ನಾವು ಕಾಣುವ ಬೆಟ್ಟ, ಗುಡ್ಡ, ಪರ್ವತ, ನದಿ, ಸಮುದ್ರ, ಮರಳುಗಾಡು... ಮುಂತಾದ ಮೇಲ್ಮೈ ಸ್ವರೂಪಗಳು ಭೂಮಿಯ ಒಳ ಮತ್ತು ಹೊರಗೆ ನಿರಂತರವಾಗಿ ಘಟಿಸುತ್ತಿರುವ ತುಮುಲಗಳ ದಿಸೆಯಿಂದ ಮೈತಳೆದಂತಹವು. ಲಕ್ಷಾಂತರ ವರ್ಷಗಳ ಹಿಂದೆ ಇದ್ದ ಹಲವು ಸಮುದ್ರಗಳು ಇಂದು ಭೂಭಾಗವಾಗಿವೆ. ಹಿಂದೆ ಇದ್ದ ಅನೇಕ ಭೂಭಾಗಗಳು ಭೂಮಿಯ ಒಳಗೆ ಜರುಗಿ ಅಂತರ್ಧಾನವಾಗಿವೆ. ಹಿಂದೆ ಇದ್ದ ಕೆಲವು ನದಿಗಳು ‘ಕಣ್ಮರೆ’ಯಾಗಿದ್ದರೆ ಮತ್ತೆ ಕೆಲವು ತಮ್ಮ ಪಥ ಬದಲಿಸಿವೆ. ಸಮುದ್ರದೊಳಗೆ ಹಿಮಾಲಯಕ್ಕೂ ಎತ್ತರದ ಪರ್ವತಗಳು ಸೃಷ್ಟಿಯಾಗಿ ತಣ್ಣಗೆ ಕುಳಿತಿವೆ. ಅಂದು ಅನೇಕ ದಟ್ಟ ಅರಣ್ಯಗಳಿದ್ದ ಜಾಗ ಇಂದು ಕಲ್ಲಿದ್ದಲಿನ ನಿಕ್ಷೇಪಗಳಾಗಿವೆ. ಹೀಗೆ ಲೆಕ್ಕವಿಲ್ಲದಷ್ಟು ಭೂಕ್ರಿಯೆಗಳು ನಿರಂತರವಾಗಿ ಘಟಿಸುತ್ತಿದ್ದು, ಭೂಕುಸಿತ ಕೂಡ ಇಂತಹ ಪ್ರಕ್ರಿಯೆಗಳ ಒಂದು ಭಾಗವಷ್ಟೇ. ಆದರೆ ಮಾನವನ ಮೇಲೆ ಅವು ಉಂಟುಮಾಡುವ ಪರಿಣಾಮ ಮಾತ್ರ ಭೀಕರ.

ಪ್ರಪಂಚದ ವಿವಿಧ ಕಡೆ ಭೂಕುಸಿತ ಸಂಭವಿಸುತ್ತಿದ್ದರೂ ಏಷ್ಯಾ ಖಂಡ, ಅದರಲ್ಲೂ ಚೀನಾದಲ್ಲಿ ಈ ಅವಘಡಗಳು ಹೆಚ್ಚು. ಭೂಕುಸಿತದ ಇತಿಹಾಸದಲ್ಲಿ ಅತ್ಯಂತ ಘೋರ ಭೂಕುಸಿತ ಸಂಭವಿಸಿದ್ದು ಚೀನಾದ ಹೈ ಯುವಾನ್ ಪ್ರಾಂತ್ಯದಲ್ಲಿ. 1920ರ ಡಿಸೆಂಬರ್ನಲ್ಲಿ ಅಲ್ಲಿ ಉಂಟಾದ ದೊಡ್ಡ ಭೂಕಂಪದಿಂದ ತೀವ್ರ ಪ್ರಮಾಣದ ಭೂಕುಸಿತ ಉಂಟಾಗಿ ಅನೇಕ ಹಳ್ಳಿಗಳು ಮಣ್ಣಿನಲ್ಲಿ ಸಂಪೂರ್ಣ ಹುದುಗಿಹೋಗಿ 2 ಲಕ್ಷದಷ್ಟು ಜನರು ಪ್ರಾಣ ಕಳೆದುಕೊಂಡರು. ಭಾರತವು ಸೇರಿದಂತೆ ಕೊಲಂಬಿಯಾ, ನೇಪಾಳ, ಫಿಲಿಪ್ಪೀನ್ಸ್, ಜಪಾನ್, ಇಂಡೊನೇಷ್ಯಾ, ಪೆರು, ಅಫ್ಗಾನಿಸ್ತಾನ, ಪಾಕಿಸ್ತಾನ ಮುಂತಾದ ದೇಶಗಳು ಭೂಕುಸಿತದ ಆತಂಕವನ್ನು ಎದುರಿಸುತ್ತಿವೆ.

ಭಾರತದಲ್ಲಿ ಪಶ್ಚಿಮ ಘಟ್ಟ ಪ್ರದೇಶ ಮತ್ತು ಹಿಮಾಲಯ ಪರ್ವತ ಶ್ರೇಣಿಗಳ ಪ್ರದೇಶಗಳು ಭೂಕುಸಿತದ ಅವಘಡಗಳಿಗೆ ಹೆಚ್ಚು ಈಡಾಗುತ್ತಿವೆ. ಈ ವಿಕೋಪ ಸಮುದಾಯದ ಮೇಲೆ, ಕುಟುಂಬಗಳ ಮೇಲೆ, ಬದುಕುಳಿದವರ ಮೇಲೆ ಉಂಟುಮಾಡುವ ಮಾನಸಿಕ, ದೈಹಿಕ, ಆರ್ಥಿಕ ಮತ್ತು ಸಾಮಾಜಿಕ ಆಘಾತ ವರ್ಣನೆಗೆ ನಿಲುಕದ್ದು.

ಕರ್ನಾಟಕದ ಚಿತ್ರಣವನ್ನೇ ತೆಗೆದುಕೊಳ್ಳುವುದಾದರೆ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಭೂಕುಸಿತ ಸಾಮಾನ್ಯ ಎಂಬ ಸನ್ನಿವೇಶ ಉಂಟಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ವರದಿಯಂತೆ ರಾಜ್ಯದ ಶೇ 15ರಷ್ಟು ಅಂದರೆ ಸುಮಾರು 29,350 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶ ಭೂ ಕುಸಿತಕ್ಕೆ ಈಡಾಗುವ ಅಪಾಯವಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ, ಹಾಸನ ಜಿಲ್ಲೆಗಳ 29 ತಾಲ್ಲೂಕುಗಳು ಸೂಕ್ಷ್ಮ ಪ್ರದೇಶಗಳಾಗಿವೆ. ಈ ವರ್ಷದ ಮುಂಗಾರಿನ ಆರಂಭದಲ್ಲೇ ಮನಕಲಕುವ ಸಾವು ನೋವು ಮಂಗಳೂರಿನ ಸುತ್ತಮುತ್ತ ಜರುಗಿವೆ. ಹವಾಮಾನ ಇಲಾಖೆ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ ಎಂಬ ಸೂಚನೆ ಕೊಟ್ಟಿದ್ದು, ಅದಕ್ಕೆ ಸರಿಯಾಗಿ ಮುಂಗಾರಿನ ಆರಂಭದಲ್ಲೇ ಹೆಚ್ಚು ಮಳೆ ಮತ್ತು ಪ್ರವಾಹದ ಪರಿಸ್ಥಿತಿ ಕಂಡು ಬರುತ್ತಿದೆ.
.ಪ್ರಜಾವಾಣಿ ಚರ್ಚೆ: ಭೂಕುಸಿತ– ನಮಗೆ ಅಭಿವೃದ್ಧಿಯೂ ಬೇಕು, ಪರಿಸರವೂ ಉಳಿಯಬೇಕು.
ಹಿಂದೆಯೂ ಸಂಭವಿಸಿತ್ತು: ಭೂಕುಸಿತಗಳು ಸಂಭವಿಸುವುದಕ್ಕೆ ಮಾನವನ ಹಸ್ತಕ್ಷೇಪವೇ ಮುಖ್ಯ ಕಾರಣವೆಂಬುದು ಅನೇಕರ ಅನಿಸಿಕೆ. ಆದರೆ, 450 ಕೋಟಿ ವರ್ಷ ಇತಿಹಾಸದ ಈ ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವವೇ ಇಲ್ಲದ ಸಮಯದಲ್ಲೂ (ಮನುಷ್ಯ ಈ ಭೂಮಿಯಲ್ಲಿ ಅವತರಿಸಿದ್ದು ಕೇವಲ 20 ಲಕ್ಷ ವರ್ಷಗಳ ಹಿಂದೆ) ಭೂಕುಸಿತಗಳು ಸಂಭವಿಸಿರುವುದು ಭೂ ವೈಜ್ಞಾನಿಕ ಸಂಶೋಧನೆ ಹಾಗೂ ದಾಖಲೆಗಳಿಂದ ಸಾಬೀತಾಗಿದೆ. ಅತ್ಯಂತ ಭೀಕರ ಭೂಕುಸಿತ ಸಂಭವಿಸಿದ್ದು ಎರಡು ಕೋಟಿ ವರ್ಷಗಳ ಹಿಂದೆ ಅಮೆರಿಕದ ಯೂಟಾ (Utah) ಪ್ರಾಂತ್ಯದ ಮಾರ್ಗಂಟ್ ಎಂಬ ಪ್ರದೇಶದಲ್ಲಿ. 2014ರಲ್ಲಿ ಜರ್ನಲ್ ಆಫ್ ಜಿಯಾಲಜಿ ಎಂಬ ಪ್ರಸಿದ್ಧ ನಿಯತಕಾಲಿಕ ಇದನ್ನು ಪ್ರಕಟಿಸಿದೆ. ಇಂತಹ ಸಾವಿರಾರು ಭೂಕುಸಿತಗಳು ಭೂಮಿಯ ಮೇಲೆ ಮಾನವನಿಲ್ಲದ ಸಮಯದಲ್ಲಿಯೂ ಜರುಗಿವೆ. ಅಷ್ಟೇ ಅಲ್ಲ, ಭೂಕುಸಿತಗಳು ಸಮುದ್ರ ತಳದಲ್ಲಿ ಮತ್ತು ಚಂದ್ರ, ಮಂಗಳ, ಬುಧ, ಶುಕ್ರನ ಮೇಲೂ ಸಂಭವಿಸಿರುವ ಮಾಹಿತಿ ಬಾಹ್ಯಾಕಾಶ ಸಂಶೋಧನೆಗಳಿಂದ ತಿಳಿದುಬಂದಿದೆ. ಇದರ ಅರ್ಥ ಭೂಕುಸಿತವಾಗಲು ಅಧಿಕ ಮಳೆ ಸುರಿಯಬೇಕೆಂದೇನೂ ಇಲ್ಲ- ಇಳಿಜಾರುಗಳು ಅತ್ಯಂತ ಕಡಿದಾಗಿದ್ದರೆ ಭೂಮಿಯ ಸಹಜ ಗುರುತ್ವಾಕರ್ಷಣೆ ಶಕ್ತಿಯಿಂದಲೇ ಕೋಡುಗಲ್ಲಿನಂತೆ ನಿಂತಿರುವ ಬೆಟ್ಟಗಳು ಕುಸಿಯಬಹುದು. ಭೂ ವಿಜ್ಞಾನ ಪರಿಭಾಷೆಯಲ್ಲಿ ಇದನ್ನು ಮಾಸ್ ವೇಸ್ಟಿಂಗ್ ಎಂದು ಕರೆಯುತ್ತಾರೆ.

ಭೂಕುಸಿತಕ್ಕೆ ಕಾರಣವಾಗುವ ನೈಸರ್ಗಿಕ ಕ್ರಿಯೆಗಳನ್ನು ಅವಲೋಕಿಸಿದಾಗ ಮುಖ್ಯವಾಗಿ ಗೋಚರಿಸುವ ಕಾರಣಗಳೆಂದರೆ, (1) ಹೆಚ್ಚು ಮಳೆ ಮತ್ತು ಮಣ್ಣಿನ ರಂಧ್ರಗಳಲ್ಲಿ ಹೆಚ್ಚಾಗುವ ನೀರಿನ ಒತ್ತಡ, (2) ಕಲ್ಲು ಮತ್ತು ಮಣ್ಣಿನ ನಿರಂತರ ಸವಕಳಿ ಮತ್ತು ಸವೆತ, (3) ಕಡಿದಾದ ಪ್ರದೇಶಗಳ ಇಳಿಜಾರಿನ ನೈಸರ್ಗಿಕ ವಿನ್ಯಾಸ, (4) ಕಾಳ್ಗಿಚ್ಚು ಮತ್ತು ಸಸ್ಯಗಳಿಗೆ ಹಬ್ಬುವ ರೋಗಗಳ ಕಾರಣದಿಂದ ಕ್ಷೀಣಿಸುವ ಸಸ್ಯ ಸಂಪತ್ತು ಮತ್ತು (5) ಭೂಕಂಪ ಕ್ರಿಯೆಗಳು.

ಪಶ್ಚಿಮ ಘಟ್ಟಗಳಂತಹ ಪ್ರದೇಶದಲ್ಲಿ ಪ್ರತಿ ವರ್ಷ ಸರಾಸರಿ 300 ಸೆಂ.ಮೀನಷ್ಟು ಮಳೆಯಾಗುತ್ತದೆ. ಕೆಲವು ಬಾರಿ ಒಮ್ಮೆಲೇ ಹೆಚ್ಚು ಮಳೆ ಸುರಿದರೆ ಹೋದ ವರ್ಷ ಕೇರಳದ ವಯನಾಡಿನಲ್ಲಿ ಆದಂತೆ ಭಾರಿ ಭೂಕುಸಿತ ಅವಘಡಗಳು ಜರುಗುತ್ತವೆ. ಕರ್ನಾಟಕದ ಕರಾವಳಿ ಉದ್ದಕ್ಕೂ ಹರಡಿರುವ ಪಶ್ಚಿಮ ಘಟ್ಟಗಳ ಬಹಳ ಪ್ರದೇಶಗಳಲ್ಲಿ ಕಡಿದಾದ ಅಂದರೆ ಇಳಿಜಾರು ಕೋನ 45 ಡಿಗ್ರಿಗಿಂತ ಹೆಚ್ಚು ಇರುವ ಕಡೆ, ಭೂಕುಸಿತದ ಸಂಭಾವ್ಯ ಅಪಾಯ ಹೆಚ್ಚು. ಅಂತಹ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದರಂತೂ ಇಡೀ ಪ್ರದೇಶವನ್ನು ಅಲುಗಾಡಿಸಿ ದೊಡ್ಡ ಭೂಕುಸಿತಗಳು ಸಂಭವಿಸಬಹುದು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಆಗುತ್ತಿರುವ ರಸ್ತೆ ಕಾಮಗಾರಿಗಳು, ಸುರಂಗ ಮಾರ್ಗ ಕೊರೆಯುವಿಕೆ, ಅರಣ್ಯ ನಾಶ, ನಗರೀಕರಣ , ಹೋಂಸ್ಟೇಗಳ ನಿರ್ಮಾಣ, ಬೆಟ್ಟಗಳ ಮೇಲೆ ಕೆರೆಕಟ್ಟೆ ನಿರ್ಮಾಣ ಮುಂತಾದ ಚಟುವಟಿಕೆಗಳು ಭೂ ಮೇಲ್ಮೈನ ಪರಿಸರವನ್ನು ಮಾರ್ಪಾಡು ಮಾಡುವುದರಿಂದ ನೀರಿನ ಸಹಜ ಹರಿಯುವಿಕೆ ಮತ್ತು ಇಳಿಜಾರುಗಳು ಸ್ಥಿತ್ಯಂತರಗೊಂಡು ಭೂಕುಸಿತಕ್ಕೆ ಆಹ್ವಾನ ನೀಡುತ್ತಿವೆ. ಯಾವುದೇ ಇಳಿಜಾರು ಪ್ರದೇಶದ ಬುಡದಲ್ಲಿ ಅಗೆಯುವ ಅಥವಾ ಮಣ್ಣು ತೆಗೆಯುವ ಕಾರ್ಯ ಜರುಗಿದರೆ ಇಡೀ ಗುಡ್ಡ ಪ್ರದೇಶದ ಧಾರಣಾ ಶಕ್ತಿಗೆ ಹೊಡೆತ ಬಿದ್ದು ಭೂಕುಸಿತಕ್ಕೆ ದಾರಿ ಮಾಡಿಕೊಡುತ್ತದೆ. ಇಂತಹ ಚಟುವಟಿಕೆಗಳಿಂದ ನಶಿಸುವ ಗಿಡಮರಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡು ಅಪಾಯಗಳಿಗೆ ಎಡೆ ಮಾಡಿಕೊಡುತ್ತವೆ.

ನಿಯಂತ್ರಣ ಸಾಧ್ಯ: ನೈಸರ್ಗಿಕ ಕಾರಣಕ್ಕೆ ಘಟಿಸುವ ಭೂಕುಸಿತಗಳನ್ನು ತಡೆಯುವುದು ಕಷ್ಟ ಸಾಧ್ಯವಾದರೂ ಜನ ವಸತಿ ಪ್ರದೇಶಗಳಿರುವ ಕಡೆ ಮತ್ತು ಪ್ರಮುಖ ಮೂಲ ಸೌಕರ್ಯಗಳಿರುವ ಕಡೆ ವೈಜ್ಞಾನಿಕವಾಗಿ ಹಲವಾರು ಕ್ರಮಗಳನ್ನು ಅಳವಡಿಸುವ ಮೂಲಕ ಅವುಗಳನ್ನು ನಿಯಂತ್ರಿಸಬಹುದಾಗಿದೆ. (1) ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ವಿವರವಾದ ಭೂವೈಜ್ಞಾನಿಕ ನಕ್ಷೆ ತಯಾರಿಸಿ ಅಪಾಯದ ವಲಯಗಳನ್ನು ಗುರುತಿಸುವುದು, (2) ಭೂ ಭೌತ ಸಂವೇದಕಗಳು, ಮಳೆಮಾಪನಗಳು ಮತ್ತು ಸಂವಹನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಭೂಕುಸಿತಗಳನ್ನು ಮುಂಚೆಯೇ ಅರಿತುಕೊಳ್ಳುವುದು, (3) ಜೈವಿಕ ಎಂಜಿನಿಯರಿಂಗ್ ವ್ಯವಸ್ಥೆಯ ಮೂಲಕ ಇಳಿಜಾರುಗಳನ್ನು ಸ್ಥಿರಗೊಳಿಸುವುದು (4) ರಾಕ್ ಬೋಲ್ಟ್ ಮತ್ತು ಆ್ಯಂಕರ್ ಅಳವಡಿಕೆ ಮತ್ತು ತಡೆಗೋಡೆ ನಿರ್ಮಾಣ (5) ಮಣ್ಣು ಮತ್ತು ಶಿಲೆಯ ಗುಣಲಕ್ಷಣಗಳನ್ನು ವಿಶ್ಲೇಷಿಸಲು ಸಮಗ್ರ ಅಧ್ಯಯನ ಕೈಗೊಳ್ಳುವುದು (6) ನೈಲಿಂಗ್ ಮತ್ತು ನೆಟ್ಟಿಂಗ್ ಪದ್ದತಿಗಳ ಅಳವಡಿಕೆ, (7) ಪರಿಣಾಮಕಾರಿ ಜಲ ಹರಿವಿನ ವ್ಯವಸ್ಥೆ ಮಾಡುವುದು... ಮುಂತಾದ ಕ್ರಮಗಳು ಪರಿಣಾಮಕಾರಿ ಎಂಬುದು ಅನೇಕ ಭೂಕುಸಿತ ಪ್ರದೇಶಗಳಲ್ಲಿ ಸಾಬೀತಾಗಿದೆ.

ಜೊತೆಗೆ, ಭೂಕುಸಿತ ಸಂಭಾವ್ಯ ಪ್ರದೇಶಗಳಲ್ಲಿ ಸಮಯೋಚಿತ ಎಚ್ಚರಿಕೆಗಳನ್ನು ಕೊಡುವುದು, ಜನರನ್ನು ಮುಂಚೆಯೇ ಸ್ಥಳಾಂತರಗೊಳಿಸುವುದು, ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ಏರ್ಪಡಿಸುವುದು, ತರಬೇತಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು... ಮುಂತಾದ ಕಾರ್ಯಕ್ರಮಗಳಿಂದ ಭೂಕುಸಿತದ ಅಪಾಯಗಳನ್ನು ತಗ್ಗಿಸಬಹುದಾಗಿದೆ.

ಇಷ್ಟೆಲ್ಲಾ ಸಂಶೋಧನೆ ಹಾಗೂ ತಾಂತ್ರಿಕ ವ್ಯವಸ್ಥೆಗಳ ಸಾಮರ್ಥ್ಯವಿದ್ದರೂ ಭೂಕುಸಿತಗಳಿಂದ ಸಾವು ನೋವುಗಳು ಉಂಟಾಗುವುದು ವಿಷಾದದ ಸಂಗತಿ. ಆದ್ದರಿಂದ ಮಾನವನ ಅಭಿವೃದ್ಧಿ ಕಾರ್ಯಗಳ ಜೊತೆ ವೈಜ್ಞಾನಿಕ ಯೋಜನಾಬದ್ಧ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ತೀವ್ರ ಭೂಕುಸಿತಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಜನರ ಶಾಶ್ವತ ಪುನರ್ವಸತಿ ಮಾಡಬೇಕಾಗಿರುವುದು ಅತ್ಯಂತ ಜರೂರಿನ ಕೆಲಸ. ಅಷ್ಟೇ ಅಲ್ಲದೆ ಪಶ್ಚಿಮ ಘಟ್ಟಗಳ ಉಳಿವಿನ ದೃಷ್ಟಿಯಿಂದ ಮತ್ತು ಅದರ ತಪ್ಪಲಿನಲ್ಲಿ ವಾಸಿಸುವ ಜನರ ಕ್ಷೇಮದ ದೃಷ್ಟಿಯಿಂದ ವಿವರವಾದ ಅಧ್ಯಯನ ಮಾಡಿ ಸಲ್ಲಿಸಿರುವ ಮಾಧವ ಗಾಡ್ಗೀಳರ 2011ರ ವರದಿ ಮತ್ತು ನಂತರದ ಕಸ್ತೂರಿರಂಗನ್ ಅವರ ವರದಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಬೇಕಾಗಿದೆ.

ಲೇಖಕ: ನಿವೃತ್ತ ಭೂ ವಿಜ್ಞಾನ ಪ್ರಾಧ್ಯಾಪಕ

ನಿರೂಪಣೆ– ಬಿ.ವಿ. ಶ್ರೀನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.