ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಖುಷಿಯಿಂದ ಮಾಡುವ ವೃತ್ತಿ ಅಲ್ಲವೇ ಅಲ್ಲ

Last Updated 3 ಜೂನ್ 2022, 19:30 IST
ಅಕ್ಷರ ಗಾತ್ರ

ವೇಶ್ಯೆ, ವೇಶ್ಯಾವೃತ್ತಿ ಎಂದ ತಕ್ಷಣ ಜನರಲ್ಲಿ ತೀವ್ರ ತಿರಸ್ಕಾರ, ಅವಹೇಳನ, ಭೀತಿ, ಆತಂಕ– ಇವೆಲ್ಲ ಭಾವಗಳು ತುಂಬಿಕೊಳ್ಳುತ್ತವೆ. ಇಂದಿನ ನಮ್ಮ ಸಾಮಾಜಿಕ ಮೌಲ್ಯಗಳು ಹದಗೆಡುತ್ತಿರುವುದಕ್ಕೆ ಈ ವೃತ್ತಿಯೇ ಕಾರಣ ಎಂಬ ದೂರನ್ನು ಕೇಳುತ್ತಿರುತ್ತೇವೆ. ಆದರೆ ವೇಶ್ಯಾವೃತ್ತಿಯೆನ್ನುವುದು ಇಂದು ನಿನ್ನೆಯದಲ್ಲ, ಅದಕ್ಕೆ ಕಾನೂನಾತ್ಮಕ ರಕ್ಷಣೆ ದೊರಕಿರುವುದು ಇದೇ ಮೊದಲ ಬಾರಿಯೂ ಅಲ್ಲ.

ತೇಜಸ್ವಿನಿ ಹೆಗಡೆ
ತೇಜಸ್ವಿನಿ ಹೆಗಡೆ

ಪ್ರಾಚೀನ ಕಾಲದಿಂದಲೂ ಗಣಿಕೆಯರ (ವೇಶ್ಯೆ) ಒಂದು ವರ್ಗವನ್ನು ಆಗಿನ ಆಡಳಿತವೂ ಸಮಾಜವೂ ಒಪ್ಪಿಕೊಂಡು ಮಾನ್ಯತೆ ನೀಡಿತ್ತು. ಇದಕ್ಕೆ ಪ್ರಬಲವಾದ ಕಾರಣ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಿಡುವುದು. ಹಿಂದಿನಿಂದಲೂ ಸಮಾಜದಲ್ಲಿ ಪುಂಡರು, ಪೋಕರಿಗಳು, ಗೃಹಸ್ಥಾಶ್ರಮಕ್ಕೆ ಬದ್ಧರಾಗಿಲ್ಲದವರು, ಪತ್ನಿಗೆ ಇನ್ನಿಲ್ಲದಂತೇ ಕಿರುಕುಳ ಕೊಡುವವರಿದ್ದರು. ಇಂಥವರ ಹತೋಟಿಗೆ, ಸಮಾಜದಲ್ಲೊಂದು ಸಮತೋಲನ ಕಾಪಿಟ್ಟುಕೊಳ್ಳಲು ಸಾಂಪ್ರದಾಯಿಕ ಪದ್ಧತಿಯ ನೆಪದಲ್ಲೋ, ವಂಶಾವಳಿಯ ಉದ್ಯೋಗವೆಂದೋ ವೇಶ್ಯಾಗೃಹಗಳನ್ನು, ಬೀದಿಗಳನ್ನು ಅನಾದಿಕಾಲದಿಂದಲೂ ನಮ್ಮಲ್ಲಿ ಕಾಣಬಹುದು.

ಹಿಂದೆ ಗಣಿಕೆಯರಿಗೆಂದೇ ಪ್ರತ್ಯೇಕ ಮನೆ/ಬೀದಿಗಳನ್ನು ಕಲ್ಪಿಸಲಾಗಿತ್ತು. ಹಲವರಿಗೆ ರಾಜಾಶ್ರಯವೂ ದೊರಕಿ, ವಿಶೇಷ ಸಂದರ್ಭಗಳಲ್ಲಿ ದೇವಾಲಯಗಳಲ್ಲಿ ನಾಟ್ಯ ಪ್ರದರ್ಶನಕ್ಕೆ ಆಹ್ವಾನವನ್ನು ನೀಡಲಾಗುತ್ತಿತ್ತು. ಗಣಿಕೆಯರಲ್ಲೂ ಹಲವು ವರ್ಗಗಳಿದ್ದವು. ವೇಶ್ಯಾಗೃಹಗಳಲ್ಲಿ ಆಯ್ಕೆಗಳಿಗೆ ಅವಕಾಶವಿಲ್ಲದೇ ಎಲ್ಲರಿಗೂ ತಮ್ಮನ್ನು ಒಪ್ಪಿಸಿಕೊಳ್ಳುವ, ತಮ್ಮದೇ ಗೃಹದೊಳಗೆ ತಾವು ಇಚ್ಛೆಪಟ್ಟ, ಆಯ್ದುಕೊಂಡ ವಿಟನನ್ನು ಸೇರುವ, ತಮ್ಮ ನಿವಾಸ ಅಥವಾ ಗ್ರಾಹಕನ ನಿವಾಸ ಇವೆರಡನ್ನೂ ಬಿಟ್ಟು ಬೇರೆಲ್ಲೋ ಒಂದಾಗುವ ಅಭಿಸಾರಿಕೆಯರು ಹೀಗೆ. ಚಾರುದತ್ತನ ವಸಂತಸೇನೆ, ವೈಶಾಲಿ ನಗರದ ರಾಜಮನೆತನಕ್ಕೆ ಸೇರಿದ ಪ್ರಸಿದ್ಧ ಶ್ರೀಮಂತ ಗಣಿಕೆ ಆಮ್ರಪಾಲಿ- ಇವರೆಲ್ಲರೂ ಸಮಾಜದಲ್ಲಿ ಒಂದು ಗೌರವವನ್ನು, ಆಯ್ಕೆಯ ಸ್ವಾತಂತ್ರ್ಯವನ್ನು ಹೊಂದಿದವರಾಗಿದ್ದರು.

ಆದರೆ, ಇಂದು ವೇಶ್ಯಾವೃತ್ತಿಯನ್ನು ನೇರವಾಗಿ ಒಪ್ಪಿಕೊಂಡು ನಡೆಸುತ್ತಿರುವವರಲ್ಲದೇ ಸಾಮಾಜಿಕ ತಿರಸ್ಕಾರಕ್ಕೆ ಅಂಜಿ ಅಥವಾ ತಮ್ಮ ಕುಟುಂಬದ ಮಾನ ಕಾಪಾಡುವುದಕ್ಕಾಗಿ ಗುಟ್ಟಾಗಿ ಈ ವೃತ್ತಿಗೆ ಒಳಪಟ್ಟಿರುವವರು ಬಹಳಷ್ಟಿದ್ದಾರೆ. ಕೋಲ್ಕತ್ತದ ರೆಡ್ ಲೈಟ್ ಏರಿಯಾ, ಮುಂಬಯಿಯ ಕಾಮಾಟಿಪುರ, ದೆಹಲಿ, ಗ್ವಾಲಿಯರ್‌ ಪ್ರದೇಶಗಳಲ್ಲಿರುವ ಬಹುದೊಡ್ಡ ವೇಶ್ಯಾವಾಟಿಕೆಯ ಬೀದಿಗಳು– ಇಲ್ಲೆಲ್ಲ ಈ ವೃತ್ತಿಗೆ ಹಲವು ಕಾರಣಗಳಿಂದ ನೂಕಲ್ಪಟ್ಟ ಹೆಣ್ಣು ಮಕ್ಕಳ ಬದುಕು ಮಾತ್ರ ಪಶುವಿಗಿಂತ ಕಡೆಯಾಗಿರುತ್ತದೆ. ಆಯ್ಕೆಯ ಸ್ವಾತಂತ್ರ್ಯದ ಮಾತಿರಲಿ, ಅವರ ದೇಹ ಅನೇಕ ರೋಗಗಳ ಮೂಟೆಯಾಗಿ ನರಕ ಸದೃಶ್ಯವಾಗಿರುತ್ತದೆ. ದುರದೃಷ್ಟವಶಾತ್, ಹಿಂದಿನಿಂದಲೂ ಆಚರಣೆಯಲ್ಲಿದ್ದ ದೇವದಾಸಿ ಪದ್ಧತಿಯು ಇಂದಿಗೂ ನಮ್ಮಲ್ಲಿ ಹಲವೆಡೆ ಜಾರಿಯಲ್ಲಿದೆ.

ಸುಪ್ರೀಂ ಕೋರ್ಟ್‌ ವೇಶ್ಯಾವೃತ್ತಿಗೆ ಇತ್ತೀಚೆಗೆ ಮಾನ್ಯತೆ ನೀಡಿದೆ. ಪೋಲೀಸರು ಶೋಧ ನಡೆಸುವ ಸಂದರ್ಭದಲ್ಲಿ ವೇಶ್ಯೆಯರನ್ನು ಮಾನವೀಯತೆಯಿಂದ ನೋಡಿಕೊಳ್ಳಬೇಕು ಮತ್ತು ಇನ್ನಿತರ ವೃತ್ತಿಗಳಲ್ಲಿ ಇರುವವರಿಗೆ ನೀಡುವ ಎಲ್ಲಾ ರೀತಿಯ ಹಕ್ಕುಗಳನ್ನು ಅವರಿಗೂ ನೀಡಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಅದೇ ರೀತಿ ಮಾಧ್ಯಮಗಳು ಅವರ ವಿವರಗಳನ್ನು ಬಹಿರಂಗಪಡಿಸಬಾರದು ಎಂದಿದೆ. ವೇಶ್ಯೆಯರು ಅಪರಾಧಿಗಳಲ್ಲ, ಬಲಿಪಶುಗಳು. ಇಂತಹ ವೃತ್ತಿಗೆ ಅವರನ್ನು ತಳ್ಳಿದವರು, ತಾಣ ಕಲ್ಪಿಸುವವರು ನಿಜವಾದ ಅಪರಾಧಿಗಳಾಗಿದ್ದು, ಅಂಥವರನ್ನು ಬಂಧಿಸುವ ಅಧಿಕಾರವನ್ನು ನೀಡಿದೆ. ಅಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಲೈಂಗಿಕ ಕ್ರಿಯೆಗೆ ತೊಡಗುವ ಅಥವಾ ಅದಕ್ಕಾಗಿ ಕರೆಯನ್ನು ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದೆ. ಆದರೆ ಇಲ್ಲಿ ನನ್ನ ಪ್ರಶ್ನೆ ಎಂದರೆ ಈ ಕಾನೂನು ಮಾನ್ಯತೆಯು ವೇಶ್ಯೆಯರ ಬದುಕಿನಲ್ಲಿ ಮತ್ತು ಸಮಾಜದಲ್ಲಿ ಯಾವ ರೀತಿಯ ಮಹತ್ತರ ಬದಲಾವಣೆಯನ್ನು ತರಬಹುದು?

ಎಳವೆಯಲ್ಲೇ ಆಮಿಷ, ವಂಚನೆ ಇನ್ನಿತರ ಕಾರಣಗಳಿಂದ ದೊಡ್ಡ ನಗರಗಳನ್ನು ಸೇರುವ ಹೆಣ್ಣು ಮಕ್ಕಳು ಬಹುಪಾಲು ಬಲಿಯಾಗುವುದು ವೇಶ್ಯಾವೃತ್ತಿಗೆ. ಒಮ್ಮೆ ಈ ಸುಳಿಗೆ ಸಿಲುಕಿದರೆ, ಆಮೇಲೆ ಹೊರಬರುವುದು ಸುಲಭವಲ್ಲ. ಸಮಾಜ ಅವರಿಗೆ ಆ ಅವಕಾಶವನ್ನು ಸುಲಭದಲ್ಲಿ ಕಲ್ಪಿಸುವುದೂ ಇಲ್ಲ. ನೈತಿಕತೆ- ಅನೈತಿಕತೆಯ ಚೌಕಟ್ಟು ಕಾನೂನಿನಲ್ಲಿ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಹಿಂದೆ ಮದುವೆಯಾಚೆಯ ಸಂಬಂಧವು ಅನೈತಿಕ, ಕಾನೂನುಬಾಹಿರ ಎಂದಿದ್ದರೆ ಈಗಿನ ಕಾನೂನು ಪ್ರಕಾರ, ಪರಸ್ಪರ ಒಪ್ಪಿದ್ದರೆ ಕಾನೂನು ಬಾಹಿರ ಅಲ್ಲ. ಹೀಗಾಗಿ ವಿವಾಹೇತರ ಸಂಬಂಧವನ್ನು ಯಾರೂ ಎಷ್ಟೂ ಹೊಂದಬಹುದು. ಇದರಿಂದ ಸಮಾಜದಲ್ಲಿ ಆಗುತ್ತಿರುವ ಸೂಕ್ಷ್ಮ ವಿಪ್ಲವಗಳು, ಅಂತಹ ದಂಪತಿಗಳ ವೈವಾಹಿಕ ಬದುಕು ಮತ್ತು ಅವರ ಮಕ್ಕಳ ಮಾನಸಿಕ ಸ್ವಾಸ್ಥ್ಯ, ಇಂತಹ ಬಹು ಸಂಬಂಧಗಳನ್ನು ಇಟ್ಟುಕೊಳ್ಳುವ ವ್ಯಕ್ತಿಗೆ ಎದುರಾಗುವ ದೈಹಿಕ ಅನಾರೋಗ್ಯಗಳು - ಇವೆಲ್ಲವನ್ನೂ ಕಾನೂನು ಸರಿಪಡಿಸಲು ಸಾಧ್ಯವಾಗುವುದೇ?

ಯಾವುದೋ ಕಾರಣದಿಂದ ವೇಶ್ಯಾವೃತ್ತಿಯನ್ನು ಒಪ್ಪಿಕೊಂಡು ನಡೆಸುತ್ತಿರುವವರಿಗೆ ಕಾನೂನಾತ್ಮಕ ಮಾನ್ಯತೆ ಸಿಕ್ಕಿರುವುದು ಮುಳುಗುವವರಿಗೆ ಹುಲ್ಲುಕಡ್ಡಿ ಸಿಕ್ಕಂತೆ ಮಾತ್ರ. ಇದರಿಂದ, ಪ್ರತಿದಿನದ ನರಕದಿಂದ ಬಿಡುಗಡೆ ಹೊಂದಲು ಮತ್ತು ಇದೇ ಕಾನೂನಿನೊಳಗಿನ ಹುಳುಕುಗಳನ್ನು ಬಳಸಿಕೊಂಡು ನಡೆಸಲಾಗುವ ದೌರ್ಜನ್ಯಗಳನ್ನು ತಡೆಯಲು ಸಾಧ್ಯವೇ? ಕಾನೂನು ಮಾನ್ಯತೆ ಸಿಕ್ಕಿದೆ ಎಂದಾಕ್ಷಣ ಅನಪೇಕ್ಷಿತ ವೃತ್ತಿಯನ್ನು ಇನ್ನಿತರ ವೃತ್ತಿಯಂತೆ ಮನಸಾರೆ ಒಪ್ಪಿ ನಡೆಸಬಹುದೇ? ಇಂತಹ ಪ್ರಶ್ನೆಗಳು ಹಾಗೇ ಉಳಿದುಕೊಂಡುಬಿಡುತ್ತವೆ. ರೆಡ್ ಲೈಟ್ ಏರಿಯಾಗಳಿಗೆ ಸೇರಲ್ಪಟ್ಟ ಹೆಣ್ಣು ಮಕ್ಕಳಿಗೆ ಒಂದು ಸಣ್ಣ ಮಾನಸಿಕ ಧೈರ್ಯ, ಸಮಾಧಾನವನ್ನು ಈ ತೀರ್ಪು ಕೊಡಬಹುದು. ಆದರೆ ಈ ಕೋವಿಡ್ ಸಮಯದಲ್ಲುಂಟಾದ ಆರ್ಥಿಕ ಹೊಡೆತಗಳಿಂದ ತಮ್ಮ ಕುಟುಂಬವನ್ನು ನಿರ್ವಹಿಸಲಾಗದೇ ಈ ವೃತ್ತಿಯನ್ನು ಗುಟ್ಟಾಗಿ (ತಮ್ಮ ಹಾಗೂ ತಮ್ಮವರ ಮಾನಕ್ಕೆ ಅಂಜಿ) ಅಪ್ಪಿಕೊಂಡವರಿಗೆ ಅದೆಷ್ಟರ ಮಟ್ಟಿಗೆ ಸಹಕಾರಿಯಾಗುವುದೋ ಗೊತ್ತಿಲ್ಲ. ಅನಿವಾರ್ಯವಾಗಿ ಈ ವೃತ್ತಿಯಲ್ಲಿ ತೊಡಗಿರುವವಳನ್ನು ಆಕೆ ಅಕ್ರಮವಾಗಿ ದಂಧೆ ನಡೆಸುತ್ತಿದ್ದಾಳೆ ಎಂದೋ ಇಲ್ಲ ಮತ್ಯಾವುದಾದರೂ ಆರೋಪ ಹೊರಿಸಿ ಬಂಧಿಸಿದರೆ, ತಾನು ನಿರಪರಾಧಿ, ಕಾನೂನಿನ ಪರಿಧಿಯಲ್ಲೇ ವೃತ್ತಿ ಮಾಡುತ್ತಿರುವವಳು ಎಂಬುದನ್ನು ಸಾಬೀತುಪಡಿಸಲು ಆಕೆ ಅದೆಷ್ಟು ಹೋರಾಡಬಲ್ಲಳು? ವೇಶ್ಯಾವೃತ್ತಿಗೆ ಕಾನೂನು ಮಾನ್ಯತೆ ಸಿಕ್ಕಾಕ್ಷಣ ನಮ್ಮ ಸಮಾಜ ಅವಳನ್ನು ದೂಷಿಸದೇ ಆಕೆಯ ಈ ವೃತ್ತಿಗೆ ಕಾರಣರಾದ ಪುರುಷರು, ಅವಳನ್ನಿಟ್ಟುಕೊಂಡು ದಂಧೆ ನಡೆಸುವವರು ಇವರೆಲ್ಲರ ಅಪರಾಧಗಳನ್ನು ಪರಿಗಣಿಸುತ್ತದೆಯೇ? ಇನ್ನು, ಪುರುಷರೂ ಹಲವು ಕಾರಣಗಳಿಗೆ ಇದೇ ವೃತ್ತಿಯನ್ನು ನಡೆಸುತ್ತಿದ್ದಾರೆ ಎಂಬುದು ಅರಿಯದ್ದೇನಲ್ಲ. ಆದರೆ ಸಮಾಜ ಅಂತಹ ಪುರುಷರನ್ನು ನೋಡುವ ದೃಷ್ಟಿಗೂ ಮಹಿಳೆಯರನ್ನು ಕಾಣುವ ರೀತಿಗೂ ಬಹಳ ವ್ಯತ್ಯಾಸವಿದೆ. ಕಾನೂನು ಸಮಾನತೆ ಘೋಷಿಸಬಹುದು, ಆದರೆ ಸಾಮಾಜಿಕ ಭದ್ರತೆ ನೀಡಿ, ನಿಷ್ಪಕ್ಷಪಾತದಿಂದ ಕಾನೂನು ಜಾರಿಯಾಗುವಂತೆ ನೋಡಿಕೊಳ್ಳುವುದು ಸಾಧ್ಯವೇ?

ಕಾನೂನಿನಲ್ಲಿ ಒಪ್ಪಿಗೆ ದೊರಕಿದೆ ಎಂದಾಕ್ಷಣ, ಈ ವೃತ್ತಿಯನ್ನು ಸಾಮಾಜಿಕ ಮನ್ನಣೆ ಪಡೆದ ಬೇರೆಯ ವೃತ್ತಿಗಳಂತೆಯೇ ಖುಷಿಯಿಂದ ಒಪ್ಪಿಕೊಳ್ಳುವ ಹೆಣ್ಣು ಮಕ್ಕಳು ಇದ್ದಾರೆಯೇ? ಇದು ತಮ್ಮ ವೃತ್ತಿ ಎಂದು ಸಾರ್ವಜನಿಕವಾಗಿ ಘೋಷಿಸಿಕೊಳ್ಳುವರೇ? ನೈತಿಕ-ಅನೈತಿಕ ದೃಷ್ಟಿಗಿಂತ ಮಾನಸಿಕ-ದೈಹಿಕ ಆರೋಗ್ಯದ ದೃಷ್ಟಿಯಲ್ಲಿ ಈ ವೃತ್ತಿ ಸದಾ ಕಾರುಣ್ಯವನ್ನು ಬೇಡುವಂಥದ್ದೇ. ಎಲ್ಲರೂ ಖುಷಿಯಿಂದ ಸ್ವಾಗತಿಸುವಂಥ ಉದ್ಯೋಗವಂತೂ ಖಂಡಿತ ಅಲ್ಲ.

ಅಸಹಾಯಕರು, ಬಡವರು, ವಂಚನೆಗೊಳಗಾದವರು ಮಾತ್ರ ಈ ವೃತ್ತಿಗೆ ತಳ್ಳಲ್ಪಡುತ್ತಾರೆ ಎನ್ನಲಾಗದು. ಉತ್ತಮ ಸ್ಥಿತಿಯಲ್ಲಿರುವ ಯುವಕ/ಯುವತಿಯರು ವಿಲಾಸಿ ಜೀವನಕ್ಕೆ ಹಾತೊರೆದು, ದುಶ್ಚಟಗಳಿಗೆ ದಾಸರಾಗಿ ಈ ವೃತ್ತಿಗೆ ಸ್ವಯಂಪ್ರೇರಿತರಾಗಿ ಹೋಗುವವರೂ. ಆದರೆ ಇಂಥವರಿಗೆ ಇದು ವೃತ್ತಿಗಿಂತ ಪ್ರವೃತ್ತಿಯೆನಿಸಿಕೊಳ್ಳವುದು ಮತ್ತು ಇವರದ್ದು ರೆಡ್ ಲೈಟ್ ಏರಿಯಾ ವ್ಯಾಪ್ತಿಗೆ ಬರುಂಥದ್ದಲ್ಲ. ಆದರೆ ಇದು ಅವರ ಸ್ವೇಚ್ಛೆ ಆಗಿರುತ್ತದೆಯೇ ಹೊರತು ಕಾನೂನಿನ ದೃಷ್ಟಿಯಲ್ಲಿ ಅಪರಾಧ ಎಂದೆನ್ನಿಸಿಕೊಳ್ಳದು. ಹೀಗಾಗಿ ಈಗ ಮಾನ್ಯತೆ ದೊರಕಿರುವುದು ರೆಡ್ ಲೈಟ್ ಏರಿಯಾಗಳಲ್ಲಿ ನಲುಗುತ್ತಿರುವ ಅಸಹಾಯಕರ ಮನೋಬಲದ ವೃದ್ಧಿಗೆ. ಆ ದಿಸೆಯಲ್ಲಿ ಇದೊಂದು ಅನಿವಾರ್ಯವಾಗಿದ್ದಂಥ ತೀರ್ಪೇ ಹೊರತು ಯಾರೂ ಈ ವೃತ್ತಿಯನ್ನು ಎಲ್ಲೆಂದರಲ್ಲಿ ಮುಕ್ತವಾಗಿ ನಡೆಸಲು ಕೊಟ್ಟಿರುವ ಅವಕಾಶವಲ್ಲ.

ಲೇಖಕಿ: ಕಾದಂಬರಿಕಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT