ಗುರುವಾರ , ಜೂನ್ 17, 2021
21 °C
ದೇಶದ ಪ್ರಧಾನಿಯನ್ನು ಯಾರೂ ಪ್ರಶ್ನಿಸುವಂತಿಲ್ಲವೇ?

ಚರ್ಚೆ | ಪ್ರಶ್ನಾತೀತ ಪ್ರಧಾನಿ ದೇಶದ ಹಿತಕ್ಕೆ ಹಾನಿ: ಕೃಷ್ಣ ಬೈರೇಗೌಡ

ಕೃಷ್ಣ ಬೇರೇಗೌಡ Updated:

ಅಕ್ಷರ ಗಾತ್ರ : | |

Prajavani

ಪ್ರಧಾನಿ ಪ್ರಶ್ನಾತೀತರೂ ಅಲ್ಲ, ಹಾಗೆ ಆಗಲೂಬಾರದು. ಅದರಿಂದ ಜನಹಿತ ಮತ್ತು ಪ್ರಜಾಪ್ರಭುತ್ವ ಕ್ಷೀಣಿಸುತ್ತದೆ. ಅಂಧ ಸರ್ವಾಧಿಕಾರ ಬೆಳೆಯುತ್ತದೆ. ಅದು ದೇಶಕ್ಕೆ ಹಾನಿ. ಪ್ರಧಾನಿಯನ್ನು ಅಥವಾ ಸರ್ಕಾರವನ್ನು ಪ್ರಶ್ನಿಸುವುದು ದೇಶದ ಬಗ್ಗೆ ನೈಜ ಕಾಳಜಿ ಹೊಂದಿರುವ ಭಾರತೀಯನ ಹಕ್ಕು ಹಾಗೂ ಕರ್ತವ್ಯ. ಇದರಿಂದ ದೇಶ ಮತ್ತಷ್ಟು ಬಲಿಷ್ಠ, ಸದೃಢ ಅಭಿವೃದ್ಧಿಯನ್ನು ಸಾಧಿಸಬಹುದು

ನಿಜ, ‘ಪ್ರಜಾಪ್ರಭುತ್ವ ಒಂದು ಕೆಟ್ಟ ಆಡಳಿತ ವ್ಯವಸ್ಥೆ. ಆದರೆ ಅದು ಇಲ್ಲಿಯವರೆಗೂ ಕಂಡಂತಹ ಇತರ ಎಲ್ಲಾ ಆಡಳಿತ ವ್ಯವಸ್ಥೆಗಳಿಗಿಂತ ಉತ್ತಮವಾದ ವ್ಯವಸ್ಥೆ’ ಎಂಬುದು ಎಲ್ಲಾ ಅನುಭವಸ್ಥರ ಮಾತು.

ಪ್ರಜಾಪ್ರಭುತ್ವ ಎಂದರೆ ಐದು ವರ್ಷಕ್ಕೆ ಒಮ್ಮೆ ಮತ ಚಲಾಯಿಸುವುದಷ್ಟೆ ಅಲ್ಲ. ಚುನಾಯಿತ ಸರ್ಕಾರದ ನೀತಿ, ನಿಯಮ ಕಾರ್ಯವೈಖರಿಗಳನ್ನು ಮಾಧ್ಯಮ, ವಿಪಕ್ಷಗಳು, ಜನರು ನಿರ್ಭೀತಿಯಿಂದ ವಿಶ್ಲೇಷಣೆ ಮಾಡಿ, ಅಗತ್ಯವಾದಾಗ ಟೀಕೆ, ಸಲಹೆ ನೀಡಿ ತಪ್ಪುಗಳನ್ನು ತಿದ್ದಿದರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯು ಜನರಿಗೆ  ಒಳ್ಳೆ ಆಡಳಿತ ನೀಡುತ್ತದೆ. ಚುನಾವಣೆ ಮೂಲಕ ಆಯ್ಕೆ ಆದರೆ ಅಷ್ಟೇ ಸಾಕು ಎಂಬುದು ಸರಿಯಲ್ಲ– ಹಿಟ್ಲರ್ ಸಹ ಚುನಾವಣೆಯಲ್ಲಿ ಆಯ್ಕೆ ಆಗಿದ್ದರು ಎಂಬುದನ್ನು ನಾವು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಅಧಿಕಾರಕ್ಕೆ ಇತಿಮಿತಿ ಇಲ್ಲದಿದ್ದರೆ, ಸರ್ವಾಧಿಕಾರ ಬೆಳೆಯುತ್ತದೆ, ದೇಶ ಅವನತಿ ಕಾಣುತ್ತದೆ.

ಓದಿ: ಚರ್ಚೆ | ‘ಪ್ರಶ್ನಾತೀತರು’ ಎಂಬ ಭ್ರಮೆ ಇಲ್ಲ: ವಿ. ಸುನಿಲ್‌ ಕುಮಾರ್

ಹಾಗಾಗಿಯೇ ನಮ್ಮ ಸಂವಿಧಾನವು ಎಲ್ಲ ಭಾರತೀಯರಿಗೆ ಮೂಲಭೂತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ.

‘ಲಸಿಕೆ ರಫ್ತು ಮಾಡಿದ್ದು ಏಕೆ?’ ಎಂದು ಭಿತ್ತಿಪತ್ರ ಹಾಕಿದ್ದಕ್ಕೆ 25 ಭಾರತೀಯರ ಮೇಲೆ 2-3 ತರಹದ ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಯಿತು. ಈ ಪ್ರಕರಣವನ್ನು ನೋಡಿದರೆ, ನಾವು ಪ್ರಜಾಪ್ರಭುತ್ವ ಭಾರತದಲ್ಲಿದ್ದೇವೆಯೇ? ಸಂವಿಧಾನಾತ್ಮಕ, ಕಾನೂನು ಆಧಾರಿತ ಆಡಳಿತವೇ ಇದು ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಈ ಪ್ರಶ್ನೆಗೆ, ‘ಭಿತ್ತಿಪತ್ರ ಹಾಕಿದವರು ದೆಹಲಿಯ ಅಂದ ಕೆಡಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಕಾನೂನು ಮತ್ತು ಲಾಕ್‍ಡೌನ್‍ನಲ್ಲಿ ಒಡಾಡಬಾರದೆಂಬ ನಿಯಮವನ್ನು ಉಲ್ಲಂಘಿಸಿದ್ದಾರೆ’ ಎಂಬುದು ಪೊಲೀಸರ ಸಮರ್ಥನೆ. ಇದಕ್ಕಿಂತ ಹಾಸ್ಯಾಸ್ಪದ ನೆಪ ಮತ್ತೊಂದಿರಲಿಕ್ಕಿಲ್ಲ. ಸಿನಿಮಾ, ರಾಜಕೀಯ ಮತ್ತು ನಾನಾ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದ ಕೋಟ್ಯಂತರ ಭಿತ್ತಿಪತ್ರಗಳು ದೆಹಲಿಯ ಗೋಡೆಗಳಲ್ಲಿ ಇವೆ. ಎಷ್ಟು ಕೇಸುಗಳು ದಾಖಲಾಗಿವೆ? ದೇಶವೇ ಕೋವಿಡ್ ಮಹಾಮಾರಿಯಿಂದ ಪರಿತಪಿಸುತ್ತಿರುವಾಗ, ಪೊಲೀಸರಿಗೆ ಪೋಸ್ಟರ್ ಹಚ್ಚಿದವರ ಮೇಲೆ ಕೇಸು ಹಾಕುವುದಕ್ಕಿಂತ ಉಪಯುಕ್ತ ಕೆಲಸ ಬೇರೆ ಏನೂ ಇಲ್ಲವೆ?

ನಿಜವಾದ ಕಾರಣ: ಸರ್ಕಾರದ ಲಸಿಕೆ ನೀತಿ ಮತ್ತು ಲಸಿಕೆ ಕೊರತೆ ವಿಷಯ ಪ್ರಶ್ನಿಸಿದ್ದನ್ನು ಪ್ರಧಾನಿ ಮತ್ತು ಅವರ ಗೃಹ ಸಚಿವರಿಗೆ ಸಹಿಸಲಾಗಿಲ್ಲ. ಹಾಗಾಗಿಯೇ ಇದು ಘೋರಾಪರಾಧ. ಅದಕ್ಕಾಗಿ ಒಬ್ಬೊಬ್ಬರ ಮೇಲೂ 2-3 ತರಹದ ಕೇಸು. ಪ್ರಧಾನಿ ಅಥವಾ ಸರ್ಕಾರದ ನೀತಿಗಳನ್ನು ಯಾರೇ ಪ್ರಶ್ನಿಸಿದರೂ ಅವರನ್ನು ಅಪರಾಧಿಗಳು, ದೇಶದ್ರೋಹಿಗಳು ಅಥವಾ ಭಯೋತ್ಪಾದಕರು ಎಂದು ಬಿಂಬಿಸಿ, ತರಹೇವಾರಿ ಕೇಸುಗಳನ್ನು ಹಾಕುವ ಪರಿಪಾಟ 2014 ರಿಂದಲೂ (ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನಗಳಿಂದ) ನಡೆದಿದೆ. ನೈಜ ಪ್ರಶ್ನೆಗಳಿಗೆ ದೇಶ ಭಕ್ತಿಯ ಟೀಕೆ ಎಂಬ ಹಣೆಪಟ್ಟಿ ಕಟ್ಟಿದರೆ, ಆ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿಯಿಂದ ಸಲೀಸಾಗಿ ತಪ್ಪಿಸಿಕೊಳ್ಳಬಹುದು. ಜೊತೆಗೆ ಪ್ರಶ್ನೆ ಕೇಳಿದ ಪ್ರಜ್ಞಾವಂತ ಪ್ರಜೆಯನ್ನು ದೇಶದ್ರೋಹಿ ಎಂದು ಬ್ರ್ಯಾಂಡ್ ಮಾಡಿ, ಅವರನ್ನು ಒಂದಷ್ಟು ಬೈದರೆ, ಇನ್ನೊಂದಷ್ಟು ವೋಟು ಗಿಟ್ಟಿಸಬಹುದು. ಇದರಿಂದ ದುಪ್ಪಟ್ಟು ಲಾಭ.

ಬಿಜೆಪಿ, ಆ ಪಕ್ಷದ ನಿಷ್ಠಾವಂತರ ಪಡೆ, ಆಯ್ದ ‘ಮಾಧ್ಯಮ’ಗಳು, ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಯ ಜತೆಗೆ ಸರ್ಕಾರಿ ಸಂಸ್ಥೆಗಳ ದುರುಪಯೋಗದ ಮೂಲಕ ಈ ಕೆಲಸವನ್ನು ಕಳೆದ ಏಳು ವರ್ಷಗಳಿಂದ ಮಾಡುತ್ತಿವೆ. ದೆಹಲಿಯಲ್ಲಿ ಇತ್ತೀಚೆಗೆ ದಾಖಲಾದ ಪ್ರಕರಣ ಒಂದು ಉದಾಹರಣೆ ಅಷ್ಟೇ. ಕಳೆದ ಏಳು ವರ್ಷಗಳಲ್ಲಿ ಇವರನ್ನು ಪ್ರಶ್ನಿಸಿದವರ ಮೇಲೆ ದೇಶದ್ರೋಹ, ಭಯೋತ್ಪಾದನೆ ತಡೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಹೀಗೆ ಸಾವಿರಾರು ಭಾರತೀಯರ ಮೇಲೆ ನಾನಾ ಕಾಯ್ದೆ ಅಡಿ ಹಾಕಿರುವ ಕೇಸುಗಳನ್ನು ಲೆಕ್ಕ ಹಾಕಲಿಕ್ಕೆ ಸಾಧ್ಯವಿಲ್ಲ. ಅತ್ಯಂತ ಗಂಭೀರವಾದ ದೇಶದ್ರೋಹ ಪ್ರಕರಣಗಳದ್ದು ಮಾತ್ರ ಅಂಕಿ ಅಂಶ ಕಲೆ ಹಾಕಲಾಗಿದೆ. 2010ರಿಂದ 2020ರ ನಡುವೆ ದಾಖಲಾಗಿರುವ ದೇಶದ್ರೋಹ ಪ್ರಕರಣಗಳ ಪೈಕಿ ಶೇ 96ರಷ್ಟು 2014ರ ನಂತರ ದಾಖಲಾಗಿವೆ. ಇವೆಲ್ಲವೂ ಸರ್ಕಾರ ಮತ್ತು ರಾಜಕಾರಣಿಗಳನ್ನು ಟೀಕಿಸಿದ್ದಕ್ಕೆ ದಾಖಲಿಸಲಾಗಿರುವ ಪ್ರಕರಣಗಳು. 

2020ರವರೆಗೆ, ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರ ವಿರುದ್ಧ 149 ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಅವರನ್ನು ಟೀಕಿಸಿದ್ದರ ವಿರುದ್ಧ 144 ಪ್ರಕರಣಗಳು ದಾಖಲಾಗಿವೆ. ‘ಟೀಕೆಯು ದೇಶದ್ರೋಹ ಅಲ್ಲವೇ ಅಲ್ಲ’ ಎಂದು ಸುಪ್ರೀಂ ಕೋರ್ಟ್‌ ಪದೇ ಪದೇ ಹೇಳುತ್ತಲೇ ಇದೆ. ಬಿಜೆಪಿ ಸರ್ಕಾರಗಳು ಮಾತ್ರ ದೇಶದ್ರೋಹ ಪ್ರರಕಣಗಳನ್ನು ಎಡೆಬಿಡದೆ ದಾಖಲಿಸುತ್ತಲೇ ಇವೆ.

ಇವುಗಳೊಂದಿಗೆ ತರಹೇವಾರಿ ಕಾನೂನುಗಳ ಅಡಿ ದಾಖಲಾಗಿರುವ ಬೋಗಸ್ ಕೇಸುಗಳಿಗೆ ಲೆಕ್ಕವೇ ಇಲ್ಲ. 2016ರಿಂದ 2019ರ ನಡುವೆ ದೇಶದ್ರೋಹ ಪ್ರಕರಣಗಳ ‍ಪ್ರಮಾಣ ಶೇ 160ರಷ್ಟು ಏರಿಕೆ ಕಂಡಿವೆ. ಇದೇ ಅವಧಿಯಲ್ಲಿ ಈ ಮೊಕದ್ದಮೆಗಳು ನ್ಯಾಯಾಲಯಗಳಲ್ಲಿ ರುಜುವಾತು ಆದ ಪ್ರಮಾಣ ಶೇ 33.3ರಿಂದ  ಶೇ 3.3ಕ್ಕೆ ಕುಸಿದಿದೆ. 100ಕ್ಕೆ 3 ಪ್ರಕರಣಗಳು ಮಾತ್ರ ಸಾಬೀತಾಗಿವೆ ಅಂದರೆ ಉಳಿದವು ಬಹುತೇಕ ಬೋಗಸ್ ದೂರುಗಳು. ಅವುಗಳ ಉದ್ದೇಶ ಜನರ ಬಾಯಿ ಮುಚ್ಚಿಸುವುದು. ಸರ್ಕಾರವನ್ನು ಪ್ರಶ್ನಾತೀತವಾಗಿ ಮಾಡುವುದು. ‘ಹೇಗೂ ಖುಲಾಸೆ ಆಗಿದೆಯಲ್ಲ ಬಿಡಿ’ ಎಂದು ಹೇಳುವ ಕೆಲವರು ಸಮಾಧಾನ ಪಡಿಸಲು ನೋಡಬಹುದು. ಆದರೆ ಕೇಸುಗಳನ್ನು ಹಾಕಿಸಿಕೊಂಡು, ಜಾಮೀನು ಸಿಗದೆ ಸೆರೆವಾಸ ಅನುಭವಿಸಿ, ವರ್ಷಾನುಗಟ್ಟಲೆ ಕೋರ್ಟ್‌ ಸುತ್ತಿ, ಸಂಪಾದನೆ ಕಳೆದುಕೊಂಡ ಮೇಲೆ, ವಾಕ್ ಸ್ವಾತಂತ್ರ್ಯವನ್ನು  ಮರೆತು, ಬಾಯಿ ಮುಚ್ಚಿಕೊಂಡು ಬದುಕೋದು ಲೇಸು ಅಂತ ಎಂಥವರಿಗೂ ಅನ್ನಿಸುತ್ತದೆ. ಅವರನ್ನು ನೋಡುವವರಿಗೂ ‘ಬಾಯಿ ಮುಚ್ಚಿ, ಇಲ್ಲಾ ಅಂದರೆ...’ ಅನ್ನೋ ಸ್ಪಷ್ಟ ಸಂದೇಶ ತಾನೇ ತಾನಾಗಿ ಹೋಗಿರುತ್ತದೆ. 

ಹಾಗಾಗಿ, ಎಲ್ಲಿ ಉಳಿಯಿತು ಸಂವಿಧಾನಬದ್ಧ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ? ಆಳುವ ಸರ್ಕಾರಗಳು ಏನು ಏಡವಟ್ಟು ಮಾಡಿದರೂ ಪ್ರಶ್ನೆ ಮಾಡುವವರು ಇಲ್ಲವಾದರೆ, ‘ದೊರೆಯ ಬಟ್ಟೆ ಏಲ್ಲಾ ಕಳಚಿ ಹೋಗಿದ್ದರೂ ದೊರೆಯ ಪೋಷಾಕುಗಳನ್ನು ಹಾಡಿ ಹೊಗಳುವುದಷ್ಟೆ’ ಉಳಿದವರ ಘನ ಕಾರ್ಯ. ಇನ್ನು ಆ ರಾಜನ ರಾಜ್ಯದ ಪರಿಸ್ಥಿತಿ ಏನಾಗಬೇಕು? ಅದಕ್ಕಾಗಿಯೇ ಸರ್ಕಾರವನ್ನು ನಿರಂತರ ವಿಮರ್ಶೆಗಳಿಗೆ ಒಳಪಡಿಸಬೇಕು, ಸಲಹೆ ನೀಡಬೇಕು, ತಪ್ಪುಗಳನ್ನು ತೋರಿಸಿ, ತಿದ್ದಬೇಕು. ಆಗ ಮಾತ್ರ ದೇಶದ
ಅಭಿವೃದ್ಧಿ ಸಾಧ್ಯ.

ದಿಶಾರವಿ ಪ್ರಕರಣದಲ್ಲಿ ನ್ಯಾಯಾಲಯ ಹೀಗೆ ಹೇಳಿದೆ: ‘ಸರ್ಕಾರದ ಒಣ ಪ್ರತಿಷ್ಠೆ ರಕ್ಷಣೆಗಾಗಿ ಇರೋದಲ್ಲ ದೇಶದ್ರೋಹ ಕಾನೂನು... ಪ್ರಶ್ನೆ ಮಾಡಿದರೆ ಪೌರರನ್ನು ಜೈಲಿಗೆ ಹಾಕುವುದಕ್ಕೆ ಆಗುವುದಿಲ್ಲ’.  ‘ಜನರು ಅವರ ಸಮಸ್ಯೆಯನ್ನು ಹೇಳಿಕೊಳ್ಳುವುದರ ಮೇಲೆ ನಿರ್ಬಂಧ ಹೇರಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆ. ಜನ ತಪ್ಪು ಹೇಳುತ್ತಿದ್ದಾರೆ ಎಂದು ಭಾವಿಸದೆ, ಅವರ ಧ್ವನಿಗೆ ಮುಕ್ತ ಅವಕಾಶ ನೀಡಿ, ಆಲಿಸಿ!’ ಎಂದು ಸುಪ್ರೀಂ ಕೋರ್ಟ್‌ ಇದೇ ಏಪ್ರಿಲ್ 30ರಂದು ಹೇಳಿದೆ.  ಆದರೂ ಇವು ಯಾವುವನ್ನೂ ಲೆಕ್ಕಿಸದೆ ಕೇಸುಗಳನ್ನು ಹಾಕಿ ಜನಧ್ವನಿಯನ್ನು ಅಡಗಿಸುವ, ಜನರನ್ನು ಹೆದರಿಸುವ ಕಾರ್ಯ 2014ರಿಂದ ಇಂದಿನವರೆಗೂ ನಡೆದೇ ಇದೆ.

ಪ್ರಧಾನಿ ಪ್ರಶ್ನಾತೀತರೂ ಅಲ್ಲ, ಹಾಗೆ ಆಗಲೂಬಾರದು. ಅದರಿಂದ  ಜನಹಿತ ಮತ್ತು ಪ್ರಜಾಪ್ರಭುತ್ವ ಕ್ಷೀಣಿಸುತ್ತದೆ. ಅಂಧ ಸರ್ವಾಧಿಕಾರ ಬೆಳೆಯುತ್ತದೆ. ಅದು ದೇಶಕ್ಕೆ ಹಾನಿ. ಪ್ರಧಾನಿಯನ್ನು ಅಥವಾ ಸರ್ಕಾರವನ್ನು ಪ್ರಶ್ನಿಸುವುದು ದೇಶದ ಬಗ್ಗೆ ನೈಜ ಕಾಳಜಿ ಹೊಂದಿರುವ ಭಾರತೀಯನ ಹಕ್ಕು ಹಾಗೂ ಕರ್ತವ್ಯ. ಇದರಿಂದ ದೇಶ ಮತ್ತಷ್ಟು ಬಲಿಷ್ಠ, ಸದೃಢ ಅಭಿವೃದ್ಧಿಯನ್ನು ಸಾಧಿಸಬಹುದು.

- ಲೇಖಕ: ಕಾಂಗ್ರೆಸ್ ಶಾಸಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು