ಮಂಗಳವಾರ, ಡಿಸೆಂಬರ್ 7, 2021
23 °C

ಪ್ರಜಾವಾಣಿ ಚರ್ಚೆ | ಖಾಸಗೀಕರಣ: ಕುರುಡು ಕಾಂಚಾಣದ ರುದ್ರ ನರ್ತನ

ಪಿ.ವಿ.ಲೋಕೇಶ್ Updated:

ಅಕ್ಷರ ಗಾತ್ರ : | |

Prajavani

ಈ ಬಾರಿಯ ಕೇಂದ್ರ ಬಜೆಟ್ ಅಧಿವೇಶನದಲ್ಲಿ, ಜೀವ ವಿಮಾ ನಿಗಮ ಕಾಯ್ದೆ-1956ಕ್ಕೆ 27 ತಿದ್ದುಪಡಿಗಳನ್ನು ಮಾಡಲಾಯಿತು. ಶೇ 100ರಷ್ಟು ಸರ್ಕಾರಿ ಮಾಲೀಕತ್ವದ ಎಲ್ಐಸಿಯ ಷೇರುಗಳನ್ನು ಖಾಸಗಿಯವರಿಗೆ ಐ.ಪಿ.ಒ. ಮೂಲಕ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ, ಷೇರು ಮಾರುಕಟ್ಟೆಯಲ್ಲಿ ನೋಂದಣಿ ಮಾಡುವ ಉದ್ದೇಶದಿಂದ ಎಲ್‌ಐಸಿಯನ್ನು ಕಂಪನಿ ಮತ್ತು ಸೆಬಿ ಕಾನೂನುಗಳ ವ್ಯಾಪ್ತಿಗೆ ತರಲಾಗಿದೆ. ಇದು ದೇಶದಾದ್ಯಂತ ಚರ್ಚೆಗೊಳಗಾಗಿದೆ.

ಎಲ್ಐಸಿಯು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬಂಡವಾಳ ಸಂಗ್ರಹಿಸುವುದಕ್ಕೆ, ಆಂತರಿಕ ಲೆಕ್ಕ ಪತ್ರಗಳನ್ನು ಪಾರದರ್ಶಕ ಗೊಳಿಸುವುದಕ್ಕೆ, ತನ್ನ ಸೇವಾ ದಕ್ಷತೆ ಹೆಚ್ಚಿಸುವುದಕ್ಕೆ, ಪಾಲಿಸಿದಾರರ ಹಿತಾಸಕ್ತಿ ವೃದ್ಧಿಗೆ, ಕಾರ್ಯವಿಸ್ತರಣೆಗೆ, ಆಸ್ತಿ ಮೌಲ್ಯ ಹೆಚ್ಚಳಕ್ಕೆ ಆ ಮೂಲಕ ದೇಶದ ಅಭಿವೃದ್ಧಿ ಕಾರ್ಯಕ್ಕೆ ಹೂಡಿಕೆ ಹೆಚ್ಚಿಸುವುದಕ್ಕೆ ಈ ತಿದ್ದುಪಡಿಯಿಂದ ಸಾಧ್ಯ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.

ಇದನ್ನು ವಿರೋಧಿಸುವವರ ವಾದ ಅರ್ಥವಾಗಬೇಕಾದರೆ ಎಲ್ಐಸಿಯ ಗಾತ್ರ, ಸ್ಥಾನ, ಪಾತ್ರ, ವ್ಯಾಪ್ತಿ, ಕೊಡುಗೆ ಮತ್ತು ಸಾಮರ್ಥ್ಯಗಳನ್ನು ತಿಳಿದುಕೊಳ್ಳಬೇಕು. ಆಗ ದೇಶದ ಆರ್ಥಿಕ ಸ್ವಾವಲಂಬನೆ, ಸಾರ್ವಭೌಮತ್ವದ ಹಿನ್ನೆಲೆಯಲ್ಲಿ ಈ ಖಾಸಗೀಕರಣದ ಆಪಾಯ ಅರಿವಾಗುತ್ತದೆ.

1956ರಲ್ಲಿ ಕೇಂದ್ರ ಸರ್ಕಾರ ಸಣ್ಣ ಪುಟ್ಟ 154 ಖಾಸಗಿ ವಿಮಾ ಕಂಪನಿಗಳು, 16 ವಿದೇಶಿ ಕಂಪನಿಗಳು, 75 ಪ್ರಾವಿಡೆಂಟ್ ಕಂಪನಿಗಳನ್ನು ರಾಷ್ಟ್ರೀಕರಣ ಮಾಡಿ ‘ಜನರ ದುಡ್ಡು ಜನರ ಕಲ್ಯಾಣಕ್ಕೆ’ ಎಂಬ ಘೋಷಣೆಯೊಂದಿಗೆ ₹5 ಕೋಟಿ ಬಂಡವಾಳದಿಂದ ಎಲ್‌ಐಸಿಯನ್ನು ಆರಂಭಿಸಿತು. 

ಎಲ್ಐಸಿಯ ಬ್ರ್ಯಾಂಡ್‌ ಮೌಲ್ಯ ಚೀನಾದ ಪಿಂಗ್ಯಾಂಗ್, ಚೀನಾ ಲೈಫ್ ವಿಮಾ ಕಂಪನಿಗಳಿಗಿಂತ ಹೆಚ್ಚು. ವಿಶ್ವದ ಟಾಪ್-10 ಬ್ರ್ಯಾಂಡ್‌ ಮೌಲ್ಯ ಹೊಂದಿರುವ ವಿಮಾ ಕಂಪನಿಗಳಲ್ಲಿ ಎಲ್ಐಸಿ ಸಹ ಒಂದು. ಈ ಸಂಸ್ಥೆಯು ಸುಮಾರು 30 ಲಕ್ಷಕ್ಕಿಂತ ಹೆಚ್ಚಿನ ಫೀಲ್ಡ್ ಏಜೆಂಟರು ಮತ್ತು ಸುಮಾರು 1.25 ಲಕ್ಷಕ್ಕಿಂತ ಹೆಚ್ಚು ಜನರಿಗೆ ನೇರ ಉದ್ಯೋಗ ನೀಡಿದೆ.

ಎಲ್ಐಸಿಯು ಪ್ರತಿ ವರ್ಷ ಸರಾಸರಿ ₹3 ಲಕ್ಷ ಕೋಟಿಯಿಂದ ₹4 ಲಕ್ಷ ಕೋಟಿಯನ್ನು ಸರ್ಕಾರದ ಬಾಂಡ್, ಡಿಬೆಂಚರ್ ಇತ್ಯಾದಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದೆ. ದೇಶದ ಗೃಹ ನಿರ್ಮಾಣ, ನೀರಾವರಿ, ರಸ್ತೆ ಅಭಿವೃದ್ಧಿ ಅಲ್ಲದೆ ವಿವಿಧ ಭದ್ರತೆಯಂತಹ ಸರ್ಕಾರಿ ಯೋಜನೆಗಳಿಗೆ ಒಟ್ಟು ₹24 ಲಕ್ಷ ಕೋಟಿ ಹೂಡಿಕೆಯು ಸೇರಿ, ಇದುವರೆಗೆ ದೇಶದ ಅಭಿವೃದ್ದಿಗೆ ₹31 ಲಕ್ಷ ಕೋಟಿ ರೂಗಳ ಹೂಡಿಕೆ ಮಾಡಿದೆ. ಸರ್ಕಾರದ ಇಂತಹ ಬೃಹತ್ ಉದ್ಯಮವು ಮಾರುಕಟ್ಟೆಯಲ್ಲಿ ಖಾಸಗಿ ಬಂಡವಾಳ ಸಂಗ್ರಹಕ್ಕೆ ಮುಂದಾಗುವುದು ಮೂರ್ಖತನ.

ಕೇಂದ್ರ ಸರ್ಕಾರದ ಐ.ಆರ್.ಡಿ.ಎ.ಐ ಎಂಬ ವಿಮಾ ಉಸ್ತುವಾರಿ ಸಂಸ್ಥೆಗೆ ಎಲ್ಲಾ ಖಾಸಗಿ ವಿಮಾ ಕಂಪನಿಗಳಂತೆ ಎಲ್ಐಸಿಯು ಸಹ ಪ್ರತಿ ತಿಂಗಳು ತನ್ನ ಆರ್ಥಿಕ ವಹಿವಾಟಿನ ವರದಿ ನೀಡುತ್ತಿದೆ. ಪ್ರತಿ 3 ತಿಂಗಳಿಗೊಮ್ಮೆ ತನ್ನ ವ್ಯವಹಾರದ ಸ್ಥಿತಿಗತಿಗಳ ಬಗ್ಗೆ ಸಾರ್ವಜನಿಕ ವರದಿ ಬಹಿರಂಗ ಪಡಿಸುತ್ತಿದೆ. ಮೇಲಾಗಿ ದೇಶದ ಸಂಸತ್ತಿನ ಪರಿಶೀಲನೆಗಾಗಿ ಪ್ರತಿ ವರ್ಷ ತನ್ನ ವರದಿ ಸಲ್ಲಿಸುತ್ತಿದೆ (ಖಾಸಗಿ ಕಂಪನಿಗಳಿಗೆ ಈ ನಿರ್ಬಂಧವಿಲ್ಲ). ಹೀಗಿದ್ದರೂ ಪಾರದರ್ಶಕತೆ ಇಲ್ಲವೆಂಬ ಸರ್ಕಾರದ ವಾದ ಹಾಸ್ಯಾಸ್ಪದ.

2001ರ ಸೆಪ್ಟಂಬರ್ 11ರಂದು ಭಯೋತ್ಪಾದಕ ದಾಳಿಗೆ ಡಬ್ಲ್ಯು.ಟಿ.ಒ. ಕಟ್ಟಡ ಧ್ವಂಸವಾಗಿ ಸತ್ತ ಸಾವಿರಾರು ಜನರಿಗೆ ಅಮೆರಿಕದ ಖಾಸಗಿ ವಿಮಾ ಕಂಪನಿಗಳು ವಿಮೆ ಪರಿಹಾರ ನಿರಾಕರಿಸಿದ್ದನ್ನು ನೋಡಿದ್ದೇವೆ. ಅದರೆ ಭಾರತದಲ್ಲಿ ಭೂಕಂಪ, ಪ್ರವಾಹ, ಸುನಾಮಿಗಳಂತಹ ಪ್ರಕೃತಿ ವಿಕೋಪದ ಸಾವುಗಳೂ ಸೇರಿದಂತೆ ಪಾಲಿಸಿದಾರರ ಎಲ್ಲಾ ರೀತಿಯ ಸಾವುಗಳಿಗೂ ಶೇ 99.86ರಷ್ಟು ಕ್ಲೇಮುಗಳನ್ನು ಎಲ್ಐಸಿ ಪಾವತಿಸಿದೆ. ಪಾಲಿಸಿದಾರರ ವಿಮಾ ಮೊತ್ತವನ್ನು ಕರಾರುವಕ್ಕಾಗಿ ಪಾವತಿಸಿದ ಜಗತ್ತಿನ ನಂ.1 ವಿಮಾ ಕಂಪನಿ ಎಂಬ ಹಿರಿಮೆ ಹೊಂದಿದೆ. ಮಾತ್ರವಲ್ಲ, ಅತ್ಯಂತ ನಂಬಿಕಸ್ಥ ಬ್ರ್ಯಾಂಡ್‌ (ಎಮ್.ಟಿ.ಬಿ.) ಗೋಲ್ಡನ್ ಪಿಕಾಕ್, ಮಾರ್ಗ್‌ಗಳಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಎಲ್‌ಐಸಿ, ಷೇರುಪೇಟೆಯಲ್ಲಿ ನೋಂದಿತವಾದ ಕಂಪನಿ ಆಗಿರಲಿಲ್ಲ ಎಂಬ ಸತ್ಯವನ್ನು ಸರ್ಕಾರ ಗಮನಿಸುವುದಿಲ್ಲ.

2022ರ ಆರಂಭದಲ್ಲಿ ಎಲ್ಐಸಿಯ ಶೇ 5ರಷ್ಟು ಷೇರುಗಳನ್ನು ಮಾರಾಟಕ್ಕಿಟ್ಟು (ಇದರಲ್ಲಿ ಶೇ 10ರಷ್ಟು ಪಾಲಿಸಿದಾರರಿಗೆ ಆದ್ಯತೆ) ನಂತರದ 5 ವರ್ಷಗಳಲ್ಲಿ ಶೇ 25ರಷ್ಟು ಮಾರಾಟ ಮಾಡಿ, 5 ವರ್ಷಗಳ ನಂತರ ಶೇ 49ರಷ್ಟು ಷೇರುಗಳನ್ನು ಮಾರಾಟ ಮಾಡುವುದು ಸರ್ಕಾರದ ಸದ್ಯದ ಪ್ರಸ್ತಾವ. 

ದೇಶದ 5.15 ಕೋಟಿ ಡಿಮ್ಯಾಟ್ ಖಾತೆದಾರರ ಪೈಕಿ ಕೇವಲ 1.89 ಕೋಟಿ ಖಾತೆಗಳು ಮಾತ್ರ ಸಕ್ರಿಯವಾಗಿವೆ. ದೇಶದಲ್ಲಿ ಶೇ 3ರಿಂದ 4ರಷ್ಟು ಜನಸಾಮಾನ್ಯರು ಷೇರು ಮಾರುಕಟ್ಟೆ ವ್ಯವಹಾರದಲ್ಲಿದ್ದಾರೆ (ರಿಟೇಲ್ ಹೂಡಿಕೆದಾರರು). ದೇಶದ ಷೇರು ಮಾರುಕಟ್ಟೆ ವ್ಯವಹಾರದ ಒಟ್ಟು ಮೊತ್ತದಲ್ಲಿ ಈ ಸಾಮಾನ್ಯ ಜನರ ಪಾಲು ಶೇ 4ರಷ್ಟು ಮಾತ್ರ. ಸರ್ಕಾರ ಎಲ್‌ಐಸಿ ಷೇರು ಮಾರಾಟದಿಂದ ನಿರೀಕ್ಷಿಸಿರುವ ಅಂದಾಜು ₹80 ಸಾವಿರ ಕೋಟಿಯನ್ನು ಈ ದೇಶೀಯ ರಿಟೇಲ್ ಹೂಡಿಕೆದಾರರು ಕೊಳ್ಳಲು ಶಕ್ತರಾಗಿದ್ದಾರೆಯೇ ಎಂದು ಖಾಸಗೀಕರಣದ ಪರವಾಗಿರುವ ಆರ್ಥಿಕ ತಜ್ಞರು ಶಂಕಿಸುತ್ತಿದ್ದಾರೆ. 

ಬಹುಶಃ ಇದನ್ನು ಗಮನಿಸಿಯೇ ಕೇಂದ್ರ ವಿತ್ತ ಸಚಿವಾಲಯವು ಸದ್ಯಕ್ಕೆ ಮಾರಾಟಕ್ಕೆ ಇಟ್ಟ ಎಲ್ಐಸಿಯ ಒಟ್ಟು ಐ.ಪಿ.ಒ.ಗಳಲ್ಲಿ ಅರ್ಧದಷ್ಟನ್ನು ಮಾತ್ರ ಷೇರು ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಚಿಸುತ್ತಿದೆ ಎಂಬ ಸುದ್ದಿಯು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಐಸಿಯ ಅರ್ಧದಷ್ಟು ಐ.ಪಿ.ಒ.ಗಳನ್ನಾದರೂ ಜಾಗತಿಕ ಷೇರು ಮಾರುಕಟ್ಟೆಗಳಾದ ಹಾಂಕಾಂಗ್, ಶಾಂಘೈ, ನ್ಯೂಯಾರ್ಕ್‌ಗಳಲ್ಲಿ ಲಿಸ್ಟಿಂಗ್ ಮಾಡಿಸಿ ವಿಶ್ವ ಮಾರುಕಟ್ಟೆಗೆ ಲಗ್ಗೆ ಇಡಬಾರದೇಕೇ? ಎಲ್ಐಸಿಗಿಂತ ಹಿಂದಿರುವ ಚೀನಾದ ವಿಮಾಕಂಪನಿಗಳೆಲ್ಲಾ ಈಗಾಗಲೇ ವಿದೇಶಿ ಷೇರು ಮಾರುಕಟ್ಟೆಯಲ್ಲಿರುವಾಗ ನಾವು ಸಹಾ ಅವರೊಟ್ಟಿಗೆ ಸ್ಪರ್ಧೆ ಮಾಡಬಹುದು ಎಂಬ ವಾದಗಳು ಬಲವಾಗಿ ಕೇಳಿಬರುತ್ತಿವೆ.

ಷೇರು ಮಾರುಕಟ್ಟೆಯಲ್ಲಿ ತೊಡಗಿರುವ ರಿಟೇಲ್ ಹೂಡಿಕೆದಾರರು ಎಲ್ಐಸಿಯ ಐ.ಪಿ.ಒ.ವನ್ನು ಕುತೂಹಲದಿಂದ ಕಾಯುತ್ತಿರಬಹುದು. ಏಕೆಂದರೆ ಸರ್ಕಾರ ಆರಂಭದಲ್ಲಿ ಬಿಡುಗಡೆ ಮಾಡಲಿರುವ ಒಟ್ಟು ಐ.ಪಿ.ಒ.ಗಳಲ್ಲಿ ಎಲ್.ಐ.ಸಿ. ಪಾಲಿಸಿದಾರರಿಗೆ ಶೇ 10ರಷ್ಟು ಆದ್ಯತೆ ನೀಡಿ, ಅದರ ಬೆಲೆಯಲ್ಲಿ ಶೇ 8-10ರಷ್ಟು ರಿಯಾಯಿತಿಯ ಕೊಡುಗೆಯನ್ನೂ ನೀಡುತ್ತಿದೆ. ಹಾಗಾಗಿ ರಿಟೇಲ್ ಹೂಡಿಕೆದಾರರು ಕೊಳ್ಳಲು ಮುಗಿಬೀಳಬಹುದು. ಆದರೆ ಮುಂದಿನ 5 ವರ್ಷಗಳಲ್ಲಿ ಮತ್ತು ನಂತರದ ವರ್ಷಗಳಲ್ಲಿ ಅಂತಿಮವಾಗಿ ಈ ಷೇರುಗಳು ಯಾರ ಕೈ ಸೇರಲಿವೆ ಎಂಬುದು ಮುಖ್ಯ. 135 ಕೋಟಿ ಜನರಿಗೆ ಸೇರಿದ ಈ ಆಸ್ತಿಯನ್ನೆಲ್ಲಾ ಶೇ 4ರಷ್ಟು ಜನರ ಮೂಲಕ ದೊಡ್ಡ ಕುಳಗಳ ಕೈ ಸೇರುವಂತೆ ಮಾಡುವುದೇ ಈ ಖಾಸಗೀಕರಣದ ಅಂತಿಮ ಉದ್ದೇಶ. ಅದಕ್ಕೆ ಎದುರಾಗಿ ಬೇಕಾಗಿರುವುದು ‘ದೇಶ ಮಾರಲು ಬಿಡುವುದಿಲ್ಲ’ ಎಂಬ ಪ್ರಬಲ ಪ್ರತಿರೋಧದ ಜನ ಸಂದೇಶ.

ಲೇಖಕ: ಸಿಪಿಐ ರಾಷ್ಟೀಯ ಮಂಡಳಿ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು