ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ನೀತಿ ಬೋಧೆಗೆ ಪಠ್ಯದ ಪಾರಮ್ಯವೇಕೆ?

ಮಕ್ಕಳಿಗೆ ಸನ್ನಡತೆ ಹೇಳಿಕೊಡಲು ಯಾವ ನಿರ್ದಿಷ್ಟ ಸೂತ್ರಗಳೂ ಬೇಕಿಲ್ಲ
Last Updated 15 ಜನವರಿ 2023, 21:54 IST
ಅಕ್ಷರ ಗಾತ್ರ

ನೈತಿಕ ಶಿಕ್ಷಣದ ಕುರಿತು ಈಗ ತೀವ್ರ ಚರ್ಚೆಗಳಾಗುತ್ತಿವೆ. ಉತ್ತಮ ಸಮಾಜಕ್ಕೆ ಉತ್ತಮ ಶಿಕ್ಷಣವೇ ರಹದಾರಿ. ಅಧ್ಯಾಪನ ಶಿಕ್ಷಿಸುವ ವೃತ್ತಿಯಲ್ಲ, ವಾತ್ಸಲ್ಯದ ವೃತ್ತಿ ಎಂಬ ಮಾತಿದೆ. ತರಗತಿಯಲ್ಲಿ ಪಾಠ ಬೋಧನೆ. ಟ್ಯೂಷನ್ನಿನಲ್ಲಿ ಅವೇ ವಿಷಯಗಳ ಬೋಧನೆ, ಹೋಂ ವರ್ಕ್ ಸಹ ಮತ್ತೆ ಅವವೇ ವಿಷಯಗಳಲ್ಲಿ. ಇದ್ದುದರಲ್ಲಿ ಅಷ್ಟು ಬಿಡುವು ಮಾಡಿಕೊಂಡು ಪೋಷಕರು ತಮ್ಮ ಮಕ್ಕಳೊಂದಿಗೆ ನಡೆಸುವ ಲೋಕಾಭಿರಾಮದಲ್ಲೂ ಅದೇ ಅಜೆಂಡಾ!

ಒಬ್ಬ ಅಧ್ಯಾಪಕರು ಶಾಲೆಗೆ ರಜೆ ಹಾಕಿದ್ದಾರೆನ್ನಿ. ಅವರು ತೆಗೆದುಕೊಳ್ಳಬೇಕಾದ ತರಗತಿಯಲ್ಲಿ ಬಹುತೇಕ ಆಗುವುದೇನು? ಮತ್ತೊಬ್ಬ ಅಧ್ಯಾಪಕ ರಿಂದ ತಾವು ಬೋಧಿಸುವ ವಿಷಯದ ಪಠ್ಯಕ್ರಮದ ಒಂದಷ್ಟು ಮುನ್ನಡೆ! ಮಕ್ಕಳಿಗೆ ಬದುಕಿಗೆ ಪೂರಕವಾದ ನಡೆ ನುಡಿಗಳ ಪರಿಚಯಕ್ಕೆ ವ್ಯವಧಾನ ಎಲ್ಲಿ? ಇಳಿಯುವವರಿಗೆ ಅವಕಾಶ ಕೊಡದೆ ಬಸ್ಸು ಹತ್ತಲು ಹಪಹಪಿಸುವ ಹೈಕಳನ್ನು ‘ಇದೇನಾ ಸ್ಕೂಲ್ನಲ್ಲಿ ಕಲಿತಿದ್ದು’ ಅಂತ ಬಸ್ ಕಂಡಕ್ಟರ್ ಗದರುವುದಿದೆ. ರಜೆ ಬಂತೆಂದರೆ ಹಾದಿ ಬೀದಿಯಲ್ಲಿ ಕೂಗಾಡುತ್ತ, ಚೀರಾಡುತ್ತ ಕ್ರಿಕೆಟ್‍ನಲ್ಲಿ ಮೈಮರೆಯುವ ಮಕ್ಕಳನ್ನು ವೃದ್ಧರು ಶಪಿಸುವುದಿದೆ. ಮೃಗಾಲಯದಲ್ಲಿ ಮಕ್ಕಳು ಹುಲಿ, ಸಿಂಹವನ್ನು ವಿನಾಕಾರಣ ಕೆಣಕಿ ಅವುಗಳ ಆಕ್ರೋಶಕ್ಕೊಳಗಾಗುವುದಿದೆ. ಈ ವರ್ತನೆಗಳಲ್ಲಿ ಅತಿಶಯ ಕಾಣಬೇಕಾದ್ದಿಲ್ಲ. ಶಾಲೆಯ ಓದು, ಬರಹದ ಜೊತೆಗೆ ಮಕ್ಕಳು ಒಂದಷ್ಟು ಸಂಯಮ, ಪರರಿಗಾಗಿ ಮಿಡಿಯುವ ಸಂಪನ್ನತೆ, ಪರಿಸರ ಪ್ರಜ್ಞೆ ಮೂಡಿಸಿಕೊಂಡಿದ್ದರೆ ಅವರ ಹೊಣೆಗೇಡಿತನಕ್ಕೆ ಸ್ವಲ್ಪ ಮಟ್ಟಿಗಾದರೂ ಕಡಿವಾಣ ಬೀಳುವುದು.

ನೈತಿಕ ಶಿಕ್ಷಣ ಗುಣಾತ್ಮಕ ಶಿಕ್ಷಣದ ಅವಿಭಾಜ್ಯ ಅಂಗ. ಅಂಕಪಟ್ಟಿ ಎನ್ನುವುದು ಒಂದು ಹಾಳೆ ಮಾತ್ರ. ಪಡೆದ ಶಿಕ್ಷಣ ವ್ಯಕ್ತವಾಗುವುದು ವರ್ತನೆಯಲ್ಲಿ. ಹಾಗಾಗಿ ‘ಎಜುಕೇಷನ್ ಬಿಯಾಂಡ್ ಅಕಡೆಮಿಕ್’ ಪರಿಕಲ್ಪನೆ ಶಿಕ್ಷಣದ ಆರಂಭದಲ್ಲೇ ಕಾರ್ಯರೂಪಕ್ಕೆ ಬರಬೇಕಿದೆ. ಈ ಸಹಜ ಅಭಿಯಾನ ‘ನೈತಿಕ ಶಿಕ್ಷಣ’, ‘ಮಾರಲ್ ಕ್ಲಾಸ್’ ಎಂಬ ಹೆಸರಿನಿಂದ ಕರೆಸಿಕೊಳ್ಳ ಬೇಕಿಲ್ಲ ಅಥವಾ ಒಂದು ವಿಷಯವಾಗಿರಬೇಕಿಲ್ಲ. ಪಠ್ಯ ಮರೆತುಹೋಗುತ್ತದೆ, ಆದರೆ ವಿದ್ಯಾಲಯದಲ್ಲಿ ಮನಗಾಣಿಸಿದ ಮೌಲ್ಯಗಳು ಜೀವನಪರ್ಯಂತ ನೆನಪಿನಲ್ಲಿರುತ್ತವೆ. ಮಕ್ಕಳಲ್ಲಿ ಉತ್ತಮ ನಡತೆ ರೂಪಿಸಲು ಅವರ ಸಾಮಾನ್ಯ ಪ್ರಜ್ಞೆಗಿಂತ ಅಡಿಗಲ್ಲಿಲ್ಲ. ಇಂತಹ ಗ್ರಂಥಗಳನ್ನೇ ಓದಿ, ಅನುಸರಿಸಿ ಎನ್ನುವ ಒತ್ತಾಯದಿಂದ ಗೌಜು, ರಂಪವಷ್ಟೆ. ರೀತಿ, ನೀತಿಗಳನ್ನು ಮಕ್ಕಳಿಗೆ ಸರಳವಾಗಿ ಬೋಧಿಸಬಹುದು. ಅವರು ಸಹಜವಾಗಿ ಕಾಣುವ, ಕೇಳುವ ಸಂಗತಿಗಳಲ್ಲಿನ ಒಪ್ಪು-ತಪ್ಪುಗಳನ್ನು ಉದಾಹರಿಸಿ ಮನಮುಟ್ಟುವಂತೆ ವಿವರಿಸುವುದು ಪರಿಣಾಮಕಾರಿ.

ಕಥಾನಕವು ಉತ್ತಮ ಸಂದೇಶಗಳ ರವಾನೆಗೆ ಅಂಬಾರಿ. ಕಥಾನಾಯಕ ಸತ್ಯ ನುಡಿಯಲು ಕಲಿಯುವ ಸಂದರ್ಭಗಳು ಮಕ್ಕಳಿಗೆ ಚೆನ್ನಾಗಿ ನಾಟುತ್ತವೆ. ಕಠಿಣವಾದರೂ ಸದಾ ಸತ್ಯ ಹೇಳಬೇಕು, ಸರಿಯೆಂದು ತೋರುವುದನ್ನು ಧೈರ್ಯದಿಂದ ನಿರ್ವಹಿಸುವ ಗುಣ ಜಾಯಮಾನವಾಗುವುದು. ನಾಗರಿಕತೆ, ಸೌಹಾರ್ದ ಭಾವ, ಪ್ರಾಮಾಣಿಕತೆ, ಉತ್ತರದಾಯಿತ್ವದಂಥ ಗುಣಗಳು ಪಠ್ಯಕ್ರಮಕ್ಕಿಂತ ಮುಖ್ಯ. ಶಿಕ್ಷಕರು ಮಕ್ಕಳೊಂದಿಗೆ ಆಡಿದರೂ ಆಯಾ ಕ್ರೀಡೆಯ ನಿಯಮಗಳು ಮಕ್ಕಳಿಗೆ ತಿಳಿದು, ನಿಜಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಅರಿವು ಪರೋಕ್ಷವಾಗಿ ಮೂಡುತ್ತದೆ. ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಹೇಳುವಂತೆ, ಮೌಲ್ಯಗಳು ವ್ಯಕ್ತಿಯಲ್ಲಿ ಹುಟ್ಟುವುದಿಲ್ಲ, ಅವನ್ನು ಪೋಷಿಸಬಹುದಷ್ಟೆ. ಮತ್ತೊಬ್ಬರಿಗೆ ತೊಂದರೆ ಕೊಡಬೇಡ, ಅವರೂ ನಿನ್ನ ಹಾಗೆಯೇ ಎಂಬ ತಿಳಿವಳಿಕೆಗೆ ಸಾಮಾನ್ಯ ಪ್ರಜ್ಞೆಯೇ ಸಾಕು, ಯಾವುದೇ ಪುಸ್ತಕದ ಪರಾಮರ್ಶನ ಬೇಕಿಲ್ಲ.

‘ಮಕ್ಕಳಿಸ್ಕೂಲ್ ಮನೇಲಲ್ವೆ?’ ಕೈಲಾಸಂ ಅವರ ಈ ನುಡಿ ನೈತಿಕ ಬೋಧನೆಗೂ ಅನ್ವಯಿಸುವುದು. ಮನೆ ಮನೆಯೂ ನೈತಿಕ ಶಿಕ್ಷಣಾಲಯವಾಗಿ, ಪೋಷಕರು ಗುರುವರ್ಯರಾಗಿ ಶಿಸ್ತು, ಸಹಬಾಳ್ವೆ, ವಿನಯದಂತಹ ಸದ್ಗುಣಗಳನ್ನು ಮಕ್ಕಳಿಗೆ ಪರಿಚಯಿಸಬಹುದು, ನಡೆ ನುಡಿಗಳನ್ನು ಹೇಳಿಕೊಡಬಹುದು. ಅವರು ಮಕ್ಕಳೊಂದಿಗೆ ಮಕ್ಕಳಾಗಿ ಓದುವುದು, ಬರೆಯುವುದು, ಚಿಂತಿಸುವುದರಿಂದ ಆಗುವ ಉತ್ತೇಜನಕ್ಕೆ ಸಾಟಿಯಿಲ್ಲ.

ಶಾಲೆಯಲ್ಲಿ ಇಂದು ಕಲಿಯುತ್ತಿರುವ ಅದ್ಭುತ ಅಧ್ಯಾಯಗಳು ಹಲವು ಪೀಳಿಗೆಗಳು ಜ್ಞಾನಕ್ಕಾಗಿ ಪಟ್ಟ ಪರಿಶ್ರಮದ ಫಲಗಳೆನ್ನುವುದನ್ನು ಮನದಟ್ಟಾಗಿಸಬೇಕು. ‘ಶಿಕ್ಷಣ ಎಂದರೆ ಶಾಲೆಯಲ್ಲಿ ಕಲಿತಿದ್ದೆಲ್ಲವೂ ಮರೆತುಹೋಗಿ ಉಳಿದಿದ್ದು’ ಎನ್ನುವುದು ವಿಜ್ಞಾನಿ ಐನ್‍ಸ್ಟೀನ್ ಅವರ ಪ್ರಖರ ಮಾತು. ಸನ್ನಡತೆ ಹೇಳಿಕೊಡಲು ಯಾವ ನಿರ್ದಿಷ್ಟ ಸೂತ್ರಗಳೂ ಬೇಕಿಲ್ಲ. ನಿತ್ಯ ಜೀವನದಲ್ಲಿ ಘಟಿಸುವ ಅನುಭವಗಳಿಂದಲೇ ಮಕ್ಕಳು ಕಲಿಯಬಲ್ಲರು. ಹರಿಯ ಬಯಸುವ ನೀರಿಗೆ ಅಡೆತಡೆಯಾಗುವ ಕಲ್ಲುಗಳನ್ನು ಪಕ್ಕಕ್ಕೆ ಸರಿಸುವಂತೆ ಅವರಿಗೆ ಕಿಂಚಿತ್ತು ಪ್ರೋತ್ಸಾಹ ತುಂಬಿದರಾಯಿತು, ಸರಾಗವಾಗಿ ಅರಿತಾರು.

ಬೀಚಿಯವರು ತಮ್ಮ ಪ್ರಸಿದ್ಧ ‘ತಿಂಮನ ತಲೆ’ ಕೃತಿಯಲ್ಲಿ ಶಿಷ್ಯನೇ ಗುರುವಿನ ಕಣ್ತೆರೆಸುವ ಪ್ರಸಂಗವೊಂದನ್ನು ಸೊಗಸಾಗಿ ಚಿತ್ರಿಸಿದ್ದಾರೆ. ತಿಂಮ ನಿಘಂಟಿಗಾಗಿ ಮೇಷ್ಟ್ರರ ಮನೆಗೆ ಬರುತ್ತಾನೆ. ‘ಇಲ್ಲೇ ನೋಡು, ಮನೆಗೆ ಒಯ್ಯಬೇಡ’ ಅಂತ ಗುರುಗಳ ಷರತ್ತು. ಮುಂದೊಂದು ದಿನ ಮೇಷ್ಟರಿಗೆ ಪೊರಕೆ ಬೇಕಾಗುತ್ತದೆ. ಅವರು ತಿಂಮನ ಮನೆಗೆ ಬರುತ್ತಾರೆ. ತಿಂಮ ‘ಖಂಡಿತ ಕೊಡ್ತೀನಿ ಸಾರ್, ಆದರೆ ಇಲ್ಲೇ ಬಳಸಬೇಕು’ ಎನ್ನುವನು! ಮಕ್ಕಳು ಹಿರಿಯರನ್ನು ಅನುಸರಿಸುತ್ತಾರೆ ಎನ್ನಲು ಇದು ಉದಾಹರಣೆಯಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT