‘ಕರ್ನಾಟಕದ ಅರಣ್ಯಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳ ಒಳಗೆ ಸಾಕುಪ್ರಾಣಿಗಳನ್ನು ಮೇಯಲು ಬಿಡುವುದನ್ನು ನಿರ್ಬಂಧಿಸಲು ಮತ್ತು ನಿಷೇಧಿಸಲು ನಿಯಮಾನುಸಾರ ಕ್ರಮವಹಿಸಿ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ‘ಹೊರರಾಜ್ಯದ ದನಗಳನ್ನು ಮೇಯಿಸುವುದಕ್ಕೆ ಮಾತ್ರ ಈ ನಿಷೇಧ ’ ಎಂದು ಅಸಂಬದ್ಧವಾಗಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಹೊರರಾಜ್ಯದ ದನಗಳನ್ನು ಮೇಯಿಸುವುದಕ್ಕೆ ಮಾತ್ರ ನಿಷೇಧ ಎಂದಾಗಿದ್ದರೆ, ಎಲ್ಲೆಲ್ಲಿ ಈ ರೀತಿ ಹೊರ ರಾಜ್ಯಗಳಿಂದ ದನಗಳನ್ನು ತಂದು ಮೇಯಿಸಲಾಗುತ್ತಿದೆಯೋ ಅಲ್ಲಿ ಅದನ್ನು ತಡೆಯಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಡ್ಡಿಯಾಗಿದ್ದಾದರೂ ಯಾರು? ಅಧಿಕಾರಿಗಳಿಗೆ ಇದನ್ನು ತಡೆಯಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೆ ಸಾಕಿತ್ತಲ್ಲವೇ? ಅದನ್ನು ಬಿಟ್ಟು ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳ ಒಳಗೆ ‘ಸಾಕುಪ್ರಾಣಿಗಳನ್ನು ಮೇಯಲು ಬಿಡುವುದನ್ನು ನಿರ್ಬಂಧಿಸಲು ಮತ್ತು ನಿಷೇಧಿಸಲು ನಿಯಮಾನುಸಾರ ಕ್ರಮವಹಿಸಿ’ ಎಂದು ಸೂಚನೆ ನೀಡಿದ್ದಾದರೂ ಏಕೆ?

ಅರಣ್ಯ ಸಚಿವರು ಹೀಗೆ ಅಸಂಬದ್ಧ ಹೇಳಿಕೆಗಳನ್ನು ನೀಡಿ, ಕಾಡಿನೊಂದಿಗೆ ಸಂಬಂಧ ಹೊಂದಿರುವ ರಾಜ್ಯದ ರೈತರನ್ನು, ಗಿರಿಜನರನ್ನು ಆತಂಕಕ್ಕೆ ತಳ್ಳಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಕೂಡ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಇದೇ ರೀತಿಯ ಹೇಳಿಕೆ ನೀಡಿ, 2015ರ ನಂತರದ ಅರಣ್ಯ ಒತ್ತುವರಿ ತೆರವುಗೊಳಿಸಲಾಗುವುದು ಎಂದಿದ್ದರು. ಅದಕ್ಕಿಂತಲೂ ಮೊದಲು ಒತ್ತುವರಿ ಮಾಡಿಕೊಂಡವರನ್ನು ಸಕ್ರಮಗೊಳಿಸುವ ಅಧಿಕಾರವೇನೂ ಸಚಿವರಿಗಿರಲಿಲ್ಲ. ಒಟ್ಟಾರೆ ಒಂದು ಹೇಳಿಕೆ ನೀಡಿ ಸ್ಥಳೀಯರ ನಿದ್ರೆ ಕೆಡಿಸಿದ್ದರು.

ವಾಸ್ತವವಾಗಿ, ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ನಿಷೇಧಿಸುವುದು ಅವೈಜ್ಞಾನಿಕ, ಅವಾಸ್ತವಿಕ ಹಾಗೂ ಕಾನೂನಿನ ಬೆಂಬಲವಿಲ್ಲದ ಕ್ರಮ. ಆದರೂ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಈ ರೀತಿಯ ನಿಷೇಧಕ್ಕೆ ಅವಕಾಶವಿದೆ ಎಂದು ಸಚಿವರು ಹೇಳಿಕೆ ನೀಡಿ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ. ಈ ಕಾಯ್ದೆಯಲ್ಲಿ ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯಗಳಲ್ಲಿ ಮಾತ್ರ ಜಾನುವಾರುಗಳನ್ನು ಮೇಯಿಸಲು ನಿಷೇಧ ಮತ್ತು ನಿರ್ಬಂಧಗಳಿವೆ. ಅರಣ್ಯಗಳಲ್ಲಿ ಜಾನುವಾರು ಮೇಯಿಸುವಂತಿಲ್ಲ ಎಂದು ಎಲ್ಲೂ ಹೇಳಿಲ್ಲ. ಆದರೆ, 2006ರ ಅರಣ್ಯ ಹಕ್ಕು ಕಾಯ್ದೆಯು ಬುಡಕಟ್ಟು ನಿವಾಸಿಗಳಿಗೆ, ಅರಣ್ಯವಾಸಿಗಳಿಗೆ ಈ ಅಧಿಸೂಚಿತ ಅರಣ್ಯಗಳಲ್ಲಿಯೂ ಜಾನುವಾರುಗಳನ್ನು ಸಾಕಲು, ಮೇಯಿಸಲು ಅವಕಾಶ ನೀಡಿದೆ. ಹೀಗಿರುವಾಗ ಸಚಿವರು ‘ನಗರವಾಸಿ ಪರಿಸರವಾದಿ’ಗಳ ಮಾತು ಕೇಳಿಕೊಂಡು ಅರಣ್ಯದಲ್ಲಿ ಜಾನುವಾರು ಮೇಯಿಸುವಂತಿಲ್ಲ ಎಂದು ಆದೇಶ ಹೊರಡಿಸಿರುವುದು ಎಷ್ಟು ಸರಿ?

ಸಚಿವರ ಈ ಆದೇಶ ಕಾಡಿನೊಂದಿಗೆ ಬೆರೆತು ಬದುಕುವ ಮತ್ತು ಕಾಡಿನೊಂದಿಗೆ ಸಂಬಂಧ ಹೊಂದಿರುವ, ಹೈನುಗಾರಿಕೆಯೊಂದಿಗೆ ಬದುಕು ಕಟ್ಟಿಕೊಂಡಿರುವ ಸಾವಿರಾರು ರೈತ ಕುಟುಂಬಗಳ ಬದುಕನ್ನು ಅಭದ್ರಗೊಳಿಸುವಂತಹದ್ದು. ಮದ್ರಾಸ್ ಕೋರ್ಟ್ ಹೇಳಿದೆ, ಇನ್ನೆಲ್ಲಿಯದೋ ಕೋರ್ಟ್ ಹೇಳಿದೆ ಎಂದು ಮಾಹಿತಿ ಪಡೆದುಕೊಂಡು ತಮ್ಮ ಕ್ರಮ ಸಮರ್ಥಿಸಿಕೊಳ್ಳುವ ಸಚಿವರಿಗೆ ನಮ್ಮ ರಾಜ್ಯದಲ್ಲಿ ರೈತರು ಹೇಗೆ ಬದುಕು ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಇಲ್ಲವೇ?

ಅರಣ್ಯ ಸಚಿವರು ನೀಡಿರುವ ಆದೇಶ ಮತ್ತು ಅದನ್ನು ಸಮರ್ಥಿಸಿಕೊಳ್ಳುತ್ತಿರುವ ರೀತಿ ಅವರಿಗೆ ಅರಣ್ಯ ಸಂಪತ್ತಿನ ಬಗ್ಗೆಯಾಗಲೀ, ಜನ ಜೀವನದ ಬಗ್ಗೆಯಾಗಲೀ ತಳಮಟ್ಟದ ತಿಳಿವಳಿಕೆ ಇಲ್ಲ ಎಂಬುದನ್ನು ಎತ್ತಿತೋರಿಸುತ್ತಿದೆ. ‘ಜಾನುವಾರುಗಳಿಂದ ಅರಣ್ಯ ನಾಶವಾಗುತ್ತದೆ’ ಎಂದು ‘ನಗರ ಪರಿಸರವಾದಿಗಳು’ ಮಾತ್ರ ಊಹೆ ಮಾಡಲು ಸಾಧ್ಯ. ಇದಕ್ಕೆ ಯಾವ ಸಮರ್ಥನೆಯೂ ಇಲ್ಲ. ಸಚಿವರು ಕಾಡಿನೊಂದಿಗೆ ಬದುಕುತ್ತಿರುವ ಅರಣ್ಯವಾಸಿಗಳು ಮತ್ತು ರೈತರ ಬದುಕನ್ನು ಹತ್ತಿರದಿಂದ ನೋಡಿದ್ದಲ್ಲಿ, ಅರಣ್ಯ ಸಂಪತ್ತಿನ ಮತ್ತು ವನ್ಯಜೀವಿಗಳ ಅವನತಿಗೆ ಕಾರಣಗಳೇನು ಎಂಬುದನ್ನು ಸಮಗ್ರವಾಗಿ ಅಧ್ಯಯನ ನಡೆಸಿದ್ದಲ್ಲಿ ಈ ರೀತಿಯ ಕ್ರಮಕ್ಕೆ ಮುಂದಾಗುತ್ತಿರಲಿಲ್ಲ.

ಸಚಿವರ ಸಮರ್ಥನೆ ಎಷ್ಟು ಅಸಂಬದ್ಧವಾಗಿದೆ ಎಂದರೆ, ರೈತರಿಗೆ ಹೆಚ್ಚು ಹಾಲು ನೀಡುವ ಹೈಬ್ರೀಡ್ ಹಸುಗಳನ್ನು ಕೊಡಿಸಿ, ಜಾನುವಾರುಗಳು ಮೇಯಲು ಕಾಡಿಗೆ ಹೋಗುವುದನ್ನು ತಪ್ಪಿಸುತ್ತಾರಂತೆ. ನಮ್ಮ ದೇಶಿ ತಳಿಯ ಹಸುಗಳು ಕಾಡು ತಿಂದು, ನಾಡನ್ನೂ ಉದ್ಧಾರ ಮಾಡದ ಜಾತಿಯವು ಎಂದು ಸಚಿವರು ತೀರ್ಮಾನಿಸಿದಂತಿದೆ. ಎಲ್ಲರಿಗೂ ಗೊತ್ತಿರುವಂತೆ ಮಲೆನಾಡಿನಲ್ಲಿ ಗಿಡ್ಡ ತಳಿಯ ಹಸುಗಳನ್ನೇ ಸಾಕುವುದು ಹೆಚ್ಚು. ಇವು ಜಾಸ್ತಿಯೇನೂ ಹಾಲು ಕೊಡುವುದಿಲ್ಲ. ಆದರೆ, ಮಲೆನಾಡಿನ ಥಂಡಿಗೆ ಬರುವ ಕಾಯಿಲೆ-ಕಸಾಲೆಗಳನ್ನು ಇವು ಎದುರಿಸಬಲ್ಲವು. ಅವುಗಳನ್ನು ಕಟ್ಟಿ ಸಾಕಿದರೆ ಸಂತತಿ ಉಳಿಯುವುದಿಲ್ಲ. ಸಚಿವರ ಪ್ರಕಾರ, ನಾವು ಮಲೆನಾಡಿಗರು ಈ ಕಡಿಮೆ ಹಾಲು ಕೊಡುವ ತಳಿಯನ್ನು ಬಿಟ್ಟು, ಹೆಚ್ಚು ಹಾಲು ಕೊಡುವ ಜೆರ್ಸಿ ಹಸುಗಳನ್ನು ಸಾಕಬೇಕು. ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ಸಚಿವರು ಈ ಆದೇಶದ ಮೂಲಕ ಜಾನುವಾರುಗಳ ವೈವಿಧ್ಯವನ್ನೇ ನಾಶ ಮಾಡಲು ಮುಂದಾಗಿರುವುದು ದುರದೃಷ್ಟಕರ. ಹೋಗಲಿ, ಸಚಿವರು ಕಾರ್ಪೊರೇಟ್ ಕಂಪನಿಗಳು ನೀಡುವ ದುಡ್ಡು ತಂದು, ನಮಗೆಲ್ಲಾ ಜಾಸ್ತಿ ಹಾಲು ಕೊಡುವ ಹಸು ಕೊಡಿಸುತ್ತಾರೆ ಎಂದೇ ಇಟ್ಟುಕೊಳ್ಳೋಣ. ಅವರು ಹೇಳಿದ ಹಾಗೆ ನಾವು ಅವುಗಳನ್ನು ಕಟ್ಟಿಯೇ ಸಾಕುತ್ತೇವೆ. ಆದರೆ ಈ ಕುರಿ-ಮೇಕೆ ಸಾಕುವವರನ್ನು ಸಚಿವರು ಏನು ಮಾಡುತ್ತಾರೆ?

1980ರ ಅರಣ್ಯ ಸಂರಕ್ಷಣಾ ಕಾಯ್ದೆಯಲ್ಲಿ ಒಂದು ಎಕರೆ ಜಾಗದಲ್ಲಿ ಒಂಬತ್ತು ಮರಗಳಿದ್ದರೂ (ಒಂದು ಹೆಕ್ಟೇರ್ನಲ್ಲಿ 25 ಮರ) ಅದು ‘ಅರಣ್ಯ’ ಎಂದು ಭಾಷ್ಯ ಬರೆಯಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಕೂಡ ಒಪ್ಪಿಗೆ ನೀಡಿದೆ. ಇದರಿಂದಾಗಿ ಮಲೆನಾಡಿನ ಮತ್ತು ಅರೆಮಲೆನಾಡಿನ ಯಾವ ಜಾಗವನ್ನಾದರೂ ಅರಣ್ಯ ಎಂದು ಪರಿಗಣಿಸಬಹುದು. ಹೀಗಾದರೆ ಇನ್ನು ಮುಂದೆ ಕುರಿಗಾಹಿಗಳು ಕುರಿ-ಮೇಕೆಗಳನ್ನು ಎಲ್ಲಿ ಮೇಯಿಸಬೇಕು? ಈ ಆದೇಶ ಕುರಿಗಾಹಿ ಜನಾಂಗವನ್ನೇ ನಾಶ ಮಾಡಬಹುದು ಎಂಬ ಅರಿವಾದರೂ ಸಚಿವರಿಗಿದೆಯೇ? ‘ಮೈಸೂರು ಹುಲಿ’ ಖ್ಯಾತಿಯ ಟಿಪ್ಪು ಸುಲ್ತಾನನ ಕಾಲದಲ್ಲಿ ಹಳ್ಳಿಕಾರ್ ಹಸು ತಳಿಯ ರಕ್ಷಣೆಗಾಗಿ ಸಾವಿರಾರು ಎಕರೆ ಹುಲ್ಲುಗಾವಲನ್ನು ಮೀಸಲಿಡಲಾಗಿತ್ತು. ಈಗ ನೋಡಿದರೆ ಜಾನುವಾರುಗಳ ಓಡಾಟವನ್ನೇ ನಿಷೇಧಿಸಲು ಸಚಿವರು ಮುಂದಾಗಿದ್ದಾರೆ. ಮಹಾನಗರ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ವಾಹನಗಳನ್ನೇ ನಿಷೇಧಿಸಲಾಗುತ್ತದೆಯೇ?

ಹಿಂದೆ ‘ಕುದುರೆಮುಖ ರಾಷ್ಟ್ರೀಯ ಉದ್ಯಾನ’ ಯೋಜನೆ ಘೋಷಣೆಯಾದಾಗಲೂ ಸ್ಥಳೀಯ ಅರಣ್ಯಾಧಿಕಾರಿಗಳು ಇದೇ ರೀತಿಯಾಗಿ ಕಾಡಿನಲ್ಲಿ ಜಾನುವಾರು ಮೇಯಿಸುವಂತಿಲ್ಲ ಎಂದು ಕರಪತ್ರಗಳನ್ನು ಹಂಚಿ, ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದರು. ಈಗ ಸಚಿವರು ಇದೇ ರೀತಿಯಾಗಿ ವರ್ತಿಸಿದ್ದಾರೆ. ಜಾನುವಾರುಗಳಿಂದ ಯಾವ ಪ್ರಮಾಣದಲ್ಲಿ ನಮ್ಮ ಅರಣ್ಯ ಸಂಪತ್ತು ನಾಶವಾಗುತ್ತಿದೆ, ಈಗಾಗಲೇ ಎಷ್ಟು ನಾಶವಾಗಿದೆ ಎಂಬ ಬಗ್ಗೆ ಸರ್ಕಾರದ ಬಳಿ ವರದಿಗಳೇನಾದರೂ ಇದ್ದರೆ ಅದನ್ನು ಬಹಿರಂಗಪಡಿಸಿ, ಚರ್ಚೆಗೆ ಅವಕಾಶ ಮಾಡಿಕೊಡಲಿ. ಅದನ್ನು ಬಿಟ್ಟು ಹೀಗೆ ಏಕಾಏಕಿ ನಿಷೇಧ ಹೇರುವುದು ಪ್ರಜಾತಾಂತ್ರಿಕ ಕ್ರಮ ಅಲ್ಲ.

ಪಶ್ಚಿಮಘಟ್ಟ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಮಾಡಲು, ಅನಗತ್ಯವಾಗಿ ರಸ್ತೆ ವಿಸ್ತರಣೆ ಮಾಡಲು ಸಾವಿರಾರು ಮರಗಳನ್ನು ಕಡಿಯಲಾಗುತ್ತಿದೆ. ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿದ್ದರೂ ಲೆಕ್ಕಿಸದೆ, ಜೋಗದಲ್ಲಿನ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನೂರಾರು ಎಕರೆ ಅರಣ್ಯವನ್ನು ಬಲಿ ಕೊಡಲಾಗುತ್ತಿದೆ; ಎಲ್ಲೆಂದರಲ್ಲಿ ರೆಸಾರ್ಟ್ಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟು, ಅರಣ್ಯ ನಾಶ ಮಾಡಲಾಗುತ್ತಿದೆ. ಜತೆಗೆ, ಹೊಸ ಹೊಸ ಅಣೆಕಟ್ಟುಗಳನ್ನು ನಿರ್ಮಿಸಿ, ಅರಣ್ಯ ಮುಳುಗಿಸುವ ಯೋಚನೆಯೂ ಸರ್ಕಾರದ ಮುಂದಿದೆ. ಹೀಗೆ ಹೇಳುತ್ತಾ ಹೋದರೆ, ಸರ್ಕಾರ ಹಿಂದೆ-ಮುಂದೆ ಯೋಚಿಸದೇ ಅರಣ್ಯ ನಾಶ ಮಾಡುತ್ತಿರುವುದಕ್ಕೆ ಲೆಕ್ಕವೇ ಇಲ್ಲ. ಇಂತಹ ಸರ್ಕಾರವು ಈಗ ಜಾನುವಾರುಗಳು ಮೇಯ್ದರೆ ಅರಣ್ಯ ನಾಶವಾಗುತ್ತದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ.

ಕಾಡಿನ ಆಹಾರ ಸರಪಣಿಯಲ್ಲಿ ಯಾವುದು ಹೆಚ್ಚಾದರೂ ಒಳ್ಳೆಯದಲ್ಲ. ಜಿಂಕೆಗಳ ಹಿಂಡು ಜಾಸ್ತಿಯಾದರೆ, ಹುಲ್ಲಿರಲಿ, ಅದರ ಬೇರೂ ಉಳಿಯುವುದಿಲ್ಲ. ಈಗ ನಮ್ಮ ಅರಣ್ಯ ಇಲಾಖೆ ಅನುಸರಿಸುತ್ತಿರುವ ಪಾಶ್ಚಿಮಾತ್ಯ ಶೈಲಿಯ ಅರಣ್ಯ ಸಂರಕ್ಷಣಾ ಕ್ರಮಗಳಿಂದ ಕಾಡಿನಂಚಿನಲ್ಲಿ ಜನರು, ರೈತರು ಬದುಕಲು ಸಾಧ್ಯವೇ ಆಗದಂತಹ ಸ್ಥಿತಿ ನಿರ್ಮಾಣವಾಗುತ್ತಿದ. ಆನೆಗಳ ವಾಸವೇ ಇಲ್ಲದ ನಮ್ಮ ಮಲೆನಾಡಿನಲ್ಲಿ ಈ ವರ್ಷ ಆನೆ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. ವನ್ಯಜೀವಿ ಮತ್ತು ಮನುಷ್ಯರ ನಡುವಿನ ಸಂಘರ್ಷ ದಿನೇ ದಿನೇ ತಾರಕಕ್ಕೇರುತ್ತಿದೆ. ಇದನ್ನು ಬಗೆಹರಿಸುವ ದಿಸೆಯಲ್ಲಿ ಯೋಚಿಸಬೇಕಾಗಿದ್ದ ಅರಣ್ಯ ಇಲಾಖೆ, ಜಾನುವಾರುಗಳನ್ನು ಮೇಯಿಸಬೇಡಿ, ಏಡಿ ಹಿಡಿಯಬೇಡಿ, ಮಂಗ ಓಡಿಸಬೇಡಿ ಎಂದುಕೊಂಡು ಕುಳಿತಿದೆ.

ಒಟ್ಟಾರೆಯಾಗಿ ಸಚಿವರು ಈ ಆದೇಶದ ಮೂಲಕ, ಅರಣ್ಯ ವಾಸಿಗಳಿಗೆ, ಅರಣ್ಯದಂಚಿನ ರೈತರಿಗೆ ಕಿರುಕುಳ ನೀಡುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮತ್ತೊಂದು ಅಸ್ತ್ರವನ್ನು ನೀಡಿದ್ದಾರೆ, ಅಷ್ಟೇ. ಜಗತ್ತಿನ ಯಾವ ಮೂಲೆಯಲ್ಲಿಯೂ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೇ, ಅವರ ಬೆಂಬಲವಿಲ್ಲದೇ ಯಾವುದೇ ಅರಣ್ಯ ಸಂರಕ್ಷಣಾ ಯೋಜನೆ ಯಶಸ್ವಿಯಾಗಿಲ್ಲ. ಅರಣ್ಯ ಸಂರಕ್ಷಣೆ ಎಂಬುದು ಇಲಾಖೆಯ ನಾಲ್ಕಾರು ಅಧಿಕಾರಿಗಳು, ಬೆರಳೆಣಿಕೆಯಷ್ಟಿರುವ ಸಿಬ್ಬಂದಿ ಮಾತ್ರ ಮಾಡುವ ಕೆಲಸವಲ್ಲ. ಇಂದು ಇಷ್ಟಾದರೂ ಅರಣ್ಯವಿದೆ ಎಂದರೆ ಅದಕ್ಕೆ ಸ್ಥಳೀಯರೇ ಕಾರಣ ಎಂಬುದನ್ನು ಸಚಿವರು ಮರೆಯಲೇಬಾರದು. ಹೊರಗಿನವರು ಬಂದು ಕಾಡು ಕಡಿಯದಂತೆ, ಕಾಡಿಗೆ ಬೆಂಕಿ ಬೀಳದಂತೆ ಕಾದುಕೊಂಡೇ ಬಂದಿರುವ, ಈಗಾಗಲೇ ಕಾಡು ಪ್ರಾಣಿಗಳ ದಾಳಿಯಿಂದ ಕಂಗೆಟ್ಟಿರುವ ರೈತಾಪಿ ವರ್ಗಕ್ಕೆ ಸರ್ಕಾರದ ತೀರ್ಮಾನದಿಂದ ಇನ್ನಷ್ಟು ಕಿರುಕುಳ ನೀಡಿದಂತಾಗಲಿದೆ.

ಸಚಿವರು ಈ ಆದೇಶ ಹೊರಡಿಸಿರುವುದು, ಅದನ್ನು ಸಮರ್ಥಿಸಿಕೊಳ್ಳುವಾಗ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದು ಮತ್ತು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ತಪ್ಪಾಗಿ ಪ್ರಸ್ತಾಪಿಸಿದ್ದನ್ನು ನೋಡಿದರೆ, ಇದರ ಹಿಂದೆ ಅರಣ್ಯದೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಸಂಸ್ಕೃತಿಯೊಂದನ್ನು ನಾಶಮಾಡುವ ಹುನ್ನಾರವಿರುವುದು ಸ್ಪಷ್ಟವಾಗುತ್ತಿದೆ.

ಮಲೆನಾಡಿಗರ ದುರದೃಷ್ಟವೋ, ದುರ್ದೈವವೋ ಗೊತ್ತಿಲ್ಲ; 80ರ ದಶಕದ ನಂತರ ಮಲೆನಾಡು ಭಾಗದವರು ಯಾರೂ ಅರಣ್ಯ ಸಚಿವರಾಗಿಲ್ಲ. ಹೀಗಾಗಿ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ತಲೆ-ಬುಡವಿಲ್ಲದ ಯೋಜನೆಗಳು, ಕ್ರಮಗಳು ಜಾರಿಯಾಗಿದ್ದೇ ಹೆಚ್ಚು. ಅರಣ್ಯ ಮತ್ತು ಸ್ಥಳೀಯ ಜನರನ್ನು ಬೇರೆ ಬೇರೆಯಾಗಿ ನೋಡಿ, ಬೇರೆ ಬೇರೆಯಾಗಿಯೇ ಅಭಿವೃದ್ಧಿ ಕ್ರಮಗಳನ್ನು ಜಾರಿಗೆ ತರುತ್ತಿರುವುದರಿಂದ ಅರಣ್ಯದೊಂದಿಗೆ ಒಂದಾಗಿ ಬದುಕುತ್ತಿದ್ದ ಜನರು ಈಗ ಸಂಘರ್ಷ ಮಾಡಿಕೊಂಡು ಬದುಕುವಂತಾಗಿದೆ. ಇದು ಹೀಗೆಯೇ ಮುಂದುವರಿದರೆ ಇಡೀ ಪಶ್ಚಿಮಘಟ್ಟ ಪ್ರದೇಶ ರೈತರಿಲ್ಲದ, ಸ್ಥಳೀಯ ಜನಜೀವನ, ಸಂಸ್ಕೃತಿ ಇಲ್ಲದ, ಪ್ರವಾಸಿಗರಿಂದ ಮಾತ್ರ ತುಂಬಿ ತುಳುಕುವ ಪ್ರದೇಶವಾಗುವ ದಿನ ದೂರವಿಲ್ಲ.

ಲೇಖಕ: ಪರಿಸರ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.