ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ರಸ್ತೆ ಗುಂಡಿ ಮುಚ್ಚಿ ಅಮೂಲ್ಯ ಜೀವ ಉಳಿಸಿ

Last Updated 6 ಅಕ್ಟೋಬರ್ 2021, 20:30 IST
ಅಕ್ಷರ ಗಾತ್ರ

ಮಳೆಗಾಲ ಬಂತೆಂದರೆ ಸಾಕು ಬೆಂಗಳೂರಿನ ರಸ್ತೆಗಳೆಲ್ಲ ಬಾಯ್ದೆರೆದುಕೊಳ್ಳುತ್ತವೆ. ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದುರ್ಘಟನೆಗಳಲ್ಲಿ ದ್ವಿಚಕ್ರ ವಾಹನ ಸವಾರರಿಬ್ಬರು ರಸ್ತೆ ಗುಂಡಿಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಗುಂಡಿಯಿಂದಾಗಿ ದ್ವಿಚಕ್ರ ವಾಹನ ಉರುಳಿಬಿದ್ದು 65 ವರ್ಷ ವಯಸ್ಸಿನ ಅಂಗವಿಕಲರೊಬ್ಬರು ಸೆಪ್ಟೆಂಬರ್ 7ರಂದು ಮೃತಪಟ್ಟರು. ಇದಾಗಿ 10 ದಿನಗಳಲ್ಲಿ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಕಾಮಗಾರಿ ಸಲುವಾಗಿ ರಸ್ತೆಯಲ್ಲಿ ಅಗೆದ ಗುಂಡಿಯೊಂದು ದ್ವಿಚಕ್ರ ವಾಹನ ಸವಾರರೊಬ್ಬರನ್ನು ಬಲಿ ಪಡೆದಿದೆ. ಅಮೂಲ್ಯ ಎರಡು ಜೀವಗಳನ್ನು ಕಳೆದುಕೊಂಡ ಬಳಿಕವೂ ನಗರದಲ್ಲಿ ರಸ್ತೆಗುಂಡಿಗಳ ಸಮಸ್ಯೆ ನಿವಾರಣೆಯಾಗಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ಅಧಿಕಾರಸ್ಥರ ಸ್ಪಂದನ ಹೇಗಿದೆ ಎಂಬುದನ್ನು ಈ ಎರಡು ದುರಂತಗಳೇ ತೋರಿಸುತ್ತವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಟ್ಟು 13,974 ಕಿಲೊ ಮೀಟರ್‌ ರಸ್ತೆ ಜಾಲ ಇದೆ. ಇವುಗಳಲ್ಲಿ ಮುಖ್ಯರಸ್ತೆಗಳು ಹಾಗೂ ಉಪಮುಖ್ಯ ರಸ್ತೆಗಳ ಉದ್ದ 1,344 ಕಿ.ಮೀ. ಮುಖ್ಯರಸ್ತೆ ಹಾಗೂ ಉಪಮುಖ್ಯ ರಸ್ತೆಗಳ ಗುಂಡಿಗಳನ್ನು ಸೆಪ್ಟೆಂಬರ್‌ 20ರ ಒಳಗೆ ಹಾಗೂ ಉಳಿದ ರಸ್ತೆಗಳ ಗುಂಡಿಗಳನ್ನು ಸೆ. 30ರ ಒಳಗೆ ಮುಚ್ಚುವಂತೆಕಂದಾಯ ಸಚಿವ ಆರ್‌.ಅಶೋಕ ಅವರು ಗಡುವು ನೀಡಿದ್ದರು. ಈ ಗಡುವುಗಳು ಮತ್ತೆ ಅ. 10ರವರೆಗೆ ವಿಸ್ತರಣೆಯಾದುವೇ ಹೊರತು ರಸ್ತೆ ಗುಂಡಿಗಳ ಸಮಸ್ಯೆ ಸಂಪೂರ್ಣ ಬಗೆಹರಿಯಲೇ ಇಲ್ಲ. ಬಿಬಿಎಂಪಿ ನೀಡಿರುವ ಅಂಕಿ–ಅಂಶಗಳ ಪ್ರಕಾರ ಬೆಂಗಳೂರಿನ ಮುಖ್ಯ ರಸ್ತೆಗಳು ಹಾಗೂ ಉಪಮುಖ್ಯ ರಸ್ತೆಗಳಲ್ಲಿ 895 ಕಿ.ಮೀ ರಸ್ತೆಗಳು ಸುಸ್ಥಿತಿಯಲ್ಲಿವೆ. ಇನ್ನುಳಿದ 449 ಕಿ.ಮೀ. ಉದ್ದದ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಅವುಗಳಲ್ಲಿ 246 ಕಿ.ಮೀ. ಉದ್ದದ ರಸ್ತೆಗಳನ್ನು ಈಗಾಗಲೇ ದುರಸ್ತಿ ಮಾಡಲಾಗಿದೆ. ಆದರೆ, ನಗರ ಕೇಂದ್ರ ಪ್ರದೇಶದ ಮುಖ್ಯ ರಸ್ತೆಗಳಲ್ಲಿರುವ ಗುಂಡಿಗಳೇ ಬಿಬಿಎಂಪಿ ನೀಡಿದ ಅಂಕಿ–ಅಂಶಗಳನ್ನು ಅಣಕಿಸುವಂತಿವೆ. ರಸ್ತೆ ಗುಂಡಿಗಳು ಜೀವವನ್ನೇ ಬಲಿ ಪಡೆದ ದುರ್ಘಟನೆಗಳನ್ನಾಗಲೀ,ಸಚಿವರು ನೀಡಿದ ಗಡುವುಗಳನ್ನಾಗಲೀ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತಿಲ್ಲ. ರಸ್ತೆ ಗುಂಡಿ ಮುಚ್ಚಲು ಸಚಿವರು ಗಡುವು ವಿಧಿಸುವುದು ಪ್ರತಿವರ್ಷವೂ ನಡೆಯುತ್ತಿರುವ ಮಾಮೂಲಿ ಕಸರತ್ತಿನಂತಾಗಿದೆ.

ಗುಂಡಿ ಕಾಣಿಸಿಕೊಂಡ ತಕ್ಷಣವೇ ಅವುಗಳನ್ನು ಮುಚ್ಚಿದರೆ ರಸ್ತೆಗಳು ಜೀವ ಬಲಿ ಪಡೆಯುವ ಸ್ಥಿತಿ ಎದುರಾಗದು. ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ವರ್ಷಪೂರ್ತಿ ಅಬಾಧಿತವಾಗಿ ನಡೆಯಬೇಕು ಎಂಬ ಉದ್ದೇಶದಿಂದಲೇ ಬಿಬಿಎಂಪಿಯು ಬೆಂಗಳೂರಿನ ಹೊರವಲಯದ ಕಣ್ಣೂರಿನಲ್ಲಿ ಡಾಂಬರು– ಜಲ್ಲಿ ಮಿಶ್ರಣ ಮಾಡುವ ಸ್ವಂತ ಘಟಕವನ್ನು ₹ 7.5 ಕೋಟಿ ವೆಚ್ಚದಲ್ಲಿ ಆರಂಭಿಸಿದೆ. ಎರಡು ವರ್ಷಗಳ ಹಿಂದೆ ಈ ಘಟಕ ಕಾರ್ಯಾರಂಭ ಮಾಡುವಾಗ ಬಿಬಿಎಂಪಿಯು, ‘ನಗರದ ರಸ್ತೆಗುಂಡಿ ಸಮಸ್ಯೆಗಳಿಗೆ ಇನ್ನು ಶಾಶ್ವತ ಪರಿಹಾರ ಸಿಗಲಿದೆ’ ಎಂದು ಭರವಸೆ ನೀಡಿತ್ತು. ಆ ಭರವಸೆ ಹುಸಿಯಾಗಿದೆ. ರಸ್ತೆಯನ್ನು ಜಲ್ಲಿ–ಡಾಂಬರು ಹಾಕಿ ಸಂಪೂರ್ಣ ಅಭಿವೃದ್ಧಿಪಡಿಸಿದರೆ, ಅದರ ದೋಷಮುಕ್ತ ಅವಧಿ ಮೂರು ವರ್ಷಗಳು. ರಸ್ತೆಯ ಮೇಲ್ಮೈಗೆ ಒಂದು ಪದರ ಡಾಂಬರೀಕರಣವನ್ನು ಮಾತ್ರ ನಡೆಸಿದರೆ, ಆ ಕಾಮಗಾರಿಯ ದೋಷಮುಕ್ತ ಅವಧಿ ಒಂದು ವರ್ಷ. ಈ ಅವಧಿಯಲ್ಲಿ ರಸ್ತೆಯಲ್ಲಿ ಮತ್ತೆ ಗುಂಡಿ ಕಾಣಿಸಿಕೊಂಡರೆ ಗುತ್ತಿಗೆದಾರರಿಂದಲೇ ಅದನ್ನು ದುರಸ್ತಿ ಮಾಡಿಸಬೇಕು. ಈ ಕಾರ್ಯವನ್ನಾದರೂ ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಮಾಡಿರುತ್ತಿದ್ದರೆ ನಗರದ ರಸ್ತೆಗಳು ಈ ಪರಿ ಹದಗೆಡುತ್ತಿರಲಿಲ್ಲ. ರಸ್ತೆಯಲ್ಲಿ ಗುಂಡಿ ಬಿದ್ದರೆ ಸಂಬಂಧಪಟ್ಟ ಎಂಜಿನಿಯರ್‌ಗೆ ದಂಡ ವಿಧಿಸುವುದಕ್ಕೆ ಅವಕಾಶ ಇದೆ. ರಸ್ತೆಗಳು ತೀರಾ ಅಧ್ವಾನ ಸ್ಥಿತಿ ತಲುಪಿದಾಗಲೂ, ಅವುಗಳ ನಿರ್ವಹಣೆಗೆ ಸರಿಯಾಗಿ ನಿಗಾ ವಹಿಸದ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಿಲ್ಲ.

ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಐದು ವರ್ಷಗಳಲ್ಲಿ ₹ 20,060 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್ತಿನಲ್ಲಿ ಇತ್ತೀಚೆಗೆ ಹೇಳಿದ್ದಾರೆ. ಅಂದರೆ, ಪ್ರತೀ ಕಿಲೊ ಮೀಟರ್‌ ರಸ್ತೆ ನಿರ್ವಹಣೆಗೆ ಐದು ವರ್ಷಗಳಲ್ಲಿ ₹ 1.44 ಕೋಟಿ ವೆಚ್ಚ ಮಾಡಿದಂತಾಗಿದೆ. ಇಷ್ಟೊಂದು ವೆಚ್ಚ ಮಾಡಿದ ಬಳಿಕವೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿರುಕುರಹಿತ, ಗುಂಡಿಗಳಿಲ್ಲದ, ಉಬ್ಬು ಮತ್ತು ತಗ್ಗುಗಳಿಲ್ಲದ, ದೋಷರಹಿತವಾದ 1 ಕಿ.ಮೀ. ಉದ್ದದ ರಸ್ತೆಯೂ ಇಲ್ಲ ಎಂಬ ವಿಚಾರವನ್ನು ಮುಖ್ಯಮಂತ್ರಿ ಅವರೇ ವಿಧಾನ ಪರಿಷತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. ₹ 20 ಸಾವಿರ ಕೋಟಿ ಸಣ್ಣ ಮೊತ್ತವೇನಲ್ಲ. ಇಷ್ಟೊಂದು ಪ್ರಮಾಣದಲ್ಲಿ ಸಾರ್ವಜನಿಕರ ಹಣವನ್ನು ವೆಚ್ಚ ಮಾಡಿದ ಬಳಿಕವೂ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಾಗದಿದ್ದರೆ, ಆಡಳಿತ ಯಂತ್ರದ ಕಾರ್ಯದಕ್ಷತೆಯೂ ಪುನರ್ ಪರಿಶೀಲನೆಗೆ ಒಳಗಾಗಬೇಕಾಗಿದೆ. ‘ರಸ್ತೆಗಳ ಕಾಮಗಾರಿಗಳಲ್ಲಿ ದೋಷ ಮತ್ತು ದುಂದುವೆಚ್ಚ ತಡೆಯಲು ರಸ್ತೆಗಳ ಲೆಕ್ಕ ಪರಿಶೋಧನೆ ನಡೆಸಲಾಗುವುದು. ಎಲ್ಲ ರಸ್ತೆಗಳ ಇತಿಹಾಸ ಮತ್ತು ಕಾಮಗಾರಿಗಳ ವಿವರಗಳನ್ನು ದಾಖಲಿಸಲಾಗುವುದು. ರಸ್ತೆ ಕಾಮಗಾರಿಗಳಲ್ಲಿ ಆಗುವ ಲೋಪ ಹಾಗೂ ಅವ್ಯವಹಾರಗಳಿಗೆ ಅಧಿಕಾರಿಗಳನ್ನು ಹೊಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ರಸ್ತೆ ಗುಂಡಿಗಳಿಂದಾಗಿ ಜನ ಜೀವ ಕಳೆದುಕೊಳ್ಳುವ ಸ್ಥಿತಿ ಮರುಕಳಿಸಬಾರದು ಎಂದಾದರೆ ಈ ಕಾರ್ಯಗಳನ್ನಾದರೂ ಸರ್ಕಾರ ಕಟ್ಟುನಿಟ್ಟಾಗಿ ಮಾಡಬೇಕು. ರಸ್ತೆಯಲ್ಲಿ ಗುಂಡಿ ಬಿದ್ದರೆ, ಅದಕ್ಕೆ ನಿರ್ದಿಷ್ಟ ಅಧಿಕಾರಿಯನ್ನು ಹೊಣೆ ಮಾಡಿ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ವ್ಯವಸ್ಥೆ ಜಾರಿಗೊಳಿಸಬೇಕು. ಇಲ್ಲದಿದ್ದರೆ ರಸ್ತೆ ಗುಂಡಿಗಳ ಗೋಳು ಮರುಕಳಿಸುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT