ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಪಠ್ಯಕ್ರಮ ಬದಲಾವಣೆ ಚೌಕಟ್ಟಿನ ಅಡಿಯಲ್ಲೇ ಬದಲಾಗಲಿ: ಸಂವಾದದಲ್ಲಿ ಅಭಿಪ್ರಾಯ

‘ಶಿಕ್ಷಣ ಪಠ್ಯಕ್ರಮ ಬದಲಾವಣೆ: ಒಂದು ಚರ್ಚೆ’ ಕುರಿತು ನಡೆದ ಸಂವಾದ
Last Updated 18 ಸೆಪ್ಟೆಂಬರ್ 2021, 17:35 IST
ಅಕ್ಷರ ಗಾತ್ರ

ಬೆಂಗಳೂರು: ‘ಪಠ್ಯಕ್ರಮ ಬದಲಾವಣೆಗೆ ನಿರ್ದಿಷ್ಟ ಚೌಕಟ್ಟು ಇರುತ್ತದೆ. ಅದು ದೇಶದ ಕಾನೂನು ಕೂಡ. ಏನೇ ಬದಲಾವಣೆ ಮಾಡಬೇಕಾದರೂ ಈ ಚೌಕಟ್ಟಿನ ಅಡಿಯಲ್ಲೇ ಮುಂದುವರಿಯಬೇಕಾಗುತ್ತದೆ. ಪಠ್ಯಪುಸ್ತಕ ಪರಿಶೀಲನಾ ಸಮಿತಿ ಸದಸ್ಯರಿಗೂ ಈ ಬಗ್ಗೆ ಅರಿವು ಮೂಡಿಸಬೇಕಿದೆ’...

‘ಶಿಕ್ಷಣ ಪಠ್ಯಕ್ರಮ ಬದಲಾವಣೆ: ಒಂದು ಚರ್ಚೆ’ ಕುರಿತು ನಡೆದ ‘ಪ್ರಜಾವಾಣಿ’ ಸಂವಾದದಲ್ಲಿ ಶನಿವಾರ ವ್ಯಕ್ತವಾದ ಅಭಿಪ್ರಾಯವಿದು.

‘ಇತಿಹಾಸವು ಸತ್ಯ ಘಟನೆಗಳನ್ನು ಆಧರಿಸಿರುವುದು. ಅದನ್ನು ಬರೆಯುವಾಗ ಎಲ್ಲಾ ಆಯಾಮಗಳಿಂದಲೂ ವಿಶ್ಲೇಷಣೆ ಮಾಡಲಾಗಿರುತ್ತದೆ. ಅದನ್ನು ತಿರುಚುವ ಕೆಲಸಕ್ಕೆ ಕೈ ಹಾಕಬಾರದು. ಅಭಿಪ್ರಾಯ ಹೇರಿಕೆಯೂ ಸರಿಯಲ್ಲ. ಮಕ್ಕಳಲ್ಲಿ ತಾರ್ಕಿಕ ಭಾವನೆ ಬೆಳೆಸುವುದೇ ನಿಜವಾದ ಶಿಕ್ಷಣ’ ಎಂಬ ಮಾತುಗಳೂ ವ್ಯಕ್ತವಾದವು.

‘ಸಂಸ್ಕೃತಿ, ಸಂಪ್ರದಾಯದ ಆಧಾರದಲ್ಲಿ ಶಿಕ್ಷಣ’

‘ಭಾರತದ ಇತಿಹಾಸ ಪ್ರಾಚೀನವಾದುದು. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಆಧಾರದಲ್ಲಿ ಶಿಕ್ಷಣ ನೀಡುವುದು ತುಂಬಾ ಅಗತ್ಯ. ಅದಕ್ಕೆ ಈಗ ಒತ್ತು ನೀಡಲಾಗುತ್ತಿದೆ. ನಮ್ಮ ಮಕ್ಕಳಿಗೆ ನಮ್ಮ ದೇಶದ ವಿಚಾರಗಳನ್ನು ಕಲಿಸದೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪರಿಚಯಿಸಬೇಕೆ?’.

‘ಪಠ್ಯಕ್ರಮ ಚೌಕಟ್ಟು ಸಿದ್ಧಪಡಿಸಲು 21 ಜನರ ಸಮಿತಿ ರಚಿಸಲಾಗುತ್ತಿದೆ. ಕಾಲ ಕಾಲಕ್ಕೆ ಶಿಕ್ಷಣದಲ್ಲಿ ಸುಧಾರಣೆ ತರಲು ಸ್ವಾತಂತ್ರ್ಯವಿದೆ. ಅದಕ್ಕೆ ಕಾನೂನು ಕಟ್ಟಳೆಗಳ ಅಗತ್ಯವಿಲ್ಲ. 2005ರಲ್ಲಿ ಮಾಡಿದ್ದನ್ನೇ ಈಗಲೂ ಪಾಲಿಸಬೇಕು ಎಂಬ ನಿಯಮವೇನೂ ಇಲ್ಲ. ಎನ್‌ಸಿಎಫ್‌ ಕೂಡ ಸರ್ವಸ್ವವಲ್ಲ. ಅಪೌಷ್ಟಿಕತೆ ಸಮಸ್ಯೆ ಮೊದಲಿನಿಂದಲೂ ಇದೆ. ಇದಕ್ಕೂ ಪಠ್ಯಕ್ರಮ ಪರಿಷ್ಕರಣೆಗೂ ತಳುಕು ಹಾಕುವುದು ಸರಿಯಲ್ಲ’.

‘ಎಲ್ಲವನ್ನೂ ಬದಲಾವಣೆ ಮಾಡಬೇಕು. ಎಲ್ಲವೂ ಸುಧಾರಣೆಯಾಗಬೇಕು. ಅದಕ್ಕೆ ವಿರೋಧ ವ್ಯಕ್ತಪಡಿಸುವುದು ಎಷ್ಟು ಸರಿ. ರೋಹಿತ್‌ ಚಕ್ರತೀರ್ಥ ಗಣಿತ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಮಕ್ಕಳ ಕಥೆಗಳನ್ನೂ ಬರೆದಿದ್ದಾರೆ. ಅವರ ನೇಮಕಕ್ಕೆ ವಿರೋಧವೇಕೆ. ಸರ್ಕಾರವು ಶಿಕ್ಷಣವನ್ನು ಕೇಸರೀಕರಣಗೊಳಿಸಲು ಮುಂದಾಗಿದೆ ಎಂದು ಹೇಳುತ್ತಿರುವುದೂ ತಪ್ಪು. ಕೇಸರೀಕರಣ ಎಂದರೆ ಏನು ಎಂಬುದನ್ನು ಮೊದಲು ವಿವರಿಸಿ.

ಡಾ.ಎಸ್‌.ಆರ್‌.ಲೀಲಾ, ನಿವೃತ್ತ ಪ್ರಾಧ್ಯಾಪಕಿ, ವಿಧಾನಪರಿಷತ್‌ನ ಮಾಜಿ ಸದಸ್ಯೆ

***

‘ಪಠ್ಯಕ್ರಮ ಬದಲಾವಣೆ ಅನಿವಾರ್ಯ’

‘ಇತ್ತೀಚಿನ ದಿನಗಳಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆದಿವೆ. ಕೆಲ ಉದ್ಯೋಗಗಳೇ ಮರೆಯಾಗಿವೆ. ಈ ಕಾರಣಕ್ಕಾಗಿ ಪಠ್ಯಕ್ರಮ ಬದಲಾವಣೆ ಅನಿವಾರ್ಯ. ಇದನ್ನು ರಾಜಕೀಯ ಹಿನ್ನೆಲೆಯಲ್ಲಿ ನೋಡಬಾರದು. ಹೊಸ ಪಠ್ಯಕ್ರಮದ ಜೊತೆಗೆ ಕಲಿಕಾ ಪದ್ಧತಿಯೂ ಬದಲಾಗಬೇಕು. ಮಕ್ಕಳಲ್ಲಿ ಸ್ವಯಂ ಕಲಿಕೆಯ ಗುಣ ಬೆಳೆಸಲು ಒತ್ತು ನೀಡಬೇಕು’.

‘ಇತಿಹಾಸದಲ್ಲಿ ತಪ್ಪುಗಳಿದ್ದರೆ ತಿದ್ದುಪಡಿ ಮಾಡಬಹುದು. ಬಾಲ ಹಿಡಿದು ಆನೆಯೇ ಬೇಡ ಎಂದು ಹೇಳುವುದು ಸರಿಯಲ್ಲ. ಕೆಲವೊಮ್ಮೆ ಅವಸರದಲ್ಲಿ ನೀತಿಗಳನ್ನು ಜಾರಿ ಮಾಡಲಾಗುತ್ತದೆ. ಅದು ಅಪಾಯಕಾರಿ. ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆ ಇದೆ. ಗುಣಮಟ್ಟದ ಶಿಕ್ಷಕರದ್ದು ಮತ್ತೊಂದು ಸಮಸ್ಯೆ. ಕನ್ನಡ ಭಾಷೆ ಶಿಕ್ಷಕರಾಗಲು ಬಯಸುವವರಿಗೆ ಕುವೆಂಪು,
ದ.ರಾ.ಬೇಂದ್ರೆಯವರ ನಾಲ್ಕೈದು ಪುಸ್ತಕಗಳ ಹೆಸರೇ ಗೊತ್ತಿರುವುದಿಲ್ಲ’.

‘ದೇಶದ ಪ್ರತಿಯೊಬ್ಬ ನಾಗರಿಕರಿಗೂ ಇತಿಹಾಸ ಮತ್ತು ಸಂಸ್ಕೃತಿಯ ಅರಿವು ಇರಬೇಕು. ಬ್ರಿಟಿಷರು ಅಳವಡಿಸಿದ್ದ ಶಿಕ್ಷಣ ಪದ್ಧತಿಯನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಅದು ಬದಲಾಗಬೇಕು’.

ಪ್ರೊ.ಎಸ್‌.ಕೆ.ಸೈದಾಪುರ, ವಿಶ್ರಾಂತ ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

***

‘ಬದಲಾವಣೆಗೆ ವಿರೋಧವಿಲ್ಲ; ಅನುಸರಿಸುತ್ತಿರುವ ಮಾರ್ಗ ಸರಿಯಿಲ್ಲ’

‘ಪಠ್ಯಕ್ರಮ ಬದಲಾವಣೆಗೆ ಯಾರ ವಿರೋಧವೂ ಇಲ್ಲ. ಆದರೆ ಅದು ಯಾವ ಬಗೆಯದ್ದು, ಅದನ್ನು ಯಾವ ಹಂತದಲ್ಲಿ, ಯಾವ ಅಂಶಗಳನ್ನು ಆಧರಿಸಿ ಬದಲಾವಣೆ ಮಾಡಲಾಗುತ್ತಿದೆ ಎಂಬುದನ್ನು ಗಮನಿಸಬೇಕು’.

‘ಪಠ್ಯಪುಸ್ತಕ ಬದಲಾವಣೆಗೆ ಒಂದು ಕ್ರಮ ಇರುತ್ತದೆ. ಅದರ ಆಧಾರದಲ್ಲಿ ಪಠ್ಯವಸ್ತು ರಚಿಸಬೇಕಾಗುತ್ತದೆ. ಅದನ್ನು ಆಧಾರವಾಗಿಟ್ಟುಕೊಂಡು ಪಠ್ಯಪುಸ್ತಕ ತಯಾರಿಸುವ ಪದ್ಧತಿ ಇದೆ. ಅದನ್ನು ಅರಿತುಕೊಳ್ಳಬೇಕು’.

‘ವೇದಗಳ ಕಾಲದಲ್ಲಿದ್ದ ಕೆಲ ಪದ್ಧತಿ ಹಾಗೂ ಆಚರಣೆಗಳು ಜನರ ಪರವಾಗಿರಲಿಲ್ಲ. ಜನರು ಆಹಾರದ ಸಮಸ್ಯೆ ಎದುರಿಸುತ್ತಿರುವಾಗ ಯಾಗ ಹಾಗೂ ಯಜ್ಞದ ಹೆಸರಿನಲ್ಲಿ ಆಹಾರ ವ್ಯರ್ಥ ಮಾಡುವುದು ಎಂಬ ಅಭಿಪ್ರಾಯ ಮೂಡಿದ್ದರಿಂದ ಹೊಸ ಧರ್ಮಗಳ ಉದಯವಾದವು ಎಂಬ ಅಂಶ ಪಠ್ಯಕ್ರಮದಲ್ಲಿತ್ತು. ಈಗ ಅದನ್ನು ತೆಗೆದುಹಾಕಲು ತಯಾರಿ ನಡೆಯುತ್ತಿದೆ. ಅದು ಸರಿಯಲ್ಲ’.

‘ಪಠ್ಯಕ್ರಮದ ಚೌಕಟ್ಟು ಇಟ್ಟುಕೊಂಡು ಬದಲಾವಣೆ ಮಾಡಿದ್ದೇ ಆದರೆ, ಮಕ್ಕಳಿಗೆ ಕಲಿಯಲು ಸ್ವಲ್ಪವಾದರೂ ಸಮಯ ಬೇಕಲ್ಲವೇ. 2005ರಲ್ಲಿ ಪಠ್ಯಕ್ರಮ ಚೌಕಟ್ಟನ್ನು ಆಧರಿಸಿ ಪಠ್ಯಕ್ರಮ ಬದಲಿಸಲಾಗಿದೆ. ಅದೇ ಬೇಡವೆಂದಾದರೆ ಇನ್ನೊಂದು ಪಠ್ಯಕ್ರಮ ಚೌಕಟ್ಟು ಸಿದ್ಧಪಡಿಸುವವರೆಗೂ ಕಾಯಬೇಕಲ್ಲವೇ. ಮಕ್ಕಳ ಅಪೌಷ್ಟಿಕತೆ ಮತ್ತು ಪಠ್ಯಪುಸ್ತಕದ ಪರಿಷ್ಕರಣೆ, ಇವೆರಡರಲ್ಲಿ ಸರ್ಕಾರದ ಆದ್ಯತೆ ಯಾವುದಾಗಿರಬೇಕು?’.

ಡಾ.ವಿ.ಪಿ.ನಿರಂಜನಾರಾಧ್ಯ,ಪ್ರಾಧ್ಯಾಪಕ, ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT