ಶುಕ್ರವಾರ, ಜನವರಿ 27, 2023
17 °C

ಸಂಪಾದಕೀಯ: ದತ್ತಾಂಶ ರಕ್ಷಣೆ; ಪರಿಷ್ಕೃತ ಮಸೂದೆಯಲ್ಲಿ ಸರ್ಕಾರಕ್ಕೆ ವ್ಯಾಪಕ ಅಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪರಿಷ್ಕೃತ ದತ್ತಾಂಶ ಸಂರಕ್ಷಣಾ ಕರಡು ಮಸೂದೆಗೆ ಸಾರ್ವಜನಿಕರು ಪ್ರತಿಕ್ರಿಯೆ ನೀಡುವುದಕ್ಕೆ ಡಿಸೆಂಬರ್‌ 17ರವರೆಗೆ ಅವಕಾಶ ಇದೆ. ಈ ಹಿಂದೆ ಸಿದ್ಧಪಡಿಸಲಾಗಿದ್ದ ಮಸೂದೆಯ ಕೆಲವು ಅಂಶಗಳಿಗೆ ವಿವಿಧ ವರ್ಗಗಳಿಂದ ಆಕ್ಷೇಪಗಳು ಬಂದಿದ್ದವು. ಹೀಗಾಗಿ, ಈ ಮಸೂದೆಯನ್ನು ಮೂರು ತಿಂಗಳ ಹಿಂದೆ ವಾಪಸ್‌ ಪಡೆದುಕೊಳ್ಳಲಾಗಿತ್ತು. ಈ ಹಿಂದಿನ ಮಸೂದೆಯ ಬಗ್ಗೆ ಕೇಳಿಬಂದಿದ್ದ ಕೆಲವು ಆಕ್ಷೇಪಗಳನ್ನು ಹೊಸ ‘ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ– 2022’ರಲ್ಲಿ ಸರಿಪಡಿಸಲಾಗಿದೆ. ಆದರೆ, ಕೆಲವು ಮಹತ್ವದ ವಿಚಾರಗಳ ಕುರಿತು ಏನನ್ನೂ ಮಾಡಲಾಗಿಲ್ಲ. ಗಡಿಯಾಚೆಗೆ ದತ್ತಾಂಶ ಹರಿಯುವಿಕೆ ಕುರಿತು ಕೆಲವು ಅಂಶಗಳನ್ನು ಮಸೂದೆಯಲ್ಲಿ ಸೇರಿಸಬೇಕಾಗಿತ್ತು. ಅದನ್ನು ಮಾಡಿಲ್ಲ. ಗಡಿಯಾಚೆಗೆ ದತ್ತಾಂಶ ಹರಿಯುವಿಕೆಗೆ ಸಂಬಂಧಿಸಿದಂತೆ ಮಸೂದೆಯಲ್ಲಿ ಉಲ್ಲೇಖವಾಗಿದ್ದ ಕಟ್ಟುನಿಟ್ಟು ನಿಯಮಗಳಿಗೆ ದೊಡ್ಡ ತಂತ್ರಜ್ಞಾನ ಕಂಪನಿಗಳು ಮತ್ತು ನವೋದ್ಯಮ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿಂದಿನ ಮಸೂದೆ ಪ್ರಕಾರ, ಕಂಪನಿಗಳು ‘ಸೂಕ್ಷ್ಮ’ ವೈಯಕ್ತಿಕ ದತ್ತಾಂಶಗಳನ್ನು ದೇಶದ ಒಳಗೇ ಇರುವ ಸರ್ವರ್‌ಗಳಲ್ಲಿ ಸಂಗ್ರಹಿಸಿ ಇರಿಸಬೇಕಿತ್ತು. ‘ಪ್ರಮುಖ’ ಎನಿಸುವಂತಹ ವೈಯಕ್ತಿಕ ದತ್ತಾಂಶಗಳನ್ನು ದೇಶದಿಂದ ಹೊರಗೆ ಒಯ್ಯುವುದಕ್ಕೆ ನಿಷೇಧದ ಪ್ರಸ್ತಾವವೂ ಇತ್ತು. ಆದರೆ, ದತ್ತಾಂಶಗಳನ್ನು ಭಾರತದಲ್ಲಿಯೇ ಸಂಗ್ರಹಿಸಿ ಇರಿಸಬೇಕು ಎಂದು ಪರಿಷ್ಕೃತ ಮಸೂದೆಯು ಹೇಳುತ್ತಿಲ್ಲ. ಸರ್ಕಾರವು ಗುರುತಿಸಿರುವ ದೇಶಗಳಿಗೆ ದತ್ತಾಂಶವನ್ನು ವರ್ಗಾಯಿಸುವುದಕ್ಕೆ ಅವಕಾಶ ನೀಡುವ ಪ್ರಸ್ತಾವವೂ ಇದೆ. ಈ ದೇಶಗಳನ್ನು ಹೇಗೆ ಗುರುತಿಸಲಾಗುವುದು ಎಂಬ ಬಗ್ಗೆಯೂ ಮಸೂದೆಯಲ್ಲಿ ಏನೂ ಇಲ್ಲ.

ಖಾಸಗಿತನ ಮತ್ತು ವೈಯಕ್ತಿಕ ದತ್ತಾಂಶಗಳಿಗೆ ಸಂಬಂಧಿಸಿದ ಹಲವು ಮಹತ್ವದ ವಿಚಾರಗಳಲ್ಲಿ ಮಸೂದೆಯು ಹಿಮ್ಮುಖ ಚಲನೆಯ ಪ್ರಸ್ತಾವಗಳನ್ನು ಒಳಗೊಂಡಿದೆ. ಡಿಜಿಟಲ್‌ ವೈಯಕ್ತಿಕ ದತ್ತಾಂಶಕ್ಕೆ ಮಾತ್ರ ಮಸೂದೆಯು ಗಮನ ಹರಿಸಿದೆ. ಡಿಜಿಟಲ್‌ ಅಲ್ಲದ ದತ್ತಾಂಶಗಳ ಕುರಿತು ಮಸೂದೆಯು ಗಮನವನ್ನೇ ಹರಿಸಿಲ್ಲ. ಜಂಟಿ ಸಂಸದೀಯ ಸಮಿತಿಯ ಶಿಫಾರಸಿಗೂ ಇದು ವಿರುದ್ಧವಾಗಿದೆ. ಈ ಸಮಿತಿಯು ಹಳೆಯ ಮಸೂದೆಯನ್ನು ಪರಿಶೀಲನೆಗೆ ಒಳಪಡಿಸಿ ಕಳೆದ ವರ್ಷ ವರದಿಯನ್ನೂ ನೀಡಿತ್ತು. ವೈಯಕ್ತಿಕ ದತ್ತಾಂಶ ಮತ್ತು ವೈಯಕ್ತಿಕವಲ್ಲದ ದತ್ತಾಂಶಗಳನ್ನು ಸದಾ ಕಾಲ ಪ್ರತ್ಯೇಕಿಸಿ ನೋಡುವುದು ಸಾಧ್ಯವಿಲ್ಲ, ಹೀಗಾಗಿ, ಈ ಎರಡನ್ನೂ ಮಸೂದೆಯು ಒಳಗೊಳ್ಳಬೇಕು ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿತ್ತು. ಪರಿಷ್ಕೃತ ಮಸೂದೆಯು ನಿಯಂತ್ರಕರ ಪಾತ್ರವನ್ನು ತೀರಾ ದುರ್ಬಲಗೊಳಿಸಿದೆ.
ಮಸೂದೆಯ ಹಿಂದಿನ ಆವೃತ್ತಿಯಲ್ಲಿ ದತ್ತಾಂಶ ಸಂರಕ್ಷಣಾ ಪ್ರಾಧಿಕಾರ ಮತ್ತು ಅದರ ಅಧಿಕಾರಗಳನ್ನು ಅತ್ಯಂತ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿತ್ತು. ಪರಿಷ್ಕೃತ ಮಸೂದೆಯು ದತ್ತಾಂಶ ಸಂರಕ್ಷಣಾ ಮಂಡಳಿ ರಚನೆಯ ಪ್ರಸ್ತಾವ ಹೊಂದಿದೆ. ಆದರೆ, ಹಿಂದಿನ ಪ್ರಾಧಿಕಾರಕ್ಕೆ ಹೋಲಿಸಿದರೆ ಮಂಡಳಿಗೆ ಸೀಮಿತ ಅಧಿಕಾರವಷ್ಟೇ ಇದೆ ಮತ್ತು ಸ್ವಾಯತ್ತೆಯೂ ಇಲ್ಲ. ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯರನ್ನು ಸರ್ಕಾರವೇ ನೇಮಿಸುತ್ತದೆ ಮತ್ತು ಅವರ ಅಧಿಕಾರದ ಅವಧಿಯನ್ನು ಕೂಡ ಸರ್ಕಾರವೇ ನಿರ್ಧರಿಸುತ್ತದೆ. ಇದನ್ನು ಸ್ವತಂತ್ರ ಸಂಸ್ಥೆ ಎಂದು ಪರಿಗಣಿಸುವುದು ಸಾಧ್ಯವಿಲ್ಲ.

ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳಿಗೆ ವಿನಾಯಿತಿ ನೀಡಿರುವುದು ಮಸೂದೆಯ ಕುರಿತು ಕಳವಳ ಮೂಡಿಸುವ ಇನ್ನೊಂದು ಅಂಶವಾಗಿದೆ. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಅಧಿಸೂಚನೆಯೊಂದನ್ನು ಹೊರಡಿಸಿ ಸರ್ಕಾರದ ಸಂಸ್ಥೆಗಳನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗೆ ಇರಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡಲಾಗಿದೆ. ಇದು ಸಂಸದೀಯ ಸಮಿತಿಯು ನೀಡಿದ ಶಿಫಾರಸಿಗೆ ವಿರುದ್ಧವಾದುದಾಗಿದೆ. ‘ನ್ಯಾಯಯುತ, ವಿವೇಚನಾಯುಕ್ತ ರೀತಿಯಲ್ಲಿ ಮಾತ್ರ ವಿನಾಯಿತಿ ನೀಡಬೇಕು’ ಎಂದು ಸಮಿತಿಯು ಶಿಫಾರಸು ಮಾಡಿತ್ತು. ಸರ್ಕಾರಿ ಸಂಸ್ಥೆಗಳಿಗೆ ಸ್ಥೂಲವಾಗಿ ಇರುವ ವಿನಾಯಿತಿಯು ದುರ್ಬಳಕೆ ಆಗಬಹುದು ಮತ್ತು ಖಾಸಗಿತನದ ಉಲ್ಲಂಘನೆಗೆ ಕಾರಣ ಆಗಬಹುದು. ಅದಲ್ಲದೆ, ಸರ್ಕಾರಕ್ಕೆ ಹೆಚ್ಚು ಅಧಿಕಾರವನ್ನೂ ನೀಡುತ್ತದೆ. ಮಕ್ಕಳ ದತ್ತಾಂಶ ಸಂಸ್ಕರಣೆಯನ್ನು ನಿಷೇಧಿಸುವ ಪ್ರಸ್ತಾವವನ್ನು ಮಸೂದೆ ಹೊಂದಿದೆ. ಆದರೆ, ಈ ನಿಷೇಧಕ್ಕೆ ವಿನಾಯಿತಿ ನೀಡುವ ಅಧಿಕಾರವನ್ನು ಸರ್ಕಾರಕ್ಕೆ ಕೊಡುವ ಪ್ರಸ್ತಾವ ಮಸೂದೆಯಲ್ಲಿ ಇದೆ. ಈ ಮಸೂದೆಯನ್ನು ರೂಪಿಸಿರುವುದು ನಾಗರಿಕರಿಗೆ ಸಂಬಂಧಿಸಿದ ಮಾಹಿತಿಯನ್ನು ಹಾಗೂ ಅವರ ಖಾಸಗಿತನವನ್ನು ರಕ್ಷಿಸುವ ಉದ್ದೇಶದಿಂದ ಅಲ್ಲ; ಬದಲಿಗೆ, ಪ್ರಜೆಗಳ ಮಾಹಿತಿ, ಅವರ ಚಟುವಟಿಕೆಗಳು ಮತ್ತು ಜೀವನವು ಸರ್ಕಾರಕ್ಕೆ ಅನಿರ್ಬಂಧಿತವಾಗಿ ಕಾಣುವಂತಿರಬೇಕು ಹಾಗೂ ಆ ರೀತಿ ಕಣ್ಗಾವಲು ಇರಿಸುವುದಕ್ಕೆ ಕಾನೂನಿನ ಮಾನ್ಯತೆಯೂ ಬೇಕು ಎಂಬ ಉದ್ದೇಶದಿಂದ ಇದನ್ನು ರೂಪಿಸಿರುವಂತೆ ಕಾಣುತ್ತಿದೆ. ಈ ಕರಡು ಮಸೂದೆಯನ್ನು ಕೂಡ ಕೈಬಿಡುವುದು ಒಳ್ಳೆಯ ಕೆಲಸವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು