ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಬ್ಯಾಂಕ್‌: ಸ್ಥಳೀಯಭಾಷೆ ಅರಿತವರೇ ನೇಮಕವಾಗಲಿ

ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ
Last Updated 7 ಜುಲೈ 2019, 19:45 IST
ಅಕ್ಷರ ಗಾತ್ರ

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ವ್ಯವಸ್ಥೆಯು ಇದೇ ವರ್ಷದಿಂದ ಜಾರಿಗೆ ಬರಲಿದೆ. ಕನ್ನಡ ಒಳಗೊಂಡಂತೆ ಒಟ್ಟು 13 ಪ್ರಾದೇಶಿಕ ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ. ಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) ನಡೆಸುವ ನೇಮಕಾತಿ ಪರೀಕ್ಷೆಗಳನ್ನು 13 ಭಾಷೆಗಳಲ್ಲಿ ಬರೆಯುವ ಅವಕಾಶ 2014ರವರೆಗೂ ಇತ್ತು. ಆದರೆ, ಆ ವರ್ಷ ನಿಯಮ ಬದಲಿಸಿ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆ ನಡೆಸುವ ತೀರ್ಮಾನಕ್ಕೆ ಬರಲಾಯಿತು. ಸ್ಥಳೀಯ ಭಾ‍ಷಾ ಮಾಧ್ಯಮಗಳಲ್ಲಿ ಶಿಕ್ಷಣ ಪಡೆದವರ ಪಾಲಿಗೆ ಇದು ಆಘಾತ ನೀಡಿತು. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರ ಎದುರು ಹಾಗೂ ಹಿಂದಿ ಪ್ರಾಬಲ್ಯದ ರಾಜ್ಯಗಳ ಅಭ್ಯರ್ಥಿಗಳ ಎದುರು ಅವರು ಸ್ಪರ್ಧಿಸುವುದು ಕಷ್ಟವಾಯಿತು. ನಮ್ಮಲ್ಲಿನ ಗ್ರಾಮೀಣ ಬ್ಯಾಂಕ್‌ಗಳ ಹುದ್ದೆಗಳು ಕನ್ನಡಿಗರಿಗಿಂತಲೂ ಹೆಚ್ಚಾಗಿ ಹೊರರಾಜ್ಯದವರಿಗೇ ಸಿಗುತ್ತಿವೆ ಎನ್ನುವ ಅಳಲು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಚಿವರು ಮಾಡಿರುವ ಈ ಘೋಷಣೆ ಆಂಶಿಕವಾಗಿಯಾದರೂ ಸ್ವಾಗತಾರ್ಹವೇ ಹೌದು. ಆದರೆ, 2014ರಲ್ಲಿ ನಿಯಮಗಳಲ್ಲಿ ತಂದ ಬದಲಾವಣೆ ಹಾಗೂ ಅವುಗಳಿಂದ ಆದ ಪರಿಣಾಮಕ್ಕೆ ಇನ್ನೊಂದು ಆಯಾಮವೂ ಇದೆ. ಗ್ರಾಮೀಣ ಬ್ಯಾಂಕುಗಳಲ್ಲಿ ಕ್ಲರಿಕಲ್ ಹಾಗೂ ಗ್ರೇಡ್-1 ಹುದ್ದೆಗಳಿಗೆ ನೇಮಕಾತಿ ಬಯಸುವವರು ಎಸ್‌ಎಸ್‌ಎಲ್‌ಸಿವರೆಗೆ ರಾಜ್ಯ ಭಾಷೆಯನ್ನು ಒಂದು ವಿಷಯವನ್ನಾಗಿ ಕಲಿತಿರಬೇಕು ಎಂಬ ನಿಯಮ ಇತ್ತು. ಆದರೆ, 2014ರ ತಿದ್ದುಪಡಿಯು ಆಯಾ ರಾಜ್ಯದ ಭಾಷೆ ಕಲಿತಿರುವುದು ಕಡ್ಡಾಯವಲ್ಲ; ನೇಮಕ ಆದ ಆರು ತಿಂಗಳ ಅವಧಿಯಲ್ಲಿ ಪ್ರದೇಶದ ಭಾಷೆಯನ್ನು ಕಲಿತರೆ ಸಾಕು ಎಂದು ಹೇಳಿತು. ಇದರ ಪರಿಣಾಮ ಏನಾಯಿತು ಎಂಬುದನ್ನು ತೀರಾ ಈಚೆಗೆ ಪ್ರಕಟವಾದ ವರದಿಯೊಂದು ಚೆನ್ನಾಗಿ ವಿವರಿಸಿದೆ. 2014ರ ನಂತರ ಕರ್ನಾಟಕದಲ್ಲಿನ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಒಟ್ಟು 18 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಅವುಗಳ ಪೈಕಿ 1,060 ಹುದ್ದೆಗಳಿಗೆ ಮಾತ್ರ ಕನ್ನಡಿಗರ ನೇಮಕ ಆಗಿದೆ ಎಂದು ವರದಿ ಹೇಳಿದೆ. ಹೆಸರೇ ಸೂಚಿಸುವಂತೆ, ಗ್ರಾಮೀಣ ಬ್ಯಾಂಕುಗಳು ಕೆಲಸ ಮಾಡುವುದು ಹಳ್ಳಿಗಾಡಿನ ಜನರನ್ನು ಗುರಿಯಾಗಿಸಿಕೊಂಡು. ‘ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ’ ಇವುಗಳ ಗುರಿಗಳಲ್ಲಿ ಒಂದು. ಆದರೆ, ಗ್ರಾಮೀಣ ಪ್ರದೇಶಗಳ ಬ್ಯಾಂಕ್‌ ಶಾಖೆಗಳಿಗೆ ಸ್ಥಳೀಯ ಭಾಷೆ ಮಾತನಾಡುವವರು ನೇಮಕ ಆಗದಿದ್ದರೆ, ಅವರ ಸ್ಥಾನಗಳಲ್ಲಿ ಅನ್ಯಭಾಷಿಕರು ಇದ್ದರೆ, ಉದ್ದೇಶಿತ ಬ್ಯಾಂಕಿಂಗ್ ಸೇವೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದು ಕಷ್ಟವಾಗುತ್ತದೆ. ತಮಗೆ ಸಂವಹನ ನಡೆಸಲು ಸಾಧ್ಯವಿಲ್ಲದ ಭಾಷೆ ಮಾತನಾಡುವ ಸಿಬ್ಬಂದಿಯ ಜೊತೆ ವ್ಯವಹರಿಸಲು ಬಾರದ ಕಾರಣ, ಹಳ್ಳಿಗಳ ಜನ ಅನುಭವಿಸಿದ ಕಷ್ಟಗಳ ಬಗ್ಗೆ ಬಹಳಷ್ಟು ವರದಿಗಳು ಬಂದಿವೆ.

ಬ್ಯಾಂಕುಗಳ ಗುರಿ ಹಣಕಾಸಿನ ಸೇವೆ ಒದಗಿಸುವುದು. ಅದರಲ್ಲೂ, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಯ ಹಿಂದಿನ ಉದ್ದೇಶ ಬಹಳ ಮಹತ್ವದ್ದು. ಆರ್ಥಿಕ ಒಳಗೊಳ್ಳುವಿಕೆಯಲ್ಲಿ ಈ ಬಗೆಯ ಬ್ಯಾಂಕುಗಳು ವಹಿಸುವ ಪಾತ್ರ ಬಹಳ ದೊಡ್ಡದು. ಖಾಸಗಿ ಹಾಗೂ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳು ತಲುಪದ ಮೂಲೆಗಳನ್ನು ಈ ಬ್ಯಾಂಕುಗಳು ತಲುಪಬೇಕು. ಹಾಗಾಗಿ, ಈ ಬ್ಯಾಂಕು ಗಳಲ್ಲಿನ ಎಲ್ಲ ಬಗೆಯ ಸೇವೆಗಳು ಪ್ರಾದೇಶಿಕ ಭಾಷೆ ಅಥವಾ ರಾಜ್ಯ ಭಾಷೆಯಲ್ಲೇ ಇದ್ದರೆ ಚೆನ್ನ. ಇದು ಸಾಧ್ಯವಾಗಬೇಕು ಎಂದಾದರೆ, ಬ್ಯಾಂಕಿನ ಸಿಬ್ಬಂದಿ ಕೂಡ ಪ್ರಾದೇಶಿಕ ಅಥವಾ ರಾಜ್ಯ ಭಾಷೆ ಬಳಕೆಯಲ್ಲಿ ನಿಪುಣರಾಗಿರಬೇಕು. ದಕ್ಷಿಣದ ತುತ್ತತುದಿಯ ರಾಜ್ಯಗಳಿಗೆ ಉತ್ತರದ ತುದಿಯಿಂದ ಸಿಬ್ಬಂದಿಯನ್ನು ತರುವುದು ಅಥವಾ ಉತ್ತರದ ಹಳ್ಳಿ ಮೂಲೆಗಳಿಗೆ ದಕ್ಷಿಣ ರಾಜ್ಯಗಳ ಸಿಬ್ಬಂದಿಯನ್ನು ನಿಯೋಜಿಸುವುದರಿಂದ ಸ್ಥಳೀಯರಿಗೆ ಹಣಕಾಸಿನ ಸೇವೆ ಪಡೆಯುವಲ್ಲಿ ಹೆಚ್ಚಿನ ಪ್ರಯೋಜನವೇನೂ ಆಗಲಿಕ್ಕಿಲ್ಲ. ಗ್ರಾಮೀಣ ಬ್ಯಾಂಕುಗಳಲ್ಲಿ ಹಣಕಾಸು ಸೇವೆಗಳು ಪ್ರಾದೇಶಿಕ ಭಾಷೆಯಲ್ಲೇ ಸಿಗುವಂತೆ ಮಾಡಲು 2014ಕ್ಕೂ ಮೊದಲಿದ್ದ ನಿಯಮದ ಮರುಅಳವಡಿಕೆ ಅಗತ್ಯ. ಅಂದರೆ, ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದಷ್ಟೇ ಅಲ್ಲದೆ, ನೇಮಕಾತಿ ಬಯಸುವವರು ಆಯಾ ರಾಜ್ಯದ ಭಾಷೆಯನ್ನು ಕಲಿತಿರುವುದನ್ನು ಕಡ್ಡಾಯ ಕೂಡ ಮಾಡಬೇಕು. ಹಣಕಾಸು ಸೇವೆ ನೀಡುವ, ಆರ್ಥಿಕ ಒಳಗೊಳ್ಳುವಿಕೆಯ ನೆಲೆಯನ್ನು ವಿಸ್ತರಿಸುವ ದೃಷ್ಟಿಯಿಂದ ಇದು ತ್ವರಿತವಾಗಿ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT