ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕ್ರಿಮಿನಲ್ ನ್ಯಾಯಾಂಗ ನಿಂದನೆ ಸದಾಶಯದ ಟೀಕೆಗೆ ಅಡ್ಡಿಯೇ?

Last Updated 30 ಜುಲೈ 2020, 4:02 IST
ಅಕ್ಷರ ಗಾತ್ರ

ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಇದು, ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಇರುವ ಕಾನೂನನ್ನು ಈಗಿರುವ ರೀತಿಯಲ್ಲೇ ಉಳಿಸಿಕೊಳ್ಳಬೇಕೇ, ಅದರಲ್ಲಿ ಬದಲಾವಣೆಗಳು ಬೇಡವೇ ಎಂಬ ಚರ್ಚೆಯನ್ನು ಸಾರ್ವಜನಿಕರಲ್ಲಿ ಹುಟ್ಟುಹಾಕಿದೆ. ಭಾರತದ ನ್ಯಾಯಾಂಗಕ್ಕೆ ಟೀಕೆ ಹೊಸದಲ್ಲ. ತನಗೆ ಎದುರಾಗಿ ಬಂದ ಟೀಕೆಗಳನ್ನು ಹೃದಯವೈಶಾಲ್ಯದಿಂದ ಸ್ವೀಕರಿಸುವುದು ಕೂಡ ಭಾರತದ ಸುಪ್ರೀಂ ಕೋರ್ಟ್‌ಗೆ ಹೊಸದಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ, ಅರುಂಧತಿ ರಾಯ್ ಪ್ರಕರಣದಲ್ಲಿ, ಆಗ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದ ಎಸ್.ಪಿ. ಭರೂಚ ಅವರು ಆಡಿದ್ದ ಮಾತುಗಳನ್ನು ಉಲ್ಲೇಖಿಸಬಹುದು. ನರ್ಮದಾ ನದಿಗೆ ಕಟ್ಟಲಾಗಿರುವ ಅಣೆಕಟ್ಟಿನ ವಿಚಾರದಲ್ಲಿ ಕೋರ್ಟ್‌ ನೀಡಿದ ತೀರ್ಪಿಗೆ ಸಂಬಂಧಿಸಿದಂತೆ ರಾಯ್ ಅವರ ಬರಹವೊಂದು ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿತ್ತು. ಆ ಸಂದರ್ಭದಲ್ಲಿ ನ್ಯಾಯಮೂರ್ತಿ ಭರೂಚ ಅವರು, ‘ಹೇಳಿಕೆಗಳ ವಿಚಾರದಲ್ಲಿ ನನ್ನ ಸಮ್ಮತಿ ಇಲ್ಲ. ಆದರೆ, ಇವರ ವಿರುದ್ಧ ಕ್ರಮ ಕೈಗೊಳ್ಳಲು ನಾನು ಒಲವು ತೋರುತ್ತಿಲ್ಲ. ಏಕೆಂದರೆ, ನ್ಯಾಯಾಲಯದ ಹೃದಯವು ಹೇಳಿಕೆಗಳನ್ನು ನಿರ್ಲಕ್ಷಿಸುವಷ್ಟು ವಿಶಾಲವಾಗಿದೆ...’ ಎಂಬ ಮಾತು ಆಡಿದ್ದರು. ವ್ಯಕ್ತಿಗಳ ಮಾತು, ಹೇಳಿಕೆಗಳು ನ್ಯಾಯಾಂಗ ನಿಂದನೆಯ ಕಟಕಟೆಗೆ ಬಂದುನಿಂತಾಗಲೆಲ್ಲ ನ್ಯಾಯಮೂರ್ತಿ ಭರೂಚ ಅವರ ಈ ನಡೆ, ಈ ಮಾತುಉಲ್ಲೇಖವಾಗುತ್ತಿರುತ್ತವೆ.
ಎಸ್. ಮಳಗಾಂವಕರ್ ಪ್ರಕರಣದಲ್ಲಿ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರು ಆಡಿದ್ದ ಮಾತುಗಳೂ ಇಲ್ಲಿ ಸ್ಮರಣಾರ್ಹ. ‘ನ್ಯಾಯಾಂಗವು ಟೀಕೆಗಳಿಂದ ಅತೀತವಾಗಿ ಇರಲಾಗದು. ಆದರೆ, ಟೀಕೆಯನ್ನು ನ್ಯಾಯಾಂಗದ ಗೌರವವನ್ನು ಕುಗ್ಗಿಸಲು, ಸಾರ್ವಜನಿಕರು ಇಟ್ಟಿರುವ ವಿಶ್ವಾಸವನ್ನು ನಾಶಗೊಳಿಸಲು ಮಾಡಿದಾಗ ಅದನ್ನು ನಿರ್ಲಕ್ಷಿಸಲಾಗದು... ಅತ್ಯಂತ ಕಟುವಾದ, ತರವಲ್ಲದ ಟೀಕೆಗಳನ್ನು ಒಳ್ಳೆಯ ಉದ್ದೇಶದಿಂದ ಮಾಡಿದಾಗ ಅವುಗಳ ವಿಚಾರದಲ್ಲಿ ಹೃದಯವೈಶಾಲ್ಯದ, ಮಾನವೀಯ ನಿಲುವು ತಾಳುವುದು ಒಳಿತು’ ಎಂದು ನ್ಯಾಯಮೂರ್ತಿ ಅಯ್ಯರ್ ಹೇಳಿದ್ದರು.

ನ್ಯಾಯಾಂಗ ನೀಡುವ ಆದೇಶಗಳನ್ನು, ತೀರ್ಪುಗಳನ್ನು ಯಾರಾದರೂ ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದಾಗ, ಕಾನೂನಿನ ಸಾರ್ವಭೌಮತ್ವವನ್ನು ಕಾಪಾಡಲು ಸಿವಿಲ್ ನ್ಯಾಯಾಂಗ ನಿಂದನೆಯ ಅಸ್ತ್ರ ಬೇಕಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ವ್ಯಕ್ತಿಗತ ನೆಲೆಯಲ್ಲಿ ವ್ಯಕ್ತವಾಗುವ ಟೀಕೆಗಳನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆಯ ಅಸ್ತ್ರವನ್ನು ಬಳಸಿ ಎದುರಿಸಬೇಕೇ ಅಥವಾ ಅವುಗಳನ್ನು ಮಾನನಷ್ಟ ಕಾನೂನಿನ ಅಡಿ ನಿಭಾಯಿಸಬಹುದೇ ಎಂಬ ಪ್ರಶ್ನೆ ಈಗಲೂ ಜೀವಂತವಾಗಿದೆ. ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಟ್ವೀಟ್‌ಗಳು ಸುಪ್ರೀಂ ಕೋರ್ಟ್‌ನಲ್ಲಿ ಈ ಹಿಂದೆ ಮುಖ್ಯ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿಭಾಯಿಸಿದ್ದ ಕೆಲವರ ಬಗ್ಗೆ ಹಾಗೂ ಈಗಿನ ಮುಖ್ಯ ನ್ಯಾಯಮೂರ್ತಿಯವರ ಭಾವಚಿತ್ರವೊಂದಕ್ಕೆ ಸಂಬಂಧಿಸಿವೆ. ಈ ಟ್ವೀಟ್‌ಗಳು ನಿಜಕ್ಕೂ ನ್ಯಾಯಾಂಗ ನಿಂದನೆ ಪರಿಧಿಯೊಳಕ್ಕೆ ಬರುತ್ತವೆಯೇ ಅಥವಾ ಅವು ಮಾನನಷ್ಟಕ್ಕೆ ಕಾರಣವಾಗಬಹುದಾದ ಅಭಿವ್ಯಕ್ತಿಗಳೇ ಎಂಬುದನ್ನು ನಿರ್ಣಯಿಸುವ ಅಧಿಕಾರ ಇರುವುದು ನ್ಯಾಯಾಂಗಕ್ಕೆ ಮಾತ್ರ. ಆದರೆ, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಎದುರಿಸಲು ನ್ಯಾಯಾಂಗ ನಿಂದನೆಯಂತಹ ಬ್ರಹ್ಮಾಸ್ತ್ರ ನಿಜಕ್ಕೂ ಅಗತ್ಯವೇ? ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಗುರಿಯಾಗುವ ಭೀತಿಯು ನ್ಯಾಯಾಂಗದ ತೀರ್ಪುಗಳು, ನ್ಯಾಯಾಂಗದ ನಡೆಗಳ ವಿಚಾರದಲ್ಲಿ ಮುಕ್ತ ಅಭಿವ್ಯಕ್ತಿಗೆ ಅಡ್ಡಿಯಾಗುತ್ತದೆಯೇ? ಸದಾಶಯದ ಟೀಕೆಗಳನ್ನು ಈ ಕಾನೂನು ಚಿವುಟಿ ಹಾಕಿದರೆ, ಅದು ವ್ಯಕ್ತಿಸ್ವಾತಂತ್ರ್ಯಕ್ಕೆ ಹಾಗೂ ಅಭಿವ್ಯಕ್ತಿಗೆ ಆಗುವ ಅಡ್ಡಿಯಲ್ಲವೇ? ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಿದ ಇತಿಹಾಸ ಇರುವ ಭಾರತದ ಸಾಂವಿಧಾನಿಕ ಕೋರ್ಟ್‌ಗಳು, ಈ ವಿಚಾರಗಳನ್ನು ಕೂಡ ನಿಕಷಕ್ಕೆ ಒಡ್ಡಬೇಕಾದ ಸಂದರ್ಭವನ್ನು ಮುಕ್ತ ಅಭಿವ್ಯಕ್ತಿಗೆ ಹೆಚ್ಚಿನ ಅವಕಾಶ ಕಲ್ಪಿಸಿರುವ ಸಾಮಾಜಿಕ ಜಾಲತಾಣಗಳು ಸೃಷ್ಟಿಸಿವೆ. ಬ್ರಿಟನ್ನಿನ ‘ಡೈಲಿ ಮಿರರ್’ ಪತ್ರಿಕೆಯು ನ್ಯಾಯಮೂರ್ತಿಗಳ ಚಿತ್ರ ಪ್ರಕಟಿಸಿ, ಅದಕ್ಕೆ ‘ವಯಸ್ಸಾಗಿರುವ ಮೂರ್ಖರು’ ಎಂಬ ಅಡಿಶೀರ್ಷಿಕೆ ನೀಡಿತ್ತು. ಪತ್ರಿಕೆಯ ವಿರುದ್ಧ ನ್ಯಾಯಾಂಗ ನಿಂದನೆ ಕಾನೂನಿನ ಅಡಿ ಕ್ರಮ ಜರುಗಿಸಲು ಮುಂದಾಗದ ನ್ಯಾಯಮೂರ್ತಿ ಲಾರ್ಡ್ ಟೆಂಪಲ್‌ಮನ್‌ ಅವರು, ‘ನನಗೆ ವಯಸ್ಸಾಗಿದೆ ಎಂಬುದನ್ನು ನಿರಾಕರಿಸುವುದಿಲ್ಲ; ಅದು ಸತ್ಯ. ನಾನು ಮೂರ್ಖ ಹೌದೋ ಅಲ್ಲವೋ ಎಂಬುದು ಇನ್ನೊಬ್ಬರ ಗ್ರಹಿಕೆಗೆ ಸಂಬಂಧಿಸಿದ್ದು’ ಎಂದಿದ್ದರು. ನ್ಯಾಯಾಂಗ ತೋರಬಹುದಾದ ಅಸಾಧಾರಣ ಸಹಿಷ್ಣುತೆಯ ವಿಚಾರ ಪ್ರಸ್ತಾಪ ಆದಾಗಲೆಲ್ಲ ಉಲ್ಲೇಖವಾಗುವ ನಿದರ್ಶನ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT