ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಂತ್ರ ಸ್ಥಿತಿ ನಿರ್ಮಾಣವೇ ಜೆಡಿಎಸ್‌ ಧ್ಯೇಯ: ಪ್ರಜಾವಾಣಿ ಸಂವಾದದಲ್ಲಿ ಅಭಿಪ್ರಾಯ

ಜೆಡಿಎಸ್‌: ಮಿಷನ್‌ 123–ಕಾರ್ಯಸಾಧುವೇ? ಕುರಿತು ನಡೆದ ‘ಪ್ರಜಾವಾಣಿ’ ಸಂವಾದ
Last Updated 30 ಸೆಪ್ಟೆಂಬರ್ 2021, 17:23 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಜೆಡಿಎಸ್‌ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದು ಕನಸಷ್ಟೇ. ಆ ಪಕ್ಷ ಇಟ್ಟುಕೊಂಡಿರುವ ಗುರಿ ಅವಾಸ್ತವಿಕ ಮತ್ತು ಅಸಾಧ್ಯವಾದುದು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗಬಾರದು. ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿ, ಇತರ ಪಕ್ಷಗಳು ಸರ್ಕಾರ ರಚನೆಗೆ ತನ್ನನ್ನೇ ಅವಲಂಬಿಸುವಂತೆ ಮಾಡುವುದು ಆ ಪಕ್ಷದ ಉದ್ದೇಶ. ಈ ತಂತ್ರಗಾರಿಕೆಯ ಭಾಗವೇ ಮಿಷನ್‌–123’....

‘ಜೆಡಿಎಸ್‌: ಮಿಷನ್‌ 123–ಕಾರ್ಯಸಾಧುವೇ? ವಿಷಯದ ಕುರಿತು ನಡೆದ ‘ಪ್ರಜಾವಾಣಿ’ ಸಂವಾದದಲ್ಲಿ ಗುರುವಾರ ವ್ಯಕ್ತವಾದ ಅಭಿಪ್ರಾಯವಿದು. ‘ಪ್ರಾದೇಶಿಕ ಅಸ್ಮಿತೆಯನ್ನು ಬಲವಾಗಿ ಪ್ರತಿಪಾದಿಸಿದರೆ ಜೆಡಿಎಸ್‌ಗೆ ಅಲ್ಪ ಲಾಭವಾಗಬಹುದು. ಆ ಪಕ್ಷಕ್ಕೆ ದೊಡ್ಡಮಟ್ಟದ ಕಾರ್ಯಕರ್ತರ ಪಡೆಯೇ ಇಲ್ಲ. ನಿರ್ದಿಷ್ಟ ಸಿದ್ಧಾಂತವೂ ಇಲ್ಲ’ ಎಂಬ ಅಭಿಪ್ರಾಯವೂ ಬಂದವು.

‘ಬಿಜೆಪಿ, ಕಾಂಗ್ರೆಸ್‌ನವರಿಗೆ ಭಯ ಶುರುವಾಗಿರ ಬಹುದು’

ವೈಎಸ್‌ವಿ ದತ್ತ
ವೈಎಸ್‌ವಿ ದತ್ತ

ಈ ಬಾರಿ ಜೆಡಿಎಸ್‌ ಕುರಿತು ಜನರಲ್ಲಿ ಸುಪ್ತ ಭಾವನೆ ಇದೆ. ಅದು ನಮ್ಮ ಪಾಲಿಗೆ ಆಶಾಕಿರಣ. ಇದರ ಸಂಪೂರ್ಣ ಲಾಭ ‍ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

2004ರ ಚುನಾವಣೆಯಲ್ಲಿ ಬೀದರ್‌, ಕಲಬುರ್ಗಿ, ರಾಯಚೂರು, ಕೊ‍ಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಗಳಲ್ಲಿ ನಾವು ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೆವು. ಕಲ್ಯಾಣ ಕರ್ನಾಟಕದಲ್ಲಿ ಈಗಲೂ ನಮಗೆ ಗಟ್ಟಿಯಾದ ನೆಲೆ ಇದೆ.

ಪಕ್ಷದಲ್ಲಿ ಮಹಿಳಾ ಕಾರ್ಯಕರ್ತರನ್ನು ಸೃಷ್ಟಿಮಾಡಲು ಆಗಲಿಲ್ಲ ಎಂಬ ಕೊರಗು ದೇವೇಗೌಡರಿಗೂ ಕಾಡುತ್ತಿದೆ. ಈ ತಪ್ಪನ್ನು ಸರಿಪಡಿಸಿಕೊಳ್ಳಲು ಮುಂದಾಗಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಪ್ರಾತಿನಿಧ್ಯ ನೀಡಲು ನಿರ್ಧರಿಸಲಾಗಿದೆ. ಯುವಕರಿಗೂ ಹೆಚ್ಚಿನ ಆದ್ಯತೆ ಸಿಗಲಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ನಮ್ಮ ಸಿದ್ಧತೆಯನ್ನು ಬಹಳ ಕುತೂಹಲದಿಂದ ನೋಡುತ್ತಿವೆ. ಆ ಪಕ್ಷಗಳಲ್ಲಿ ಈಗ ಭಯ ಶುರುವಾಗಿದೆ.

–ವೈ.ಎಸ್‌.ವಿ.ದತ್ತ, ಜೆಡಿಎಸ್ ಮುಖಂಡ.

***

‘ಜೆಡಿಎಸ್‌ನವರದ್ದು ಕಷ್ಟಸಾಧ್ಯ ಗುರಿ’

ಬಿ.ಎಲ್‌ ಶಂಕರ್‌
ಬಿ.ಎಲ್‌ ಶಂಕರ್‌

ಜನತಾದಳವು ರಾಷ್ಟ್ರೀಯ ಪಕ್ಷಗಳ ಸ್ವರೂಪವನ್ನೇ ಹೊಂದಿತ್ತು. ಒಡಕಿನ ಕಾರಣ ಪ್ರಾದೇಶಿಕ ಪಕ್ಷದ ಮಟ್ಟಕ್ಕೆ ಇಳಿದಿದೆ. 2004ರ ಜೆಡಿಎಸ್‌ಗೂ ಈಗಿನ ಜೆಡಿಎಸ್‌ಗೂ ಬಹಳ ವ್ಯತ್ಯಾಸವಿದೆ. ಆಗ ಸಿದ್ದರಾಮಯ್ಯ ಆ ಪಕ್ಷದಲ್ಲಿದ್ದು. ಬಳಿಕ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಧ್ರುವೀಕರಣಗಳು ನಡೆದಿವೆ.

1983ರಲ್ಲಿ ಜನತಾ ಪರಿವಾರವಿದ್ದ ಸ್ಥಾನಕ್ಕೆ ಈಗ ಬಿಜೆಪಿ ಬಂದುಬಿಟ್ಟಿದೆ. ಅಭ್ಯರ್ಥಿಗಳಿಗೆ ಏನೇ ತರಬೇತಿ ನೀಡಿದರೂ ಮತ ಗಳಿಕೆಯ ಪ್ರಮಾಣ ಹೆಚ್ಚಿಸಿಕೊಳ್ಳಬೇಕಾದರೆ ಪ್ರಾದೇಶಿಕ ವಿಷಯಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗಬೇಕಾಗುತ್ತದೆ. ಕರ್ನಾಟಕದ ಮಟ್ಟಿಗೆ ನೆಲ, ಜಲ ಮತ್ತು ಭಾಷೆಯ ವಿಷಯ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದ ನಿದರ್ಶನಗಳೇ ಇಲ್ಲ.ದೇವೇಗೌಡರ ಮೇಲೆ ಇಟ್ಟಿರುವ ಪ್ರೀತಿ ಮತ್ತು ಗೌರವವನ್ನು ಕುಮಾರಸ್ವಾಮಿ ಅವರ ಮೇಲೆ ರಾಜ್ಯದ ಜನರು ತೋರುವುದಿಲ್ಲ.

ಡಾ.ರಾಜ್‌ಕುಮಾರ್‌ ಮನಸ್ಸು ಮಾಡಿದ್ದರೆ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟ ಬಹುದಿತ್ತು. ಜೆಡಿಎಸ್‌ನಲ್ಲಿ ಪ್ರಭಾವಶಾಲಿ ನಾಯಕರಿದ್ದಾರೆ.
ಸಾಮೂಹಿಕ ನಾಯಕತ್ವ ಇಲ್ಲ. ಕಾಂಗ್ರೆಸ್‌ನ ಇಂದಿನ ದುಸ್ಥಿತಿಗೆ ಪಕ್ಷದ ನಾಯಕರೇ ಕಾರಣ.

– ಬಿ.ಎಲ್‌.ಶಂಕರ್‌, ಅಧ್ಯಕ್ಷ, ಕೆಪಿಸಿಸಿ ಮಾಧ್ಯಮ ವಿಭಾಗ.

***

‘ಜೆಡಿಎಸ್‌ ಪರಾವಲಂಬಿ ಪಕ್ಷ’

ರವಿ ಕುಮಾರ್‌
ರವಿ ಕುಮಾರ್‌

ಚುನಾವಣೆಗೆ ಇನ್ನೂ ಸಮಯವಿದೆ. ಇಂತಹ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಇಂತಹ ಪಕ್ಷ ಇಂತಿಷ್ಟೇ ಸ್ಥಾನ ಗಳಿಸುತ್ತದೆ ಎಂದು ಹೇಳುವುದಕ್ಕೆ ಕಾಲ ಪಕ್ವವಾಗಿಲ್ಲ.

ಜೆಡಿಎಸ್‌ ಸ್ವತಂತ್ರವಾಗಿ ಸರ್ಕಾರ ರಚಿಸುವ ಸಾಧ್ಯತೆಯೇ ಇಲ್ಲ. ಇದು ಜನರ ಅಭಿಪ್ರಾಯ ಕೂಡ. ಉತ್ತರ ಕರ್ನಾಟಕದಲ್ಲಿ ಆ ಪಕ್ಷಕ್ಕೆ ನೆಲೆ ಎಲ್ಲಿದೆ. ಮುಂಬೈ ಕರ್ನಾಟಕ ಭಾಗದಲ್ಲಿ ಅವರೆಷ್ಟು ಸ್ಥಾನಗಳನ್ನು ಗೆದ್ದಿದ್ದಾರೆ. ಜೆಡಿಎಸ್‌ ಪರಾವಲಂಬಿ ಪಕ್ಷ. ವಲಸಿಗರ ಆಶ್ರಯ ತಾಣ.

ಜೆಡಿಎಸ್‌ ಎಂದು ಹೆಸರು ಪಡೆದುಕೊಂಡ ಮೇಲೆ ರಾಜ್ಯದಲ್ಲಿ ಈವರೆಗೂ ಸ್ವಂತ ಬಲದ ಮೇಲೆ ಆ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಅನ್ನು ಕಟ್ಟಿಹಾಕಬಹುದಾದ ಏಕೈಕ ಪಕ್ಷ ಬಿಜೆಪಿ. ಆದರೆ ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಕಟ್ಟಿಹಾಕಬಲ್ಲ ಸಾಮರ್ಥ್ಯ ಜೆಡಿಎಸ್‌ಗೆ ಇದೆಯೇ?. ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರುವ ಸಾಮರ್ಥ್ಯವಿರುವುದು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮಾತ್ರ.

–ಎನ್‌.ರವಿಕುಮಾರ್‌, ಬಿಜೆಪಿ ವಿಧಾನ ಪರಿಷತ್ ಸದಸ್ಯ.

***

‘ಜೆಡಿಎಸ್‌ ನಾಯಕರಿಗೇ ತರಬೇತಿ ಬೇಕು’

ಪ್ರೀತಿ ನಾಗರಾಜ್‌
ಪ್ರೀತಿ ನಾಗರಾಜ್‌

ಜೆಡಿಎಸ್‌ ತನ್ನದೇ ತಪ್ಪುಗಳಿಂದಾಗಿ ವರ್ಚಸ್ಸು ಕುಗ್ಗಿಸಿಕೊಂಡಿದೆ. ಪಕ್ಷವು ಪ್ರತಿ ಚುನಾವಣೆಯಲ್ಲೂ ತನ್ನ ಗುರಿಗಳನ್ನು ಕಡಿಮೆಮಾಡಿಕೊಳ್ಳುತ್ತಾ ಹೋದಂತೆ ಭಾಸವಾಗುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷವೊಂದು ಬೆಳೆದರೆ ಅದರಿಂದ ರಾಜ್ಯಕ್ಕೆ ಲಾಭ ಹೆಚ್ಚು. ಜನ ಕೂಡ ಅದನ್ನೇ ಬಯಸುತ್ತಾರೆ. ಮೈಸೂರು ಭಾಗ ಬಿಟ್ಟು ಕಲ್ಯಾಣ ಕರ್ನಾಟಕದಲ್ಲೂ ಜೆಡಿಎಸ್‌ ಅನ್ನು ಗುರುತಿಸುವ ಜನರಿದ್ದಾರೆ. ಆದರೆ ಬೆಂಬಲಿಸುವವರು ಇಲ್ಲ. ಅಲ್ಲಿನ ಜನರೊಂದಿಗೆ ಪಕ್ಷದ ನಾಯಕರು ನಿಕಟ ಸಂಬಂಧ ಹೊಂದಿಲ್ಲ. ಹಿಂದಿನ ಚುನಾವಣೆಗಳಲ್ಲಿ ಅದು ಸಾಬೀತಾಗಿದೆ.

ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಪರ್ಯಾಯವಾಗಬಲ್ಲ ನಾಯಕರು ಜೆಡಿಎಸ್‌ನಲ್ಲಿಲ್ಲ. ಮಹಿಳಾ ಮುಖಂಡರು ಮತ್ತು ಕಾರ್ಯಕರ್ತೆಯರ ಕೊರತೆ ಪಕ್ಷಕ್ಕೆ ಹಿನ್ನಡೆಯಾಗಿದೆ. ಎಲ್ಲಾ ಪಕ್ಷಗಳ ನಾಯಕರೂ ಹೊಂದಾಣಿಕೆಯ ರಾಜಕಾರಣ ಮಾಡುತ್ತಾರೆ. ಜೆಡಿಎಸ್‌ನ ಮಿಷನ್‌–123 ಸುಂದರ ಕಲ್ಪನೆಯಷ್ಟೇ. ಅದರ ಹಿಂದೆ ಬೇರೆಯದ್ದೇ ಉದ್ದೇಶ ಅಡಗಿದೆ.

ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾದರೂ ಜನರ ಜೊತೆ ಅಷ್ಟು ಬೆರೆಯಲಿಲ್ಲ. ಪಕ್ಷದ ಇಂದಿನ ಸ್ಥಿತಿಗೆ ನಾಯಕರೇ ಕಾರಣ.

–ಪ್ರೀತಿ ನಾಗರಾಜ್‌, ಪತ್ರಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT