ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ ಜಾರಿಯಲ್ಲಿ ಅಸಡ್ಡೆ ಸಲ್ಲದು

Last Updated 5 ಡಿಸೆಂಬರ್ 2022, 4:35 IST
ಅಕ್ಷರ ಗಾತ್ರ

ದೇಶದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಮಕ್ಕಳಲ್ಲಿ ದಡಾರ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ವರದಿಯಾಗಿದೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಬಹುದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದೆ. ಮುಂಬೈ ಮತ್ತು ಅದರ ಉಪನಗರಗಳಲ್ಲಿ ಕೆಲವು ದಿನಗಳಲ್ಲಿ ಭಾರಿ ಸಂಖ್ಯೆಯಲ್ಲಿ ದಡಾರ ಪ್ರಕರಣಗಳು ದೃಢಪಟ್ಟಿವೆ ಮತ್ತು 13 ಮಕ್ಕಳು ಮೃತಪಟ್ಟಿದ್ದಾರೆ. 2021ರಲ್ಲಿ 10 ಪ್ರಕರಣ
ಗಳಷ್ಟೇ ವರದಿಯಾಗಿದ್ದವು ಮತ್ತು ಒಂದು ಮಗು ಸಾವನ್ನಪ್ಪಿತ್ತು. 2020ರಲ್ಲಿ 29 ಪ್ರಕರಣಗಳು ವರದಿಯಾಗಿದ್ದವು ಮತ್ತು ಸಾವು ಸಂಭವಿಸಿಲ್ಲ. 2019ರಲ್ಲಿ 37 ಪ್ರಕರಣಗಳು ದೃಢಪಟ್ಟು ಮೂವರು ಮಕ್ಕಳು ಮೃತಪಟ್ಟಿದ್ದರು. ಗುಜರಾತ್‌, ಹರಿಯಾಣ, ಬಿಹಾರ, ಜಾರ್ಖಂಡ್‌ ಮತ್ತು ಕೇರಳದಲ್ಲಿಯೂ ದಡಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಭೌಗೋಳಿಕವಾಗಿ ದೂರ ದೂರದ ಪ್ರದೇಶಗಳಲ್ಲಿ ಸಾಂಕ್ರಾಮಿಕವು ಕಾಣಿಸಿಕೊಂಡಿದೆ ಎಂಬುದನ್ನು ಇದು ತೋರಿಸುತ್ತದೆ. ಜಗತ್ತಿನ ವಿವಿಧ ಭಾಗಗಳಲ್ಲಿ ಕೂಡ ದಡಾರ ಪ್ರಕರಣಗಳು ಹೆಚ್ಚುತ್ತಿವೆ. ಲಸಿಕೆಯ ಕೊರತೆಯೇ ದಡಾರ ಪ್ರಕರಣಗಳು ಹೆಚ್ಚಲು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2021ರಲ್ಲಿ ನಾಲ್ಕು ಕೋಟಿಗೂ ಹೆಚ್ಚು ಮಕ್ಕಳಿಗೆ ದಡಾರ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಕೋವಿಡ್‌ ಸಾಂಕ್ರಾಮಿಕ ದಿಂದಾದ ತೊಂದರೆಗಳು ಇದಕ್ಕೆ ಕಾರಣ. ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳೇ ಹೆಚ್ಚು ಬಾಧಿತವಾಗಿವೆ.

ಕಳೆದ ಎರಡು ವರ್ಷಗಳಲ್ಲಿ, ಆಶಾ ಕಾರ್ಯಕರ್ತೆಯರೂ ಸೇರಿದಂತೆ ಇಡೀ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಕೋವಿಡ್‌ ವಿರುದ್ಧದ ಹೋರಾಟ ಮತ್ತು ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ, ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ
ಗಳು ಸೊರಗಿದವು. ಲಸಿಕೆ ಹಾಕಿಸುವುದರ ಕುರಿತು ಹೆತ್ತವರಲ್ಲಿ ಇದ್ದ ಅಸಡ್ಡೆಯೂ ಮತ್ತೊಂದು ಕಾರಣ ಎನ್ನಲಾಗಿದೆ. ಎಲ್ಲ ಲಸಿಕೆ ಕಾರ್ಯಕ್ರಮ ಗಳೂ ತೊಂದರೆಗೆ ಒಳಗಾಗಿವೆ. ವಿಶೇಷವಾಗಿ, ಡಿಪಿಟಿ (ಗಂಟಲುಮಾರಿ, ನಾಯಿಕೆಮ್ಮು ಮತ್ತು ಧನುರ್ವಾಯು) ಹಾಗೂ ದಡಾರ ಲಸಿಕೆ ಕಾರ್ಯಕ್ರಮವನ್ನು ನಡೆಸಲು ಹೆಚ್ಚು ಸಮಸ್ಯೆ ಆಗಿತ್ತು. ಈಗ ಸುಧಾರಣೆಯ ಲಕ್ಷಣಗಳು ಕಾಣಿಸಿ
ಕೊಳ್ಳುತ್ತಿವೆಯಾದರೂ ಸಾಧಿಸಬೇಕಾದುದು ಇನ್ನೂ ಬಹಳಷ್ಟಿದೆ. ದಡಾರ ವೈರಾಣುವು ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಲಸಿಕೆಯ ಮೂಲಕ ಇದನ್ನು ಸಂಪೂರ್ಣವಾಗಿ ತಡೆಯಬಹುದಾದರೂ ಸಮುದಾಯದಲ್ಲಿ ಇದರ ಹರಡುವಿಕೆ ತಡೆಗೆ ಶೇ 95ರಷ್ಟು ಲಸಿಕೆ ಹಾಕಿಸುವಿಕೆ ಅಗತ್ಯ. ಹಾಗಾಗಿಯೇ ಬಹುತೇಕ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸುವುದು ಅಗತ್ಯ.

ಸೋಂಕಿತರಿಗೆ ಅತ್ಯುತ್ತಮ ಆರೈಕೆ, ಚಿಕಿತ್ಸೆ ಒದಗಿಸುವುದು ಮತ್ತು ಲಸಿಕೆ ಹಾಕಿಸುವಿಕೆಯನ್ನು ತ್ವರಿತಗೊಳಿಸುವುದು ಈಗ ನಮ್ಮ ಮುಂದೆ ಇರುವ ಅತ್ಯಂತ ಪರಿಣಾಮಕಾರಿ ಕ್ರಮಗಳಾಗಿವೆ. ಈಗ ದಡಾರಕ್ಕೆ ಒಳಗಾಗಿರುವ ಮಕ್ಕಳು ಲಸಿಕೆ ಹಾಕಿಸಿಕೊಂಡಿರಲಿಲ್ಲ ಎಂಬುದು ಗಮನಕ್ಕೆ ಬಂದಿದೆ. ದಡಾರ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡ ಪ್ರದೇಶಗಳಲ್ಲಿ ಲಸಿಕೆ ಹಾಕಿಸಿರುವ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ ಎಂಬುದನ್ನೂ ಗಮನಿಸಲಾಗಿದೆ. ದಡಾರದಿಂದ ಅತಿ ಹೆಚ್ಚು ಬಾಧಿತವಾದ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಪರಿಣತರ ತಂಡಗಳನ್ನು ಕಳುಹಿಸಿದೆ. ದಡಾರ ‍ಪ್ರಕರಣಗಳು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ, 9 ತಿಂಗಳಿನಿಂದ 5 ವರ್ಷದವರೆಗಿನ ಎಲ್ಲ ಮಕ್ಕಳಿಗೆ ಹೆಚ್ಚುವರಿ ಒಂದು ಡೋಸ್‌ ಲಸಿಕೆ ಹಾಕಿಸುವ ಕುರಿತು ಯೋಚನೆ ಮಾಡುವಂತೆ ರಾಜ್ಯಗಳಿಗೆ ಸಲಹೆ ನೀಡಲಾಗಿದೆ. 9ರಿಂದ 12 ತಿಂಗಳ ಒಳಗೆ ನೀಡುವ ಮೊದಲ ಡೋಸ್‌ ಮತ್ತು 16–24 ತಿಂಗಳ ಒಳಗೆ ನೀಡುವ ಎರಡನೇ ಡೋಸ್‌ ಅಲ್ಲದೆ ಹೆಚ್ಚುವರಿ ಮೂರನೇ ಡೋಸ್‌ ನೀಡಬೇಕು ಎಂದು ಕೇಂದ್ರವು ಸ್ಪಷ್ಟಪಡಿಸಿದೆ. ಈ ಕ್ರಮವನ್ನು ರಾಜ್ಯಗಳು ಕೈಗೊಳ್ಳಬೇಕು ಮತ್ತು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಮರು ಸ್ಥಾಪಿಸಬೇಕು ಎಂದು ಕೇಂದ್ರವು ಸೂಚಿಸಿದೆ. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿಯೇ ಇತರ ಲಸಿಕೆ ಕಾರ್ಯಕ್ರಮಗಳು ನಡೆಯುತ್ತಿಲ್ಲ ಎಂಬ ಕಳವಳ ಹಲವು ಬಾರಿ ವ್ಯಕ್ತವಾಗಿತ್ತು. ಈಗ, ಕೋವಿಡ್‌ ಸಾಂಕ್ರಾಮಿಕ ಸೃಷ್ಟಿಸಿದ ಸಮಸ್ಯೆಗಳಿಂದ ದೇಶವು ಬಹುಪಾಲು ಹೊರಗೆ ಬಂದಿದೆ. ಜನಜೀವನ, ವ್ಯಾಪಾರ–ವಹಿವಾಟು, ಸಂಚಾರ ಎಲ್ಲವೂ ಮರಳಿ ಹಳಿಗೆ ಬಂದಿವೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಕೋವಿಡ್‌ ಸಾಂಕ್ರಾಮಿಕ ಉಂಟುಮಾಡಿದ್ದ ಒತ್ತಡವೂ ಕಡಿಮೆಯಾಗಿದೆ. ಹೀಗಾಗಿ, ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಗಳ ಜಾರಿಯ ವಿಚಾರದಲ್ಲಿ ಇನ್ನೂ ಅಸಡ್ಡೆ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT