ಗುರುವಾರ , ಫೆಬ್ರವರಿ 25, 2021
29 °C

ಕಾನೂನು ಸುವ್ಯವಸ್ಥೆಯ ಕುಸಿತ: ನಿಷ್ಪಕ್ಷಪಾತ ತನಿಖೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಶ್ಚಿಮೀ ಉತ್ತರಪ್ರದೇಶದ ಬುಲಂದ್‌ಶಹರ್ ಇದೇ ಡಿಸೆಂಬರ್ ಮೂರರಂದು ಕರ್ತವ್ಯನಿರತ ಪೊಲೀಸ್ ಇನ್ಸ್‌ಪೆಕ್ಟರ್ ಸುಬೋಧಕುಮಾರ್ ಸಿಂಗ್ ಅವರ ಹತ್ಯೆಗೆ ಸಾಕ್ಷಿಯಾಯಿತು. ಇದು ಕಾನೂನು ಮತ್ತು ಸುವ್ಯವಸ್ಥೆಯ ಕುಸಿತದ ಪ್ರತಿಬಿಂಬ. ಘಟನಾವಳಿಯು ಪೂರ್ವನಿಯೋಜಿತ ಸಂಚಿನತ್ತ ಬೊಟ್ಟು ಮಾಡಿದೆ. ಸತ್ಯಾಂಶ ಏನೆಂದು ತನಿಖೆಯಿಂದ ಹೊರಬೀಳಬೇಕಿದೆ. ಗೋಹತ್ಯೆ ಮತ್ತು ಹಿಂಸಾಚಾರದ ಬಗ್ಗೆ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ. ಬುಲಂದ್‌ಶಹರ್ ಸನಿಹದ ಮಹಾವ್ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಗೋವುಗಳ ಕಳೇಬರಗಳು ಸಿಕ್ಕಿವೆ ಎಂದು ಉನ್ಮತ್ತ ಗುಂಪು ಚಿಂಗರಾವಟಿ ಪೊಲೀಸ್ ಔಟ್‌ಪೋಸ್ಟ್‌ಗೆ ಮುತ್ತಿಗೆ ಹಾಕಿದೆ. ಇನ್ಸ್‌ಪೆಕ್ಟರ್ ಸಿಂಗ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚೆದುರುವಂತೆ ಎಚ್ಚರಿಸಿದ್ದಾರೆ. ಅಷ್ಟರಲ್ಲಿಯೇ ಜನರ ಗುಂಪಿನಿಂದ ಸಿಡಿದು ಬಂದ ಗುಂಡಿಗೆ ಸಿಂಗ್ ಹತರಾಗಿದ್ದಾರೆ. ಬಡಿಗೆಗಳು, ಖಡ್ಗಗಳು, ಕಲ್ಲುಗಳು, ಬಂದೂಕು, ಪಿಸ್ತೂಲುಗಳನ್ನು ಹಿಡಿದಿದ್ದ 300-400 ಮಂದಿಯ ಗುಂಪು ಅಲ್ಲಿತ್ತು. ಬಜರಂಗದಳ ಮತ್ತು ಹಿಂದೂವಾಹಿನಿಯ ಕಾರ್ಯಕರ್ತರು ಪಿಸ್ತೂಲು, ಬಂದೂಕುಗಳನ್ನು ಕೊಟ್ಟರೆಂದು ಮಹಾವ್ ನಿವಾಸಿಗಳು ಹೇಳಿರುವ ವರದಿಯಾಗಿದೆ. ತನ್ನ ಮನೆಯ ರೆಫ್ರಿಜರೇಟರಿನಲ್ಲಿ ಗೋಮಾಂಸವನ್ನು ಇಟ್ಟಿದ್ದಾನೆಂಬ ವದಂತಿಯ ಮೇರೆಗೆ ಪಶ್ಚಿಮೀ ಉತ್ತರಪ್ರದೇಶದ ದಾದ್ರಿಯ ಅಖ್ಲಾಕ್ ಅಹ್ಮದ್ ಅವರನ್ನು ಗುಂಪೊಂದು 2015ರಲ್ಲಿ ಬಡಿದು ಕೊಂದಿತ್ತು. ಇದೀಗ ಹತ್ಯೆಗೀಡಾದ ಪೊಲೀಸ್ ಅಧಿಕಾರಿಯೇ ಅಖ್ಲಾಕ್ ಪ್ರಕರಣದ ತನಿಖೆ ನಡೆಸಿದ್ದರು. ತನಿಖೆ ಪೂರ್ಣಗೊಳ್ಳುವ ಮುನ್ನವೇ ಅವರ ಎತ್ತಂಗಡಿ ಆಗಿತ್ತು. ಆ ಹಿನ್ನೆಲೆಯಲ್ಲೇ ಈ ಹತ್ಯೆ ಜರುಗಿದೆ ಎಂದು ಸಿಂಗ್ ಸೋದರಿ ಆಪಾದಿಸಿದ್ದಾರೆ. ಈ ಪ್ರಕರಣ ತಾನಾಗಿ ಭುಗಿಲೆದ್ದಿತೋ ಅಥವಾ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ ಕೊಲೆಗೆ ನಡೆದ ಪೂರ್ವಯೋಜಿತ ಸಂಚೋ ಎಂಬ ಅಂಶಗಳೂ ತನಿಖೆಯ ವ್ಯಾಪ್ತಿಯಲ್ಲಿವೆ. ಬಾಬರಿ ಮಸೀದಿ ನೆಲಸಮದ ವಾರ್ಷಿಕಕ್ಕೆ (ಡಿ.6) ಮೂರು ದಿನಗಳಿರುವಂತೆ ಗೋವುಗಳ ಕಳೇಬರಗಳು ಯಾಕೆ ಕಂಡುಬಂದಿವೆ, ಅವುಗಳ ಹತ್ಯೆ ಮಾಡಿದ ಮತ್ತು ಆನಂತರ ಕಳೇಬರಗಳನ್ನು ಎಸೆಯಲಾದ ಸ್ಥಳವನ್ನು ಮೊದಲೇ ಆಯ್ಕೆ ಮಾಡಲಾಗಿತ್ತೇ ಹೇಗೆ ಎಂಬ ಅಂಶಗಳೂ ತನಿಖೆಗೆ ಒಳಪಡಲಿವೆ. ಹಿಂಸಾಚಾರ ಜರುಗಿದ ಸ್ಥಳದಿಂದ 40 ಕಿ.ಮೀ. ದೂರದಲ್ಲಿ ಮುಸ್ಲಿಂ ಧಾರ್ಮಿಕ ಸಮಾವೇಶವೊಂದು ಜರುಗಿತ್ತು. ಲಕ್ಷಾಂತರ ಮಂದಿ ಅದರಲ್ಲಿ ಭಾಗವಹಿಸಿದ್ದರು. ಸಮಾವೇಶ ಡಿ. 2ರಂದು ಮುಗಿದಿತ್ತು. ಮರುದಿನವೇ ಬುಲಂದ್‌ಶಹರ್ ಹಿಂಸಾಚಾರ ಜರುಗಿತು. ಅಂದು ಕೂಡ ಮುಸ್ಲಿಂ ಸಮಾವೇಶದ ಸ್ಥಳದಲ್ಲಿ ಆರು ಲಕ್ಷ ಮಂದಿ ಇದ್ದರು. ಹಿಂಸಾಚಾರವನ್ನು ಪೊಲೀಸರು ಸಕಾಲದಲ್ಲಿ ಹತೋಟಿಗೆ ತರದೆ ಹೋಗಿದ್ದರೆ ಪರಿಸ್ಥಿತಿ ಊಹೆಗೂ ನಿಲುಕದಷ್ಟು ಘನಘೋರ ಆಗುತ್ತಿತ್ತು. ಈ ಮಾತನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಓಂಪ್ರಕಾಶ್ ಸಿಂಗ್ ಅವರೇ ಹೇಳಿರುವುದು ಗಮನಾರ್ಹ.

ಬುಲಂದ್‌ಶಹರ್ ಬಿಜೆಪಿಯ ಭದ್ರಕೋಟೆ. 2009ರ ವಿನಾ 1991ರಿಂದ ಇಲ್ಲಿಯ ತನಕ ನಡೆದಿರುವ ಎಲ್ಲ ಲೋಕಸಭಾ ಚುನಾವಣೆಗಳಲ್ಲೂ ಬಿಜೆಪಿ ಇಲ್ಲಿ ಗೆಲ್ಲುತ್ತ ಬಂದಿದೆ. ಹಿಂಸಾಚಾರದ ನಂತರ ತಲೆ ತಪ್ಪಿಸಿಕೊಂಡಿರುವ ಯೋಗೇಶ್ ರಾಜ್ ಎಂಬುವರು ಬಜರಂಗದಳದ ಜಿಲ್ಲಾ ಸಂಚಾಲಕ. ಪೊಲೀಸ್ ಅಧಿಕಾರಿಯ ಹತ್ಯೆಯ ಎಫ್‌ಐಆರ್‌ನಲ್ಲಿ ಇವರದೇ ಮೊದಲ ಹೆಸರು. ಗೋವುಗಳನ್ನು ಸಂರಕ್ಷಿಸುವ ನೆಪದಲ್ಲಿ ಪುಂಡಾಟಿಕೆ- ಹಿಂಸಾಚಾರವನ್ನು ಭುಗಿಲೆಬ್ಬಿಸುವ ಸಂಘಟಿತ ಗೋರಕ್ಷಕ ಗುಂಪುಗಳು ದೇಶದೆಲ್ಲೆಡೆ ಸಕ್ರಿಯವಾಗಿವೆ. ಸರ್ಕಾರಗಳ ಬೇಹುಗಾರಿಕೆ ಬಾಹುಗಳಿಗೆ ಇವುಗಳ ಅರಿವು ಇಲ್ಲದಿರುವುದು ಸೋಜಿಗ. ಅರಿವಿದ್ದೂ ಕ್ರಮ ಜರುಗಿಸಿಲ್ಲವಾದರೆ ಅದು ಅಕ್ಷಮ್ಯ. ಇರುಳು ಸಮಾಜಘಾತಕ ಚಟುವಟಿಕೆ ನಡೆಸುವ ಕೆಲವರು ಹಗಲು ಗೋರಕ್ಷಕರ ವೇಷ ಧರಿಸಿ ದಂಧೆ ನಡೆಸುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿಕೆ ನೀಡಿ ಎರಡೂವರೆ ವರ್ಷಗಳೇ ಉರುಳಿವೆ. ಈ ದಂಧೆ ನಡೆಸುವವರು ಆಕಸ್ಮಿಕವಾಗಿ ಹುಟ್ಟಿಕೊಂಡವರಲ್ಲ. ವರ್ಷಗಟ್ಟಲೆ ನೀರೆರೆದು ಬೆಳೆಸಿದವರು ಅವರು. ಹೀಗಾಗಿಯೇ ಅವರ ಮೇಲೆ ಕ್ರಮ ಜರುಗುತ್ತಿಲ್ಲ. ಯಾಕೆ ಜರುಗುತ್ತಿಲ್ಲ ಎಂಬ ಕುರಿತು ಮೋದಿಯವರ ಬಳಿ ಉತ್ತರವೂ ಇಲ್ಲ. ಸಿಖ್ ಉಗ್ರಗಾಮಿ ಜರ್ನೇಲ್ ಸಿಂಗ್ ಭಿಂದ್ರನ್ ವಾಲೆಯನ್ನು ಬೆಳೆಸಿದ ಆಪಾದನೆಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೊತ್ತಿದ್ದರು. ತಾವು ಬೆಳೆಸಿದ್ದೇ ಕಡೆಗೆ ಅವರ ಪ್ರಾಣಕ್ಕೆ ಮುಳುವಾಯಿತು. ಬೇವು ಬಿತ್ತಿ, ಮಾವು ಬೆಳೆವುದು ಸಾಧ್ಯವಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು