ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ| ಅದೃಶ್ಯ ಮತದಾರ ಪಾಠ ಕಲಿಸಲಿ: ಎಂ.ಸಿ. ನಾಣಯ್ಯ

Last Updated 8 ಜುಲೈ 2022, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ರಾಜಕೀಯ ಪಕ್ಷವೂ ಪಕ್ಷಾಂತರದ ಲಾಭ ಪಡೆಯುತ್ತಿದೆ. ಪಕ್ಷಾಂತರವು ಸ್ವಾರ್ಥಕ್ಕಾಗಿ ನಡೆಯುತ್ತಿದೆಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ. ಪಕ್ಷಾಂತರ ಸಂದರ್ಭದಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ಮಂತ್ರಿಗಳು, ಶಾಸಕರು ಹಾಗೂ ಅಧಿಕಾರಿ ವರ್ಗ ಸೇರಿದಂತೆ ಎಲ್ಲರೂ ಭಾಗಿಯಾಗುತ್ತಿದ್ದಾರೆ.

ತೋಳ್ಬಲ, ಹಣ ಬಲ, ಜಾತಿ ಬಲದ ಆಧಾರದ ಮೇಲೆ ನಡೆಯುವ ಪಕ್ಷಾಂತರ, ಪ್ರಜಾತಂತ್ರ ವ್ಯವಸ್ಥೆಯನ್ನೇ ಸಂಪೂರ್ಣ ಬುಡಮೇಲು ಮಾಡುವ ಅಪಾಯದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಯಾವ ಪಕ್ಷವೂ ಪ‍ಕ್ಷಾಂತರದ ಕಳಂಕದಿಂದ ಹೊರತಾಗಿಲ್ಲ.

ಪಕ್ಷಾಂತರ ನಿಷೇಧ ಕಾಯ್ದೆ ಬೇಕು ಎಂಬ ಬೇಡಿಕೆ ಮೊದಲು ಕೇಳಿ ಬಂದಿದ್ದು ಹರಿಯಾಣದಲ್ಲಿ. 1965ರಲ್ಲಿ ಪಕ್ಷೇತರರಾಗಿ ಗೆದ್ದು ಬಂದಿದ್ದ ದಯಾಲಾಲ್‌ ಎನ್ನುವವರು, ಒಂದೇ ದಿನದಲ್ಲಿ ಮೂರು ಪಕ್ಷಗಳನ್ನು ಬದಲಾಯಿಸುತ್ತಾರೆ. ಇದರಿಂದಾಗಿಯೇ, ‘ಆಯಾ ರಾಮ್‌ ಗಯಾ ರಾಮ್’ ಎನ್ನುವ ಮಾತು ಹುಟ್ಟಿಕೊಂಡಿತು.

ಪಕ್ಷಾಂತರದಿಂದಾಗಿ ದೇಶದ ಪ್ರಜಾತಂತ್ರ ವ್ಯವಸ್ಥೆಯೇ ಬುಡಮೇಲಾಗಬಹುದು ಎಂದು ಭಾವಿಸಿದ್ದ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು 1985ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು. ಆದರೆ, ಈ ಕಾಯ್ದೆಗೆ ಹಲ್ಲುಗಳಿಲ್ಲ. ಈ ಕಾಯ್ದೆಯನ್ನು ಬಳಸಿ ಯಾರನ್ನೂ ಅನರ್ಹಗೊಳಿಸಲಾಗದು ಎಂಬ ಸ್ಥಿತಿ ಇತ್ತು. ಜತೆಗೆ, ಯಾವುದೇ ರಾಜಕೀಯ ಪಕ್ಷಕ್ಕೂ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎನ್ನುವ ಇಚ್ಛಾಶಕ್ತಿಯೂ ಇಲ್ಲ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದು ಪಕ್ಷಗಳಿಗೆ ಮುಖ್ಯವಾಗಿದೆಯೇ ಹೊರತು ಪ್ರಜಾತಂತ್ರ ವ್ಯವಸ್ಥೆ ಉಳಿಯಬೇಕು ಎನ್ನುವ ಉದ್ದೇಶ ಇಲ್ಲ.

ಲೋಕಸಭೆ ಅಥವಾ ವಿಧಾನಸಭೆ ಸ್ಪೀಕರ್‌ ಮತ್ತು ವಿಧಾನ ಪರಿಷತ್‌ ಸಭಾಪತಿಯಾಗಿ ಸಾಮಾನ್ಯವಾಗಿ ಆಡಳಿತಾರೂಢ ಪಕ್ಷದವರನ್ನೇ ಆಯ್ಕೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇತರ ಪಕ್ಷದ ಶಾಸಕರು ಪಕ್ಷಾಂತರ ಮಾಡಿ ಆಡಳಿತ ಪಕ್ಷಕ್ಕೆ ಸೇರಿದರೆ ತೀರ್ಮಾನ ಕೈಗೊಳ್ಳುವವರು ಸ್ಪೀಕರ್‌ ಅಥವಾ ಸಭಾಪತಿ. ಆಡಳಿತ ಪಕ್ಷದ ಪರವಾಗಿಯೇ ಇವರು ತೀರ್ಮಾನಗಳನ್ನು ಕೈಗೊಳ್ಳುವುದು ಸಾಮಾನ್ಯವಾಗಿದೆ. ಇಂತಹ ಹಲವಾರು ಪ್ರಕರಣಗಳು ದೇಶದಲ್ಲಿ ನಡೆದಿವೆ. ಕರ್ನಾಟಕದಲ್ಲೂ ನಾವು ನೋಡಿದ್ದೇವೆ. ಎಚ್‌.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಜತೆ ಸರ್ಕಾರ ರಚಿಸಿದ ಸಂದರ್ಭದಲ್ಲಿ ಪಕ್ಷಾಂತರ ನಡೆಯಿತು. ಆದರೆ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಒಪ್ಪಲಿಲ್ಲ. ಕೊನೆಗೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ನೋಟಿಸ್‌ ನೀಡಲಾಯಿತು. ಅವರನ್ನು ಅನರ್ಹಗೊಳಿಸಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು. ಆ ಸಂದರ್ಭದಲ್ಲಿ ಕೃಷ್ಣ ಅವರು ಸಭಾಧ್ಯಕ್ಷರಾಗಿದ್ದರು. ಅವರು ಒಳ್ಳೆಯ ರಾಜಕಾರಣಿ. ಆದರೆ, ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೊಳಿಸದಂತಹ ಪರಿಸ್ಥಿತಿ ಸೃಷ್ಟಿಸಲಾಯಿತು. ಅವರಿಂದ ಏನು ಮಾಡಲೂ ಆಗಲಿಲ್ಲ. ತಕ್ಷಣಕ್ಕೆ ಪಕ್ಷಾಂತರ ನಿಷೇಧ ಕಾಯ್ದೆ ಅರ್ಜಿ ಬಗ್ಗೆ ತೀರ್ಮಾನವನ್ನೇ ಕೈಗೊಳ್ಳಲಿಲ್ಲ. ಕೆಲ ದಿನಗಳ ಬಳಿಕ ಸರ್ಕಾರವೇ ಪತನಗೊಂಡ ಪ‍ರಿಣಾಮ ಅಲ್ಲಿಗೆ ಈ ಪ್ರಕರಣ ಮುಗಿಯಿತು. ಈ ರೀತಿಯ ಹಲವಾರು ಪ್ರಕರಣಗಳು ಮತ್ತೆ, ಮತ್ತೆ ನಡೆಯುತ್ತಿವೆ.

ಈಗ ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವ ಒಬ್ಬ ರಾಜಕಾರಣಿಯೂ ಕಟುವಾಗಿ ಮಾತನಾಡಲಿಲ್ಲ. ಅಧಿಕಾರ ಬೇಕಾದರೆ ಯಾರ ಜತೆಗೂ ಸೇರಬಹುದು ಅಥವಾ ಅಧಿಕಾರ ಹೋಗುತ್ತದೆ ಎನ್ನುವ ಹಂತದಲ್ಲಿ ಯಾರ ಜತೆಯೂ ಸೇರಬಹುದು ಎನ್ನುವುದು ಇಂದಿನ ರಾಜಕೀಯ ಪರಿಸ್ಥಿತಿ.

ಇಂತಹ ರಾಜಕೀಯ ವಾತಾವರಣ ಅಥವಾ ಪರಿಸ್ಥಿತಿ ಜನರ ಮೇಲೆ ಯಾವುದೇ ರೀತಿ ಪರಿಣಾಮ ಬೀರಿಲ್ಲ ಎನ್ನುವುದು ಮಾತ್ರ ಸ್ಪಷ್ಟ. ಒಂದೇ ಒಂದು ಸಂದರ್ಭದಲ್ಲಿ ಈ ರಾಷ್ಟ್ರದ ಅದೃಶ್ಯ ಮತದಾರರು ಮಾತ್ರ ಯಾವುದೇ ಸುಳಿವು ನೀಡದೆ ಸ್ಪಷ್ಟವಾದ ತೀರ್ಪು ನೀಡಿ ಸರ್ಕಾರವನ್ನೇ ಕಿತ್ತು ಹಾಕಿದ್ದರು. ಅದು ತುರ್ತು ಪರಿಸ್ಥಿತಿಯ ಬಳಿಕ. ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ಬಳಿಕ ಅಧಿಕಾರಕ್ಕೆ ಆಸೆ ಪಡದ ಜಯಪ್ರಕಾಶ್‌ ನಾರಾಯಣ್‌ ಅವರು, ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕು ಎನ್ನುವುದಕ್ಕಾಗಿ ಹೋರಾಟ ಮಾಡಿದರು. ಹೋರಾಟದ ಫಲ ಚುನಾವಣೆಯಲ್ಲಿ ಕಂಡಿತ್ತು. ಈ ರಾಜಕೀಯ ಬೆಳವಣಿಗೆ ನಂತರ, 45 ವರ್ಷಗಳು ಉರುಳಿದ್ದರೂ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಭವಿಷ್ಯದಲ್ಲಿ ಅದೃಶ್ಯ ಮತದಾರರು ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬಹುದು.

ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮೊದಲ ಬಾರಿ ಜಾರಿಗೊಳಿಸಿದಾಗ ಕೆಲ ನಿಯಮಾವಳಿಗಳನ್ನು ರೂಪಿಸಲಾಯಿತು. ಯಾವುದೇ ಪಕ್ಷದಿಂದ ಆಯ್ಕೆಯಾದ ಜನಪ್ರತಿನಿಧಿಗಳಲ್ಲಿ ಮೂರನೇ ಒಂದರಷ್ಟು ಮಂದಿ ಪಕ್ಷ ಬಿಟ್ಟು ಹೋದರೆ, ಅವರನ್ನು ಅನರ್ಹಗೊಳಿಸುವ ಅಧಿಕಾರ ಇಲ್ಲ. ಇವರು ಸ್ವತಂತ್ರವಾಗಿ ಒಂದು ಗುಂಪಾಗಿ ಸದನದಲ್ಲಿ ಕುಳಿತುಕೊಳ್ಳಲು ಅವಕಾಶವಿದೆ. ಜತೆಗೆ, ಮೂರನೇ ಎರಡು ಭಾಗದಷ್ಟು ಶಾಸಕರು ಒಗ್ಗೂಡಿ ಇನ್ನೊಂದು ಪಕ್ಷದ ಜತೆ ವಿಲೀನಗೊಳ್ಳಬಹುದು. ಆಗ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡು ವಿರೋಧ ಪಕ್ಷವೇ ಅಧಿಕಾರಕ್ಕೆ ಬರಬಹುದು. ಕಾನೂನಿನಲ್ಲಿರುವ ಇಂತಹ ಅವಕಾಶಗಳ ಪ್ರಯೋಜನವನ್ನು ಶಾಸಕರು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ.

ರಾಜಕೀಯದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾದರೆ ಪಕ್ಷಾಂತರ ನಿಷೇಧ ಕಾಯ್ದೆ ಹಾಗೂ ಸಂವಿಧಾನದ 10ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಬೇಕು. ಪಕ್ಷಾಂತರ ಮಾಡಿದವರನ್ನು ಅನರ್ಹಗೊಳಿಸಿ ಮುಂದಿನ ಆರು ವರ್ಷಗಳವರೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು. ಪಕ್ಷಾಂತರ ಮಾಡಿದ ವ್ಯಕ್ತಿಯನ್ನು ಅನರ್ಹಗೊಳಿಸುವ ಅಧಿಕಾರವನ್ನು ಲೋಕಸಭೆ ಅಥವಾ ವಿಧಾನಸಭೆ ಸ್ಪೀಕರ್‌ ಅಥವಾ ವಿಧಾನಪರಿಷತ್‌ ಸಭಾಪತಿಗೆ ಕೊಡಲೇಬಾರದು. ಇದಕ್ಕಾಗಿಯೇ ನ್ಯಾಯ ಮಂಡಳಿಯನ್ನು ರಚಿಸಬೇಕು. ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಯನ್ನು ಈ ನ್ಯಾಯಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿ, ಅನರ್ಹಗೊಳಿಸುವ ಅಧಿಕಾರ ನೀಡಬೇಕು. ಈ ಮಂಡಳಿಗೆ ಇತರ ಇಬ್ಬರು ಸದಸ್ಯರನ್ನು ನೇಮಿಸಬೇಕು.

ಶಾಸಕರು ರಾಜೀನಾಮೆ ನೀಡಿ, ಉಪಚುನಾವಣೆಯಲ್ಲಿ ಗೆದ್ದು ಬರುವುದು ಸಹ ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ, ಸುಪ್ರೀಂ ಕೋರ್ಟ್‌ ಸಹ ಈ ಬಗ್ಗೆ ತೀರ್ಪುಗಳನ್ನು ನೀಡಿದೆ. ರಾಜೀನಾಮೆ ನೀಡುವುದು ಆಯಾ ಶಾಸಕರ ಅಧಿಕಾರ. ನಿರ್ದಿಷ್ಟ ಪಕ್ಷದಿಂದ ಆಯ್ಕೆಯಾದ ಶಾಸಕ, ವಿವಿಧ ಕಾರಣಗಳಿಗೆ ರಾಜೀನಾಮೆ ನೀಡಿ ಹೊರ ಹೋಗಬಹುದು. ಶಾಸಕರ ಈ ಅಧಿಕಾರವನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ.

ಹೀಗಾಗಿ, ರಾಜೀನಾಮೆ ನೀಡಿದ ಶಾಸಕರನ್ನು ಕನಿಷ್ಠ ನಾಲ್ಕು ವರ್ಷಗಳ ಕಾಲ ಅನರ್ಹಗೊಳಿಸುವ ಕಾಯ್ದೆ ರೂಪಿಸಬೇಕು. ಆದರೆ, ಉಪಚುನಾವಣೆ ತಪ್ಪಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಕಾಯ್ದೆ ರೂಪಿಸಿದರೂ ಸುಪ್ರೀಂ ಕೋರ್ಟ್‌ ಒಪ್ಪುವ ಸಾಧ್ಯತೆಗಳು ಸಹ ಕಡಿಮೆ.

ಪ‍್ರಜಾತಂತ್ರ ವ್ಯವಸ್ಥೆ ಗಟ್ಟಿಗೊಳಿಸುವ ದಿಸೆಯಲ್ಲಿ, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲಪಡಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದು ತುರ್ತು ಅಗತ್ಯ. ಇದಕ್ಕಾಗಿಯೇ ಎಲ್ಲ ಪಕ್ಷಗಳೂ ಒಗ್ಗೂಡಿ ಸಂಸದೀಯ ಸಮಿತಿ ರಚಿಸಲಿ. ಪಕ್ಷಾಂತರ ಪಿಡುಗನ್ನು ಒಮ್ಮತದ ಆಧಾರದ ಮೇಲೆಯೇ ರಾಷ್ಟ್ರದ ರಾಜಕೀಯ ಭಿತ್ತಿಯಿಂದ ತೆಗೆದು ಹಾಕುವ ಇಚ್ಛಾಶಕ್ತಿ ಪ್ರದರ್ಶಿಸಲಿ.

(ಲೇಖಕ: ಹಿರಿಯ ರಾಜಕಾರಣಿ)

ನಿರೂಪಣೆ: ಸಚ್ಚಿದಾನಂದ ಕುರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT