ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಗುಂಗಿನಿಂದ ಹೊರಬನ್ನಿ ಜನರ ಬವಣೆ ನೀಗಿಸಲು ಮುಂದಾಗಿ

Last Updated 24 ಏಪ್ರಿಲ್ 2019, 20:28 IST
ಅಕ್ಷರ ಗಾತ್ರ

ಮೇಲಿಂದ ಮೇಲೆ ಬಂದೆರಗಿದ ಚುನಾವಣೆಗಳು ಹಾಗೂ ಸರ್ಕಾರ ಅಸ್ಥಿರಗೊಳ್ಳಬಹುದು ಎಂಬ ಆತಂಕದಿಂದಾಗಿ ರಾಜ್ಯದ ಆಡಳಿತಾರೂಢರಿಗೆ ಆರೇಳು ತಿಂಗಳಿಂದ ಜನಹಿತದ ಬಗ್ಗೆ ಗಮನ ಕೊಡಲಾಗಿಲ್ಲ ಎಂಬುದು ಸೂರ್ಯಸ್ಪಷ್ಟ.160 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಬರ ತರುವ ಸಂಕಷ್ಟ, ಯಾತನೆಯನ್ನು ಎದುರಿಸಲು ಕ್ರಿಯಾಯೋಜನೆ ರೂಪಿಸಿ, ಅಧಿಕಾರಿಗಳಿಗೆ ಹೊಣೆಗಾರಿಕೆ ವಹಿಸುವ ಹೊತ್ತಿಗೆ ಲೋಕಸಭೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬಂದಿತು. ಮುಖ್ಯಮಂತ್ರಿ, ಸಚಿವರು ಹಾಗೂ ಎಲ್ಲ ಪಕ್ಷಗಳ ಶಾಸಕರು ಸುಡು ಬಿಸಿಲಿನಲ್ಲಿ ಬೆವರಿಳಿಸಿಕೊಳ್ಳುತ್ತಾ ನೇರವಾಗಿ ಜನರ ಮಧ್ಯೆಯೇ ಇದ್ದರು. ಆದರೆ, ಬರದ ಬವಣೆಯನ್ನು ಕಂಡು, ಜನರ ನೋವಿಗೆ ಮಿಡಿದು, ಸ್ಪಂದಿಸಲು ಪ್ರಚಾರದ ಮಧ್ಯೆ ಸಮಯ ಸಿಗಲಿಲ್ಲ. ಕುಡಿಯುವ ನೀರಿಗಾಗಿ ಜನರ ಹಾಹಾಕಾರ, ಜಾನುವಾರುಗಳ ಮೇವಿಗೆ ತತ್ವಾರ ಇದ್ದರೂ ಅದನ್ನು ಆಲಿಸುವ ಗೋಜಿಗೆ ಯಾರೂ ಹೋಗಲಿಲ್ಲ. ಅದು ಅವರಿಗೆ ಆದ್ಯತೆಯೂ ಆಗಿರಲಿಲ್ಲ.ಕುರ್ಚಿಯಲ್ಲಿ ಕುಳಿತು ಕೆಲಸ ಮಾಡಲು ಬಿಡಲಾಗದಷ್ಟು ಒತ್ತಡ ಹೇರುವ ಚುನಾವಣೆಗಳು ಹೀಗೆ ಒಂದರ ಮೇಲೊಂದು ಬಂದೊದಗುವುದರಿಂದ, ರಾಜ್ಯದ ಅಭಿವೃದ್ಧಿ ಮತ್ತು ಜನಹಿತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಡ್ಡಿಯಾಗುವುದು ಸಹಜ. ಆದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಅನಿವಾರ್ಯವೂ ಹೌದು. ಇಂತಹ ಹೊತ್ತಿನೊಳಗೆ ಅಧಿಕಾರಿ ವರ್ಗ ಮುಂದೆ ನಿಂತು ಜನರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸುವ ಹಾಗೂ ಅವರಿಗೆ ಹೆಗಲೆಣೆಯಾಗಿ ನಿಲ್ಲುವ ಕೆಲಸ ನಡೆಯಬೇಕು. ಆದರೆ, ಲೋಕಸಭೆ ಚುನಾವಣೆಯಂತಹ ದೊಡ್ಡ ಪ್ರಕ್ರಿಯೆ ನಡೆದಾಗ ಎಲ್ಲ ಅಧಿಕಾರಿಗಳೂ ಈ ಮಹಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ. ಆದರೂ ಜನರ ನೋವಿಗೆ ಮಿಡಿಯುವ ಕೆಲಸ ನಗಣ್ಯ ಆಗಬಾರದು. ಆ ಎಚ್ಚರ ಅಧಿಕಾರಿಗಳಲ್ಲಿ ಸದಾ ಜಾಗೃತವಾಗಿರಬೇಕು.

ದಿನಕಳೆದಂತೆ ಬರದ ತೀವ್ರತೆ ಹೆಚ್ಚುತ್ತಲೇ ಇದೆ. 26 ಜಿಲ್ಲೆಗಳಲ್ಲಿ ಜನರು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ. ಜಲಮೂಲಗಳು ಬತ್ತಿ ಹೋಗಿದ್ದು, ಎರಡು ಸಾವಿರಕ್ಕೂ ಹೆಚ್ಚು ಹಳ್ಳಿಗಳ ಜನರ ಬಾಯಾರಿಕೆ ತಣಿಸಲು ಟ್ಯಾಂಕರ್ ನೀರೇ ಆಸರೆಯಾಗಿದೆ. ತಮ್ಮ ಆಸ್ತಿಯಾದ ಜಾನುವಾರುಗಳನ್ನು ಸಾಕಲಿಕ್ಕಾಗದ ರೈತರು 10 ಸಾವಿರಕ್ಕೂ ಹೆಚ್ಚು ದನಕರುಗಳನ್ನು ಗೋಶಾಲೆಗಳಿಗೆ ಅಟ್ಟಿದ್ದಾರೆ. ಚುನಾಯಿತ ಸರ್ಕಾರದ ಅನುಪಸ್ಥಿತಿಯಲ್ಲಿ ಸಭೆ ನಡೆಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಜಿಲ್ಲೆಗೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ, ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ. ಮತದಾನ ಮುಗಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಸಭೆಯನ್ನೂ ನಡೆಸಿ ಸೂಚನೆಗಳನ್ನು ಇತ್ತಿದ್ದಾರೆ. ಕುಡಿಯುವ ನೀರು ಸೇರಿದಂತೆ ಜನರಿಗೆ ಮೂಲಭೂತ ಅವಶ್ಯಗಳನ್ನು ಒದಗಿಸಲು ನೀತಿ ಸಂಹಿತೆಯೇನೂ ಗೋಡೆ ಕಟ್ಟಿಲ್ಲ. ಜನರ ಕಷ್ಟ ನೀಗಿಸಲು ನೀತಿ ಸಂಹಿತೆ ಒಂದು ನೆವ ಆಗಬಾರದು. ಚುನಾವಣೆ ಜ್ವರದಿಂದ ಸರ್ಕಾರ ಹೊರಬಂದು ಕಾರ್ಯಪ್ರವೃತ್ತವಾಗಬೇಕಿದೆ. ಸೂಚನೆ ಕೊಡುವುದಷ್ಟಕ್ಕೇ ಅದು ಸೀಮಿತ ಆಗಬಾರದು. ನೀರಿನ ಬವಣೆಯಿಂದ ಬೆಂದಿರುವ ಜನವಸತಿ ಪ್ರದೇಶಗಳಿಗೆ ಭೇಟಿ ನೀಡಿ, ತುರ್ತಾಗಿ ಆಗಬೇಕಾದ ಕೆಲಸಗಳ ವಿಚಾರದಲ್ಲಿ ಮುಖ್ಯಮಂತ್ರಿಯಾದಿಯಾಗಿ ಎಲ್ಲ ಸಚಿವರೂ ಮಾರ್ಗದರ್ಶನ ನೀಡಬೇಕಾಗಿದೆ. ಕಂದಾಯ ಸಚಿವರು ವಿಶೇಷ ಮುತುವರ್ಜಿ ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ತಮ್ಮ ಸಚಿವ ಸಹೋದ್ಯೋಗಿಗಳನ್ನು ಕ್ರಿಯಾಶೀಲಗೊಳಿಸಬೇಕಿದೆ. ಚುನಾವಣೆ ಮುಗಿದಿದೆ ಎಂದು ಜನಪ್ರತಿನಿಧಿಗಳು ವಿಶ್ರಾಂತಿ ತೆಗೆದುಕೊಳ್ಳುವ ಕಾಲ ಇದಲ್ಲ. ಜನರ ಕಷ್ಟಗಳಿಗೆ ಮಿಡಿಯುವುದು ಜನಪ್ರತಿನಿಧಿಯ ಆದ್ಯ ಕರ್ತವ್ಯ ಎಂಬುದನ್ನು ಅವರು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT