ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗ್ದಾದಿ ಅಂತ್ಯ: ಉಡುಗೀತೇ ಐ.ಎಸ್. ಸಂಘಟನೆ?

ಉತ್ತರಾಧಿಕಾರಿ ಯಾರು ಎಂಬ ತಿಕ್ಕಾಟ ಸಂಘಟನೆಯಲ್ಲಿ ಶುರುವಾಗಬಹುದೇ?
Last Updated 29 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಆತನ ಬೇಟೆ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ನಡೆದಿತ್ತು. ಈಗ ಎದುರಾಗಿರುವ ಕಾಲವೊಂದು ಬರುತ್ತದೆ ಎಂಬುದನ್ನೂ ಗಮನದಲ್ಲಿ ಇಟ್ಟುಕೊಂಡು ಆತನ ಸಂಘಟನೆಯನ್ನು ರಚಿಸಲಾಗಿತ್ತು. ಇಸ್ಲಾಮಿಕ್‌ ಸ್ಟೇಟ್‌ನ ಮುಖಂಡ ಅಬುಬಕರ್‌ ಅಲ್‌–ಬಗ್ದಾದಿ, ಅಮೆರಿಕದ ಸೈನಿಕರು ನಡೆಸಿದ ದಾಳಿಯಲ್ಲಿ ಹತನಾಗಿರುವುದು ವಿಶ್ವದ ಅತ್ಯಂತ ಭಯಾನಕ ಸಂಘಟನೆಯ ಪಾಲಿಗೆ ದೊಡ್ಡ ಆಘಾತ. ಆದರೆ, ಇಸ್ಲಾಮಿಕ್ ಸ್ಟೇಟ್‌ ಹೆಸರಿನಲ್ಲಿ ಚಟುವಟಿಕೆ ನಡೆಸುವವರು ಹಾಗೂ ಅದರ ಪರ ಸಹಾನುಭೂತಿ ಹೊಂದಿರುವವರು ತೀವ್ರಗಾಮಿ ಸಿದ್ಧಾಂತದ ಹೆಸರಿನಲ್ಲಿ ಜನರಲ್ಲಿ ಭಯ ಬಿತ್ತುವ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಅನುಮಾನ ಎನ್ನುತ್ತಾರೆ ವಿಶ್ಲೇಷಕರು.

ಅಬುಬಕರ್‌ನ ಹಿಂಬಾಲಕರು ಆತನನ್ನು ವಿಶ್ವದ ಮುಸ್ಲಿಮರೆಲ್ಲರ ನಾಯಕ ಎಂದು ಭಾವಿಸಿದ್ದರು. ಅಬುಬಕರ್‌ ತನ್ನ ಕುರಿತೊಂದು ಪ್ರಭಾವಳಿಯನ್ನು ಬೆಳೆಸಿಕೊಂಡಿದ್ದ. ತನ್ನ ಕೈಕೆಳಗಿನವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಸ್ವಾತಂತ್ರ್ಯ ಕೂಡ ನೀಡಿದ್ದ. ‘ನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ ಸಂಘಟನೆ ಉಳಿದುಕೊಳ್ಳುತ್ತದೆ’ ಎಂಬ ಮಾತನ್ನು ನೆನಪಿಸುವ ಉಲ್ಲೇಖಗಳು ಇಸ್ಲಾಮಿಕ್ ಸ್ಟೇಟ್‌ ಸಂಘಟನೆಗೆ ಸಂಬಂಧಿಸಿದ ಹಲವು ಪ್ರಚಾರ ವಸ್ತುಗಳಲ್ಲಿ ಕಾಣಿಸುತ್ತವೆ. ಅಷ್ಟಕ್ಕೂ, ಅಬುಬಕರ್‌ ಈ ಸಂಘಟನೆಯ ನಾಯಕನಾಗಿ, ಇದನ್ನು ಮಧ್ಯಪ್ರಾಚ್ಯ ಹಾಗೂ ಅದಕ್ಕಿಂತ ಆಚೆಗೆ ವಿಸ್ತರಿಸುವ ಮೊದಲು ಸಂಘಟನೆಯ ಸಂಸ್ಥಾಪಕ ಹಾಗೂ ಇಬ್ಬರು ಉತ್ತರಾಧಿಕಾರಿಗಳು ಹತ್ಯೆಯಾಗಿದ್ದರು ಎಂಬುದನ್ನು ಗಮನಿಸಬೇಕು.

ಹತ್ಯೆಯಾಗುವುದಕ್ಕೆ ಮೊದಲಿನ ಕೆಲವು ವರ್ಷಗಳಲ್ಲಿ ಅಬುಬಕರ್‌, ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದ. ಅವನ ಸುತ್ತ ಕುಟುಂಬದ ಸದಸ್ಯರು ಮತ್ತು ಕೆಲವು ನಂಬಿಕಸ್ಥರು ಮಾತ್ರ ಇರುತ್ತಿದ್ದರು. ಅಮೆರಿಕ ಹಾಗೂ ಇರಾಕಿನ ಗುಪ್ತಚರ ಅಧಿಕಾರಿಗಳ ಪ್ರಕಾರ ಈತ ಹೊರಜಗತ್ತಿನ ಜೊತೆ ಸೀಮಿತ ಸಂಪರ್ಕ ಹೊಂದಿದ್ದ. ಅಂದರೆ, ಅವನ ಸಂಘಟನೆಯು ಅವನಿಂದ ಸೀಮಿತ ಸಂಖ್ಯೆಯಲ್ಲಿ ಸೂಚನೆ ಪಡೆದುಕೊಳ್ಳುತ್ತಿತ್ತು. ಹಾಗಾಗಿ, ಅವನ ಸಾವಿನ ಪರಿಣಾಮವು ಸಂಘಟನೆಯ ಮೇಲೆ ತೀವ್ರವಾಗಿ ಇರುವುದಿಲ್ಲ.

‘ಅವನ ಹತ್ಯೆ ಮುಖ್ಯವಾದದ್ದೇ. ಆದರೆ, ಬೇರೆ ಸಂಘಟನೆಗಳ ವಿಚಾರದಲ್ಲಿ ನಾವು ಈಗಾಗಲೇ ಕಂಡಿರುವಂತೆ, ನಾಯಕನನ್ನು ಕೊಂದಮಾತ್ರಕ್ಕೆ ಸಂಘಟನೆ ಇಲ್ಲವಾಗುವುದಿಲ್ಲ’ ಎಂದು ಹೇಳುತ್ತಾರೆ ಉಗ್ರಗಾಮಿ ಸಂಘಟನೆಗಳ ಕುರಿತು ಅಧ್ಯಯನ ಮಾಡಿರುವ ಹಸನ್ ಅಬು ಹನೀಹ್. ‘ಅಷ್ಟೇನೂ ಕೇಂದ್ರೀಕೃತವಲ್ಲದ ವ್ಯವಸ್ಥೆಯನ್ನು ಇಸ್ಲಾಮಿಕ್ ಸ್ಟೇಟ್‌ ಸಂಘಟನೆ ರೂಪಿಸಿಕೊಂಡಿದೆ. ಹಾಗಾಗಿ ಅದು ಅಬುಬಕರ್‌ ಇಲ್ಲದೆಯೂ ಮುಂದುವರಿಯುತ್ತದೆ’ ಎಂದು ಅವರು ಹೇಳುತ್ತಾರೆ.

ಅಬುಬಕರ್‌ನ ಹತ್ಯೆಯು ಅವನ ಕೆಲವು ಹಿಂಬಾಲಕರ ಧೈರ್ಯ ಉಡುಗಿಸುತ್ತದೆ. ಅದೇ ವೇಳೆ, ಹತ್ಯೆಗೆ ಸೇಡು ತೀರಿಸಿಕೊಳ್ಳುವ ಬಯಕೆಯನ್ನುಕೆಲವರಲ್ಲಿ ಹುಟ್ಟಿಸುತ್ತದೆ ಎನ್ನುತ್ತಾರೆ ಸಿರಿಯಾದ ಒಮರ್ ಅಬು ಲಾಯ್ಲಾ. ‘ಯುರೋಪ್‌ ಮತ್ತು ಪಾಶ್ಚಿಮಾತ್ಯ ಜಗತ್ತಿನಲ್ಲಿರುವ ಈ ಸಂಘಟನೆಯ ಕೆಲವು ಸೆಲ್‌ಗಳು ಅಬುಬಕರ್‌ ಇಲ್ಲದಿದ್ದರೂ ನಾವು ನಮ್ಮ ಕೆಲಸ ಮುಂದುವರಿಸಬಲ್ಲೆವು ಎಂದು ತೋರಿಸಲು ಆಕ್ರಮಣ, ದಾಳಿ ನಡೆಸಲು ಯತ್ನಿಸಬಹುದು’ ಎಂದು ಅವರು ಹೇಳುತ್ತಾರೆ.

ಅಬುಬಕರ್‌ ‘ನಾಯಿಯಂತೆ ಸತ್ತ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಿಜಯದ ಘೋಷಣೆ ಮಾಡಿದರು. ಇದು, ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ತನ್ನ ಸ್ವಘೋಷಿತ, ಅಳಿದುಳಿದ ಸಾಮ್ರಾಜ್ಯದಲ್ಲಿ ಪುನಃ ಸಂಘಟಿತವಾಗುವ ಸೂಚನೆ ನೀಡುತ್ತಿದ್ದ ಹೊತ್ತಿನಲ್ಲಿ. ಅದರೆ, ಇಸ್ಲಾಮಿಕ್ ಸ್ಟೇಟ್‌ನ ಸಾಮ್ರಾಜ್ಯ ದುರ್ಬಲವಾಗುತ್ತಿದ್ದರೂ ಅದು ಬೇರೆ ಬೇರೆ ಕಡೆ ಶಾಖೆಗಳನ್ನು ತೆರೆಯುತ್ತಿತ್ತು. ತನ್ನ ಹೆಸರಿನಲ್ಲಿ ಕೆಲಸ ಮಾಡುವ ಸಂಘಟನೆಗಳನ್ನು ಬೆಂಬಲಿಸುತ್ತಿತ್ತು. ಅಫ್ಗಾನಿಸ್ತಾನ, ಲಿಬಿಯಾ, ಫಿಲಿಪ್ಪೀನ್ಸ್‌, ಈಜಿಪ್ಟ್‌ನ ಸಿನಾಯ್ ಪರ್ಯಾಯದ್ವೀಪ ಮತ್ತು ನೈಜೀರಿಯಾಗಳಲ್ಲಿ ಸಂಬಂಧ ಬೆಳೆಸುತ್ತಿತ್ತು.

ಶಾಖೆಗಳು ಐ.ಎಸ್. ಸಂಘಟನೆಯ ಸಿದ್ಧಾಂತವನ್ನು ಅನುಸರಿಸುತ್ತಿದ್ದವಾದರೂ, ಅವು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದವು. ಸ್ಥಳೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದವು, ಕೆಲವು ಪ್ರಾಂತ್ಯಗಳ ಮೇಲೆ ಹಿಡಿತ ಸಾಧಿಸುತ್ತಿದ್ದವು, ಸಂಪನ್ಮೂಲಗಳಿಗಾಗಿ ಇತರ ಉಗ್ರಗಾಮಿ ಸಂಘಟನೆಗಳ ಜೊತೆ ಹೊಡೆದಾಟ ನಡೆಸುತ್ತಿದ್ದವು. ಬಹುತೇಕ ಶಾಖೆಗಳು ತಾವಿರುವ ದೇಶ ಹಾಗೂ ನೆರೆಹೊರೆಯ ದೇಶಗಳಿಗೆ ಬೆದರಿಕೆಯಾಗಿ ಕಂಡಿದ್ದವು. ಆದರೆ, ಅಫ್ಗಾನಿಸ್ತಾನ ಹಾಗೂ ಲಿಬಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುವ ಗುಂಪುಗಳು ಪಾಶ್ಚಿಮಾತ್ಯ ಜಗತ್ತಿನಲ್ಲಿ ದಾಳಿಗಳಾಗುವಂತೆ ನೋಡಿಕೊಳ್ಳಬಲ್ಲವು ಎಂಬ ಚಿಂತೆ ಅಮೆರಿಕದ ಅಧಿಕಾರಿಗಳನ್ನು ಕಾಡುತ್ತಿತ್ತು.

ಮೊದಲಿನ ರೂಪಕ್ಕೆ ಹೋಲಿಸಿದರೆ ಈಗಿರುವ ಇಸ್ಲಾಮಿಕ್‌ ಸ್ಟೇಟ್‌ ಬರೀ ಒಂದು ಛಾಯೆಯಂತೆ ಕಾಣಿಸುತ್ತದೆಯಾದರೂ, ಈಗಲೂ ಅದರ ಬಳಿ 14 ಸಾವಿರದಿಂದ 18 ಸಾವಿರ ಸದಸ್ಯರು ಇರಾಕ್ ಮತ್ತು ಸಿರಿಯಾದಲ್ಲೇ ಇದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಸಿದ್ಧಪಡಿಸಿದ ವರದಿ ಹೇಳುತ್ತಾರೆ. ಈ ಸದಸ್ಯರಲ್ಲಿ ಗರಿಷ್ಠ ಮೂರು ಸಾವಿರ ಜನ ವಿದೇಶಿಯರೂ ಇದ್ದಾರೆ. ಆದರೆ, ಈ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಇದ್ದಿರಬಹುದು ಎಂಬುದನ್ನು ವರದಿ ಉಲ್ಲೇಖಿಸಿದೆ. ಹೊಸ ಉಗ್ರರನ್ನು ನೇಮಕ ಮಾಡಿಕೊಳ್ಳಲು ಸಂಘಟನೆಯು ಸಾಮಾಜಿಕ ಜಾಲತಾಣಗಳ ಮೂಲಕ ವಿಸ್ತೃತ ಕಾರ್ಯಾಚರಣೆ ನಡೆಸುತ್ತಿದೆ ಎಂದು ವರದಿ ಹೇಳಿದೆ.

ಐ.ಎಸ್. ಸಂಘಟನೆಯು ಕೇಂದ್ರೀಕೃತ ವ್ಯವಸ್ಥೆಯಿಂದ ವಿಕೇಂದ್ರೀಕೃತ ವ್ಯವಸ್ಥೆಯೆಡೆ ಹೊರಳಿಕೊಂಡ ನಂತರ, ಸಂಘಟನೆಯ ಸದಸ್ಯರು ಒಬ್ಬರೇ ಅಥವಾ ಸಣ್ಣ ಗುಂಪುಗಳಲ್ಲಿ ದಾಳಿಯನ್ನು ಸಂಘಟಿಸಬೇಕು ಎಂದು ಮತ್ತೆ ಮತ್ತೆ ಕರೆ ನೀಡಿತು. ಈ ಕಾರ್ಯತಂತ್ರದ ಭಾಗವಾಗಿ, ಯಾರು ಬೇಕಿದ್ದರೂ ಎಲ್ಲಿ ಬೇಕಿದ್ದರೂ ಸಂಘಟನೆಯ ಹೆಸರಿನಲ್ಲಿ ದಾಳಿ ನಡೆಸಬಹುದಿತ್ತು. ಇದರ ಪರಿಣಾಮವಾಗಿ, ಹಾನಿ ಎಸಗುವ ಸಂಘಟನೆಯ ಸಾಮರ್ಥ್ಯ ಹೆಚ್ಚಾಯಿತು. ಸಂಘಟನೆಯ ತರಬೇತಿ ಶಿಬಿರಗಳಿಗೆ ಎಂದೂ ಕಾಲಿರಿಸದವರು ದಾಳಿ ಸಂಘಟಿಸಬಹುದಿತ್ತು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಒಂದು ಗುಂಡಿನ ದಾಳಿ, ಸ್ಪೇನ್‌ನ ಬಾರ್ಸಿಲೋನಾದಲ್ಲಿ ವ್ಯಾನ್‌ ಚಾಲಕನೊಬ್ಬ ನಡೆಸಿದ ದಾಳಿ ಇಂಥವು.

ಅಬುಬಕರ್‌ ತನ್ನ ಕೊನೆಯ ದಿನಗಳನ್ನು ಹೇಗೆ ಕಳೆದ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಏಪ್ರಿಲ್‌ನಲ್ಲಿ ಬಿಡುಗಡೆಯಾದ ಒಂದು ದೃಶ್ಯಾವಳಿಯಲ್ಲಿ ಆತ ಒಂದು ಕೈಯಲ್ಲಿ ರೈಫಲ್ ಹಿಡಿದು, ಶ್ರೀಲಂಕಾದ ಚರ್ಚ್‌ನಲ್ಲಿ ದಾಳಿ ನಡೆಸಿದವರನ್ನು ಪ್ರಶಂಸಿಸಿದ್ದ. ಕಳೆದ ತಿಂಗಳು ಬಿಡುಗಡೆ ಮಾಡಿದ್ದ ಒಂದು ಧ್ವನಿ ಮುದ್ರಿಕೆಯಲ್ಲಿ ಆತ, ಹಿನ್ನಡೆ ಆಗಿದ್ದರೂ ಹೋರಾಟ ನಡೆಸಿದ ‘ಸಾಮ್ರಾಜ್ಯದ ಸೈನಿಕರ’ ಬಗ್ಗೆ ಪ್ರಶಂಸೆಯ ಮಾತು ಆಡಿದ್ದ.

ಅಬುಬಕರ್ ಕುರಿತು ಇಸ್ಲಾಮಿಕ್ ಸ್ಟೇಟ್‌ ಸಂಘಟನೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅವನ ಹತ್ಯೆಯ ಪರಿಣಾಮವಾಗಿ ಅವನ ಉತ್ತರಾಧಿಕಾರಿ ಯಾರು ಎಂಬ ತಿಕ್ಕಾಟ ಸಂಘಟನೆಯಲ್ಲಿ ಶುರುವಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಅಮೆರಿಕದ ಡ್ರೋನ್ ದಾಳಿ ಹಾಗೂ ವೈಮಾನಿಕ ದಾಳಿಗಳು ಸಂಘಟನೆಯ ಪ್ರಮುಖರನ್ನು ಕೊನೆಗಾಣಿಸಿವೆ. ಹಾಗಾಗಿ, ಅಬುಬಕರ್‌ನ ಉತ್ತರಾಧಿಕಾರಿ ಯಾರಾಗಬಹುದು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗುತ್ತಿಲ್ಲ. ‘ಅಬುಬಕರ್‌ ಸ್ಥಾನಕ್ಕೆ ಬರುಬಹುದಾದಂತಹ ಕೆಲವರು ಅಲ್ಲಿದ್ದಾರೆ’ ಎನ್ನುತ್ತಾರೆ ವಿಶ್ಲೇಷಕ ಇವಾನ್ ಕೊಲ್ಮನ್‌.

ಸ್ಥಾಪಕ ಒಸಾಮ ಬಿನ್ ಲಾಡೆನ್‌ 2011ರಲ್ಲೇ ಹತ್ಯೆಯಾದರೂ ಅಲ್–ಕೈದಾ ಸಂಘಟನೆಯ ಉಳಿದುಕೊಂಡಿದೆ. ಅದರ ಜೊತೆ ಗುರುತಿಸಿಕೊಂಡಿದ್ದ ಕೆಲವು ಸಂಘಟನೆಗಳು ಸ್ವತಂತ್ರವಾಗಿ ಕೆಲಸ ಮಾಡಲು ಆರಂಭಿಸಿವೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ಇನ್ನಷ್ಟು...
ಮಹಿಳೆಯರ ಜನನಾಂಗ ಛೇದನಕ್ಕೆ ಫತ್ವಾ
ಶ್ರೀಲಂಕಾ ದಾಳಿಯ ಹೊಣೆ ಹೊತ್ತ ಐಎಸ್‌ ಉಗ್ರ ಸಂಘಟನೆ
2015ರ ಸುದ್ದಿ |ಬಾಗ್ದಾದಿ ಸಾವಿನ ಶಂಕೆ
2017ರ ಸುದ್ದಿ | ಐ.ಎಸ್‌ ಮುಖ್ಯಸ್ಥ ಬಾಗ್ದಾದಿ ಜೀವಂತ?
2014ರ ಸುದ್ದಿ |ಖಲೀಫ ಬಾಗ್ದಾದಿ ಅಂದು ಹೀಗೆ ಭಾಷಣ ಮಾಡಿದ್ದ
ಭಾರತದಲ್ಲಿ ‘ಪ್ರಾಂತ್ಯ’ ಸ್ಥಾಪನೆ ಇಸ್ಲಾಮಿಕ್‌ ಸ್ಟೇಟ್‌ ಹೇಳಿಕೆ
ಐಎಸ್‌ ಸೇರಿದ್ದ ಕೇರಳದ ಯುವಕ ಸಾವು
ವಾಟ್ಸ್‌ಆ್ಯಪ್‌ನಲ್ಲಿ ಐಎಸ್‌ ಪರ ಸಂದೇಶ
‘ದಕ್ಷಿಣ ಭಾರತದಲ್ಲಿ ಉಗ್ರರ ನೆಲೆ ವಿಸ್ತರಣೆ: ಎಚ್ಚರಿಕೆ
ಇಸ್ಲಾಮಿಕ್ ಸ್ಟೇಟ್ಸ್ ವಿಡಿಯೊಗಳಲ್ಲಿ ಇಂಗ್ಲಿಷ್ ವಿವರಣೆ ನೀಡಿದಾತ ಈ ಖಲೀಫ!
ಶಿರಚ್ಛೇದ ವಿಡಿಯೊ ನೈಜ: ಬೇಹುಗಾರಿಕಾ ದಳ
ಐಎಸ್‌ ಉಗ್ರರಿಂದ ತಪ್ಪಿಸಿಕೊಂಡ ಸಂತ್ರಸ್ತರು ಹಸಿವಿನಿಂದ ಕಂಗೆಟ್ಟರು
‘ವಿದಾಯ ಭಾಷಣ’ದಲ್ಲಿ ಐಎಸ್‌ ಸೋಲೊಪ್ಪಿಕೊಂಡ ಬಾಗ್ದಾದಿ
ಸಂಪಾದಕೀಯ | ಐಎಸ್‌ ಪ್ರಭಾವ: ನಿರ್ಲಕ್ಷ್ಯ ಸಲ್ಲದು, ಕಟ್ಟೆಚ್ಚರ ವಹಿಸಿ
ಐಎಸ್‌ ಉಗ್ರರ ದಾಳಿಗೆ ನಲುಗಿದ ಯಾಜಿದಿ ಮಹಿಳೆಯರು
ಇಸ್ಲಾಮಿಕ್ ಸ್ಟೇಟ್‌ (ಐಎಸ್) ಉಗ್ರರ ನಾಯಕ ಅಲ್‌ ಬಾಗ್ದಾದಿ ಹತ್ಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT