ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜನರ ಆರೋಗ್ಯದ ಹಕ್ಕಿಗೆ ಗಡಿಗಳ ನಿರ್ಬಂಧ ಬೇಡ

Last Updated 11 ಜೂನ್ 2020, 2:08 IST
ಅಕ್ಷರ ಗಾತ್ರ

‘ಸಾಂಕ್ರಾಮಿಕವಾಗಿರುವ ಕೋವಿಡ್–19 ಪಿಡುಗಿನ ವಿರುದ್ಧದ ಹೋರಾಟದಲ್ಲಿ ಲಾಕ್‌ಡೌನ್‌ ಕ್ರಮ ಅಂತಿಮ ಅಸ್ತ್ರವಲ್ಲ; ಇದು, ಈ ರೋಗದ ವಿರುದ್ಧದ ಹೋರಾಟಕ್ಕೆ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲು ಸಿಗುವ ಅವಕಾಶ, ಅಷ್ಟೇ’ ಎನ್ನುವ ಮಾತನ್ನು ದೇಶದ ನೀತಿ ನಿರೂಪಕರು ಹಲವು ಬಾರಿ ಹೇಳಿದ್ದಾರೆ.

ಆ ಮಾತು ನಿಜ ಕೂಡ. ಆದರೆ, ಅರವಿಂದ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರದ ನಡೆಯೊಂದನ್ನು ಗಮನಿಸಿದರೆ, ಆ ಸರ್ಕಾರವು ತನ್ನ ವ್ಯಾಪ್ತಿಯಲ್ಲಿನ ಆರೋಗ್ಯ ಸೇವೆಗಳನ್ನು ಸುಧಾರಿಸುವ ಕೆಲಸವನ್ನು ಲಾಕ್‌ಡೌನ್‌ ಅವಧಿಯಲ್ಲಿ ಮಾಡಲಿಲ್ಲವೇ ಎಂಬ ಅನುಮಾನ ವ್ಯಕ್ತವಾಗುತ್ತದೆ. ದೇಶದ ರಾಜಧಾನಿ ಕೂಡ ಆಗಿರುವ ದೆಹಲಿಯಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ರಾಜ್ಯ ಸರ್ಕಾರದ ಆಸ್ಪತ್ರೆಗಳು ದೆಹಲಿಯ ನಿವಾಸಿಗಳಿಗೇ ಮೀಸಲು ಎಂಬ ಅಸಾಂವಿಧಾನಿಕ, ಅಮಾನವೀಯ ತೀರ್ಮಾನವನ್ನು ಅಲ್ಲಿನ ಸರ್ಕಾರ ತೆಗೆದುಕೊಂಡಿತ್ತು. ಆದರೆ, ಈ ತೀರ್ಮಾನವು ಅನುಷ್ಠಾನದ ರೂಪ ತಾಳಲು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವಕಾಶ ನೀಡಿಲ್ಲ ಎಂಬುದು ಸಮಾಧಾನದ ಸಂಗತಿ. ಜೂನ್‌ 8ರಿಂದ ದೆಹಲಿಯ ಗಡಿಗಳನ್ನು ತೆರೆಯಲಾಗುತ್ತದೆ, ಬೇರೆ ರಾಜ್ಯಗಳ ಜನ ಅಲ್ಲಿಗೆ ಮುಕ್ತವಾಗಿ ಬರಬಹುದು ಎಂಬ ಪ್ರಕಟಣೆಯನ್ನು ಅಲ್ಲಿನ ಸರ್ಕಾರ ಮಾಡಿತ್ತು. ಆದರೆ, ಕೇಜ್ರಿವಾಲ್ ಅವರು ‘ದೆಹಲಿ ಸರ್ಕಾರ ನಡೆಸುವ ಆಸ್ಪತ್ರೆಗಳು ಹಾಗೂ ದೆಹಲಿಯ ಖಾಸಗಿ ಆಸ್ಪತ್ರೆಗಳು ದೆಹಲಿಯ ನಿವಾಸಿಗಳಿಗೆ ಮಾತ್ರ ಮೀಸಲು’ ಎಂಬ ತೀರ್ಮಾನವನ್ನು ಜೂನ್‌ 7ರಂದು ಪ್ರಕಟಿಸಿದರು.

ತಾವು ಇಂಥದ್ದೊಂದು ತೀರ್ಮಾನ ಕೈಗೊಂಡಿದ್ದಕ್ಕೆ ಸಮರ್ಥನೆಯಾಗಿ, ಸಮೀಕ್ಷೆಯೊಂದರಲ್ಲಿ ಕಂಡುಕೊಂಡ ಅಂಶವನ್ನು ಉಲ್ಲೇಖಿಸಿದರು‌. ‘ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇಕಡ 90ರಷ್ಟು ಜನ, ಕೋವಿಡ್–19 ನಿಯಂತ್ರಣಕ್ಕೆ ಬರುವವರೆಗೆ ದೆಹಲಿ ಆಸ್ಪತ್ರೆಗಳಲ್ಲಿನ ಹಾಸಿಗೆ‌ಗಳನ್ನು ದೆಹಲಿಯ ಜನರಿಗೇ ಮೀಸಲಿಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ಕೇಜ್ರಿವಾಲ್ ಹೇಳಿದ್ದರು. ಆದರೆ, ತಮ್ಮ ತೀರ್ಮಾನಕ್ಕೆ ಕಾನೂನಿನ ಸಮ್ಮತಿ ಇದೆಯೇ ಎಂಬುದನ್ನು ಅವರು ಪರಿಶೀಲಿಸಲಿಲ್ಲ. ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಆಲೋಚನೆ ಮಾಡುವ ಬದಲು ಆಳುವವರು ಜನಪ್ರಿಯತೆಗೆ ಜೋತು ಬೀಳುವುದಕ್ಕೆ ನಿದರ್ಶನವಾಗಿ ನಿಲ್ಲುತ್ತದೆ ಕೇಜ್ರಿವಾಲ್ ನೇತೃತ್ವದ ಸರ್ಕಾರದ ಈ ತೀರ್ಮಾನ.

ಇಂಥದ್ದೊಂದು ನಿರ್ಧಾರವನ್ನು, ಭಾರತೀಯ ಕಂದಾಯ ಸೇವಾ (ಐಆರ್‌ಎಸ್‌) ಅಧಿಕಾರಿ ಕೂಡ ಆಗಿದ್ದ ಕೇಜ್ರಿವಾಲ್ ಅವರು ಕೈಗೊಂಡಿದ್ದು ದುರ್ದೈವದ ಸಂಗತಿಯೇ ಸರಿ.

ಅನ್ಯರಾಜ್ಯಗಳ ಜನ ತಮ್ಮಲ್ಲಿಗೆ ಬರಬಹುದು, ತಮ್ಮಲ್ಲಿನ ಆರ್ಥಿಕ ಚಟುವಟಿಕೆಗಳ ಭಾಗ ಆಗಬಹುದು, ತಮ್ಮ ಅರ್ಥವ್ಯವಸ್ಥೆಗೆ ಕೊಡುಗೆ ಸಲ್ಲಿಸಬಹುದು; ಆದರೆ, ಆರೋಗ್ಯ ಸೇವೆಗಳನ್ನು ಪಡೆಯುವಂತೆ ಇಲ್ಲ ಎಂಬ ತೀರ್ಮಾನವನ್ನು ಸರ್ಕಾರವೊಂದು ತೆಗೆದುಕೊಳ್ಳುವುದು, ಇಂತಹ ಅಮಾನವೀಯ ತೀರ್ಮಾನಕ್ಕೆ ಜನರ ಅಭಿಪ್ರಾಯವನ್ನು ಆಧಾರವಾಗಿ ಇಟ್ಟುಕೊಳ್ಳುವುದು ಕಾನೂನಿನ ಸಾರ್ವಭೌಮತ್ವವನ್ನು ಅಣಕಿಸಿದಂತೆಯೇ ಸರಿ. ರಾಜ್ಯ ಸರ್ಕಾರಿ ಆಸ್ಪತ್ರೆ ಹಾಗೂ ಅಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಬೇಕು ಎಂದಾದರೆ ಸರ್ಕಾರ ಹೇಳಿದ ದಾಖಲೆಪತ್ರಗಳಲ್ಲಿ ಯಾವುದಾದರೂ ಒಂದನ್ನು ವ್ಯಕ್ತಿ ಹೊಂದಿರಬೇಕಿತ್ತು. ಆದರೆ, ದಾಖಲೆಪತ್ರಗಳನ್ನು ಹೊಂದಿಲ್ಲದ ಕೆಲವು ವಲಸಿಗರ ಸ್ಥಿತಿ? ಕೇಂದ್ರ ಸರ್ಕಾರವು ದೆಹಲಿಯಲ್ಲಿ ನಡೆಸುವ ಆಸ್ಪತ್ರೆಗಳು ಎಲ್ಲರಿಗೂ ಮುಕ್ತವಾಗಿ ಇದ್ದವು ಎಂಬುದು ನಿಜವಾದರೂ, ತುರ್ತಾಗಿ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ಎದುರಿಸುತ್ತಿದ್ದವರು ‘ಇದು ರಾಜ್ಯ ಸರ್ಕಾರದ ಆಸ್ಪತ್ರೆಯೋ, ಕೇಂದ್ರ ಸರ್ಕಾರದ್ದೋ’ ಎಂದು ವಿಚಾರಿಸುತ್ತಾ ನಿಲ್ಲಬೇಕಿತ್ತು.

ವಲಸೆ ಕಾರ್ಮಿಕರ ಸಂಕಟವನ್ನು ಲಾಕ್‌ಡೌನ್‌ ಅವಧಿಯಲ್ಲಿ ಕಣ್ಣಾರೆ ಕಂಡೂ ವ್ಯವಸ್ಥೆಯೊಂದು ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಾದರೆ? ‘ಆರೋಗ್ಯ ಸೇವೆ ಪಡೆಯುವ ಹಕ್ಕು, ಜೀವಿಸುವ ಹಕ್ಕಿನ ವ್ಯಾಪ್ತಿಯಲ್ಲೇ ಬರುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದ ಮಾತನ್ನು ಸರ್ಕಾರಗಳು ನೆನಪಿಸಿಕೊಳ್ಳಬೇಕು. ಭೌತಿಕ ಗಡಿಗಳನ್ನು ಉಲ್ಲೇಖಿಸಿ ಆರೋಗ್ಯ ಸೇವೆಗಳನ್ನು ನಿರಾಕರಿಸುವ ಮಟ್ಟಕ್ಕೆ ಯಾವ ಸರ್ಕಾರವೂ ಇಳಿಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT