ಶುಕ್ರವಾರ, ಮಾರ್ಚ್ 24, 2023
22 °C
ಪಿಎಚ್.ಡಿ ಮಾಡದೇ ಅತ್ಯುತ್ತಮ ಶಿಕ್ಷಕರಾಗಬಹುದು, ವಿ.ವಿ. ಹೊರಗೂ ಉತ್ತಮ ಸಂಶೋಧನೆಗಳಾಗಬಹುದು

ಸಂಶೋಧನೆ: ದಕ್ಕಿದೆಯೇ ಗಾಂಭೀರ್ಯ?

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಒಂದಂತೂ ಸತ್ಯ, ಪ್ರಸಕ್ತ ನಮ್ಮ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಗಂಭೀರವಾದ ಸಂಶೋಧನೆಗಳು ನಡೆಯುತ್ತಿಲ್ಲ. ಪಾಶ್ಚಾತ್ಯ ವಿಶ್ವವಿದ್ಯಾಲಯಗಳಿಂದ ಯಥಾವತ್ತಾಗಿ ಎರವಲು ತಂದಿರುವ ಉನ್ನತ ಶಿಕ್ಷಣದ ಸಂಶೋಧನಾ ವಿಧಿ ವಿಧಾನವನ್ನು, ಇಲ್ಲಿ ಸಹಜ ಪ್ರಕ್ರಿಯೆಯಂತೆ ಬೆಳೆಸುವುದಕ್ಕೆ ಪೂರಕವಾದ ವಾತಾವರಣವನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳದೆ ಇದ್ದುದೇ, ಇಂದು ನಮ್ಮ ಸಂಶೋಧನಾ ಕ್ಷೇತ್ರ ಇಷ್ಟೊಂದು ಗೊಂದಲಮಯ ಹಾಗೂ ನಿರುಪಯುಕ್ತ ಚಟುವಟಿಕೆಯಾಗಿ ಮಾರ್ಪಡಲು ಮುಖ್ಯ ಕಾರಣ.

ಪ್ರಸಕ್ತ, ಮಾರ್ಗದರ್ಶಕರು ಸಂಶೋಧನಾರ್ಥಿಗಳನ್ನು ದೂಷಿಸುವುದು, ಸಂಶೋಧನಾರ್ಥಿಗಳು ಮಾರ್ಗದರ್ಶಕರನ್ನು ಹೀಯಾಳಿಸುವುದು ಅಥವಾ ಎರಡೂ ಕಡೆಯವರು ಕೂಡಿ ವ್ಯವಸ್ಥೆಯ ಲೋಪದೋಷ ಗಳನ್ನು ವಿಮರ್ಶಿಸುವುದರ ಬದಲಾಗಿ ಸ್ವವಿಮರ್ಶೆ ಮಾಡಿಕೊಂಡರೆ, ಹೆಚ್ಚಿನ ಸಮಸ್ಯೆಗಳಿಗೆ ಉತ್ತರ ಸಿಗಬಹುದು. ಈ ದಿಸೆಯಲ್ಲಿ, ನಾವು ಚರ್ಚಿಸಬೇಕಾದ ಮೂರು ಆಯಾಮಗಳೆಂದರೆ, ಸಂಶೋಧನಾರ್ಥಿಗಳು, ಮಾರ್ಗದರ್ಶಕರು ಮತ್ತು ಉನ್ನತ ಶಿಕ್ಷಣ ವ್ಯವಸ್ಥೆ.

ಮೊದಲನೆಯದಾಗಿ, ಸಂಶೋಧನಾರ್ಥಿಗಳು ಸಂಶೋಧನೆಯನ್ನು ಯಾಕೆ ಕೈಗೊಳ್ಳುತ್ತಾರೆ?- ಒಂದು ವಿಷಯದ ಕುರಿತ ಸ್ವಆಸಕ್ತಿಯಿಂದಲೋ ಅಲ್ಲಿ ಕಾಡುವ ಬೌದ್ಧಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೋ ಪದೋನ್ನತಿಗಾಗಿಯೋ ಹೆಸರಿನ ಮುಂದೆ ತಗಲಿಸಿಕೊಳ್ಳುವ ಡಾಕ್ಟರ್ ಪದವಿಗಾಗಿಯೋ ಅಥವಾ ಉದ್ಯೋಗ ಗಿಟ್ಟಿಸಿಕೊಳ್ಳಲು ಇದೊಂದು ಕಡ್ಡಾಯ ಪದವಿಯಾಗುವ ಸಾಧ್ಯತೆ ಇರುವುದರಿಂದಲೋ? ಯಾವುದೇ ಒಂದು ವಿಷಯದಲ್ಲಿ ಸ್ವಆಸಕ್ತಿಯಿಂದ ಪ್ರೇರಿತವಾದ ಆಳದ ಓದಿನ ಮೂಲಕ, ಹುಟ್ಟುವ ಬೌದ್ಧಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಹೆಬ್ಬಯಕೆಯೊಂದೇ ಸಂಶೋಧನಾರ್ಥಿಯ ಉನ್ನತ ಶಿಕ್ಷಣದ ಸಂಶೋಧನಾ ವಿಭಾಗದ ಪ್ರವೇಶಕ್ಕೆ ಅರ್ಹತೆಯಾಗಬೇಕಾದುದು. ಉಳಿದವೆಲ್ಲಾ ಇಲ್ಲಿ ನಗಣ್ಯ.

ಎರಡನೆಯದು, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಮಾರ್ಗದರ್ಶಕರಾಗಿ ಇರುವವರಲ್ಲಿ ಎಷ್ಟು ಮಂದಿ ಸ್ವಸಾಮರ್ಥ್ಯದ ಜ್ಞಾನ ಸೃಷ್ಟಿಯಿಂದ ಸಂಶೋಧನಾರ್ಥಿಗಳನ್ನು ತಮ್ಮತ್ತ ಸೆಳೆಯಲು ಅರ್ಹರಾಗಿದ್ದಾರೆ? ಹೆಚ್ಚಿನ ಸಂದರ್ಭಗಳಲ್ಲಿ, ಮಾರ್ಗದರ್ಶಕ ರಿಗೆ ಅವರ ಸಂಶೋಧನಾ ಮಾರ್ಗದರ್ಶಕರು ಹೇಗೆ ಬೌದ್ಧಿಕವಾಗಿ ಬೆಳೆಸಿದರು ಅಥವಾ ಕೇವಲ ವೈಯಕ್ತಿಕ ಕೆಲಸ ಮಾಡಿಸಿಕೊಂಡಿದ್ದರು ಎನ್ನುವ ಸ್ವ ಅನುಭವದ ಪರಂಪರೆ ಮುಂದುವರಿಯುವ ಸಾಧ್ಯತೆಯೇ ಹೆಚ್ಚು.

ಹೆಚ್ಚಿನ ಮಾರ್ಗದರ್ಶಕರ ಸ್ವಕಲಿಕೆ ಡಾಕ್ಟರೇಟ್ ಪಡೆಯುವುದರೊಂದಿಗೆ ಮುಗಿದುಹೋಗಿದ್ದು, ಮುಂದೇನಿದ್ದರೂ ಆ ಪದವಿಯ ಆಧಾರದ ಮೇಲೆ ಪದೋನ್ನತಿ ಮತ್ತು ಹೆಸರು ಗಳಿಕೆಯ ಕಾಯಕ ಮಾತ್ರ. ಜ್ಞಾನಾರ್ಜನೆಗೆ ಗೌರವ ಕೊಡುವ ಮಾರ್ಗದರ್ಶಕ ಎಂದಿಗೂ ಶೋಷಣೆ ಮಾಡಲಾರ, ಬದಲಾಗಿ ಶಿಷ್ಯನ ಉನ್ನತಿಗೆ ಸದಾ ಬೆಂಬಲವಾಗಿರುತ್ತಾನೆ.

ಇನ್ನು ನಮ್ಮ ಪ್ರಸಕ್ತ ಉನ್ನತ ಶಿಕ್ಷಣ ಕ್ಷೇತ್ರದ ಸಂಶೋಧನಾ ಕಾರ್ಯವೈಖರಿ ಮತ್ತು ಮಾರ್ಗಸೂಚಿ ಗಳಂತೂ ಗಂಭೀರ ಸಂಶೋಧನೆಗೆ ಹೇಳಿಮಾಡಿಸಿದವಲ್ಲ. ನಿಜ ಹೇಳಬೇಕೆಂದರೆ, ಇಲ್ಲಿ ಪರಸ್ಪರ ಆಯ್ಕೆ ಸಂಶೋಧನಾರ್ಥಿಗೂ ಇಲ್ಲ, ಹಾಗೆಯೇ ಮಾರ್ಗದರ್ಶಕ ರಿಗೂ ಬಹುತೇಕ ಇಲ್ಲವೆಂದೇ ಹೇಳಬಹುದು. ಇಲ್ಲಿ ಅದನ್ನು, ವಿಭಾಗದಲ್ಲಿ ಖಾಲಿಯಿರುವ ಸಂಖ್ಯೆ, ರೋಸ್ಟರ್ ವಿಧಾನ ಹಾಗೂ ಕೆಲವೊಮ್ಮೆ ಸಂಶೋಧನಾರ್ಥಿಯ ಪ್ರಭಾವ, ಸ್ಥಾನ ನಿಗದಿಗೊಳಿಸುತ್ತವೆ. ಇವುಗಳ ನಡುವೆ, ನಿಜವಾಗಿ ಪರಿಗಣಿಸಲ್ಪಡಬೇಕಾದ, ಸಂಶೋಧನಾರ್ಥಿಯ ಆಸಕ್ತ ಕ್ಷೇತ್ರ ಹಾಗೂ ಅದಕ್ಕೆ ಪೂರಕವಾದ ವಿದ್ವತ್ ಹೊಂದಿರುವ ಮಾರ್ಗದರ್ಶಕರ ಮುಖಾಮುಖಿಯಾಗುವುದಿಲ್ಲ. ವ್ಯವಸ್ಥೆಯ ಎಲ್ಲಾ ವಿಧಿವಿಧಾನಗಳ ಒಮ್ಮತವಾದ ಮೇಲಷ್ಟೇ, ಇವರಿಬ್ಬರು ಸಂಶೋಧನೆಯ ವಿಷಯವನ್ನು ಪ್ರಥಮ ಬಾರಿಗೆ ಚರ್ಚಿಸುತ್ತಾರೆ. ಇದೊಂದು ಬಲವಂತದ ವಿವಾಹದಂತೆ. ಆಮೇಲೆ, ಹೊಂದಾಣಿಕೆ ಮಾಡಿಕೊಂಡು ಕೈಗೊಂಡ ಕಾಯಕ ಪೂರ್ಣಗೊಳಿಸಬಹುದು ಅಥವಾ ಕಿತ್ತಾಟದ ವಿಚ್ಛೇದನವೂ ಆಗಬಹುದು. ಆದರೆ, ಮಹತ್ತರ ಸಂಶೋಧನೆ ಆಗುವುದಂತೂ ಅಪರೂಪ.

ಹಾಗೆಯೇ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಅಥವಾ ಪ್ರಮೋಷನ್ ಪಡೆಯಲು ಪಿಎಚ್.ಡಿ ಕಡ್ಡಾಯಗೊಳಿಸಿರುವುದು ಸಂಶೋಧನೆಯ ಗಾಂಭೀರ್ಯ ಕಳೆದುಹೋಗಲು ಪ್ರಮುಖ ಕಾರಣ. ಹಾಗಂತ, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಶ್ರೇಷ್ಠ ಮಟ್ಟದ ಸಂಶೋಧನೆ ನಡೆದೇ ಇಲ್ಲವೆಂದಲ್ಲ. ನಮ್ಮ ವಿಶ್ವವಿದ್ಯಾಲಯಗಳ ಆರಂಭಿಕ ದಿನಗಳಲ್ಲಿ ಶ್ರೇಷ್ಠ ಸಂಶೋಧನಾ ಗ್ರಂಥಗಳು, ಮಾರ್ಗದರ್ಶಕರ ವಿದ್ವತ್ತಿನಿಂದಲೇ ಗುರುತಿಸಲ್ಪಟ್ಟ ವಿಭಾಗಗಳು, ಅವರು ಸಿದ್ಧಪಡಿಸಿರುವ ಸಂಶೋಧನಾ ಪರಂಪರೆ ಹಾಗೂ ಅದನ್ನು ಮುಂದುವರಿಸಿದ ಶಿಷ್ಯವೃಂದ, ಹೀಗೆ ನಡೆದಿರುವುದರ ಬಹಳಷ್ಟು ಕುರುಹುಗಳಿವೆ. ಹಾಗಾಗಿ, ಬದಲಾದ ಈ ಪರಿಸ್ಥಿತಿಗೆ, ಸಂಶೋಧಕರು, ಮಾರ್ಗದರ್ಶಕರು ಹಾಗೂ ಇವರನ್ನು ನಿಯಂತ್ರಿಸುವ ಉನ್ನತ ಶಿಕ್ಷಣ ವ್ಯವಸ್ಥೆ, ಸ್ವವಿಮರ್ಶೆಯೊಂದಿಗೆ ಜೊತೆಯಾಗಿ ಪರಿಹಾರ ಕಂಡುಕೊಳ್ಳಬೇಕಿದೆ.

ಕೊನೆಯದಾಗಿ, ನಿಜವಾದ ಸಂಶೋಧನೆಯನ್ನು ಪಾರ್ಟ್ ಟೈಂನಲ್ಲಿ ಮಾಡಲಾಗುವುದಿಲ್ಲ. ಒಂದು ಶ್ರೇಷ್ಠ ಸಂಶೋಧನೆಗೆ ಸಂಶೋಧನಾರ್ಥಿಯ ತನು, ಮನ, ಧನ, ಸಮಯ, ಏಕಾಗ್ರತೆ ಎಲ್ಲವನ್ನೂ ಸಮರ್ಪಿಸಬೇಕಾಗುತ್ತದೆ. ವ್ಯವಸ್ಥೆಯ ಲಾಭ ಪಡೆಯುವವರ ಮಧ್ಯೆಯೂ ನಮಗೆ ಇಂತಹ ಶ್ರೇಷ್ಠ ಸಂಶೋಧಕರು ಹಾಗೂ ಬೆನ್ನು ತಟ್ಟುವ ಮಾರ್ಗದರ್ಶಕರು ವಿರಳವಾಗಿಯಾದರೂ ಇನ್ನೂ ಕಾಣಸಿಗುತ್ತಾರೆ ಎನ್ನುವುದು ಸಮಾಧಾನದ ಸಂಗತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು