ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸೂಚ್ಯಂಕದಲ್ಲಿ ಕುಸಿತ: ತುರ್ತು ಕ್ರಮ ಅಗತ್ಯ

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಅಂದರೆ ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಮುಖ್ಯ. ಆದರೆ ನಾನಾ ಭಾಗ್ಯಗಳು ಜಾರಿಯಲ್ಲಿ ಇರುವ ನಮ್ಮ ಕರ್ನಾಟಕ, 2015–16ನೇ ಸಾಲಿನ ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಅದಕ್ಕೂ ಹಿಂದಿನ ವರ್ಷ ನಾವು 7ನೇ ಸ್ಥಾನದಲ್ಲಿ ಇದ್ದೆವು. ಈ ಕುಸಿತ ಆತಂಕಕ್ಕೆ ಎಡೆಮಾಡಿಕೊಡುವ ಸಂಗತಿ. ನಮ್ಮ ನೆರೆಯ ಪುಟ್ಟ ರಾಜ್ಯ ಕೇರಳ ಮೊದಲ ಸ್ಥಾನದಲ್ಲಿದೆ. ತಮಿಳುನಾಡು, ಆಂಧ್ರ, ಮಹಾರಾಷ್ಟ್ರಗಳು ನಮಗಿಂತ ಮೇಲಿನ ಸ್ಥಾನದಲ್ಲಿವೆ. ಅವರಿಗೆ ಸಾಧ್ಯವಾಗಿದ್ದು ನಮಗೇಕೆ ಆಗಿಲ್ಲ? ಎಲ್ಲಿ ಲೋಪವಾಗಿದೆ, ಎಲ್ಲಿ ಸರಿ ಮಾಡಬೇಕು ಎಂಬುದರ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು. ಏಕೆಂದರೆ ಜನಾರೋಗ್ಯ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದ ರಾಜ್ಯ ನಮ್ಮದು. ಸಹಕಾರಿ ಸಂಘಗಳ ಮೂಲಕ ರೈತ ಕುಟುಂಬಗಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ‘ಯಶಸ್ವಿನಿ’ ಆರೋಗ್ಯ ವಿಮಾ ಯೋಜನೆ ಅನುಷ್ಠಾನಗೊಂಡದ್ದು ನಮ್ಮಲ್ಲಿಯೇ. ರಾಜೀವ್‌ ಆರೋಗ್ಯ ಭಾಗ್ಯ, ವಾಜಪೇಯಿ ಆರೋಗ್ಯಶ್ರೀ, ಜ್ಯೋತಿ ಸಂಜೀವಿನಿ, ಮುಖ್ಯಮಂತ್ರಿ ಸಾಂತ್ವನ ಯೋಜನೆ, ಇಂದಿರಾ ಸುರಕ್ಷಾ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ... ಹೀಗೆ ಅನೇಕ ಆರೋಗ್ಯ ಯೋಜನೆಗಳು ನಮ್ಮಲ್ಲಿವೆ. ಆದರೂ ಆರೋಗ್ಯ ಸೂಚ್ಯಂಕದಲ್ಲಿ ಮತ್ತಷ್ಟು ಹಿನ್ನಡೆ ಆಗಿದ್ದು ಆಶ್ಚರ್ಯ.

ವಿಶ್ವ ಬ್ಯಾಂಕ್‌ ಸಹಯೋಗದಲ್ಲಿ ನೀತಿ ಆಯೋಗ ಬಿಡುಗಡೆ ಮಾಡಿದ ಈ ಸೂಚ್ಯಂಕದ ಪ್ರಕಾರ ಮೂರು ವಿಷಯಗಳಲ್ಲಿ ಮಾತ್ರ ನಮ್ಮ ಸಾಧನೆ ಚೆನ್ನಾಗಿದೆ. ಶುಶ್ರೂಷಕರ ಖಾಲಿ ಹುದ್ದೆ ಭರ್ತಿ, ಎಚ್‌ಐವಿ ಸೋಂಕಿತರಿಗೆ ಅಗತ್ಯ ಔಷಧೋಪಚಾರ ವ್ಯವಸ್ಥೆ ಮತ್ತು ರೋಗಿಗಳನ್ನು ಉತ್ತಮ ಚಿಕಿತ್ಸೆಯ ಆಸ್ಪತ್ರೆಗಳಿಗೆ ಕಳಿಸುವ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ. ನವಜಾತ ಶಿಶುಗಳ ಸಾವಿನ ಪ್ರಮಾಣ ಇಳಿಕೆ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಕ್ಷಯ ರೋಗಿಗಳನ್ನು ಗುರುತಿಸುವ ವಿಷಯದಲ್ಲಿಯೂ ಒಂದಿಷ್ಟು ಸುಧಾರಣೆಯಾಗಿದೆ. ಆದರೆ ಹೊಸದಾಗಿ ಗುರುತಿಸಲಾದ ಕ್ಷಯ ರೋಗಿಗಳ ಚಿಕಿತ್ಸೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗದೇ ಇರುವುದು, ಜಿಲ್ಲಾ ಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಸೌಲಭ್ಯ, ಜನಾರೋಗ್ಯ ಸಂಸ್ಥೆಗಳ ಗುಣಮಟ್ಟ ಪಾಲನೆ, ಗಂಡು ಶಿಶುಗಳಿಗೆ ಹೋಲಿಸಿದರೆ ಹೆಣ್ಣು ಶಿಶುಗಳ ಜನನ ಪ್ರಮಾಣ ಕಡಿಮೆ ಆಗಿರುವುದು ನಮ್ಮ ರಾಜ್ಯದ ಹಿನ್ನಡೆಗೆ ಮುಖ್ಯ ಕಾರಣಗಳು. ಸ್ವಾತಂತ್ರ್ಯಪೂರ್ವದಲ್ಲಿಮಹಾರಾಜರ ಕಾಲದಲ್ಲೂ ನಮ್ಮಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ಇತ್ತು. ನಂತರ ಬಂದ ಸರ್ಕಾರಗಳೂ ಅದನ್ನು ಮುಂದುವರಿಸಿಕೊಂಡು ಬಂದಿವೆ. ಇದನ್ನೆಲ್ಲ ನೋಡಿದರೆ ಆರೋಗ್ಯ ರಕ್ಷಣೆಗೆ ನಮ್ಮಲ್ಲಿ ಹಿಂದಿನಿಂದಲೂ ಮಹತ್ವ ಇದ್ದೇ ಇದೆ. ನಮ್ಮಲ್ಲಿರುವ ಕೆಲ ವೈದ್ಯಕೀಯ ಕಾಲೇಜುಗಳು ದೇಶದಲ್ಲಿಯೇ ತುಂಬ ಹಳೆಯವು. ದೇಶದಲ್ಲಿ ಅತಿಹೆಚ್ಚು ವೈದ್ಯರನ್ನು ರೂಪಿಸುತ್ತಿರುವ ಕೀರ್ತಿಯೂ ನಮ್ಮ ರಾಜ್ಯಕ್ಕಿದೆ. ಇಷ್ಟೆಲ್ಲ ಅನುಕೂಲಗಳಿದ್ದೂ ಹಿಂದೆ ಬಿದ್ದಿದ್ದೇವೆ, ಮತ್ತಷ್ಟು ಕೆಳಕ್ಕೆ ಇಳಿದಿದ್ದೇವೆ. ಸೂಚ್ಯಂಕ ಆಧರಿಸಿ ರಾಜ್ಯಗಳ ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ. ಸೂಚ್ಯಂಕದಲ್ಲಿ ಮೇಲಿದ್ದಷ್ಟೂ ಹೆಚ್ಚು ಹೆಚ್ಚು ಅನುದಾನ ಸಿಗುತ್ತದೆ. ಆದ್ದರಿಂದ ಸೂಚ್ಯಂಕದಲ್ಲಿ ಸ್ಥಾನ ಕುಸಿತವನ್ನು ಸರ್ಕಾರ ಸವಾಲಾಗಿ ತೆಗೆದುಕೊಳ್ಳಬೇಕು. ಸಾರ್ವತ್ರಿಕ ಆರೋಗ್ಯ ಯೋಜನೆಯ ಜಾರಿ ಸಂದರ್ಭದಲ್ಲಿ ಈ ಕೊರತೆಗಳನ್ನು ಪರಿಗಣನೆಗೆ ತೆಗೆದುಕೊಂಡು ಪರಿಹಾರೋಪಾಯ ರೂಪಿಸಬೇಕು. ಆರೋಗ್ಯ ಸುಧಾರಣಾ ಕಾರ್ಯಕ್ರಮವನ್ನು ಶ್ರದ್ಧೆ, ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT