ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಕ್ರಿಮಿನಲ್ ಅಪರಾಧಕ್ಕೆ ಹೊಸ ಕಾನೂನು; ಐತಿಹಾಸಿಕವೂ ಹೌದು, ಕಳವಳವೂ ಇದೆ

Published 2 ಜುಲೈ 2024, 22:20 IST
Last Updated 2 ಜುಲೈ 2024, 22:20 IST
ಅಕ್ಷರ ಗಾತ್ರ

ಕ್ರಿಮಿನಲ್ ಅಪರಾಧಗಳ ವಿರುದ್ಧ ಕ್ರಮ ಜರುಗಿಸಲು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮವನ್ನು ಅನುಷ್ಠಾನಕ್ಕೆ ತಂದಿರುವುದು ದೇಶದ ನ್ಯಾಯದಾನ ವ್ಯವಸ್ಥೆಯ ಪಾಲಿಗೆ ಐತಿಹಾಸಿಕ.

ಈ ಮೂರು ಕಾನೂನುಗಳು ಭಾರತೀಯ ದಂಡ ಸಂಹಿತೆ, ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಜಾರಿಗೆ ಬಂದಿವೆ. ಕೆಲವು ದಶಕಗಳಿಂದ ಅಥವಾ ಶತಮಾನದಿಂದ ಜಾರಿಯಲ್ಲಿ ಇದ್ದ ಕೆಲವು ಕಾನೂನುಗಳನ್ನು ಬದಲಾಯಿಸುವ ಅಗತ್ಯ ಇದೆ ಎಂಬ ವಿಚಾರದಲ್ಲಿ ಒಮ್ಮತ ಇತ್ತು. ಆದರೆ, ನಿರ್ದಿಷ್ಟ ಕಾಯ್ದೆಗಳಲ್ಲಿ ಅಗತ್ಯ ಇದ್ದೆಡೆ ತಿದ್ದುಪಡಿ ತಂದಿದ್ದರೆ ಸಾಕಾಗಿತ್ತಾದರೂ ಕೇಂದ್ರ ಸರ್ಕಾರವು ಕಾನೂನುಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂಬ ಅಭಿಪ್ರಾಯವೊಂದು ಬಲವಾಗಿದೆ. ಹೊಸ ವ್ಯವಸ್ಥೆಯ ಮೇಲೆ ತನ್ನದೊಂದು ಮುದ್ರೆ ಇರಬೇಕು ಎಂಬ ಇಚ್ಛೆಯಿಂದ ಕೇಂದ್ರ ಸರ್ಕಾರವು ಹೀಗೆ ಮಾಡಿರಬಹುದು. ಆದರೆ, ಹೊಸ ಕಾನೂನುಗಳ ಹೆಸರು ಹಿಂದಿಯಲ್ಲಿ ಮಾತ್ರವೇ ಏಕಿದೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿಲ್ಲ. ಹೊಸ ಕಾನೂನು ರೂಪಿಸುವ ಮೊದಲು ರಾಜ್ಯ ಸರ್ಕಾರಗಳು ಹಾಗೂ ಇತರ ಭಾಗೀದಾರರ ಜೊತೆಗಿನ ಚರ್ಚೆಗಳು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಈಗ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಹೊಸ ಕಾನೂನಿಗೆ ರಾಜ್ಯ ಮಟ್ಟದಲ್ಲಿ ತಿದ್ದುಪಡಿ ತರುವ ಚಿಂತನೆಯಲ್ಲಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಕೇಂದ್ರ ಸರ್ಕಾರವು ಈ ಕಾನೂನುಗಳ ಬಗ್ಗೆ ಸಂಸತ್ತಿನಲ್ಲಿ ವಿಸ್ತೃತ ಚರ್ಚೆ ನಡೆಸದೆ, ವಿರೋಧ ಪಕ್ಷಗಳ 146 ಸಂಸದರು ಅಮಾನತಾಗಿದ್ದಾಗ, ಧ್ವನಿಮತದ ಮೂಲಕ ಅಂಗೀಕಾರ ಪಡೆದುಕೊಂಡಿತು.

ಈ ಕಾನೂನುಗಳಲ್ಲಿ ಒಂದಿಷ್ಟು ಒಳ್ಳೆಯ ಅಂಶಗಳೂ ಇವೆ. ಹೊಸ ಕಾನೂನುಗಳು ಕೆಲವು ಪ್ರಕ್ರಿಯೆಗಳನ್ನು ಸರಳಗೊಳಿಸಿವೆ, ನ್ಯಾಯದಾನವು ತ್ವರಿತವಾಗಿ ಹಾಗೂ ಹೆಚ್ಚು ದಕ್ಷವಾಗಿ ಆಗುತ್ತದೆ ಎಂಬ ಭರವಸೆಯನ್ನು ನೀಡಿವೆ. ಅಪರಾಧ ನಡೆದಿರುವ ಬಗ್ಗೆ ಎಲೆಕ್ಟ್ರಾನಿಕ್ ಸಂವಹನ ಮಾಧ್ಯಮದ ಮೂಲಕವೂ ಮಾಹಿತಿ ನೀಡಬಹುದು. ವ್ಯಕ್ತಿಗಳು ಈಗ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ವಿಧಿವಿಜ್ಞಾನ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ದೋಷಾರೋಪ ನಿಗದಿಗೆ, ವಿಚಾರಣೆ ಮುಂದೂಡುವುದಕ್ಕೆ ಹಾಗೂ ಆದೇಶ ನೀಡುವುದಕ್ಕೆ ಕಾಲಮಿತಿ ನಿಗದಿ ಮಾಡಲಾಗಿದೆ. ಇವೆಲ್ಲವೂ ಸಂತ್ರಸ್ತರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ರೂಪಿಸಿರುವ ಕ್ರಮಗಳು ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ ಹೊಸ ಕಾನೂನುಗಳು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿವೆ ಎಂಬ ಕಳವಳ ಕೂಡ ವ್ಯಕ್ತವಾಗಿದೆ. ಹೊಸ ಕಾನೂನುಗಳ ಅಡಿಯಲ್ಲಿ ಪೊಲೀಸರು, ಶಂಕಿತ ವ್ಯಕ್ತಿಯೊಬ್ಬನನ್ನು ಈ ಹಿಂದಿಗಿಂತ ಹೆಚ್ಚಿನ ಅವಧಿಗೆ ತಮ್ಮ ವಶದಲ್ಲಿ ಇರಿಸಿಕೊಳ್ಳಲು ಅವಕಾಶ ಇದೆ. ಹೊಸ ಸ್ವರೂಪದ ಅಪರಾಧಗಳನ್ನು ಗುರುತಿಸುವ ಕೆಲಸ ಆಗಿದೆ. ಹಲವು ಬಗೆಯ ಅಪರಾಧಗಳಿಗೆ ಜೈಲುವಾಸ ಹಾಗೂ ದಂಡದ ರೂಪದಲ್ಲಿ ಶಿಕ್ಷೆಯನ್ನು ಹೆಚ್ಚು ಮಾಡಲಾಗಿದೆ. ‘ದೇಶದ್ರೋಹ’ಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಅಮಾನತಿನಲ್ಲಿ ಇರಿಸಿದ್ದರೂ ಈ ಆರೋಪವನ್ನು ಕಾನೂನಿನ ವ್ಯಾಖ್ಯಾನದಿಂದ ಹೊರಹಾಕಲಾಗಿದೆ ಎಂದು ಸರ್ಕಾರ ಹೇಳಿದ್ದರೂ ಅದನ್ನು ಹೊಸ ರೂಪದಲ್ಲಿ ಮತ್ತೆ ಕಾನೂನಿನಲ್ಲಿ ಸೇರಿಸಲಾಗಿದೆ. ನಾಗರಿಕರ ಹಕ್ಕುಗಳನ್ನು ಇನ್ನಷ್ಟು ಹೆಚ್ಚಿನ ಪರಿಣಾಮದೊಂದಿಗೆ ಹತ್ತಿಕ್ಕಲು ಹೊಸ ಕಾನೂನುಗಳನ್ನು ಬಳಕೆ ಮಾಡಬಹುದು ಎಂಬ ಆತಂಕ ಕೂಡ ವ್ಯಕ್ತವಾಗಿದೆ.

ಜೈಲುಶಿಕ್ಷೆಯ ವಿಚಾರದಲ್ಲಿಯೂ ಕೆಲವು ಕಳವಳಗಳು ಇವೆ. ಹೊಸ ಕಾನೂನುಗಳನ್ನು ಅನುಷ್ಠಾನಕ್ಕೆ ತರುವ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅಗತ್ಯ ತರಬೇತಿ ನೀಡುವ ಹಾಗೂ ಅವರನ್ನು ಹೊಸ ವ್ಯವಸ್ಥೆಗೆ ಸಜ್ಜುಗೊಳಿಸುವ ಕೆಲಸಕ್ಕಿಂತಲೂ ಕಾನೂನುಗಳ ಜಾರಿಗೆ ಸರ್ಕಾರವು ಹೆಚ್ಚಿನ ಒತ್ತು ನೀಡಿದೆ. ಪೊಲೀಸ್ ವ್ಯವಸ್ಥೆ ಹಾಗೂ ನ್ಯಾಯಾಂಗ ಸೇರಿದಂತೆ ಈ ಕಾನೂನುಗಳಿಗೆ ಸಂಬಂಧಿಸಿದ ಎಲ್ಲ ಹಂತಗಳಲ್ಲಿಯೂ ಒಂದಿಷ್ಟು ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಎರಡು ಕಾನೂನು ವ್ಯವಸ್ಥೆಗಳು ಏಕಕಾಲಕ್ಕೆ ಚಾಲ್ತಿಯಲ್ಲಿ ಇರಲಿವೆ. ಏಕೆಂದರೆ, ಜೂನ್‌ 30ಕ್ಕೆ ಮೊದಲು ದಾಖಲಾದ ಎಲ್ಲ ಪ್ರಕರಣಗಳ ತನಿಖೆ ಹಾಗೂ ವಿಚಾರಣೆಯನ್ನು ಹಳೆಯ ಕಾನೂನುಗಳ ಅಡಿಯಲ್ಲಿ ನಡೆಸಲಾಗುತ್ತದೆ. ಜೂನ್‌ 30ರ ನಂತರ ದಾಖಲಾಗುವ ಪ್ರಕರಣಗಳ ತನಿಖೆ ಹಾಗೂ ವಿಚಾರಣೆಯು ಹೊಸ ಕಾನೂನುಗಳ ಅಡಿಯಲ್ಲಿ ನಡೆಯಲಿವೆ. ಮೂರು ಕೋಟಿಗೂ ಹೆಚ್ಚು ಪ್ರಕರಣಗಳು ವಿಚಾರಣೆಯ ಹಂತದಲ್ಲಿ ಬಾಕಿ ಇರುವ ಕಾರಣ, ಇದು ಬಹಳ ಸವಾಲಿನ ಕೆಲಸ ಆಗಲಿದೆ. ನ್ಯಾಯಾಂಗ ಸೇರಿದಂತೆ ಕಾನೂನು ಜಾರಿ ವ್ಯವಸ್ಥೆಯು ಅಗತ್ಯ ಮೂಲಸೌಕರ್ಯದ ಕೊರತೆಯನ್ನು ಎದುರಿಸುತ್ತಿದೆ. ಈಗ ಈ ವ್ಯವಸ್ಥೆಯು ಹೊಸ ಅಗತ್ಯಗಳಿಗೆ ಸ್ಪಂದಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT