ಶುಕ್ರವಾರ, ಮಾರ್ಚ್ 31, 2023
23 °C

ಸಂಪಾದಕೀಯ: ಯಾತ್ರೆಯ ಸ್ಫೂರ್ತಿಯ ಆಧಾರದಲ್ಲಿ ಹೊಸ ಸಂಕಥನ ಇಂದಿನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಂದಕ್ಕೊಂದು ಹೋಲಿಕೆಯೇ ಸಾಧ್ಯವಿಲ್ಲದ ರೀತಿಯ ಹವಾಮಾನವನ್ನು ಹೊಂದಿರುವ ವಿವಿಧ ಪ್ರದೇಶಗಳನ್ನು ಹಾದು, ಭಿನ್ನ ಜನಸಮುದಾಯಗಳ ಜೊತೆಗೆ ಸಂವಾದ ನಡೆಸುತ್ತಾ 145 ದಿನಗಳ ಕಾಲ 4,000 ಕಿಲೊಮೀಟರ್‌ಗೂ ಹೆಚ್ಚು ದೂರವನ್ನು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನಡಿಗೆಯಲ್ಲಿ ಕ್ರಮಿಸಿದ್ದಾರೆ; ಈ ಯಾತ್ರೆಯ ಮೂಲಕ ಅವರೊಬ್ಬ ಪ್ರಬುದ್ಧ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ ಎಂಬುದು ಒಪ್ಪಿಕೊಳ್ಳಬಹುದಾದ ವಿಚಾರ. ತಮ್ಮ ಮನದಲ್ಲೇನಿದೆ ಎಂಬುದನ್ನು ಅವರು ಯಾತ್ರೆಯ ಉದ್ದಕ್ಕೂ  ಹೇಳಿದ್ದಾರೆ ಮತ್ತು ಭಿನ್ನವಾಗಿ ಇರುವ ಭರವಸೆಯನ್ನೂ ಕೊಟ್ಟಿದ್ದಾರೆ. ಈ ವಿಚಾರಗಳೇ ಈ ಕಾಲದ ರಾಜಕಾರಣಿಗಳಲ್ಲಿ ರಾಹುಲ್‌ ಅವರನ್ನು ಭಿನ್ನವಾಗಿ ನಿಲ್ಲಿಸಿವೆ. ಅತ್ಯಂತ ಕೆಟ್ಟ ಜನರ ಕೊನೆಯ ಆಶ್ರಯತಾಣವೇ ರಾಜಕಾರಣ ಎಂಬ ಸಿನಿಕ ಭಾವನೆ ಹೊಂದಿರುವ ಜನರಿಗೆ ಇದೊಂದು ಹೊಸ ಆಶಾಭಾವವನ್ನು ನೀಡಬೇಕು. ರಾಹುಲ್‌ ಅವರು ಜ್ಞಾನೋದಯಗೊಂಡ ವ್ಯಕ್ತಿಯಾಗಿ ಯಾತ್ರೆಯ ಕೊನೆಯಲ್ಲಿ ಮೂಡಿಬಂದಿರಬಹುದು. ಆದರೆ, ಅವರಲ್ಲಿ ಉಂಟಾಗಿರುವ ಹೊಸ ಜಾಗೃತಿ ಮತ್ತು ವಿವೇಕವು ಕಾಂಗ್ರೆಸ್‌ ಪಕ್ಷ ಮತ್ತು ಅದರ ಭವಿಷ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಹೇಳುವುದು ಕಷ್ಟ. ರಾಜಕಾರಣ ಅಥವಾ ಪಕ್ಷದ ಚುನಾವಣಾ ಗೆಲುವಿಗೂ ತಮ್ಮ ‘ಭಾರತ್‌ ಜೋಡೊ ಯಾತ್ರೆ’ಗೂ ಯಾವ ಸಂಬಂಧವೂ ಇಲ್ಲ ಎಂದು ರಾಹುಲ್ ಅವರು ಪದೇ ಪದೇ ಹೇಳಿದ್ದಾರೆ. ಯಾತ್ರೆ ಎಂಬುದು ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂಬ ಸಿದ್ಧಾಂತವನ್ನೇ ಅವರು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ದ್ವೇಷ ಮತ್ತು ವಿಭಜನೆಯೇ ಮೇಲುಗೈ ಸಾಧಿಸಿರುವ ಈ ಹೊತ್ತಿನಲ್ಲಿ ಪ್ರೀತಿ ಮತ್ತು ಒಗ್ಗಟ್ಟಿನ ಮಹತ್ವವನ್ನು ಸಾರುವುದಷ್ಟೇ ತಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ. ಅವರು ಮೀಟಿದ ತಂತಿಯು ಜನರ ಮನಮುಟ್ಟಿದೆ ಎಂಬುದರಲ್ಲಿ ಸಂದೇಹವೇನೂ ಇಲ್ಲ. ಆದರೆ, ಮುಂದಿನ ಹಂತದ ಯಾತ್ರೆಯು ಇನ್ನಷ್ಟು ಕ್ಲಿಷ್ಟವಾಗಿ ಇರಬಹುದು. 

ಕೇಂದ್ರ ಮತ್ತು ರಾಜ್ಯಗಳ ಚುನಾವಣೆಗಳಲ್ಲಿ ಸತತ ಸೋಲು, ಪಕ್ಷಾಂತರ, ಒಳಜಗಳ, ಗುಂಪುಗಾರಿಕೆಯಿಂದಾಗಿ ತತ್ತರಿಸಿರುವ ಕಾಂಗ್ರೆಸ್‌ ಪಕ್ಷವು ಪುನಶ್ಚೇತನಗೊಂಡು ಹೊಸ ಚೈತನ್ಯ ಪಡೆದುಕೊಳ್ಳುವ ಅಗತ್ಯ ಇದೆ. ಪಕ್ಷವು ಅಧಿಕಾರ ಮತ್ತು ವರ್ಚಸ್ಸು ಕಳೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಅತ್ಯುನ್ನತ ನಾಯಕ ಎಂದೇ ಬಿಂಬಿತರಾಗಿರುವ ರಾಹುಲ್ ಗಾಂಧಿ ಅವರಿಗೆ ಒಳಿತಾದರೆ, ಅದರಿಂದ ಪಕ್ಷಕ್ಕೂ ಒಳ್ಳೆಯದಾಗಬೇಕು. ಆದರೆ, ರಾಹುಲ್‌ ಅವರು ಪಡೆದುಕೊಂಡಿರುವ ಹೊಸ ವರ್ಚಸ್ಸನ್ನು ಬಳಸಿಕೊಂಡು ಪ್ರಯೋಜನ ಪಡೆಯಲು ಕಠಿಣ ಶ್ರಮದ ಅಗತ್ಯ ಇದೆ. ಯಾತ್ರೆಯ ಉದ್ದಕ್ಕೂ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತ, ಕೆಲವು ಸಂಗತಿಗಳ ಕುರಿತ ವಾಸ್ತವವನ್ನು ಜನರಿಗೆ ತಿಳಿಸುತ್ತಾ ಸಾಗಿದ್ದರು. ಅವುಗಳನ್ನು ನಿಖರವಾದ ಚಿಂತನೆಗಳು ಹಾಗೂ ನೀತಿಗಳಾಗಿ ರೂಪಿಸಿ ಜನರ ಮುಂದಿಡಬೇಕಾದ ಅಗತ್ಯ ಇದೆ. ಹಾಗೆಯೇ ಯಾತ್ರೆಯಿಂದಾಗಿ ಸೃಷ್ಟಿಯಾಗಿರುವ ಭಾವನೆಗಳನ್ನು ಮತಗಳಾಗಿ ಪರಿವರ್ತಿಸುವುದೂ ಅಷ್ಟೇ ಮುಖ್ಯ. ಯಾತ್ರೆಯೊಂದರಲ್ಲಿ ವ್ಯಕ್ತಿಯೊಬ್ಬರ ವೈಯಕ್ತಿಕ ಸಂವಹನಕ್ಕಿಂತ ಪಕ್ಷವು ಚುನಾವಣಾ ಸಂದರ್ಭದಲ್ಲಿ ಜನರೊಂದಿಗೆ ನಡೆಸುವ ಸಂವಹನವು ಹೆಚ್ಚು ಸಂಕೀರ್ಣವಾದುದು. ಬಿಜೆಪಿ ವಿರೋಧಿ ಪಕ್ಷಗಳ ನಾಯಕತ್ವದ ಸ್ಥಾನವು ರಾಹುಲ್‌ ಅವರಿಗೆ ಅಥವಾ ಕಾಂಗ್ರೆಸ್‌ ಪಕ್ಷಕ್ಕೆ ದೊರೆಯಲು ಯಾತ್ರೆಯು ನೆರವಾಗಬಹುದು ಎಂದು ಹೇಳುವುದೂ ಕಷ್ಟ. ಅಂತಹ ಸೂಚನೆಗಳು ಈವರೆಗೆ ಕಂಡುಬಂದಿಲ್ಲ. 

ಕಾಂಗ್ರೆಸ್ ಪಕ್ಷವು ಹಲವೆಡೆ ತಳಮಟ್ಟದ ಸಂಘಟನಾ ಬಲವನ್ನೇ ಹೊಂದಿಲ್ಲ. ಸಂಘಟನಾತ್ಮಕವಾಗಿ ಪಕ್ಷವು ದುರ್ಬಲಗೊಂಡಿದೆ. ಪಕ್ಷದ ಅಧ್ಯಕ್ಷರಾಗಿ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರೆದುರು ಹತ್ತುಹಲವು ಸವಾಲುಗಳು ಇವೆ. ಪಕ್ಷದ ಹಲವು ಹುದ್ದೆಗಳನ್ನು ಇನ್ನಷ್ಟೇ ಭರ್ತಿ ಮಾಡಬೇಕಿದೆ. ಗಾಂಧಿ–ನೆಹರೂ ಕುಟುಂಬಕ್ಕೆ ಹತ್ತಿರವಾಗಿರುವವರಿಗಷ್ಟೇ ಸ್ಥಾನಗಳು ದೊರೆಯುತ್ತವೆ ಮತ್ತು ಅವರು ಹೇಳಿದ್ದೇ ನಡೆಯುತ್ತದೆ ಎಂಬ ಭಾವನೆ ಈಗಲೂ ಬಲವಾಗಿಯೇ ಇದೆ. ಲೋಕಸಭೆಗೆ 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ, ಮುಂದಿನ ಕೆಲವು ತಿಂಗಳುಗಳಲ್ಲಿ ಕೆಲವು ರಾಜ್ಯಗಳ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಗಳು ಪಕ್ಷಕ್ಕೆ ನಿರ್ಣಾಯಕವಾಗಿವೆ. ಯಾತ್ರೆಯ ಆಶಯವನ್ನು ಪಕ್ಷವು ತನ್ನದಾಗಿಸಿಕೊಂಡು, ಅದರ ಆಧಾರದಲ್ಲಿ ಪರ್ಯಾಯ ರಾಜಕಾರಣದ ಸಂಕಥನ ರೂಪಿಸಿ, ಬಿಜೆಪಿಗೆ ಸವಾಲಾಗುವ ಸಿದ್ಧಾಂತವನ್ನು ಜನರ ಮುಂದೆ ಇರಿಸಿದರೆ, ರಾಹುಲ್‌ ಅವರ ಯಾತ್ರೆಯು ವ್ಯಕ್ತಿಯನ್ನು ಮೀರಿ ನಿಂತಂತೆ ಆಗುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು