸಿಕೊಳ್ಳುವುದು. ಗ್ಲಾನಿಯು ಒಮ್ಮೆ ಬಂದು ಸದಾಕಾಲಕ್ಕೂ ನೆಮ್ಮದಿಯನ್ನು ನೀಡಿ ಹೋಗಿಬಿಡುವುದಿಲ್ಲ. ಬದಲಾವಣೆಯಂತೆ ಗ್ಲಾನಿಯೂ ಮರುಕಳಿಸುತ್ತಿರುತ್ತದೆ. ಇಷ್ಟಕ್ಕೂ ಕುರುಕ್ಷೇತ್ರ ಯುದ್ಧಕ್ಕೆ ಮುನ್ನ ಎಂತಹ ಗ್ಲಾನಿಯಿತ್ತು? ಒಂದು ಕುಟುಂಬದಲ್ಲಿ ವಿರಸ, ಅಷ್ಟೆ. ಅದೇ ಕಾಲದಲ್ಲಿ ಧರ್ಮವ್ಯಾಧನಿದ್ದ, ನೀತಿವಂತ ವಿದುರನಿದ್ದ. ಸಚ್ಚಾರಿತ್ರ್ಯವು ಯಾವುದೋ ಒಂದು ಕಾಲದ ಗಂಟಲ್ಲ, ವಿವಾದಗಳೂ ಕ್ಷಣಿಕವಲ್ಲ. ಇದು ಪ್ರಕೃತಿ ನಿಯಮ, ಸಾಮಾಜಿಕ ನಿಯಮ. ಆದ್ದರಿಂದ ‘ಶಾಶ್ವತ’ ಎಂಬುದು ನಿಜಕ್ಕೂ ಶಾಶ್ವತವಲ್ಲ. ಕೆಲವು ದುಷ್ಟ ಸಂಗತಿಗಳು ಶಾಶ್ವತವಾಗಿ ನೆಲೆಸುವುದು ಯೋಗ್ಯವೂ ಅಲ್ಲ. ಗೀತೆಯು ಮೊದಲ ಅಧ್ಯಾಯದಲ್ಲಿ ಯಾವುದೆಲ್ಲಾ ಶಾಶ್ವತವಲ್ಲವೆಂದು ಕೊರಗಿದೆ ಎಂಬುದನ್ನು ಗಮನಿಸಬೇಕು: ಒಂದಂತೂ ಕೊರಗಬೇಕಾದ ಸಂಗತಿಯೇ ಅಲ್ಲ. ಉತ್ಸಾದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ’ (1.43). ಜಾತಿಧರ್ಮ ಅಪ್ರಸ್ತುತವಾಗಿಬಿಡುತ್ತದೆಂಬುದು ಗಾಸಿಯಂತೆ! ಅದು ನಿಜಕ್ಕೂ ಶಾಶ್ವತವೇ ಆಗಿದ್ದರೆ ಅದು ಉತ್ಪಾಟನೆಗೊಳ್ಳುತ್ತದೆಂಬ ಅಳುಕೇಕೆ? ಅದೇ ಸ್ವಾರಸ್ಯ: ಯಾವುದನ್ನು ಗೀತೆಯ ಕರ್ತೃ ಶಾಶ್ವತವಾಗಿ ಉಳಿಯಬೇಕೆಂದು ಬಯಸುತ್ತಾನೋ ಅದು ಯುದ್ಧದಿಂದಾಗಿ ಕಮರಿಹೋಗುತ್ತದೆ. ಅದು ವರ್ಣ ವ್ಯವಸ್ಥೆಯಾಗಬಹುದು, ವರ್ಗ ವ್ಯವಸ್ಥೆಯೂ ಆಗಬಹುದು; ಕುರುಕ್ಷೇತ್ರ ಯುದ್ಧವಾಗಬಹುದು, ಸಾಮಾಜಿಕ ವರ್ಗಯುದ್ಧವೂ ಆಗಬಹುದು.

ಯಾವನೋ ಧರ್ಮಶಾಸ್ತ್ರಕಾರನು ಆದೇಶಿಸುವುದರಿಂದ ಸಾಮಾಜಿಕ ವ್ಯವಸ್ಥೆಯು ಉತ್ತಮವೋ, ಕೀಳೋ ಆಗುವುದಿಲ್ಲ. ಅವನು ಸಸ್ಯಶಾಸ್ತ್ರಜ್ಞನಂತೆ ಅವಲೋಕಿಸುತ್ತಾನೆ, ದಾಖಲಿಸುತ್ತಾನೆ. ಬುಡಕಟ್ಟು ಸಮಾಜದ ಸಮಾನತೆ ನಶಿಸಿದಂತೆ ವರ್ಣ ವ್ಯವಸ್ಥೆಯ ಅಸಮಾನತೆಯೂ ನಶಿಸಿಹೋಗಲೆಂದು ಇಚ್ಛಿಸುವುದು ಮಹತ್‌ ಪಾಪವೇ? ಗೀತೆಯ ಪ್ರಕಾರ, ಹೌದು.

ಸಮಾಜವು ಬದಲಾದಂತೆ ಧರ್ಮಶಾಸ್ತ್ರಕಾರನ ಉಲ್ಲೇಖವೂ ಬದಲಾಗಲೇಬೇಕು. ಮನು, ಆಪಸ್ತಂಬ ಮುಂತಾದವರು ಶೂದ್ರರು ಏನು ಮಾಡಬೇಕು, ಏನು ಹೊಂದಿರಬಾರದು, ಎಂಬ ದೊಡ್ಡ ಪಟ್ಟಿ ಕೊಟ್ಟಿದ್ದಾರೆ. ‘ಶೂದ್ರಂ ತು ಕಾರಯೇತ್ ದಾಸ್ಯಂ ಕ್ರೀತಂ ಅಕ್ರೀತಮೇವ ವಾ’ ಎಂದ ಮನು. ಅವನ ಕಾಲದಲ್ಲಿದ್ದ ಕ್ಷುದ್ರ ಆಚರಣೆ ಅಂಥದು. ಈಗಲೂ ಇದೆ. ಮೊನ್ನೆ ತಾನೆ ಕೂಲಿ ಕೇಳಿದ್ದಕ್ಕೆ ಒಬ್ಬನನ್ನು ಕೊಲ್ಲಲಾಯಿತಂತೆ! ‘ಕೂಲಿ ಕೊಡು ಅಥವಾ ಬಿಡು; ಶೂದ್ರನಿಂದ ಶ್ರಮವನ್ನಂತೂ ಕಿತ್ತುಕೊ’ ಎಂಬ ಪದ್ಧತಿಯು ಏಕೆ ತಾನೆ ಶಾಶ್ವತವಾಗಿ ಉಳಿಯಬೇಕು? ‘ಶುಶ್ರೂಷಾ ಶೂದ್ರಸ್ಯ ಇತರೇಷಾಂ ವರ್ಣಾನಾಂ’ ಎಂದ ಆಪಸ್ತಂಬ. ಶುಶ್ರೂಷೆ ಮಾಡಲು ಉಚ್ಚವರ್ಣದವರನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಶ್ರೇಯಸ್ಸು ಗಳಿಸಬಹುದು ಎಂದೂ ಹೇಳಿದ (ಪೂರ್ವಸ್ಮಿನ್ ಪೂರ್ವಸ್ಮಿನ್ ವರ್ಣೇ ನಿಃಶ್ರೇಯಸಂ ಭೂಯಃ). ಗುಪ್ತರ ಕಾಲದ ಧರ್ಮಶಾಸ್ತ್ರಕಾರರು ‘ಶೂದ್ರರು ಆಸ್ತಿ ಹೊಂದಬಹುದು, ದ್ವಿಜರಂತೆ ಯಜ್ಞ ಮಾಡಬಹುದು’ ಎಂದರು. ಏಕೆಂದರೆ ಸನ್ನಿವೇಶ ಬದಲಾಗಿದ್ದಿತು. ಇಂದಿನ ತುರ್ತು ಅಂತಹ ಬದಲಾವಣೆಗಳು ಸಮಗ್ರವಾಗಿ ವಿಸ್ತರಣೆ ಆಗಬೇಕೆಂಬುದೇ ಆಗಿದೆ.

1916ರಲ್ಲಿ ಕಾಶಿಯ ಸೆಂಟ್ರಲ್ ಹಿಂದೂ ಕಾಲೇಜ್ ‘ಸನಾತನ ಧರ್ಮ’ ಎಂಬ ಗ್ರಂಥವನ್ನು ಪ್ರಕಟಿಸಿತ್ತು. ಅದು ಮಾನವ ಮೌಲ್ಯಗಳನ್ನು ಕುರಿತು ಹೇಳಲಿಲ್ಲ; ಹೇಳಿದ್ದೆಲ್ಲಾ ವರ್ಣಾಶ್ರಮ, ಶ್ರೇಣೀಕರಣದ ಸಮರ್ಥನೆ, ಕರ್ಮ, ಪುನರ್ಜನ್ಮ, ಯಜ್ಞ, ಸಂಸ್ಕಾರ, ಇತ್ಯಾದಿಗಳನ್ನು. ಸಾಮಾಜಿಕ - ಸಾಂಸ್ಕೃತಿಕ ಏಣಿ ಇಲ್ಲದೆ ಸನಾತನ ಧರ್ಮಕ್ಕೆ ಉಳಿವಿಲ್ಲ. ಯಾರು ಯಾವ ಮೆಟ್ಟಿಲಲ್ಲಿ ಶಾಶ್ವತವಾಗಿ ಉಳಿಯಬೇಕೆಂಬುದು ಅದರ ಪರಮಾರ್ಥ. ಈ ಏರುಪೇರಿನ ಸಮಾಜಕ್ಕೆ ಸಮರ್ಥನೆಯೆಂದು ‘ಶ್ರುತಿ’ಯನ್ನು ಹೆಸರಿಸುತ್ತಾರೆ. ಶಂಕರಾಚಾರ್ಯರು ‘ಮನು ಹೇಳಿದ್ದೇ ಅಂತಿಮ ಸತ್ಯ’ ಎಂದರು (ಯತ್ ಮನುರಬ್ರವೀತ್ ತತ್ಸತ್ಯಂ). ನಮ್ಮ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸದಲ್ಲಿ ಯಾವನಾದರೂ ದಾರ್ಶನಿಕ, ಸಾಹಿತಿ, ಧರ್ಮಶಾಸ್ತ್ರಜ್ಞ, ಅಸ್ಪೃಶ್ಯತೆಯನ್ನು ಅಸಹ್ಯ ಎಂದದ್ದುಂಟೆ? ಬಸವಣ್ಣ, ಏಕನಾಥ, ಮುಂತಾದವರು ಆ ಜಡತೆಯನ್ನು ಖಂಡಿಸಿದ್ದು ಸ್ವಾಗತಾರ್ಹ. ಅವರು ‘ಸನಾತನ’ವನ್ನು ಶ್ರೇಷ್ಠವೆಂದು ಕೊಂಡಾಡಲಿಲ್ಲ. ಬದಲಿಗೆ, ಸಮಾನತೆಯ ಮೌಲ್ಯವನ್ನು ಎತ್ತಿಹಿಡಿದರು. ಮನುವಾದಿ ಮಹಾಶಯರು ಮಹಿಳೆಯನ್ನು ಸಾರಾಸಗಟಾಗಿ ತುಚ್ಛೀಕರಿಸಿದರು, ಶೂದ್ರರಿಗೆ ಸಮಾನರೆಂದು ಜರಿದರು; ಆದರೆ ಶೂದ್ರಸಮಾನರಾದ ಮಹಿಳೆಯರೊಂದಿಗೆ ಸಂಸಾರ ನಡೆಸಿದರೆಂಬುದೇ ಭಾಗ್ಯ! ಜೀವಾತ್ಮಗಳು ತಮ್ಮ ಶ್ರೇಣಿಗೆ ತಕ್ಕಂತೆ ಆಯಾ ವರ್ಣದ ಶರೀರಗಳನ್ನು ಸಹಜವಾಗಿ ಪ್ರವೇಶಿಸುತ್ತವೆಂದು ಹೇಳಿದ ತತ್ತ್ವಶಾಸ್ತ್ರಜ್ಞರೂ ನಮ್ಮಲ್ಲಿದ್ದಾರೆ.

ಗೀತೆಯು ‘ಸ್ವಧರ್ಮ’ ಪರಿಪಾಲನೆಗೆ ಎಲ್ಲಿಲ್ಲದ ಮಹತ್ವ ನೀಡಿದೆ, ಕಟ್ಟುನಿಟ್ಟಾಗಿ ಅದನ್ನು ನಿಗದಿಗೊಳಿಸಿದೆ. ಗೀತೆಯ ‘ಶ್ರೇಯಾನ್ ಸ್ವಧರ್ಮೇ ನಿಧನಃ’, ‘ಸ್ವಧರ್ಮಮಪಿ ಕೌಂತೇಯ ಸದೋಷಮಪಿ ನ ತ್ಯಜೇತ್’ ಮುಂತಾದ ಉಕ್ತಿಗಳ ಹಿಂದೆ ಅಸಮಾನತೆಯ ಮತ್ತು ಜಡತ್ವದ ಸಾಂದ್ರತೆಯು ತುಂಬಿಕೊಂಡಿದೆ. ಅದಾವ ಬಾಯಲ್ಲಿ ಇದನ್ನು ಶ್ರೇಯಸ್ಕರವೆಂದು ಉಚ್ಚರಿಸಲಾಗುತ್ತದೋ ತಿಳಿಯುವುದಿಲ್ಲ. ಉದಾತ್ತ ಮೌಲ್ಯಗಳೇ ಬೇರೆ, ಸನಾತನ ಧರ್ಮವೇ ಬೇರೆ. ಒಬ್ಬ ಆಚಾರ್ಯರು ತಮ್ಮ ಗೀತಾಭಾಷ್ಯದಲ್ಲಿ ಹೇಳುತ್ತಾರೆ, ‘ವಿಷದಲ್ಲಿ ಹುಟ್ಟಿದ ಕ್ರಿಮಿಗೆ ವಿಷವು ಸ್ವಭಾವವಾದ್ದು, ಆದ್ದರಿಂದ ಶೂದ್ರನ ಸ್ವಭಾವಜ ಕರ್ಮ (= ಪರರ ಸೇವೆ) ಶ್ರೇಷ್ಠವಾದದ್ದೇ’ ಎಂದು. ಇದು ಅವರ ಸನಾತನ ಧರ್ಮ! ಸಂಯಮ ಕಳೆದುಕೊಳ್ಳುವಂತೆಯೇ ಮಾನವೀಯ ಮೌಲ್ಯದ ಶ್ರೇಷ್ಠತೆಯನ್ನೂ ಅವರು ನಿರಾಕರಿಸುತ್ತಾರೆ. ಸನಾತನ ಧರ್ಮವೆಂದು ಯಾವುದನ್ನು ಹಿಮಾಲಯಕ್ಕೇರಿಸುತ್ತಾರೋ ಅದು ಸಮಾನತೆಯ ಧರ್ಮಕ್ಕೆ, ಆತ್ಮಗೌರವಕ್ಕೆ, ನೈಜಮೌಲ್ಯಗಳಿಗೆ ಕುತ್ತುಂಟುಮಾಡುತ್ತದೆ. ಮಾನವಧರ್ಮಕ್ಕಿಂತಲೂ ಹೆಚ್ಚು ಶ್ರೇಷ್ಠವಾದ ಧರ್ಮದ ಅರಸುವಿಕೆಯು ವಿಕೃತವಾದ ಪ್ರಕೃತಿವಿರೋಧಿ ಹಂಬಲದಿಂದ ಆವೃತವಾಗಕೂಡದು. ಆತ್ಮ, ಜಗನ್ಮಿಥ್ಯೆಯೆಂಬ ಪ್ರಲಾಪ, ಪುನರ್ಜನ್ಮ, ಪ್ರಪತ್ತಿ, ಮೋಕ್ಷ, ಇವಾವೂ ಮಾನವತೆಗಿಂತಲೂ ಉದಾತ್ತವಲ್ಲ, ಗಮ್ಯವಲ್ಲ. ಸನಾತನ ಧರ್ಮದ ಮೌಲ್ಯೀಕರಣವು ಮನಸ್ಸಿಗೆ ಬಾಧೆಯುಂಟು ಮಾಡುತ್ತದೆಂದು ಕಳವಳ ಬೇಡ, ಮನಸ್ಸು ಗಟ್ಟಿ ಮಾಡಿಕೊಳ್ಳುವುದು ಆರೋಗ್ಯಕರ. ಸಾವಿರಾರು ವರ್ಷಗಳ ಕಾಲ ಅಸಮಾನತೆ ಮತ್ತು ಹಿಂಸೆ ಸಹಿಸಿದವರ ಮಾನಸಿಕ ಒತ್ತಡವನ್ನು ಅರ್ಥ ಮಾಡಿಕೊಳ್ಳೋಣ. ದುರಹಂಕಾರದಿಂದ ದಲಿತಾದಿಗಳ ಮೇಲಿನ ಹಿಂಸೆ ಮತ್ತು ಕ್ರೌರ್ಯಗಳಿಗಿಂತ ನಮ್ಮ ಸಂವಿಧಾನದ ಆಶಯ ಮತ್ತು ಆಚರಣೆ ಸುಸಂಸ್ಕೃತ ನಡೆಯಾಗುತ್ತದೆ.

ಲೇಖಕ: ಸಂಸ್ಕೃತಿ ಚಿಂತಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT