ಕೋವಿಡ್ ಮತ್ತಿತರ ಕಾರಣಗಳಿಂದಾಗಿ ಪ್ರಸ್ತುತ ಕನ್ನಡ ಚಿತ್ರರಂಗವು ಸಂಕಷ್ಟ ಪರಿಸ್ಥಿತಿಯಲ್ಲಿದೆ. ಈಗಾಗಲೇ ರಾಜ್ಯದಲ್ಲಿರುವ 650 ಏಕಪರದೆ ಚಿತ್ರಮಂದಿರಗಳಲ್ಲಿ 150–200 ರಷ್ಟು ಮುಚ್ಚಿವೆ. ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಇಳಿಯುತ್ತಿದೆ. ಹೀಗಿರುವಾಗ ಟಿಕೆಟ್‌ಗೆ ಸೆಸ್ ವಿಧಿಸಿದರೆ ಟಿಕೆಟ್ ದರವೂ ಏರಿಕೆಯಾಗಲಿದ್ದು, ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ಕಡಿಮೆಯಾಗುವುದು ನಿಶ್ಚಿತ...
ರಾಜ್ಯ ಸರ್ಕಾರವು ಚಿತ್ರರಂಗದ ಕಾರ್ಮಿಕರ ಹಿತರಕ್ಷಣೆಗಾಗಿ ಹಣ ಕ್ರೋಡೀಕರಿಸುವ ಉದ್ದೇಶದಿಂದ ಚಿತ್ರಮಂದಿರದ ಟಿಕೆಟ್ ಮೇಲೆ ಸೆಸ್ ಅಳವಡಿಸಲು ಮಸೂದೆ ಅಂಗೀಕರಿಸಿದೆ. ಇದು ಪರೋಕ್ಷವಾಗಿ ನಿರ್ಮಾಪಕರಿಗೇ ಹೊರೆಯಾಗುವ ನಿರ್ಧಾರ. ಕಾರ್ಮಿಕರ ಕಲ್ಯಾಣಕ್ಕೆ ಬೇಕಾದಂತಹ ಹಣವನ್ನು ಪ್ರೇಕ್ಷಕರಿಗೆ ನೀಡುವ ಟಿಕೆಟ್ ದರದ ಮೇಲೆ ತೆರಿಗೆ ವಿಧಿಸಿ ಸಂಗ್ರಹಿಸುವುದು ಸಮಂಜಸವಲ್ಲ. ಮೇಲಾಗಿ ಈ ರೀತಿಯ ಸೆಸ್ ದೇಶದ ಯಾವ ರಾಜ್ಯದಲ್ಲೂ ಚಾಲ್ತಿಯಲ್ಲಿಲ್ಲ.
ಸೆಸ್ ವಿಧಿಸುವ ಯೋಚನೆಗೆ ನಮ್ಮ ವಿರೋಧವನ್ನು ಬಹಳ ಹಿಂದೆಯೇ ಸರ್ಕಾರಕ್ಕೆ ತಿಳಿಸಿದ್ದೆವು. 2023ರ ನವೆಂಬರ್‌ನಲ್ಲಿ ಕಾರ್ಮಿಕ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘ ಭಾಗವಹಿಸಿ, ಚಿತ್ರೋದ್ಯಮದ ಪರವಾಗಿ ತಕರಾರು ಸಲ್ಲಿಸಿ ಟಿಕೆಟ್ ಮೇಲೆ ಸೆಸ್ ಸಂಗ್ರಹಿಸುವ ಉದ್ದೇಶವನ್ನು ಕೈಬಿಟ್ಟು ಪರ್ಯಾಯ ಮಾರ್ಗದಲ್ಲಿ ಹಣ ಕ್ರೋಡೀಕರಿಸಲು ಚಿಂತನೆ ನಡೆಸಲು ಮನವಿ ಮಾಡಿಕೊಂಡಿದ್ದೆವು. ಮನವಿಯ ನಂತರವೂ ಇತ್ತೀಚೆಗೆ ಈ ಮಸೂದೆಯನ್ನು ಅಂಗೀಕರಿಸಲಾಗಿದೆ.
ನಿರ್ಮಾಪಕರು ಪ್ರತಿ ಹೆಜ್ಜೆಯಲ್ಲೂ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ. ನಿರ್ಮಾಣ ಸಂಸ್ಥೆಯ ನೋಂದಣಿ, ಶೀರ್ಷಿಕೆ ನೋಂದಣಿ, ಮುಹೂರ್ತದ ಸಮಯದಲ್ಲಿ ಬೇಕಾಗುವ ವಸ್ತುಗಳ ಮೇಲೆ, ಚಿತ್ರೀಕರಣಕ್ಕೆ ಬಳಸುವ ಉಪಕರಣಗಳು, ಸುದ್ದಿಗೋಷ್ಠಿ ನಡೆಸುವ ಜಾಗದ ಬಾಡಿಗೆ ಮೇಲೆ, ಚಿತ್ರೀಕರಣಕ್ಕೆ ಅನುಮತಿ ಕೋರುವ ವೇಳೆ, ಪೋಸ್ಟರ್‌ಗಳ ಮೇಲೆ, ಬಂದಂತಹ ಗಳಿಕೆ ಮೇಲೆ ತೆರಿಗೆ ಕಟ್ಟುತ್ತೇವೆ. ಸೆನ್ಸಾರ್ ಮಂಡಳಿ ಸದಸ್ಯರಿಗೆ ಸಿನಿಮಾ ತೋರಿಸುವ ಜಾಗಕ್ಕೂ ನಾವು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಹಿತ ಬಾಡಿಗೆ ಕಟ್ಟುತ್ತೇವೆ. ಸಿನಿಮಾದ ಹಕ್ಕುಗಳನ್ನು ಮಾರಾಟ ಮಾಡುವಾಗ ಅದಕ್ಕೂ ಜಿಎಸ್‌ಟಿ ಪಾವತಿಸುತ್ತೇವೆ. ಅದೆಲ್ಲದಕ್ಕಿಂತಲೂ ಮುಖ್ಯವಾಗಿ ಸಿನಿಮಾಗೆ ಸೆನ್ಸಾರ್ ಪ್ರಮಾಣ ಪತ್ರ ಪಡೆಯುವ ವೇಳೆ ಸಿನಿಮಾ ಅವಧಿಗೆ ಅನುಗುಣವಾಗಿ ₹25 ಸಾವಿರದಿಂದ ₹40 ಸಾವಿರದವರೆಗೂ ಜಿಎಸ್‌ಟಿ ಒಳಗೊಂಡು ಸೆನ್ಸಾರ್ ಮಂಡಳಿಗೆ ಕಟ್ಟುತ್ತೇವೆ. ವರ್ಷಕ್ಕೆ ಸರಾಸರಿ 300 ಸಿನಿಮಾಗಳು ಸೆನ್ಸಾರ್ ಆಗುತ್ತಿವೆ. ನಿರ್ಮಾಪಕರು ಚಿತ್ರದ ಸೆನ್ಸಾರ್ ಪಡೆಯುವ ಸಂದರ್ಭದಲ್ಲಿ ವೀಕ್ಷಣೆಗೆ ಪಾವತಿ ಮಾಡುವ ಹಣವು ಕಾರ್ಮಿಕರ ಹಿತರಕ್ಷಣೆಗೆ ವರ್ಗಾಯಿಸಲಾಗುತ್ತಿದೆ. ಈ ಹಣ ಎಲ್ಲಿದೆ?
ಸಿನಿಮಾ ಕಾರ್ಮಿಕರು ಅಸಂಘಟಿತರು. ನನಗಿರುವ ಮಾಹಿತಿ ಪ್ರಕಾರ, ಉತ್ತರ ಭಾರತದ ಸಿನಿಮಾ ಕಾರ್ಮಿಕರು ಈ ನಿಧಿಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದ ಕಾರ್ಮಿಕರ ಒಕ್ಕೂಟ ಕಾರ್ಮಿಕ ಇಲಾಖೆಯ ಬಳಿ ಈ ಬಗ್ಗೆ ಕೇಳಬೇಕು. ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರದ ಬಳಿ ಇದರ ಬಗ್ಗೆ ಮಾಹಿತಿ ಕೇಳಲಿ. ಹೆಜ್ಜೆ ಹೆಜ್ಜೆಗೂ ಇಷ್ಟೆಲ್ಲ ತೆರಿಗೆ ಪಾವತಿಸುವುದರ ನಂತರವೂ ಸೆಸ್ ವಿಧಿಸಿದರೆ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಹೊರೆಯಾಗಲಿದೆ.
ನಾವು ಸಿನಿಮಾದಲ್ಲಿ ಕೆಲಸ ಮಾಡುವವರಿಗೆ ದಿನಗೂಲಿ ಲೆಕ್ಕದಲ್ಲಿ ಹಣ ನೀಡುತ್ತೇವೆ. ಅದು ವಿಭಾಗ ಹಾಗೂ ಕೆಲಸಕ್ಕೆ ಅನುಗುಣವಾಗಿ ಇರುತ್ತದೆ. ಇದರ ಬಗ್ಗೆ ಜಟಾಪಟಿಯೂ ಇದ್ದು, ಅದು ಕ್ರಮೇಣ ಸರಿಹೋಗಲಿದೆ. ಕೋವಿಡ್ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಪ್ರಸ್ತುತ ಕನ್ನಡ ಚಿತ್ರರಂಗವು ಸಂಕಷ್ಟ ಹಾಗೂ ಶೋಚನೀಯ ಪರಿಸ್ಥಿತಿಯಲ್ಲಿದೆ. ಈಗಾಗಲೇ ರಾಜ್ಯದಲ್ಲಿರುವ 650 ಏಕಪರದೆ ಚಿತ್ರಮಂದಿರಗಳಲ್ಲಿ 150–200 ಚಿತ್ರಮಂದಿರಗಳು ಮುಚ್ಚಿವೆ. ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. ಇದರ ಮೇಲೆ ಟಿಕೆಟ್‌ಗೆ ಸೆಸ್ ವಿಧಿಸಿದರೆ ಟಿಕೆಟ್ ದರವೂ ಏರಿಕೆಯಾಗಲಿದ್ದು, ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ಕಡಿಮೆಯಾಗುವುದು ನಿಶ್ಚಿತ. ಇದರಿಂದ ನಿರ್ಮಾಪಕರಿಗೆ, ಚಿತ್ರಮಂದಿರಗಳ ಮಾಲೀಕರಿಗೆ ನೇರ ಹೊಡೆತ ಬೀಳಲಿದೆ. ಟೆಲಿಗ್ರಾಂ ಆ್ಯಪ್ ಸೇರಿದಂತೆ ಪೈರಸಿಯಿಂದ ನಿರ್ಮಾಪಕರಿಗೂ, ಸರ್ಕಾರಕ್ಕೂ ಆದಾಯ ಇಳಿಕೆಯಾಗುತ್ತಿದೆ. ಹಾಕಿದ ಬಂಡವಾಳ ವಾಪಸ್ ಬರದ ಕಾರಣ ಸಂಕಷ್ಟವನ್ನು ಎದುರಿಸಲಾಗದೆ ಕೆಲವು ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೆಸ್ ಭಾರ ಮತ್ತಷ್ಟು ಹೊರೆಯಾಗಲಿದೆ.
ಈ ಹಿಂದೆ ಚಿತ್ರರಂಗದ ಅಭಿವೃದ್ಧಿಗಾಗಿ ಕನ್ನಡ ಚಿತ್ರಗಳಿಗೆ ತೆರಿಗೆ ವಿನಾಯಿತಿ ಇತ್ತು. 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದ ಬಳಿಕ ಕನ್ನಡ ಚಿತ್ರಗಳಿಗೂ ತೆರಿಗೆ ಪಾವತಿ ಮಾಡುತ್ತಿದ್ದೇವೆ. ಅಲ್ಲಿಯವರೆಗೆ ಪರಭಾಷೆ ಸಿನಿಮಾಗಳಿಗೆ ಶೇ 30 ತೆರಿಗೆ ಇತ್ತು. ಜಿಎಸ್‌ಟಿ ಜಾರಿ ಬಳಿಕ ಟಿಕೆಟ್ ದರ ಏರಿಕೆಯಾಗಿತ್ತು. ಕೋಟ್ಯಂತರ ರೂಪಾಯಿ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತಿದೆ. ಈ ರೀತಿ ಪಾವತಿ ಮಾಡುತ್ತಿರುವ ತೆರಿಗೆಯನ್ನು ಕನ್ನಡ ಚಿತ್ರರಂಗದ ಉಳಿವಿಗಾಗಿ ಮರುಪಾವತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿ. ಈ ಕುರಿತು ನಾವು ಮನವಿಯನ್ನೂ ನೀಡಿದ್ದೇವೆ. ಟಿಕೆಟ್‌ಗಳಿಗೆ ನಿಗದಿಪಡಿಸುವ ಹಣಕ್ಕೆ ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ಕಾರ್ಮಿಕರ ಹಿತದೃಷ್ಟಿಗೆ ಸೆಸ್ ಪಡೆಯಬೇಕಾದರೂ ಆ ಹಣಕ್ಕೆ ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಪಾವತಿ ಮಾಡಲೇಬೇಕಾಗುತ್ತದೆ.
ಸರ್ಕಾರವು ರಾಜ್ಯ ಚಲನಚಿತ್ರ ಅಕಾಡೆಮಿ ಸೇರಿಸಿದಂತೆ ವಿವಿಧ ಅಕಾಡೆಮಿಗಳಿಗೆ ಅನುದಾನ ನೀಡುತ್ತದೆ. ಸರ್ಕಾರವು ಚಲನಚಿತ್ರ ಅಕಾಡೆಮಿಯಲ್ಲಿ ₹10 ಕೋಟಿ ಇಟ್ಟಿದೆ. ಇದರಿಂದಲೇ ಅವಶ್ಯಕತೆ ಇದ್ದವರಿಗೆ ನೆರವು ನೀಡಲಾಗುತ್ತಿದೆ. ಈ ಅನುದಾನವನ್ನು ಹೆಚ್ಚಿಸಿ ಕಾರ್ಮಿಕರ ಕಲ್ಯಾಣಕ್ಕೆ ಬಳಸಿಕೊಳ್ಳಲಿ. ಅದು ಬಿಟ್ಟು, ನಿರ್ಮಾಪಕರು, ಪ್ರದರ್ಶಕರು ಮತ್ತು ಪ್ರೇಕ್ಷಕರ ಮೇಲೆ ಮತ್ತೆ ಹೊರೆ ಹಾಕುವುದು ಸರಿಯಲ್ಲ. ಹಲವು ವರ್ಷಗಳಿಂದ ಬೇಡಿಕೆಯಲ್ಲಿರುವ ಏಕರೀತಿಯ ಪ್ರವೇಶದರ ನಿಗದಿ ಬೇಡಿಕೆ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ನಿಯಮ ರೂಪಿಸಬೇಕು.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ವಿರೋಧ ವ್ಯಕ್ತಪಡಿಸಿದವು. ವಿರೋಧ ವ್ಯಕ್ತವಾದಾಗ ಅದನ್ನು ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿಯಿತು. ಸೆಸ್ ಚಿತ್ರರಂಗಕ್ಕೆ ಹೊರೆಯಾಗುವ ನಿರ್ಧಾರ. ಈ ಬಗ್ಗೆಯೂ ಸರ್ಕಾರ ಪುನರ್ ಪರಿಶೀಲನೆ ನಡೆಸಲಿ. ಟಿಕೆಟ್ ಮೇಲೆ ಸೆಸ್ ವಿಧಿಸುವುದರ ಬದಲಾಗಿ ಬೇರೆ ರೂಪದಲ್ಲಿ ಹಣ ಸಂಗ್ರಹಿಸಿ ಕಾರ್ಮಿಕರ ಹಿತರಕ್ಷಣೆಗೆ ಬಳಸಿಕೊಳ್ಳಲಿ. ಯಾವುದೇ ಕಾರಣಕ್ಕೂ ಕನ್ನಡ ಚಿತ್ರಗಳ ಟಿಕೆಟ್ ಮೇಲೆ ಸೆಸ್ ವಿಧಿಸಬಾರದು.
ನನಗೊಂದು ವಚನ ನೆನಪಾಗುತ್ತಿದೆ.
ಗಂಡ ಸತ್ತಿಹನು, ಅತ್ತೆ ಅರೆಹುಚ್ಚಿ
ಮಾವಂಗೆ ಇಳಿವಯವು, ನಾದಿನಿ ಅಳಿಮನದವಳು
ಮನೆಯಾಳು, ಕೊಳ್ಳೆ ಹೊಡೆಯುವ ಕಳ್ಳ
ರೂಪವೆಂಬುದಕೆ ಕೊರತೆ ಇಲ್ಲ;
ಗಂಡ ಸತ್ತಿಹನೆಂದು ಕಂಡ ಕಂಡವರ ಕಣ್ಣು, ಇಂತಿಪ್ಪ ಎನ್ನಿರುಹು
ನಾನಾವ ಠಾವಿನಲಿ ಬದುಕಲಿ ಹೇಳ
ಎನ್ನ ವರಗುರು ಶಿವಕುಮಾರ ಪ್ರಭುವೆ?
ನಮ್ಮ ಪರಿಸ್ಥಿತಿಯೂ ಇದೇ ಆಗಿದೆ.
****
ಉಮೇಶ್ ಬಣಕಾರ್
-ಲೇಖಕ: ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ
-ನಿರೂಪಣೆ: ಅಭಿಲಾಷ್ ಪಿ.ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.