ಸೋಮವಾರ, ಜನವರಿ 25, 2021
15 °C

ಸಂಪಾದಕೀಯ | ಹಕ್ಕಿಜ್ವರ: ಕಟ್ಟೆಚ್ಚರದ ಜತೆಗೆ ಜನಜಾಗೃತಿಯೂ ಅಗತ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಹಕ್ಕಿಜ್ವರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ ಗ್ರಾಮಗಳವರೆಗೆ ಎಲ್ಲ ಹಂತದ ಆಡಳಿತ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ಕೋವಿಡ್‌ ಸಂಕಷ್ಟವನ್ನು ಎದುರಿಸುತ್ತಿರುವಾಗಲೇ ನೆರೆಯ ಕೇರಳ ಸೇರಿದಂತೆ ದೇಶದ ನಾಲ್ಕು ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಕೇರಳದಲ್ಲಿ ಹಕ್ಕಿಜ್ವರದಿಂದ ಫಾರಂ‌ಗಳಲ್ಲಿರುವ ಕೋಳಿ ಮತ್ತು ಬಾತುಕೋಳಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿವೆ. ಆದರೆ, ರಾಜಸ್ಥಾನ, ಹಿಮಾಚಲಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ವಲಸೆ ಹಕ್ಕಿಗಳು, ಕಾಗೆ ಸೇರಿದಂತೆ ಸ್ಥಳೀಯ ಪಕ್ಷಿಗಳೂ ಸಾಯುತ್ತಿವೆ. ವೈರಸ್‌ನಿಂದ ಹರಡುವ ಹಕ್ಕಿಜ್ವರ ಭಾರತದಲ್ಲಿ ಹೊಸದೇನೂ ಅಲ್ಲ. 2005ರಿಂದ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇದೆ. 15 ವರ್ಷಗಳ ಅವಧಿಯಲ್ಲಿ ದೇಶದ 15 ರಾಜ್ಯಗಳಲ್ಲಿ 25ಕ್ಕೂ ಹೆಚ್ಚು ಬಾರಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ವಿದೇಶಗಳಿಂದ ವಲಸೆ ಹಕ್ಕಿಗಳು ಸಂತಾನೋತ್ಪತ್ತಿಗಾಗಿ ಭಾರತಕ್ಕೆ ಬರುವ ಸೆಪ್ಟೆಂಬರ್‌ನಿಂದ ಮಾರ್ಚ್‌ ನಡುವಿನ ಅವಧಿಯಲ್ಲೇ ಹಕ್ಕಿಜ್ವರ ಕಾಣಿಸಿಕೊಳ್ಳುತ್ತಿದೆ. ವಿದೇಶಿ ವಲಸೆ ಹಕ್ಕಿಗಳಿಂದಲೇ ದೇಶದಲ್ಲಿ ಈ ರೋಗ ಹರಡುತ್ತಿದೆ ಎಂಬುದು ಬಹುತೇಕ ಖಚಿತವಾಗಿದೆ. ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ತೀವ್ರ ನಷ್ಟ ಅನುಭವಿಸಿದ್ದ ಕುಕ್ಕುಟೋದ್ಯಮ ಕೆಲವು ತಿಂಗಳುಗಳಿಂದ ಚೇತರಿಕೆಯತ್ತ ಸಾಗಿತ್ತು. ದಿಢೀರನೆ ಕಾಣಿಸಿಕೊಂಡ ಹಕ್ಕಿಜ್ವರ ಮತ್ತೆ ಈ ಉದ್ಯಮದಲ್ಲಿರುವವರನ್ನು ಕಂಗಾಲು ಮಾಡಿದೆ. ಕೇರಳದಲ್ಲಿ ಹಕ್ಕಿಜ್ವರ ವ್ಯಾಪಕವಾಗಿ ಕಾಣಿಸಿಕೊಂಡಿರುವುದು ಸಹಜವಾಗಿಯೇ ಕರ್ನಾಟಕದಲ್ಲೂ ಆತಂಕ ಸೃಷ್ಟಿಸಿದೆ. ರಾಜ್ಯಕ್ಕೂ ಈ ರೋಗ ಹರಡಬಹುದು ಎಂಬ ಭೀತಿ ಉಂಟಾಗಿದೆ. ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಗಡಿಗಳಲ್ಲಿ ಕಟ್ಟೆಚ್ಚರಕ್ಕೆ ಆದೇಶಿಸಲಾಗಿದೆ. ಕೇರಳದಿಂದ ಕೋಳಿ, ಬಾತುಕೋಳಿ ಮತ್ತಿತರ ಪಕ್ಷಿಗಳು, ಅವುಗಳ ಮಾಂಸ ತರಿಸಿಕೊಳ್ಳುವುದನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಅದೊಂದೇ ಪರಿಹಾರವಲ್ಲ. ಸೋಂಕು ಹರಡುವಿಕೆಯನ್ನು ನಿಯಂತ್ರಿಸುವುದರ ಜತೆಯಲ್ಲೇ ಕುಕ್ಕುಟೋದ್ಯಮಕ್ಕೂ ಹೊಡೆತ ಬೀಳದಂತೆ ನೋಡಿಕೊಳ್ಳುವ ಸವಾಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ.

ಜ್ವರದಿಂದ ಬಳಲುತ್ತಿರುವ ಹಕ್ಕಿಗಳನ್ನು ನೇರವಾಗಿ ಸ್ಪರ್ಶಿಸಿದಾಗ, ಅವುಗಳ ಮಲ, ಗಂಟಲು ಮತ್ತು ಮೂಗಿನ ದ್ರವವನ್ನು ಮುಟ್ಟುವುದರಿಂದ ಸೋಂಕು ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ಆದರೆ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ತ್ವರಿತವಾದ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಸ್ವಚ್ಛತೆಯನ್ನು ಕಾಯ್ದುಕೊಂಡು, ಸರಿಯಾಗಿ ಬೇಯಿಸಿ ಮಾಂಸ ಸೇವಿಸುವುದರಿಂದ ತೊಂದರೆ ಆಗುವುದಿಲ್ಲ ಎಂಬುದನ್ನೂ ಅದು ದೃಢಪಡಿಸಿದೆ. ಈ ಕುರಿತು ಸರಿಯಾದ ಜಾಗೃತಿ ಮೂಡಿಸುವುದು ಅವಶ್ಯ. ಹಕ್ಕಿಜ್ವರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಪಶು ಸಂಗೋಪನೆ ಇಲಾಖೆಯು 2006ರಿಂದಲೂ ಹಲವು ಬಾರಿ ಮಾರ್ಗಸೂಚಿಗಳನ್ನು ಹೊರಡಿಸಿದೆ. 2021ರಲ್ಲೂ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿರುವುದು ರಾಜ್ಯ ಸರ್ಕಾರದ ಜವಾಬ್ದಾರಿ. ವಲಸೆ ಹಕ್ಕಿಗಳ ಮೇಲೆ ನಿಗಾ ಇಡುವುದು, ಕೋಳಿ ಸಾಕಾಣಿಕೆ ಕೇಂದ್ರಗಳ ನಿಯಮಿತ ತಪಾಸಣೆ, ಶಂಕಿತ ಪ್ರಕರಣಗಳಲ್ಲಿ ತುರ್ತಾಗಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ, ವರದಿ ಪಡೆಯುವ ಮೂಲಕ ಸೋಂಕು ವ್ಯಾಪಿಸುವುದನ್ನು ತಡೆಯಬೇಕು. ಅದಕ್ಕೆ ಪೂರಕವಾಗಿರುವ ಎಲ್ಲ ವ್ಯವಸ್ಥೆಗಳನ್ನೂ ತಡಮಾಡದೇ ಸಜ್ಜುಗೊಳಿಸಬೇಕಾದ ಹೊಣೆಗಾರಿಕೆ ಪಶುಸಂಗೋಪನಾ ಇಲಾಖೆಯ ಮೇಲಿದೆ. ಕೋಳಿಗಳ ಸಾಮೂಹಿಕ ಹತ್ಯೆಯ ಕ್ರಮಕ್ಕೆ ಬೆದರಿ ಕೋಳಿ ಸಾಕಾಣಿಕೆ ಕೇಂದ್ರಗಳ ಮಾಲೀಕರು ಸೋಂಕಿನ ಮಾಹಿತಿ ಬಹಿರಂಗಪಡಿಸದೇ ಇರುವ ಸಾಧ್ಯತೆಯೂ ಇದೆ. ಹತ್ಯೆ ಮಾಡುವ ಕೋಳಿಗಳಿಗೆ ನಿಗದಿತ ಮೊತ್ತದ ಪರಿಹಾರ ದೊರಕುವ ಖಾತರಿಯನ್ನು ನೀಡುವ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಇಲಾಖೆ ಮಾಡಬೇಕು. ಕೋಳಿ ಮತ್ತು ಇತರ ಪಕ್ಷಿಗಳ ಸಾಗಣೆ ವಾಹನಗಳು ಹಾಗೂ ಮಾಂಸ ಮಾರಾಟ ಸ್ಥಳಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ವಿಚಾರದಲ್ಲೂ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಕೋಳಿಗಳು ಅಥವಾ ಇತರ ಪಕ್ಷಿಗಳ ಕಳೇಬರಗಳ ವೈಜ್ಞಾನಿಕ ವಿಲೇವಾರಿಯನ್ನು ಕಡ್ಡಾಯಗೊಳಿಸಬೇಕು. ಈ ವಿಚಾರದಲ್ಲಿ ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ದೊರಕಬೇಕು. ಹಕ್ಕಿಜ್ವರ ನಿಯಂತ್ರಿಸುವುದಕ್ಕಾಗಿ ರಾಜ್ಯ ಸರ್ಕಾರದಿಂದ ಗ್ರಾಮಗಳವರೆಗೆ ಎಲ್ಲ ಹಂತದ ಆಡಳಿತ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಕೆಲಸವೂ ತುರ್ತಾಗಿ ಆಗಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು