ಮಹಿಳಾ ಸಬಲೀಕರಣಕ್ಕೆ ಪೂರಕವೇ?

7
ಮಹಿಳೆಯರನ್ನು ಧಾರ್ಮಿಕ ಕೇಂದ್ರಗಳತ್ತ ಸೆಳೆಯಲು ಅನುವು ಮಾಡಿಕೊಡುವ ಇಂಥ ತೀರ್ಪಿನಿಂದ ಮಹಿಳೆಯರಿಗೆ ಆಗುವ ಲಾಭವೇನು?

ಮಹಿಳಾ ಸಬಲೀಕರಣಕ್ಕೆ ಪೂರಕವೇ?

Published:
Updated:

ಹತ್ತು ವರ್ಷ ಮೇಲ್ಪಟ್ಟು, 50 ವರ್ಷ ವಯಸ್ಸಿನೊಳಗಿನ ಮಹಿಳೆಯರಿಗೆ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದೊಳಗೆ ಪ್ರವೇಶಿಸಲು ಇದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ‘ಭಕ್ತಿಗೆ ಪುರುಷ ಮತ್ತು ಮಹಿಳೆ ಎಂಬ ಲಿಂಗಭೇದ ಇರುವುದಿಲ್ಲ. ಅದು ಅಸಾಂವಿಧಾನಿಕ ನಡೆ’ ಎಂದು ಕೋರ್ಟ್‌ ಸಾರಿದೆ.

‘ದೈಹಿಕ ಕಾರಣಗಳಿಗೆ ದೇವಸ್ಥಾನದ ಪ್ರವೇಶವನ್ನು ನಿರಾಕರಿಸುವುದು ಸಂಪ್ರದಾಯದ ಅಗತ್ಯ ಭಾಗವಾಗಬೇಕೆಂದೇನೂ ಇಲ್ಲ. ಇದು ಪುರುಷಪ್ರಧಾನ ಚಿಂತನೆಯನ್ನು ಎತ್ತಿತೋರಿಸುತ್ತಿದೆ’ ಎಂದು ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. ‘ಮುಟ್ಟಿನಕಾರಣಕ್ಕೆ ಮಹಿಳೆಯರ ದೇವಾಲಯ ಪ್ರವೇಶವನ್ನು ನಿರ್ಬಂಧಿಸುವುದು ಮಾನವೀಯತೆಗೆ ವಿರುದ್ಧವಾದುದು’ ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ಹೇಳಿದ್ದಾರೆ.

ಲಿಂಗತಾರತಮ್ಯಕ್ಕೆ ಒಳಗಾಗುತ್ತಾ ಬಂದಿರುವಮಹಿಳೆಯರ ಸಮಾನತೆಯ ಹಕ್ಕನ್ನು ಈ ತೀರ್ಪು ಎತ್ತಿಹಿಡಿದಿದೆ ಎಂಬುದು ನಿಜ. ಆದರೆ ಮಹಿಳೆಯರ ಒಟ್ಟಾರೆ ಅಭಿವೃದ್ಧಿ, ಏಳ್ಗೆಗೆ ಈ ತೀರ್ಪಿನಿಂದ ಲಾಭವಾಗಿದೆಯೇ ಎಂಬ ಬಗ್ಗೆ ಚಿಂತಿಸಬೇಕಾಗಿದೆ.

ನೂರಾರು ವರ್ಷಗಳಿಂದ ಧರ್ಮದ ಹೆಸರಿನಲ್ಲಿ ಮಹಿಳೆಯನ್ನು ಎರಡನೇ ದರ್ಜೆಯ ಪ್ರಾಣಿಯಂತೆ ನಡೆಸಿಕೊಂಡು ಬರಲಾಗುತ್ತಿದೆ. ‘ದೇವದಾಸಿ ಪದ್ಧತಿ’ಯ ಹೆಸರಿನಲ್ಲಿ ಹಲವು ದಶಕಗಳ ಕಾಲ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಶೋಷಣೆ ಮಾಡಲಾಯಿತು. ಸತಿ ಸಹಗಮನದ ಹಿಂದೆ ಇದ್ದುದೂ ಧಾರ್ಮಿಕ ಮನಸ್ಸುಗಳೇ. ಅದೆಷ್ಟೋ ಧಾರ್ಮಿಕ ಆಚರಣೆಗಳು, ಪದ್ಧತಿಗಳು ಹೊಸ ಹೊಸ ರೂಪ ಪಡೆದುಕೊಂಡು ಜೀವಂತವಾಗಿ ಉಳಿದು ಮಹಿಳೆಯರ ಅಸ್ಮಿತೆಗೆ ಧಕ್ಕೆ ಉಂಟುಮಾಡುತ್ತಲೇ ಇವೆ. ಹೀಗಿರುವಾಗ ಮಹಿಳೆಯರನ್ನು ಧಾರ್ಮಿಕ ಕೇಂದ್ರಗಳತ್ತ ಸೆಳೆಯಲು ಅನುವು ಮಾಡಿಕೊಡುವ ಇಂಥ ತೀರ್ಪಿನಿಂದ ಆಗುವ ಲಾಭವೇನು?

ಸಮಾನತೆಯ ಹೆಸರಿನಲ್ಲಿ ಅಂಧಕಾರದತ್ತ ಹೆಣ್ಣನ್ನು ಕರೆದೊಯ್ಯುವ ಯಾವುದೇ ನಡೆಯೂ ಆಘಾತಕಾರಿಯಾದುದೇ. ಮಠ– ಮಂದಿರಗಳಲ್ಲಿ, ತೀರ್ಥಸ್ಥಳಗಳಲ್ಲಿ, ಆಶ್ರಮಗಳಲ್ಲಿ ಹೆಣ್ಣಿನ ಲೈಂಗಿಕ ಶೋಷಣೆಯಾಗುತ್ತಿರುವ ಸುದ್ದಿಗಳು ದಿನನಿತ್ಯ ಎಂಬಂತೆ ಬರುತ್ತಿವೆ. ಹೀಗೆ ಶೋಷಣೆ ಮಾಡಿರುವ ಕೆಲವರು ಈಗ ಜೈಲುಪಾಲಾಗಿದ್ದಾರೆ. ಈ ಹಿನ್ನೆಲೆಯನ್ನಿಟ್ಟು ನೋಡಿದಾಗ ನ್ಯಾಯಮೂರ್ತಿ ಇಂದೂ
ಮಲ್ಹೋತ್ರಾ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಸರಿ ಎನ್ನಿಸುತ್ತದೆ. ‘ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಅಧಿಕಾರದ ನಡುವಿನ ಘರ್ಷಣೆ ಉಂಟಾಗಿದ್ದು, ಧರ್ಮಕ್ಕೆ ಯಾವುದು ಅವಶ್ಯಕ ಎಂಬುದನ್ನು ನಿರ್ಧರಿಸುವ ಹಕ್ಕು ನ್ಯಾಯಾಲಯಕ್ಕಿಲ್ಲ. ಹಾಗೆಯೇ ನಮ್ಮ ರಾಷ್ಟ್ರ ಬಹುಧರ್ಮೀಯರಿಂದ ಕೂಡಿದ್ದು, ಜಾತ್ಯತೀತ ವ್ಯವಸ್ಥೆಯ ಸಂರಕ್ಷಣೆಗೆ ಮುಂದಾಗಬೇಕೇ ವಿನಾ ಯಾವ ಧಾರ್ಮಿಕ ಆಚರಣೆ ಬೇಕು ಅಥವಾ ಬೇಡ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ’ ಎಂದು ಅವರು ಹೇಳಿದ್ದಾರೆ.

ನಮ್ಮ ಸಂವಿಧಾನವು ನಾಗರಿಕರ ಕರ್ತವ್ಯಗಳ ಬಗ್ಗೆ ಉಲ್ಲೇಖಿಸುತ್ತಾ, ‘ವೈಜ್ಞಾನಿಕ ವಿಚಾರಗಳನ್ನು ಪ್ರಚುರಪಡಿಸುವುದು, ಮಾನವತಾವಾದ ಮತ್ತು ತನಿಖಾ, ಸುಧಾರಣಾ ಮನೋವೃತ್ತಿಯನ್ನು ಸ್ವಯಂ ಪ್ರೇರಣೆಯಿಂದ ಅಳವಡಿಸಿಕೊಳ್ಳುವುದು ನಾಗರಿಕರ ಕರ್ತವ್ಯ’ ಎಂದಿದೆ. ಹೀಗಿರುವಾಗ ಮೂಢನಂಬಿಕೆಯನ್ನು ಪೋಷಿಸುವ ಕೇಂದ್ರಗಳಿಗೆ ಮಹಿಳೆಯರಿಗೆ ಪ್ರವೇಶ ಕೊಡುವಂಥ ತೀರ್ಪಿನಿಂದ ಮಹಿಳೆಯರು ಹಿಗ್ಗಬೇಕೇ?

ಸುಪ್ರೀಂ ಕೋರ್ಟ್ ತೀರ್ಪು ಬಂದಮೇಲೆ ಮಹಿಳೆಯರು ಶಬರಿಮಲೆ ದೇವಾಲಯದೊಳಗೆ ಪ್ರವೇಶ ಪಡೆಯಬಹುದು. ಆದರೆ ಇದರಿಂದ ಮಹಿಳೆಗೆ ಸಮಾಜದಲ್ಲಿ ಸಮಾನ ಗೌರವ, ಸ್ಥಾನಮಾನ ಲಭಿಸುವುದು ಸಾಧ್ಯವಿಲ್ಲ. ಬದಲಿಗೆ ಮಹಿಳೆಯರು ಲಾಭಕೋರರಿಗೆ ದಾಳವಾಗಬಹುದೇನೋ ಎಂಬ ಆತಂಕ ಹುಟ್ಟುವಂತಾಗಿದೆ.

-ಲಕ್ಷ್ಮಿ ಆರ್‌. ನಾಗವಾರ, ಬೆಂಗಳೂರು

ಸಂಪ್ರದಾಯ ಮಾಡುವವರೂ...

ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ವಿರೋಧಿಸಿ ಒಂದು ಗುಂಪು ಕೇರಳ ಮತ್ತು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಹೊರಟಿದೆ. ‘ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಮುರಿಯಲಾಗುತ್ತಿದೆ’ ಎಂಬುದು ಈ ಗುಂಪಿನವರು ಬಲವಾಗಿ ಮಂಡಿಸುವ ವಾದ. ಇಂಥವರಿಗೆ ಒಂದು ದೃಷ್ಟಾಂತವನ್ನು ಹೇಳಬೇಕು...

1943ರ ಒಂದು ಮಳೆಗಾಲ. ಕುಂಭ ದ್ರೋಣವಾಗಿ ಸುರಿವ ಮಳೆಗೆ ನಮ್ಮೂರ ತೊರೆ, ದಡ ಮೀರಿ ಹರಿದಿತ್ತು. ಬಯಲು– ಗದ್ದೆಗಳೆಲ್ಲ ಕೆಂಪುನೀರಿನಿಂದ ಮುಳುಗಿದ್ದವು. ಇಂತಹ ಮಳೆಯ ನಡುವೆ ತುಂಬಿದ ಬಸುರಿಯೊಬ್ಬಳಿಗೆ ಚೊಚ್ಚಲ ಹೆರಿಗೆ ನೋವು ಕಾಣಿಸಿತು. ಆಕೆಯ ಹೆಸರು ಗುಲಾಬಿ ಸೆಡ್ತಿ. ಅವಳ ಮನೆ ‘ಧೂಮಾವತಿ’ ದೈವದ ಚಾವಡಿ ಮನೆಯೂ ಆಗಿತ್ತು. ಸಂಪ್ರದಾಯದ ಪ್ರಕಾರ ಅಲ್ಲಿ ಹೆರಿಗೆಯಾಗುವಂತಿಲ್ಲ. ಅಲ್ಲಿ ಮಾತ್ರವಲ್ಲ, ಆ ಗುತ್ತು ಮನೆಯ ಕೊಟ್ಟಿಗೆಯಲ್ಲಾಗಲೀ ಒಕ್ಕಲು ಮನೆಗಳಲ್ಲಾಗಲೀ ಹೆರಿಗೆಯಾಗುವಂತಿಲ್ಲ.
ತೊರೆಯ ಆಚೆ ದಡದಲ್ಲಿರುವ ಒಕ್ಕಲು ಮನೆಯಲ್ಲಿ ಮಾತ್ರ ಹೆರಿಗೆಗೆ ಅವಕಾಶ. ಇದು ಪದ್ಧತಿ– ಸಂಪ್ರದಾಯ.

ಜುಮಾದಿ ಭೂತ ಕೂಡಾ ಬಹಳ ಕ್ರಿಯಾಶೀಲ. ಹೀಗಾಗಿ ಸಂಪ್ರದಾಯ ಮುರಿಯಲು ಮನಸ್ಸಿದ್ದವರಿಗೂ ‘ಧೂಮಾವತಿ’ಯ ಭಯ! ಬಸುರಿ ಗುಲಾಬಿಯ ತಾಯಿ, ನಾಗಿ ಸೆಡ್ತಿಗೆ ದಿಕ್ಕೇ ತೋಚಲಿಲ್ಲ. ಅದೇನನ್ನಿಸಿತೋ, ಧೂಮಾವತಿಯ ಚಾವಡಿಗೆ ಬಸುರಿಯನ್ನು ಕರೆದೂ
ಕೊಂಡು ಹೋದರು. ಮುಚ್ಚಿದ ಧೂಮಾವತಿ ದೈವದ ಕೋಣೆಯ ಮುಂದೆ ಬಸುರಿಯನ್ನು ನಿಲ್ಲಿಸಿ ಪ್ರಾರ್ಥಿಸಿದರು, ‘ನೀನು ನಮ್ಮನ್ನು ರಕ್ಷಿಸುವ ದೈವ. ಇಲ್ಲಿ ಎಲ್ಲೂ ಹೆರಿಗೆಯಾಗಬಾರದು. ಆದರೆ, ತೊರೆಯ ಆಚೆ ದಡಕ್ಕೆ ಹೋಗಲು ಸಾಧ್ಯವಿಲ್ಲ. ತೊರೆ ತುಂಬಿ ಹರಿಯುತ್ತಿದೆ. ಹೀಗಾಗಿ ನಾನು ಇದೇ ನಿನ್ನ ಕ್ಷೇತ್ರದಲ್ಲಿ ಇರುವ ಕೊಟ್ಟಿಗೆಯಲ್ಲಿ ನನ್ನ ಮಗಳ ಹೆರಿಗೆಗೆ ಸಿದ್ಧತೆ ಮಾಡುತ್ತೇನೆ. ನೀನು
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು (ಈ ಮಾತುಗಳು ಅವರದ್ದೇ)’ ಎಂದು ಹೇಳಿ ಕೈಮುಗಿದು ಚಾವಡಿ ಇಳಿದು ಹಟ್ಟಿಯ ಕಡೆಗೆ ನಡೆದರಂತೆ. ಸುಖಪ್ರಸವವಾಯಿತು. ಗಂಡು ಮಗು (ಈಗ ಮುಂಬೈಯಲ್ಲಿ ಇದ್ದಾರೆ).

ಅಂದಿನಿಂದ ಬೇರೆ ಬೇರೆ ಕವಲುಗಳ ಕುಟುಂಬ ಸದಸ್ಯರು ತಮ್ಮ ಮಕ್ಕಳ ಹೆರಿಗೆಯನ್ನೂ ಕೊಟ್ಟಿಗೆಯಲ್ಲಿಯೇ ಮಾಡಿಸತೊಡಗಿದರು. 1949ರಲ್ಲಿ ನಾನೂ ಅದೇ ಕೊಟ್ಟಿಗೆಯಲ್ಲಿ ಜನಿಸಿದೆ. ಇದು ನನ್ನ ಎಳತ್ತೂರು ಗುತ್ತು ಮನೆಯ ದೃಷ್ಟಾಂತ.

ಕೋರ್ಟ್‌ ತೀರ್ಪನ್ನು ವಿರೋಧಿಸಿ, ಪ್ರತಿಭಟನೆ ನಡೆಸಲು ಹೊರಟಿರುವವರು ಒಂದು ಮಾತನ್ನು ನೆನಪಿನಲ್ಲಿಡಬೇಕು. ‘ಸಂಪ್ರದಾಯವನ್ನು ಮಾಡುವವನೂ ಮುರಿಯುವವನೂ ಮನುಷ್ಯನೇ!’

-ಡಾ.ಇಂದಿರಾ ಹೆಗ್ಗಡೆ, ಮಂಗಳೂರು

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !