ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಸಲಿಂಗ ವಿವಾಹ: ನಿಸರ್ಗಕ್ಕೆ ವಿರುದ್ಧ ಹೋಗಲು ನ್ಯಾಯಾಲಯವೂ ಒಪ್ಪುವುದಿಲ್ಲ

ಎಸ್.ನಟರಾಜ ಶರ್ಮ
Published 28 ಅಕ್ಟೋಬರ್ 2023, 1:39 IST
Last Updated 28 ಅಕ್ಟೋಬರ್ 2023, 1:39 IST
ಅಕ್ಷರ ಗಾತ್ರ

ನೈಸರ್ಗಿಕವಾಗಿ ನಡೆಯಬೇಕಾದ ಕ್ರಿಯೆಯ ವಿರುದ್ಧವಾಗಿ ನಡೆದುಕೊಂಡಾಗ ಅಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕಾದ ಅವಕಾಶಗಳನ್ನು ನಮ್ಮ ಭಾರತೀಯ ದಂಡ ಸಂಹಿತೆಯಲ್ಲಿ ಈ ಹಿಂದೆ ಕಲ್ಪಿಸಿಕೊಡಲಾಗಿತ್ತು. ಆದರೆ ಇತ್ತೀಚಿನ ಬದಲಾದ ಕಾನೂನಿನ ತಿದ್ದುಪಡಿಗಳಲ್ಲಿ ಮತ್ತು ನ್ಯಾಯಾಲಯದ ಕೆಲವು ತೀರ್ಪುಗಳಲ್ಲಿ, ನೈಸರ್ಗಿಕ ಕ್ರಿಯೆಗೆ ವಿರುದ್ಧವಾದಂತಹ ಬೆಳವಣಿಗೆಗಳನ್ನು ಉತ್ತೇಜಿಸುತ್ತಿರುವುದನ್ನು ಕಾಣಬಹುದಾಗಿದೆ.

***

ಭಾರತ ದೇಶದಲ್ಲಿ ಮದುವೆ ಎಂಬುದು ಒಂದು ಸಂಪ್ರದಾಯ ಮಾತ್ರವಲ್ಲದೆ ಇದು ಒಂದು ಪವಿತ್ರ ಅನುಬಂಧ. ಎರಡು ಕುಟುಂಬಗಳನ್ನು ಬೆಸೆಯುವ ಒಂದು ವಿಜೃಂಭಣೆಯ ಸಂಭ್ರಮ. ಗಂಡು ಮತ್ತು ಹೆಣ್ಣಿನ ಸಮ್ಮಿಲನದಿಂದ ಒಂದು ಕುಟುಂಬದ ವಂಶೋದ್ಧಾರಕನನ್ನು ಕಾಣುವ ಪವಿತ್ರ ಸಂಬಂಧ. ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಅಭಿವೃದ್ಧಿ, ಬಹು ರಾಷ್ಟ್ರೀಕರಣ, ಮನುಜನ ದುಡಿಮೆಯ ತುಡಿತ ಹೀಗೆ ಹಲವು ಕಾರಣಗಳಿಂದ ನಮ್ಮ ದೇಶದಲ್ಲಿಯೂ ಸಹ ಇತರ ದೇಶಗಳ ಮಾದರಿಯಲ್ಲಿ ಕೌಟುಂಬಿಕ ವ್ಯವಸ್ಥೆಯನ್ನು ಏರುಪೇರು ಮಾಡುವ ವಿಧಿಗಳು ಹುಟ್ಟಿಕೊಳ್ಳುತ್ತಿವೆ. ಜತೆಗೆ ಪ್ರಕೃತಿಗೆ ವಿರುದ್ಧವಾದ ಕ್ರಿಯೆ ಮತ್ತು ಕಾನೂನಿನ ಪರಿಮಿತಿ ಇಲ್ಲದ ವ್ಯವಸ್ಥೆಯು ಬರುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಪೂರಕವಾಗಿ ಬರುತ್ತಿರುವ ನ್ಯಾಯಾಲಯದ ತೀರ್ಪುಗಳು, ನಮ್ಮ ಕೌಟುಂಬಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಾಮದ ದೃಷ್ಟಿಯಿಂದ ನೋಡುವ ಮಟ್ಟಕ್ಕೆ ಇಳಿಯುತ್ತಿರುವುದು ಶೋಚನೀಯ. 

ನಾಗರಿಕ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ಧಿ ಎಂದು ಹೇಳಿ ಹಲವು ಬದಲಾವಣೆಗಳನ್ನು ತರಲಾಗಿದೆ. ಆದರೆ ನೈಸರ್ಗಿಕವಾಗಿ ನಡೆಯಬೇಕಾದ ಕೆಲವು ಕ್ರಿಯೆಗಳನ್ನು ನಾವು, ಅಭಿವೃದ್ಧಿ ಅಥವಾ ಬದಲಾವಣೆ ಎಂದು ಹೇಳಿಕೊಂಡು ಸಮಾಜದಲ್ಲಿ ಮತ್ತು ಸಾಮಾಜಿಕ ದೃಷ್ಟಿಯಲ್ಲಿ ತಪ್ಪು ಮಾಡುತ್ತಿರುವುದು ಎದ್ದು ಕಾಣುತ್ತಿದೆ.

ಸಲಿಂಗ ಮದುವೆ ಮತ್ತು ಸಲಿಂಗ ಕಾಮ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿರುವ ಮತ್ತು ವಿದೇಶಗಳಿಂದ ಆಮದು ಮಾಡಿಕೊಂಡಿರುವ ವಿಷಯ. ಇತರ ದೇಶಗಳಿಗೆ ನಮ್ಮ ದೇಶವನ್ನು ಹೋಲಿಸಿದರೆ, ಸಾಂಪ್ರದಾಯಿಕವಾಗಿ ಆಗಲಿ ಅಥವಾ ಇಲ್ಲಿನ ಕೌಟುಂಬಿಕ ವ್ಯವಸ್ಥೆಗೆ ಸಂಬಂಧಿಸಿ ಆಗಲಿ, ಬಹಳ ದೊಡ್ಡ ಮಟ್ಟದ ಅಂತರ ಅಥವಾ ವ್ಯತ್ಯಾಸವನ್ನು ಕಾಣಬಹುದಾಗಿದೆ.  ಯಾವುದೇ ದೇಶ ಅಭಿವೃದ್ಧಿ ಹೊಂದುವುದು ನೈಸರ್ಗಿಕವಾಗಿ ನಡೆಯಬೇಕಾದ ಕ್ರಿಯೆ. ಅದಕ್ಕೆ ವಿರುದ್ಧವಾಗಿ ಹೋದಾಗ ಸಾಮಾಜಿಕ ವ್ಯವಸ್ಥೆಯೇ ಏರುಪೇರು ಆಗುತ್ತದೆ. ಅದರಿಂದ ಸಮಾಜದಲ್ಲಿ ಅಪರಾಧಗಳು ಸಹ ಹೆಚ್ಚಾಗಲು ಕಾರಣವಾಗುತ್ತದೆ ಎಂಬುದು ಪ್ರತಿಯೊಬ್ಬರು ಮನದಟ್ಟು ಮಾಡಿಕೊಳ್ಳಬೇಕಾದ ವಿಷಯ.

ಸಲಿಂಗ ಮದುವೆಯನ್ನು ಬೆಂಬಲಿಸಲು ನಿಂತಿರುವ ಕೆಲವು ಧ್ವನಿಗಳು ಅದರಿಂದ ಆಗುವ ಅಚಾತುರ್ಯದ ಬಗ್ಗೆ ಅಥವಾ ಅಂತಹ ಬೆಂಬಲದಿಂದ ಸಮಾಜದಲ್ಲಿ ನೈಸರ್ಗಿಕ ಕ್ರಿಯೆಗೆ ಉಂಟಾಗುವಂತಹ ಧಕ್ಕೆಯ ಬಗ್ಗೆ ಗಮನ ನೀಡಿದಂತಿಲ್ಲ. ಇದನ್ನು ಸಮಾಜದಲ್ಲಿ ಅಂಕುಶವಿಲ್ಲದ ಅಭಿವೃದ್ಧಿಯ ತುಡಿತ ಎಂದು ವಿಶ್ಲೇಷಿಸಬಹುದು. ಬದಲಿಗೆ, ನಮಗೆ ದೊರಕದ್ದನ್ನು ಹೊಂದಾಣಿಕೆ ಮಾಡಿಕೊಳ್ಳುವ ವಿಷಯ ಎಂದು ವಿಶ್ಲೇಷಿಸಲು ಸಾಧ್ಯವಿಲ್ಲ. ಜತೆಗೆ ಇದು ಅಸಹ್ಯವನ್ನು ಉಂಟು ಮಾಡುವ ಮನಸ್ಥಿತಿ ಎಂದು ಹೇಳಬಹುದು.

ಪ್ರತಿಯೊಂದು ಧರ್ಮದಲ್ಲೂ ಇರುವಂತಹ ಸಂಪ್ರದಾಯಕ್ಕೆ ತಕ್ಕಂತೆ ಮದುವೆ ಮತ್ತು ವಿಚ್ಛೇದನವನ್ನು ಕಾನೂನಿನ ಚೌಕಟ್ಟಿನಲ್ಲಿ ತರಲಾಗಿದೆ. ಹಿಂದೂ ವಿವಾಹ ಕಾಯ್ದೆ 1955, ಮುಸ್ಲಿಂ ವಿವಾಹ ಕಾನೂನು, ಕ್ರಿಶ್ಚಿಯನ್ ಪದ್ಧತಿ ಮತ್ತು ವಿಶೇಷ ವಿವಾಹ ಕಾಯ್ದೆಗಳಲ್ಲಿ ಎಲ್ಲಿಯೂ ಸಹ ಏಕ ಲಿಂಗಗಳ ಮದುವೆಯ ಪ್ರಸ್ತಾವನೆಯನ್ನು ಅಥವಾ ಅದಕ್ಕೆ ತತ್ಸಂಬಂಧವಾದ ಮಾಹಿತಿಯನ್ನು ಒದಗಿಸಿರುವುದಿಲ್ಲ. ನೈಸರ್ಗಿಕವಾಗಿ ನಡೆಯಬೇಕಾದ ಕ್ರಿಯೆಯ ವಿರುದ್ಧವಾಗಿ ನಡೆದುಕೊಂಡಾಗ ಅಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕಾದ ಅವಕಾಶಗಳನ್ನು ನಮ್ಮ ಭಾರತೀಯ ದಂಡ ಸಂಹಿತೆಯಲ್ಲಿ ಈ ಹಿಂದೆ ಕಲ್ಪಿಸಿಕೊಡಲಾಗಿತ್ತು. ಆದರೆ ಇತ್ತೀಚೆಗೆ ಬದಲಾದ ಕಾನೂನಿನ ತಿದ್ದುಪಡಿಗಳಲ್ಲಿ ಮತ್ತು ನ್ಯಾಯಾಲಯದ ಕೆಲವು ತೀರ್ಪುಗಳಲ್ಲಿ, ನೈಸರ್ಗಿಕ ಕ್ರಿಯೆಗೆ ವಿರುದ್ಧವಾದಂತಹ ಬೆಳವಣಿಗೆಗಳನ್ನು ಉತ್ತೇಜಿಸುತ್ತಿರುವುದನ್ನು ಕಾಣಬಹುದಾಗಿದೆ.

ಒಂದೇ ಲಿಂಗದ ವ್ಯಕ್ತಿಗಳ ನಡುವಿನ ಸಂಬಂಧವನ್ನು ವೈದ್ಯಕೀಯ ರೀತಿಯಲ್ಲಿ ನಾವು ಪರೀಕ್ಷೆಗೆ ಒಳಪಡಿಸಿದಾಗ ಇದೊಂದು ಮಾನಸಿಕ ಕಾಯಿಲೆ ಎಂದು ಹಲವು ವೈದ್ಯರು ವಿಶ್ಲೇಷಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಹಾಗೆ ದೇಶ–ವಿದೇಶಗಳಲ್ಲಿ ದೊಡ್ಡಮಟ್ಟದ ಚರ್ಚೆಗಳು ಸಹ ನಡೆದಿವೆ. ಇದರ ಮಧ್ಯೆ ನೈಸರ್ಗಿಕ ಕ್ರಿಯೆಗೆ ಪರ್ಯಾಯವಾಗಿ ಬಳಸಬಹುದಾದ ಕೃತಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಆಗುತ್ತಿದೆ. ನಾವು ಪ್ರಕೃತಿಗೆ ವಿರುದ್ಧವಾಗಿ ನಡೆಯಬೇಕು ಎಂಬುದನ್ನು ಸಮರ್ಥಿಸುವ ಯತ್ನವಾಗಿ ಇದನ್ನು ಅರ್ಥೈಸಬಹುದು. ಒಂದೇ ಲಿಂಗದ ನಡುವಿನ ಸಂಬಂಧಗಳು ಪ್ರಕೃತಿ ನಿಯಮದ ವಿರುದ್ಧವಾಗಿವೆ ಎಂದು ಈ ಮೇಲೆ ವಿಶ್ಲೇಷಿಸಲಾಗಿದೆ. ಈ ರೀತಿಯಾದಂತಹ ಘಟನೆಗಳು ಮುಂದುವರಿದಲ್ಲಿ ಸಾಮಾಜಿಕವಾಗಿ ಮತ್ತು ಸಮಾಜದಲ್ಲಿ ಏರುಪೇರು ಆಗುವುದು ಖಂಡಿತ. ಈ ವಿಷಯವನ್ನು ವೈದ್ಯಕೀಯ ರಂಗದ ಬೆಳವಣಿಗೆ ಎಂದು ಅರ್ಥೈಸದೆ, ಪ್ರಕೃತಿಗೆ ವಿರುದ್ಧವಾದ ಕಾರ್ಯ ಎಂದು ಭಾವಿಸಿದಾಗ ಮಾತ್ರ ಒಂದೇ ಲಿಂಗದ ನಡುವಿನ ಸಂಬಂಧಗಳು ಮತ್ತು ಮದುವೆ ಸರಿಯಲ್ಲ ಎಂಬ ನಿಲುವಿಗೆ ಬರಲು ಸಾಧ್ಯ.

ವೈದ್ಯಕೀಯ ರಂಗದಲ್ಲೂ ಸಹ ಈ ವಿಷಯಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಿದೆ. ಹಾಗಾಗಿ ವಿರೋಧಿಸುವ ಒಂದು ವರ್ಗ ಒಂದೇ ಲಿಂಗದ ನಡುವಿನ ಮದುವೆ ಅಥವಾ ಕ್ರಿಯೆಗಳು ಮಾನಸಿಕ ಕಾಯಿಲೆ ಎಂಬುದಾಗಿ ವಿಶ್ಲೇಷಿಸಿದೆ. ಇದನ್ನು ಸರಿ ಎಂದು ಪ್ರತಿಪಾದಿಸುವ ಇನ್ನೊಂದು ವರ್ಗವು ಇದು ವೈದ್ಯಕೀಯ ರಂಗದ ಅಭಿವೃದ್ಧಿ ಮತ್ತು ಉತ್ತುಂಗ ಎಂದು ಕೊಂಡಾಡುತ್ತಿದೆ.

ಒಂದೇ ಲಿಂಗದ ಮದುವೆಯನ್ನು ಕಾನೂನಿನ ವ್ಯಾಪ್ತಿಗೆ ತರುವ ದೊಡ್ಡಮಟ್ಟದ ಯತ್ನ ನಡೆಯುತ್ತಿದೆ. ಇದನ್ನು ಕಾನೂನಿನ ವ್ಯಾಪ್ತಿಗೆ ತಂದರೆ, ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರಚಲಿತದಲ್ಲಿರುವ ಪ್ರತಿಯೊಂದು ವಿಷಯದಲ್ಲೂ ಕಾನೂನಾತ್ಮಕವಾಗಿ ‘ತಾರತಮ್ಯ’ ಎಂಬ ಪದವನ್ನು ಬಹಳ ಆಕರ್ಷಕವಾಗಿ ಬಳಸಲಾಗುತ್ತಿದೆ. ಇಂದು ಒಂದೇ ಲಿಂಗದ ಮದುವೆಗೆ ಕಾನೂನಿನ ಅಡಿಯಲ್ಲಿ ಅವಕಾಶ ಮಾಡಿಕೊಡಿ ಎಂದು ನ್ಯಾಯಾಲಯದಲ್ಲಿ ಕೋರಲು ಇದೇ ಪದವನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಹಾಗೆ ನ್ಯಾಯಾಲಯವು ಕಾನೂನು ಮಾನ್ಯತೆಯನ್ನು ನೀಡಲು ನಿರಾಕರಿಸಿದೆ. ಪ್ರಕೃತಿಯ ವಿರುದ್ಧವಾಗಿ ಹೋಗಲು ನ್ಯಾಯಾಲಯಗಳು ಒಪ್ಪುವುದಿಲ್ಲ ಎಂಬುದನ್ನು ನ್ಯಾಯಾಲಯದ ತೀರ್ಪಿನಲ್ಲಿ ಕಾಣಬಹುದಾಗಿದೆ. ನ್ಯಾಯಾಲಯವು ಸಹ ದೂರದೃಷ್ಟಿಯನ್ನು ಇಟ್ಟುಕೊಂಡು ಸಮಾಜದಲ್ಲಿ ಆಗಬಹುದಾದಂತಹ  ಕೆಟ್ಟ ಪರಿಣಾಮ ಎಂಬುದನ್ನು ತನ್ನ ತೀರ್ಪಿನಲ್ಲಿ ಉಲ್ಲೇಖಿಸದೇ ಇದ್ದರೂ, ಪ್ರಜ್ಞಾವಂತ ಓದುಗ ಹೀಗೇ ಅರ್ಥಮಾಡಿಕೊಳ್ಳಬಹುದಾದ ತೀರ್ಪು ಇದಾಗಿದೆ.

ಪ್ರಕೃತಿಯು ತನ್ನದೇ ಆದ ಸಾಮರ್ಥ್ಯದೊಂದಿಗೆ ಇಂದು ಭೂಮಿಯ ಮೇಲೆ ಮಾನವನಿಗೆ ಮಾತ್ರವಲ್ಲದೆ ಪ್ರಾಣಿ, ಪಕ್ಷಿ, ಗಿಡ, ಮರ ಇವುಗಳ ನಡುವೆಯೂ ಸಹ ಲಿಂಗಭೇದವನ್ನು ಸೃಷ್ಟಿಸಿದೆ. ಮಾನವನ ಪ್ರಯತ್ನಗಳು, ಅಭಿವೃದ್ಧಿ, ಶೋಧನೆಗಳು ಎಲ್ಲವೂ ಕಾಲಮಿತಿ ಒಳಗೆ ಮತ್ತು ಕಾಲಕ್ಕೆ ತಕ್ಕಂತೆ ತನ್ನ ಪ್ರಾಮುಖ್ಯವನ್ನು ಕಳೆದುಕೊಳ್ಳುತ್ತದೆ. ಆದರೆ ಪ್ರಕೃತಿಯ ನಿಯಮ, ಸೃಷ್ಟಿ ಸದಾ ತನ್ನನ್ನು ಕಾಪಾಡಿಕೊಳ್ಳಲು ತಾನು ಶಕ್ತ ಎಂದು ನಿರೂಪಿಸುತ್ತದೆ. 

ಲೇಖಕ: ಕರ್ನಾಟಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT