ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬಿಬಿಎಂಪಿ ಆಡಳಿತ ಬಲಪಡಿಸುವ ಆಶಯಕ್ಕೆ ಶಕ್ತಿ ತುಂಬದ ಮಸೂದೆ

Last Updated 14 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂಬ ಬೇಡಿಕೆ ಕೊನೆಗೂ ಸಾಕಾರಗೊಂಡಿದೆ. ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ‘ಬಿಬಿಎಂಪಿ ಮಸೂದೆ– 2020’ಕ್ಕೆ ಅಂಗೀಕಾರವನ್ನೂ ಪಡೆದಿದೆ. ಆದರೆ ಬಿಬಿಎಂಪಿ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಆಶಯ ಈ ಮಸೂದೆಯಿಂದ ಸಾಕಾರಗೊಳ್ಳಲಿದೆಯೇ ಎಂದು ಪರಾಮರ್ಶಿಸಿದಾಗ ನಿರಾಶೆಯೇ ಕಾಣಿಸುತ್ತದೆ. ಬೆಂಗಳೂರು ನಗರದ ಅಭಿವೃದ್ಧಿಗೆ ಹೊಸ ದಿಸೆ ತೋರಿಸಬೇಕಾದ ಈ ಮಸೂದೆ ಅವಸರದ ಅಡುಗೆಯಂತೆ ಭಾಸವಾಗುತ್ತದೆ.

ಆಡಳಿತ ವ್ಯವಸ್ಥೆಗೆ ಶಕ್ತಿ ತುಂಬುವಂತಹ ಹೊಸ ಅಂಶಗಳು ಈ ಮಸೂದೆಯಲ್ಲಿಲ್ಲ. ಬಿಬಿಎಂಪಿ ಮಸೂದೆಯ ಹೆಚ್ಚಿನ ಅಂಶಗಳನ್ನು 1976ರ ಕೆಎಂಸಿ ಕಾಯ್ದೆಯಿಂದ ಎರವಲು ಪಡೆಯಲಾಗಿದೆ. ಮೇಯರ್‌ ಅವಧಿಯನ್ನು 30 ತಿಂಗಳುಗಳಿಗೆ ವಿಸ್ತರಿಸಿದ್ದು, ವಲಯ ಸಮಿತಿ ರಚಿಸಿರುವುದು, ವಾರ್ಡ್‌ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಿರುವುದು, ಏರಿಯಾ ಸಭಾಗಳ ಸ್ಥಾಪನೆ ಸ್ವಾಗತಾರ್ಹ ಕ್ರಮಗಳೇ.

ಜಲಮಂಡಳಿ, ಬೆಸ್ಕಾಂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂತಾದ ಸಂಸ್ಥೆಗಳನ್ನೂ ಬಿಬಿಎಂಪಿ ತೆಕ್ಕೆಗೆ ಸೇರಿಸಿಕೊಂಡು ಮುಂಬೈ ನಗರದ ರೀತಿ ನಿಜವಾದ ಅರ್ಥದಲ್ಲಿ ಆಡಳಿತ ಸಬಲೀಕರಣ ಆಗಬೇಕು. ಪ್ರಮುಖ ಆರ್ಥಿಕ ನಿರ್ಧಾರ ತಳೆಯುವಾಗ ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶ ಇರಬಾರದು ಎಂಬುದು ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ಹೊಂದಬೇಕು ಎಂಬುದರ ಹಿಂದಿದ್ದ ಪ್ರಮುಖ ಆಶಯ. ಆದರೆ ಈ ಕುರಿತ ಪ್ರಸ್ತಾಪವೇ ಮಸೂದೆಯಲ್ಲಿಲ್ಲ.

ವಲಯ ಸಮಿತಿಗಳಿಗೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಿರ್ಧಾರ ತಳೆಯುವ ಅಧಿಕಾರವನ್ನು ನೀಡಲಾಗಿದೆ. ಆದರೆ, ಈ ಸಮಿತಿಗಳು ತಳೆದ ನಿರ್ಣಯಗಳನ್ನು ರದ್ದುಪಡಿಸುವ ಅಧಿಕಾರವನ್ನು ಮುಖ್ಯ ಆಯುಕ್ತರಿಗೆ ನೀಡಲಾಗಿದೆ. ಇದು, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಂಡ ಹಾಗೆ.

ಮಸೂದೆಯಲ್ಲಿ ಕೆಲವು ಅನಗತ್ಯ ವಿಚಾರಗಳನ್ನೂ ಸೇರ್ಪಡೆಗೊಳಿಸಲಾಗಿದೆ. ವಿಧಾನಸಭಾ ಕ್ಷೇತ್ರಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿಯನ್ನು ರಚಿಸುವ ಪ್ರಸ್ತಾಪ ಮಸೂದೆಯಲ್ಲಿದೆ. ಈ ಸಮಿತಿಯು ವಲಯ ಮಟ್ಟದ ಸಮಿತಿಯ ನಿರ್ಣಯಗಳನ್ನು ಪರಾಮರ್ಶೆಗೆ ಒಳಪಡಿಸಿ ಸಲಹೆಗಳನ್ನು ನೀಡುವ ಅವಕಾಶ ಕಲ್ಪಿಸಲಾಗಿದೆ. ಇದು ಭವಿಷ್ಯದಲ್ಲಿ ರಾಜಕೀಯ ತಿಕ್ಕಾಟಗಳಿಗೆ ಕಾರಣವಾಗುವ ಅಪಾಯ ಇದೆ. ಶಾಸಕರು ಒಂದು ಪಕ್ಷದವರು ಹಾಗೂ ಪಾಲಿಕೆ ಸದಸ್ಯರು ಇನ್ನೊಂದು ಪಕ್ಷದವರಾಗಿದ್ದಾಗ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ವಿಚಾರಗಳಲ್ಲಿ ಹಗ್ಗಜಗ್ಗಾಟ ಮಾಮೂಲಿ.

ಇನ್ನು ಶಾಸಕರ ಅಧ್ಯಕ್ಷತೆಯಲ್ಲಿ ಇನ್ನೊಂದು ಸಮಿತಿ ರಚನೆಯಾದರೆ ಇಂತಹ ಸಂಘರ್ಷಗಳು ಇನ್ನಷ್ಟು ಹೆಚ್ಚಾದರೆ ಅಚ್ಚರಿಯೇನಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ಮೇಲೆ ಸರ್ಕಾರದ ಹತೋಟಿಯನ್ನು ಕಡಿಮೆ ಮಾಡುವ ಉದ್ದೇಶದಿಂದಲೇ ಸಂವಿಧಾನಕ್ಕೆ 74ನೇ ತಿದ್ದುಪಡಿ ತರಲಾಗಿತ್ತು. ಈ ಆಶಯವನ್ನು ಎತ್ತಿ ಹಿಡಿಯುವಲ್ಲಿಬಿಬಿಎಂಪಿ ಮಸೂದೆ ಸಫಲವಾಗಿಲ್ಲ. ಬಿಬಿಎಂಪಿ ಕೈಗೊಳ್ಳುವ ಎಲ್ಲ ನಿರ್ಣಯಗಳನ್ನು ಮುಖ್ಯ ಆಯುಕ್ತರು ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಬೇಕು. ಸರ್ಕಾರ ಬಯಸಿದರೆ ಈ ನಿರ್ಣಯಗಳನ್ನು ರದ್ದುಪಡಿಬಹುದು. ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕಂಡುಬಂದರೆ ಬಿಬಿಎಂಪಿಯನ್ನೇ ವಿಸರ್ಜಿಸುವ ಅಧಿಕಾರ ಈಗಲೂ ಸರ್ಕಾರದ ಕೈಯಲ್ಲಿದೆ. ಕೆಎಂಸಿ ಕಾಯ್ದೆಯಲ್ಲಿದ್ದ ಈ ಅಂಶಗಳನ್ನು ಬಿಬಿಎಂಪಿ ಮಸೂದೆಯಲ್ಲೂ ಮುಂದುವರಿಸಲಾಗಿದೆ. ಹಾಗಾಗಿಕೇವಲ ಮೇಯರ್‌ ಅಧಿಕಾರಾವಧಿಯನ್ನು ಎರಡೂವರೆ ವರ್ಷಗಳಿಗೆ ಹೆಚ್ಚಿಸುವುದಕ್ಕೆ ಹಾಗೂ ವಲಯ ಸಮಿತಿ ರಚಿಸುವುದಕ್ಕೆ ಪ್ರತ್ಯೇಕ ಮಸೂದೆ ಮಂಡಿಸುವ ಅಗತ್ಯವಿತ್ತೇ? ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕವೂ ಇದನ್ನು ಸಾಧಿಸಬಹುದಿತ್ತಲ್ಲವೇ? ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 225ಕ್ಕಿಂತ ಕಡಿಮೆ ಇರಬಾರದು ಹಾಗೂ 250 ಮೀರಬಾರದು ಎಂದು ಮಸೂದೆಯಲ್ಲಿ ಹೇಳಲಾಗಿದೆ. ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು ಈಗಿರುವ 198ರಿಂದ 243ಕ್ಕೆ ಹೆಚ್ಚಿಸಲು ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ. ಗಡಿಭಾಗದಲ್ಲಿ 1 ಕಿ.ಮೀ. ವ್ಯಾಪ್ತಿಯ ಗ್ರಾಮಗಳು ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಯಾಗಲಿವೆ. 2007ರಲ್ಲಿ 111 ಗ್ರಾಮಗಳು, ಏಳು ನಗರಸಭೆಗಳು ಹಾಗೂ ಒಂದು ಪುರಸಭೆಯನ್ನು ಬಿಬಿಎಂಪಿ ತೆಕ್ಕೆಗೆ ಸೇರ್ಪಡೆಗೊಳಿಸಲಾಗಿತ್ತು. ಈ ಹೊಸ ಪ್ರದೇಶಗಳಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆಗಳನ್ನೂ ಒದಗಿಸಲು ಸಾಧ್ಯವಾಗಿಲ್ಲ. ಈ ಪ್ರದೇಶಗಳು ಈಗಲೂ ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಹಾಗಿರುವಾಗ ಇನ್ನಷ್ಟು ಗ್ರಾಮಗಳನ್ನು ಸೇರ್ಪಡೆ ಮಾಡುವ ಔಚಿತ್ಯವಾದರೂ ಏನು? ಹೆಸರಿಗೆ ಮಾತ್ರ ಬಿಬಿಎಂಪಿ ಎಂದಾದರೆ ಸಾಕೇ. ಬಿಬಿಎಂಪಿ ವ್ಯಾಪ್ತಿಗೆ ಸೇರಲಿರುವ ಗ್ರಾಮಗಳ ಪರಿಸ್ಥಿತಿ ‘ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬಂತೆ ಆಗಬಾರದು ಅಲ್ಲವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT